May 12, 2023, 12:49 PM IST
ರಾಜ್ಯ ವಿಧಾನಸಭೆ ಚುನಾವಣೆ ಮತದಾನ ಮುಗಿಯುತ್ತಿದ್ದಂತೆ ಹಲವಾರು ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಹಲವು ಸಮೀಕ್ಷೆಗಳು ಕಾಂಗ್ರೆಸ್‌ಗೆ ಬಹುಮತ ಬರುತ್ತದೆ ಎಂದು ಹೇಳಿದರೆ, ಕೆಲವು ಸಮೀಕ್ಷೆ ಬಿಜೆಪಿಗೆ ಸರಳ ಬಹುಮತ ದೊರೆಯುವುದಾಗಿ ಹೇಳಿದೆ. ಈ ನಡುವೆ, ಬಹುಮತಕ್ಕಿಂತ ಕಡಿಮೆ ಸಂಖ್ಯೆ ಬಂದರೆ ಎನ್ನುವ ದೃಷ್ಟಿಯಿಂದ ಬಿಜೆಪಿ ತಂತ್ರ ರೂಪಿಸುತ್ತಿದೆ ಎನ್ನಲಾಗಿದ್ದು, ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ಪ್ರತಿತಂತ್ರ ಹೆಣೆಯುತ್ತಿದೆ ಎಂದು ತಿಳಿದುಬಂದಿದೆ.ಕರ್ನಾಟಕ ವಿಧಾನಸಭೆಯಲ್ಲಿ 224 ಸಂಖ್ಯಾಬಲವಿದ್ದು, ಸರ್ಕಾರ ರಚನೆಗೆ ಕನಿಷ್ಟ 113 ಸ್ಥಾನಗಳನ್ನು ಯಾವುದೇ ಪಕ್ಷ ಗಳಿಸಬೇಕು. ಅಷ್ಟು ಸಂಖ್ಯೆಯನ್ನು ಗೆಲ್ಲಲಾಗದಿದ್ದರೆ ಬಿಜೆಪಿ ‘ಆಪರೇಷನ್ ಕಮಲ’ ನಡೆಸಿ, ಬೇರೆ ಪಕ್ಷಗಳ ಶಾಸಕರನ್ನು ಪಕ್ಷಾಂತರದ ಮೂಲಕ ತಮ್ಮತ್ತ ಕರೆತರುತ್ತದೆ ಎಂದು ಹೇಳಲಾಗುತ್ತಿದೆ. ಕೇಸರಿ ಪಡೆಯನ್ನು ಕಟ್ಟಿಹಾಕಲು ಕಾಂಗ್ರೆಸ್ ಕೂಡ ‘ಆಪರೇಷನ್ ಹಸ್ತ’ ನಡೆಸಲಿದೆ ಎನ್ನಲಾಗಿದೆ. ಹಾಗೇ ಕಾಂಗ್ರೆಸ್ ಕೂಡ ತಂತ್ರ ರೂಪಿಸಿದ್ದು, ಬಿಜೆಪಿ ಮತ್ತು ಜೆಡಿಎಸ್‌ನ ಸಂಭಾವ್ಯ ವಿಜೇತರೊಂದಿಗೆ ಈಗಾಗಲೇ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. 2018ರಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಒಂಬತ್ತು ಸ್ಥಾನಗಳಿಂದ ಬಹುಮತಕ್ಕೆ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚಿಸಿದ್ದವು. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್‌ನ 17 ಶಾಸಕರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಸಮ್ಮಿಶ್ರ ಸರ್ಕಾರವನ್ನು ಬಿಜೆಪಿ ಉರುಳಿಸಿತು.