ಮಕ್ಕಳಿಗೆ ಜಾವಲಿನ್ ಥ್ರೋ ಹೇಳಿಕೊಟ್ಟ ಚಿನ್ನದ ಹುಡುಗ ನೀರಜ್ ಗುರು ಕಾಶಿನಾಥ್!

Oct 5, 2021, 9:52 PM IST

ಯಲ್ಲಾಪುರ(ಅ.05) ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ತರಬೇತುದಾರ ಕನ್ನಡಿಗ ಕಾಶಿನಾಥ್ ನಾಯ್ಕ್ ಇಂದು ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಜಾವಲಿನ್ ಥ್ರೋ ತರಬೇತಿ ನೀಡಿದರು. ಬೆಳಕಿನಂದ ಸಾಂಸ್ಕೃತಿಕ ಪ್ರತಿಷ್ಠಾನದ ಕ್ರೀಡಾ ವಿಭಾಗದಿಂದ ಕಾಶೀನಾಥ್ ಅವರಿಗೆ ಗೌರವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗೌರವ ಸನ್ಮಾನ ಸ್ವೀಕರಿಸಿದ ಬಳಿಕ ನೇರವಾಗಿ ಮೈದಾನಕ್ಕೆ ಮಕ್ಕಳನ್ನು ಕರೆದೊಯ್ದ ಅವರು ಜಾವೆಲಿನ್ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

ಮಕ್ಕಳಿಂದ ಕ್ರಿಕೆಟ್ ಬಾಲ್ ಎಸೆದು ಅಭ್ಯಾಸ ಮಾಡಿಸಿ, ನಂತರ ಜಾವೆಲಿನ್ ಎಸೆತ ಮಾಡಿಸಿದರು. ತನ್ನ ಕ್ರೀಡಾ ಸಾಧನೆಗೆ ಭಾರತೀಯ ಸೈನ್ಯವೇ ಪ್ರೇರಣೆ ಎಂದರು. ದೂರದಲ್ಲಿರುವ ಮಾವಿನ ಮರಕ್ಕೆ ಕಲ್ಲು ಎಸೆದು ಕಾಯಿ ಕೊಯ್ಯುವ ಸಾರ್ಮಥ್ಯದ ಗ್ರಾಮೀಣ ಮಕ್ಕಳು ಉತ್ತಮ ಕ್ರೀಡಾಪಟುಗಳಾಗಬಲ್ಲರು ಎಂದು ಅವರು ಹೇಳಿದರು.