ಕಾರವಾರ ಆಸ್ಪತ್ರೆಗೆ ಲಸಿಕೆ ಹಾಕಿಸಿಕೊಳ್ಳಲು ಬಂದರೆ ಮಲೇರಿಯಾ ಫ್ರೀ!

Aug 25, 2021, 5:40 PM IST

ಕಾರವಾರ(ಆ. 25)  ಉತ್ತರಕನ್ನಡ ಜಿಲ್ಲೆಯ ಕಾರವಾರ ಕ್ರಿಮ್ಸ್ ಅಸ್ಪತ್ರೆಯಲ್ಲಿ ಮಲೇರಿಯಾ, ಡೆಂಗ್ಯೂ ಉತ್ಪಾದನಾ ಕೇಂದ್ರವಿದೆ ಅಂದ್ರೆ ನೀವು ನಂಬ್ತೀರಾ..? ನಂಬಲೇ ಬೇಕು. ಕೊರೊನಾ ವ್ಯಾಕ್ಸಿನ್ ತೆಗೆದುಕೊಳ್ಳಲು ಬಂದವರಿಗೆ ಇತರ ಆರೋಗ್ಯ ಸಮಸ್ಯೆಗಳು ಇಲ್ಲಿ ಫ್ರೀಯಾಗಿ ದೊರಕುತ್ತಿದೆ. ಇದಕ್ಕೆ ಕಾರಣ ಆಸ್ಪತ್ರೆಯ ಒಳಭಾಗ ಗ್ರೌಂಡ್ ಫ್ಲೋರ್‌ನಲ್ಲಿ ಸಂಗ್ರಹವಾಗ್ತಿರುವ ಮಳೆ ನೀರು. ಕೆಲವು ದಿನಗಳಿಂದ ಆಸ್ಪತ್ರೆಯ ಒಳಭಾಗದಲ್ಲಿ ಮಳೆ ನೀರು ಸಂಗ್ರಹವಾದ್ರೂ ಹೇಳೋರಿಲ್ಲ, ಕೇಳೋರಿಲ್ಲದಂತಾಗಿದ್ದು, ಇದೇ ನೀರಿನಲ್ಲಿ ರಾಶಿ ರಾಶಿ ಸೊಳ್ಳೆಗಳು ಕೂಡಾ ಉತ್ಪತ್ತಿಯಾಗುತ್ತಿವೆ.

ಯುವಕರಿಗೆ ಕಾರವಾರ ಜಿಲ್ಲಾಡಳಿತದಿಂದ ಹೊಸ ಯೋಜನೆ

ಇನ್ನು ಸಂಗ್ರಹವಾದ ಇದೇ ನೀರಿಗೆ ಕಸದ ರಾಶಿಯನ್ನೂ ಬಿಸಾಕಲಾಗುತ್ತಿದ್ದು,  ಔಷಧಿ ಬಾಟಲಿ, ಕಸಕಡ್ಡಿಗಳು, ಪ್ಲಾಸ್ಟಿಕ್ ಬಾಟಲಿಗಳು ಈ ನೀರಿನಲ್ಲಿ  ತೇಲುತ್ತಿವೆ. ಒಂದು ಕಡೆ ಕೊರೋನಾ ವ್ಯಾಕ್ಸಿನ್ ವಿತರಣಾ ಸೆಂಟರ್ ಇದ್ದರೆ, ಇದರ ವಿರುದ್ಧ ದಿಕ್ಕಿನಲ್ಲೇ ಮಲೇರಿಯಾ, ಡೆಂಗ್ಯೂ ಪ್ರೊಡಕ್ಷನ್ ಸೆಂಟರ್ ಕಾಣಿಸುತ್ತಿದೆ. ಇನ್ನು ಆಸ್ಪತ್ರೆಯ ಮೇಲಂತಸ್ತಿನ ಕಟ್ಟಡದ ನಿರ್ಮಾಣ ಕಾಮಗಾರಿಯ ತ್ಯಾಜ್ಯ ನೀರು ಕೂಡಾ ಇದರಲ್ಲೇ ಮಿಶ್ರಣಗೊಳ್ಳುತ್ತಿದ್ದು, ಕ್ರಿಮ್ಸ್ ಆಸ್ಪತ್ರೆಯಲ್ಲಿ ಯಾವ ಮಟ್ಟದವರೆಗೆ ನಿರ್ಲಕ್ಷ್ಯ ಮಾಡಲಾಗುತ್ತಿದೆ ಅನ್ನೋದು ಇದೊಂದು ಸ್ಪಷ್ಟ ಉದಾಹರಣೆಯಾಗಿದೆ.