ಹಠಾತ್ ಮಳೆಗೆ 10 ಎಕರೆಗೂ ಹೆಚ್ಚು ಭತ್ತ ಬೆಳೆ ನಾಶ, ರೈತರಿಗೆ ಹತಾಶೆ

By Kannadaprabha News  |  First Published Oct 20, 2019, 8:00 AM IST

ಬಿಡದೇ ಸುರಿದ ಮಳೆ ನಾಟಿ ಮಾಡಿ ಗದ್ದೆಗಳಲ್ಲಿ ವಾರಗಟ್ಟಲೇ ನೆರೆ ತುಂಬಿಸಿ ಸಾಕಷ್ಟುನಷ್ಟಕ್ಕೆ ಕಾರಣವಾಯಿತು. ಇದೀಗ ಗದ್ದೆಗಳಲ್ಲಿ ಬತ್ತ ಮಾಗುತ್ತಿದೆ. ಕೊಯಿಲು ಮಾಡುವುದಕ್ಕೆ ಈಗ ಆರಂಭವಾಗಿರುವ ಹಿಂಗಾರು ಮಳೆ ಅವಕಾಶ ನೀಡುತ್ತಿಲ್ಲ. ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ 10 ಎಕರೆಗೂ ಹೆಚ್ಚು ಭತ್ತದ ಗದ್ದೆ ನಾಶವಾಗಿದೆ.


ಉಡುಪಿ(ಅ.20):  ಈ ಬಾರಿಯ ಮಳೆ ಉಡುಪಿ ಜಿಲ್ಲೆಯ ರೈತರಿಗೆ ತೀವ್ರ ಸಂಕಷ್ಟಕ್ಕೆ ಕಾರಣವಾಗುತ್ತಿದೆ. ಮುಂಗಾರಿನ ಆರಂಭದಲ್ಲಿ ಮಳೆಯ ಕೊರತೆಯಿಂದ ರೈತರು ಸರಿಯಾದ ಸಮಯಕ್ಕೆ ಬೀಜ ಬಿತ್ತುವುದಕ್ಕೆ ಸಾಧ್ಯವಾಗಿರಲಿಲ್ಲ.

ಸುಮಾರು ಒಂದು ತಿಂಗಳಷ್ಟುತಡವಾಗಿ, ನಂತರ ಬಿಡದೇ ಸುರಿದ ಮಳೆ ನಾಟಿ ಮಾಡಿ ಗದ್ದೆಗಳಲ್ಲಿ ವಾರಗಟ್ಟಲೇ ನೆರೆ ತುಂಬಿಸಿ ಸಾಕಷ್ಟುನಷ್ಟಕ್ಕೆ ಕಾರಣವಾಯಿತು. ಇದೀಗ ಗದ್ದೆಗಳಲ್ಲಿ ಬತ್ತ ಮಾಗುತ್ತಿದೆ. ಕೊಯಿಲು ಮಾಡುವುದಕ್ಕೆ ಈಗ ಆರಂಭವಾಗಿರುವ ಹಿಂಗಾರು ಮಳೆ ಅವಕಾಶ ನೀಡುತ್ತಿಲ್ಲ.

Latest Videos

undefined

ಆಗುಂಬೆ ಘಾಟ್‌ ಎಲ್ಲ ವಾಹನಗಳಿಗೆ ಸಂಚಾರ ಮುಕ್ತ

ಬೇಗ ನಾಟಿ ಮಾಡಿದ ರೈತರನೇಕರು ಕೊಯಿಲು ಮಾಡಿ ಒಣಗಿಸುವುದಕ್ಕೆ ಹಾಕಿದ 20 - 30 ಎಕ್ರೆಗೂ ಅಧಿಕ ಬತ್ತ ತೆನೆಗಳು ನೀರಿನಲ್ಲಿ ನೆನೆದು ಮೊಳೆಕೆಯೊಡೆಯುವ ಭೀತಿ ಎದುರಾಗಿದೆ. ಜೊತೆಗೆ ಬತ್ತದ ಪೈರು ಕೂಡ ಕೊಳೆತು ನಷ್ಟವಾಗುವ ಆತಂಕ ಉಂಟಾಗಿದೆ.

ಇನ್ನೂ ಯಂತ್ರಗಳು ಬಂದಿಲ್ಲ

ಮುಖ್ಯವಾಗಿ ಕುಂದಾಪುರದ ಕುಂಭಾಶಿ, ಬೀಜಾಡಿ, ಕೊಮೆ, ಕೊರವಡಿ, ತೆಕ್ಕಟ್ಟೆ, ಕೋಟ ಸಹಿತ ಜಿಲ್ಲೆಯ ಕೆಲವು ಕಡೆಗಳಲ್ಲಿ ಬತ್ತ ಕೊಯಿಲಿಗೆ ಬಂದಿದೆ. ಕೊಯಿಲು ಮಾಡುವುದಕ್ಕೆ ಒಂದೆಡೆ ಮಳೆ ಭೀತಿ ಎದುರಾಗಿದ್ದರೇ, ಇನ್ನೊಂದೆಡೆ ಹೊರ ರಾಜ್ಯಗಳಿಂದ ಈಗಾಗಲೇ ಬರಬೇಕಾಗಿದ್ದ ಕಟಾವು ಯಂತ್ರಗಳು ಈ ಬಾರಿ ಇನ್ನೂ ಬಂದಿಲ್ಲ. ಒಂದು ವೇಳೆ ಯಂತ್ರಗಳು ಬಂದಿದ್ದರೂ, ಈ ಯಂತ್ರಗಳಿಂದ ಗದ್ದೆಗಳಲ್ಲಿ ನೀರಿದ್ದರೇ ಕಟಾವು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಕೊಯಿಲು ನಡೆಸುವುದಕ್ಕೆ ರೈತರಿಗೆ ಉಪಾಯವಿಲ್ಲದಂತಾಗಿದೆ.

ಮೊಳಕೆಯೊಡೆದರೇನು ಗತಿ

ಈಗಾಗಲೇ ತೆನೆ ಮಾಗಿದ ಬತ್ತದ ಪೈರು ಒಣಗಿ ಗದ್ದೆಯಲ್ಲಿ ಅಡ್ಡ ಬೀಳುತ್ತಿವೆ. ಈ ಹಂತದಲ್ಲಿ ಮಳೆ ಬಂದರೇ ಬತ್ತದ ಕಾಳು ಗದ್ದೆಗೆ ಉದುರುತ್ತದೆ ಅಥವಾ ನೆಲಕ್ಕೆ ತಾಗಿದ ತೆನೆಯ ಬತ್ತ ಅಲ್ಲಿಯೇ ಮೊಳಕೆಯೊಡೆಯುತ್ತದೆ. ಇದರಿಂದ ರೈತರಿಗೆ ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಸಿಗದಂತಾಗುವ ಭೀತಿ ಎದುರಾಗಿದೆ.

ಮೂರು ದಿನದ ಮಳೆಗೆ 4 ಲಕ್ಷಕ್ಕೂ ಹೆಚ್ಚಿನ ಹಾನಿ: ಇಬ್ಬರುಸಾವು

ಇನ್ನೊಂದೆಡೆ ಗದ್ದೆಗೆ ಅಡ್ಡ ಬಿದ್ದ ಬತ್ತದ ಪೈರು (ಹುಲ್ಲು) ಕೂಡ ಕೆಸರು ತಾಗಿದರೇ ಅದೂ ಮುಂದೆ ಜಾನುವಾರಗಳು ತಿನ್ನುವುದಕ್ಕಾಗುವುದಿಲ್ಲ. ಇದರಿಂದಲೂ ರೈತರಿಗೆ ನಷ್ಟವಾಗುತ್ತಿದೆ. ವಿಪರ್ಯಾಸ ಎಂದರೇ ಮಳೆಯನ್ನೇ ನಂಬಿ ಬತ್ತ ಬೆಳೆಯುವ ಉಡುಪಿ ಜಿಲ್ಲೆಯ ರೈತರು ಮಳೆಯ ಕಾರಣಕ್ಕೆನೇ ಚಿಂತಿತರಾಗಿದ್ದಾರೆ.

ಬೈರಂಪಳ್ಳಿಯಲ್ಲಿ 40 ಎಕ್ರೆ ಬತ್ತ ಕೊಚ್ಚಿ ಹೋಗಿದೆ

ಐದು ದಿನಗಳ ಹಿಂದೆ ಜಿಲ್ಲೆಯಲ್ಲಿ ಹಠಾತ್ತನೇ ಭಾರಿ ಮಳೆಯಾಗಿದೆ. ಇದರಿಂದ ಪೆರ್ಡೂರು ಸಮೀಪದ ಬೈರಂಪಳ್ಳಿ ಗ್ರಾಮದಲ್ಲಿ ಸುಮಾರು 40 ಎಕ್ರೆ ಪ್ರದೇಶದಲ್ಲಿ ಒಂದೆರಡು ದಿನಗಳ ಹಿಂದೆ ಕೊಯಿಲು ಮಾಡಿ ಗದ್ದೆಯಲ್ಲಿ ಒಣಗುವುದಕ್ಕೆ ಬಿಟ್ಟಿದ್ದ ಬತ್ತದ ಪೈರು ಸಂಪೂರ್ಣ ಮುಳುಗಿ, ಕೊಚ್ಚಿ ಹೋಗಿದೆ. ಇದರಿಂದ 10 ಲಕ್ಷ ರು. (ಅಧಿಕಾರಿಗಳ ಸರ್ಕಾರಿ ಲೆಕ್ಕದಲ್ಲಿ)ಗೂ ಹೆಚ್ಚು ನಷ್ಟವಾಗಿದೆ.

ನಾಟಿಯಲ್ಲಿಯೂ ನಷ್ಟ, ಕೊಯಿಲಿನಲ್ಲಿಯೂ ನಷ್ಟ

ಈ ಬಾರಿಯ ಮುಂಗಾರು ಮಳೆಯಿಂದ, ನಾಟಿಯ ಸಂದರ್ಭ ಜಿಲ್ಲೆಯ 95 ಗ್ರಾಮಗಳ 1,400 ಹೆಕ್ಟೇರುಗಳಷ್ಟುಬತ್ತದ ಬೆಳೆ ಜಲಾವೃತವಾಗಿತ್ತು. ಅವುಗಳಲ್ಲಿ 70 ಗ್ರಾಮಗಳ 308 ಹೆಕ್ಟೇರು ಬತ್ತಕ್ಕೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ. ಈಗ ಕೊಯಿಲಿನ ಸಂದರ್ಭ ಮತ್ತೆ ಮಳೆ ಸುರಿದರೆ, ಬೆಳೆದ ಅಲ್ಪಸ್ವಲ್ಪ ಫಸಲು ಕೈಗೆ ಬಾರದೇ ಇನ್ನಷ್ಟುನಷ್ಟವಾಗುತ್ತಿದೆ. ಒಟ್ಟಿನಲ್ಲಿ ಬತ್ತದ ಕೃಷಿಯಲ್ಲಿ ಸುಖ ಇಲ್ಲ ಎಂದು ರೈತರು ರಾಗ ಎಳೆಯುವುದು ನಿಜವಾಗುತ್ತಿದೆ.

ಈ ಬಾರಿ ಉತ್ತಮ ಫಸಲೇನೋ ಬಂದಿದೆ...

ಈ ಬಾರಿ ಆರಂಭದಲ್ಲಿ ಮಳೆ ಕಡಿಮೆಯಾದರೂ ನಂತರ ಬತ್ತ ಬೆಳೆಗೆ ನೀರಿನ ಕೊರತೆಯಾಗಿಲ್ಲ. ಆದ್ದರಿಂದ ಉತ್ತಮ ಫಸಲು ಬಂದಿದೆ. ಈಗ ನಾಟಿಗೂ ಪೈರು ಸಿದ್ಧವಾಗಿದೆ. ಸಕಾಲದಲ್ಲಿ ಮಾಗಿದ ಬತ್ತ ಕೊಯಿಲು ಮಾಡಿ ಪೈರಿನಿಂದ ಬೇರ್ಪಡಿಸದಿದ್ದರೇ ಬತ್ತದ ಬಣ್ಣ ಮಸುಕಾಗುತ್ತದೆ. ಹಾಗಾಗಿ ಅಕ್ಕಿಯ ಗುಣಮಟ್ಟ, ಬೆಲೆ ಕಡಿಮೆಯಾಗುತ್ತದೆ. ಈಗ ಸುರಿಯುತ್ತಿರುವ ಮಳೆಯಿಂದ ಬೇಗ ನಾಟಿ ಮಾಡಿದ ರೈತರಿಗೆ ತೊಂದರೆಯಾಗಬಹುದು. ತಡವಾಗಿ ನಾಟಿ ಮಾಡಿದ ರೈತರಿಗೆ ಸಮಸ್ಯೆ ಇಲ್ಲ ಎಂದು ಉಡುಪಿ ಕೃಷಿ ಇಲಾಖೆ ಉಪನಿರ್ದೇಶಕ ಚಂದ್ರಶೇಖರ ನಾಯ್ಕ್ ಹೇಳಿದ್ದಾರೆ.

click me!