ಊಬರ್ ಟ್ಯಾಕ್ಸಿಯಲ್ಲಿ ಪ್ರಯಾಣಿಕರು ಮರೆತು ಹೋದ ವಸ್ತುಗಳ ವಾರ್ಷಿಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಚಿನ್ನದ ಬಿಸ್ಕತ್ತು, ಮದುವೆ ಸೀರೆ, ಅಡುಗೆ ಸ್ಟವ್ ಸೇರಿದಂತೆ ಹಲವು ಅಪರೂಪದ ವಸ್ತುಗಳನ್ನು ಕಳೆದುಕೊಂಡಿದ್ದಾರೆ.
ಸಾಮಾನ್ಯವಾಗಿ ಪ್ರಯಾಣಿಕರು ಗಡಿಬಿಡಿಯಲ್ಲಿ ಟ್ಯಾಕ್ಸಿಗಳಲ್ಲಿ ಹೋಗುವಾಗ ಹಲವು ವಸ್ತುಗಳನ್ನು ತೆಗೆದುಕೊಳ್ಳದೇ ಮರೆತು ಹೋಗಿಬಿಡುತ್ತಾರೆ. ಊಬರ್ ಟ್ಯಾಕ್ಸಿಯಲ್ಲಿಯೂ ನೂರಾರು ಜನರು ತಮ್ಮ ಬೆಲೆ ಬಾಳುವ ವಸ್ತುಗಳನ್ನು ಬಿಟ್ಟು ಹೋಗಿದ್ದಾರೆ. ಗೋಲ್ಡ್ ಬಿಸ್ಕತ್ತು, ಮದುವೆ ಸೀರೆ, ಅಡುಗೆ ಸ್ಟವ್ ಸೇರಿದಂತೆ ಹಲವು ವಸ್ತುಗಳನ್ನು ಬಿಟ್ಟು ಹೋದ ಬಗ್ಗೆ ಊಬರ್ 9ನೇ ವಾರ್ಷಿಕ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಆಟೋ, ಟ್ಯಾಕ್ಸಿಗಳಲ್ಲಿ ಹೋಗುವಾಗ ಮನೆ ತಲುಪಿದ ನಂತರ ಅಥವಾ ನಾವು ಹೋಗಬೇಕಾದ ಸ್ಥಳ ತಲುಪಿದ ಖುಷಿ ಅಥವಾ ಅವಸರದಲ್ಲಿ ಕೆಲವೊಂದು ವಸ್ತುಗಳನ್ನು ಮರೆತು ಹೋಗುತ್ತೇವೆ. ಇಲ್ಲಿ ನಾವು ಆನ್‌ಲೈನ್ ಮೂಲಕ ಬುಕಿಂಗ್ ಮಾಡದ ಆಟೋಗಳಿದ್ದರೆ, ಅಂತಹ ವಸ್ತುಗಳು ಕಳೆದು ಹೋದವೆಂದೇ ತಿಳಿದುಕೊಳ್ಳಬೇಕು. ಇಲ್ಲವೇ ಆನ್‌ಲೈನ್ ಮುಖಾಂತರ ಬುಕಿಂಗ್ ಮಾಡಿದ ಆಟೋ ಅಥವಾ ಕ್ಯಾಬ್‌ಗಳಾದರೆ ನಾವು ಬಿಟ್ಟು ಬಂದ ವಸ್ತುಗಳನ್ನು ವಾಪಸ್ ಪಡೆದುಕೊಳ್ಳುವ ಅವಕಾಶವೂ ಇರುತ್ತದೆ. ಒಟ್ಟಾರೆ, ಆಟೋ, ಟ್ಯಾಕ್ಸಿಗಳಲ್ಲಿ ನಾವು ಬಿಟ್ಟುಬಂದ ವಸ್ತುಗಳನ್ನು ವಾಪಸ್ ಪಡೆಯುವುದಕ್ಕೆ ಕೆಲವೊಬ್ಬರಿಗೆ ಸಾಧ್ಯವಾದರೆ, ಇನ್ನು ಬಹುತೇಕರಿಗೆ ಸಾಧ್ಯವಾಗದೇ ನಷ್ಟ ಅನುಭವಿಸುತ್ತಾರೆ. ಆದರೆ, ನಾವು ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಿಕೊಂಡು ಹೋಗುವ ಊಬರ್ ಟ್ಯಾಕ್ಸಿಯನ್ನು ಜನರು ಏನೆಲ್ಲಾ ಬಿಟ್ಟು ಹೋಗಿದ್ದಾರೆ ಎಂಬುದನ್ನು ಈ ಪಟ್ಟಿಯಲ್ಲಿ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಓಲಾ, ಉಬರ್ ರೀತಿಯಲ್ಲಿ ದೇಶದಲ್ಲಿ ಕೇಂದ್ರ ಸರ್ಕಾರದಿಂದಲೇ ಸಹಕಾರಿ ಟ್ಯಾಕ್ಸಿ ಸೇವೆ: ಅಮಿತ್ ಶಾ ಘೋಷಣೆ!
ಊಬರ್ ಸಂಸ್ಥೆಯು 9ನೇ ವಾರ್ಷಿಕ ಲಾಸ್ಟ್ ಆಂಡ್ ಫೌಂಡ್ ಇಂಡೆಕ್ಸ್‌ನಲ್ಲಿ ಊಬರ್ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಂಗಾರದ ಬಿಸ್ಕತ್ತು, ಮದುವೆ ಸೀರೆ, ಅಡುಗೆ ಸ್ಟವ್ ಸೇರಿದಂತೆ ಹಲವು ವಸ್ತುಗಳನ್ನು ಪ್ರಯಾಣಿಕರು ಮರೆತು ಹೋಗಿದ್ದಾರೆ. ಇದರ ಜೊತೆಗೆ, ಪ್ರಯಾಣಿಕರು ಅತಿ ಹೆಚ್ಚು ಮರೆತು ಹೋಗುವ ವಸ್ತುಗಳು, ನಗರಗಳು, ದಿನಗಳು, ಸಮಯಗಳನ್ನು ಊಬರ್ ಬಿಡುಗಡೆ ಮಾಡಿದೆ. ಅಲ್ಲದೆ, ಮರೆತು ಹೋದ ವಸ್ತುಗಳನ್ನು ಸುಲಭವಾಗಿ ಪಡೆಯುವುದು ಹೇಗೆ ಎಂಬುದರ ಬಗ್ಗೆಯೂ ಮಾಹಿತಿ ನೀಡಿದೆ.
ಭಾರತೀಯರು ಊಬರ್‌ನಲ್ಲಿ ಮರೆತು ಹೋದ ಅಪರೂಪದ ವಸ್ತುಗಳು ಯಾವುವು ಗೊತ್ತಾ?
ಊಬರ್‌ನಲ್ಲಿ ಬಿಟ್ಟು ಹೋದ ವಸ್ತುಗಳ ಪೈಕಿ 25 ಕೆಜಿ ಹಸುವಿನ ತುಪ್ಪ, ವೀಲ್ ಚೇರ್, ಕೊಳಲು, ಹೇರ್ ವಿಗ್, ಗ್ಯಾಸ್ ಬರ್ನರ್ ಸ್ಟವ್, ಮದುವೆ ಸೀರೆ, ಗೋಲ್ಡ್ ಬಿಸ್ಕತ್ತು, ಟೆಲಿಸ್ಕೋಪ್, ಅಲ್ಟ್ರಾಸಾನಿಕ್ ಡಾಗ್ ಬಾರ್ಕಿಂಗ್ ಕಂಟ್ರೋಲ್ ಡಿವೈಸ್, ಹವನ ಕುಂಡ ಇವುಗಳನ್ನೆಲ್ಲಾ ಮರೆತು ಹೋಗಿದ್ದಾರೆ.
ಟ್ಯಾಕ್ಸಿಯಲ್ಲಿ ಅತಿ ಹೆಚ್ಚು ಮರೆತು ಹೋಗುವ ವಸ್ತುಗಳ ಪಟ್ಟಿಯೂ ಇದೆ. ಬ್ಯಾಕ್‌ಪ್ಯಾಕ್/ಬ್ಯಾಗ್, ಇಯರ್‌ಫೋನ್/ಸ್ಪೀಕರ್, ಫೋನ್, ವ್ಯಾಲೆಟ್/ಪರ್ಸ್, ಕನ್ನಡಕ/ಸನ್‌ಗ್ಲಾಸ್, ಕೀ, ಬಟ್ಟೆ, ಲ್ಯಾಪ್‌ಟಾಪ್, ವಾಟರ್ ಬಾಟಲ್/ಬಾಟಲ್, ಪಾಸ್‌ಪೋರ್ಟ್ ಇವು ಸಾಮಾನ್ಯವಾಗಿ ಮರೆತು ಹೋಗುವ ವಸ್ತುಗಳು.
ಇದನ್ನೂ ಓದಿ: ಬೆಂಗಳೂರಲ್ಲಿ ಟ್ಯಾಕ್ಸಿ ಹಗರಣ, 450 ರೂ ಹೇಳಿ ಮಹಿಳೆಯಿಂದ 3,000 ವಸೂಲಿ ಮಾಡಿದ ಗ್ಯಾಂಗ್
ಅತಿ ಹೆಚ್ಚು ಮರೆತು ಹೋಗುವ ನಗರಗಳ ಪಟ್ಟಿಯಲ್ಲಿ ಮುಂಬೈ, ದೆಹಲಿ ಎನ್‌ಸಿಆರ್, ಪುಣೆ, ಬೆಂಗಳೂರು, ಕೋಲ್ಕತ್ತಾ ಇವೆ. ಆಗಸ್ಟ್ 3 ಶನಿವಾರ ಶಿವರಾತ್ರಿ, ಸೆಪ್ಟೆಂಬರ್ 28 ಶನಿವಾರ, ಮೇ 10 ಶುಕ್ರವಾರ ಅಕ್ಷಯ ತೃತೀಯ ದಿನದಂದು ಅತಿ ಹೆಚ್ಚು ವಸ್ತುಗಳನ್ನು ಮರೆತು ಹೋಗಿದ್ದಾರೆ ಎಂದು ಹೇಳಲಾಗಿದೆ. ಶುಕ್ರವಾರ, ಶನಿವಾರ, ಭಾನುವಾರ ಸಾಮಾನ್ಯವಾಗಿ ಜನರು ವಸ್ತುಗಳನ್ನು ಮರೆಯುತ್ತಾರೆ. ಸಂಜೆ 6 ಗಂಟೆ, 7 ಗಂಟೆ, 8 ಗಂಟೆ ಸಮಯದಲ್ಲಿ ಹೆಚ್ಚು ಮರೆತು ಹೋಗುತ್ತಾರಂತೆ.