ಮುಂಬೈನಿಂದ ವಾರಾಣಸಿಗೆ ಹೊರಟಿದ್ದ ಇಂಡಿಗೋ ವಿಮಾನವು ವೃದ್ಧೆಯೊಬ್ಬರು ಅಸ್ವಸ್ಥರಾದ ಕಾರಣ ಔರಂಗಾಬಾದ್‌ನಲ್ಲಿ ತುರ್ತು ಲ್ಯಾಂಡಿಂಗ್ ಆಯಿತು. ಆದರೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ವೃದ್ಧೆ ಸಾವನ್ನಪ್ಪಿದ್ದಾರೆ.
ಮುಂಬೈನಿಂದ ವಾರಾಣಾಸಿಗೆ ಹೊರಟಿದ್ದ ಇಂಡಿಯೋ ವಿಮಾನ ತುರ್ತು ಲ್ಯಾಂಡಿಂಗ್ ಆಗಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 89 ವರ್ಷದ ವೃದ್ಧೆಯೊಬ್ಬರು ಅಸ್ವಸ್ಥರಾದ ಹಿನ್ನೆಲೆಯಲ್ಲಿ ವಿಮಾನವನ್ನು ಔರಂಗಾಬಾದ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯ್ತು. ಆದರೆ ವಿಮಾನ ಲ್ಯಾಂಡ್ ಆಗಿ ವೃದ್ಧೆಯನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರ. 89 ವರ್ಷದ ವೃದ್ಧೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ವಿಮಾನವನ್ನು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ಛಿಕಲ್ಥಾಣ ಏರ್‌ಪೋರ್ಟ್‌ನಲ್ಲಿ ತುರ್ತಾಗಿ ಲ್ಯಾಂಡ್ ಮಾಡಲಾಯ್ತು ಎಂದು ಇಂಡಿಗೋ ವಿಮಾನಯಾನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶ ಮಿರ್ಜಾಪುರದ ನಿವಾಸಿಯಾದ ಸುಶೀಲ್ ದೇವಿ ಸಾವಿಗೀಡಾದ ಮಹಿಳೆ, ಮುಂಬೈನಲ್ಲಿ ವಿಮಾನ ಏರಿದ ಅವರಿಗೆ ವಿಮಾನ ಮಧ್ಯ ಆಗಸದಲ್ಲಿ ಹಾರುತ್ತಿದ್ದಾಗ ಅನಾರೋಗ್ಯ ಕಾಡಿದೆ. ಹೀಗಾಗಿ ವೈದ್ಯಕೀಯ ತುರ್ತು ಪರಿಸ್ಥಿತಿಯ ಕಾರಣಕ್ಕೆ ಚಿಕ್ಕಲ್ತಾನಾ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ರಾತ್ರಿ 10 ಗಂಟೆಗೆ ತುರ್ತು ಲ್ಯಾಂಡ್ ಮಾಡಲಾಯ್ತು. ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ವೈದ್ಯಕೀಯ ಸಿಬ್ಬಂದಿ ಮಹಿಳೆಯ ಆರೋಗ್ಯ ತಪಾಸಣೆ ಮಾಡಿದರು. ಆದರೆ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದರು.
ನಂತರ MIDC CIDCO ಪೊಲೀಸ್ ಠಾಣೆ ಅಗತ್ಯ ಔಪಚಾರಿಕ ಕ್ರಮಗಳನ್ನು ಕೈಗೊಂಡು ವಿಮಾನವು ಪ್ರಯಾಣ ಮುಂದುವರಿಸಲು ಅನುವು ಮಾಡಿಕೊಡಲಾಯ್ತು. ವಿಮಾನಯಾನ ಸಂಸ್ಥೆಯ ಪ್ರಕಾರ, ಮಹಿಳೆಯ ಶವವನ್ನು ಛತ್ರಪತಿ ಸಂಭ್ಜಿನಗರದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ.