ಗೋವಾ ಪ್ರವಾಸಕ್ಕೆ ಹೋಗುವ ಪ್ರವಾಸಿಗರಿಗೆ ಗೋವಾ ಸರ್ಕಾರವು ರಸ್ತೆ ಬದಿಯಲ್ಲಿ ಅಡುಗೆ ಮಾಡುವಂತಿಲ್ಲ ಎಂದು ಹೊಸ ನಿಯಮ ಜಾರಿ ಮಾಡಿದೆ. ನಿಯಮ ಉಲ್ಲಂಘಿಸಿದರೆ ವಾಹನ ಜಪ್ತಿ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುವುದು.
ಉತ್ತರ ಕನ್ನಡ (ಏ.07): ಸಾಮಾನ್ಯವಾಗಿ ಯುವಜನರು ಪ್ರವಾಸ ಎಂದಾಕ್ಷಣ ಗೋವಾಗೆ ಹೋಗುವವರಿಗೆ ಗೋವಾ ಸರ್ಕಾರದಿಂದ ಭಾರೀ ಶಾಕ್ ನೀಡಲಾಗಿದೆ. ಗೋವಾ ಪ್ರವಾಸಕ್ಕೆ ಹೋಗುವವರು ಹಾಗೂ ಬರುವವರ ಬಳಿ ಮದ್ಯದ ಬಾಟಲಿ ಸಿಕ್ಕಿದರೆ ಜಪ್ತಿ ಮಾಡಿಕೊಂಡು ಕಳುಹಿಸಲಾಗುತ್ತಿತ್ತು. ಇದೀಗ ಗೋವಾ ಪ್ರವಾಸಕ್ಕೆ ಹೋಗುವಾಗ ಅಡುಗೆ ಮಾಡಲು ಗ್ಯಾಸ್ ಸಿಲಿಂಡರ್ ಹಾಗೂ ಊಟದ ಸಾಮಗ್ರಿಗಳನ್ನೂ ತೆಗೆದುಕೊಂಡು ಹೋಗುವಂತಿಲ್ಲ. ರಸ್ತೆ ಬದಿಯಲ್ಲಿ ಅಡುಗೆ ತಯಾರಿಸಿಕೊಂಡು ಊಟ ಮಾಡುವಂತಿಲ್ಲ ಎಂದು ಗೋವಾ ಸರ್ಕಾರ ಆದೇಶ ಹೊರಡಿಸಿದೆ.
ಹೌದು, ಸ್ನೇಹಿತರು, ಕುಟುಂಬಸ್ಥರನ್ನು ಒಳಗೊಂಡು ಒಂದೆರಡು ದಿನ ಗೋವಾ ರಾಜ್ಯಕ್ಕೆ ಪ್ರವಾಸಕ್ಕೆ ಹೋಗುವರಿಗೆ ಗೋವಾ ಸರ್ಕಾರ ಶಾಕ್ ಕೊಟ್ಟಿದೆ. ಗೋವಾ ಹೋದರೆ ಸಮಸ್ಯೆ ಇಲ್ಲ, ಆದ್ರೆ ಹೋಗುವ ವೇಳೆ ರಸ್ತೆ ಬದಿಯಲ್ಲಿ ಅಡುಗೆ ಮಾಡಿ ಊಟ ಮಾಡಿದ್ರೆ ಜೈಲೂಟ ಗ್ಯಾರಂಟಿ. ಪ್ರವಾಸೋದ್ಯಮಲ್ಲಿ ತನ್ನದೇ ಛಾಪು ಮೂಡಿಸಿರುವ ಗೋವಾ ರಾಜ್ಯಕ್ಕೆ ದೇಶದ ಮೂಲೆ ಮೂಲೆಗಳಿಂದ ಪ್ರವಾಸಿಗರು ಬರುತ್ತಾರೆ. ಈ ನಡುವೆ ಗೋವಾ ರಾಜ್ಯಕ್ಕೆ ಬರುವ ಪ್ರವಾಸಿಗರಿಗೆ ಗೋವಾ ಸರಕಾರದಿಂದ ಹೊಸ ನಿಯಮ ಜಾರಿ ಮಾಡಲಾಗಿದೆ. ಪ್ರವಾಸಿಗರು ರಸ್ತೆ ಬದಿಯಲ್ಲಿ ಅಡುಗೆ ತಯಾರಿಸಿ ತಿನ್ನದಂತೆ ಗೋವಾ ಸರ್ಕಾರ ನಿರ್ಭಂದ ಹೇರಿದೆ.
ಇದನ್ನೂ ಓದಿ: ಹುಬ್ಬಳ್ಳಿ - ರಾಮೇಶ್ವರಂ ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು ಸೇವೆ ಪುನರಾರಂಭ!
ರಾಜ್ಯದಲ್ಲಿ ಸ್ವಚ್ಛತೆ ಕಾಪಾಡೋ ಉದ್ದೇಶದಿಂದ ಪ್ರವಾಸಿಗರು ಎಲ್ಲೆಲ್ಲೋ ಅಡುಗೆ ಮಾಡಿ ತ್ಯಾಜ್ಯ ಬಿಸಾಕದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು ಸೇರಿ ಹಲವು ರಾಜ್ಯಗಳಿಂದ ಕುಟುಂಬಸ್ಥರು, ಸ್ನೇಹಿತರ ಜತೆ ಪ್ರವಾಸಿಗರು ಆಗಮಿಸುತ್ತಾರೆ. ತಮ್ಮ ಊರಿನ ಆಹಾರ ಪದ್ಧತಿಯಂತೇ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಅಡುಗೆ ಮಾಡಿ ಊಟ ಮಾಡುತ್ತಿದ್ದರು. ಆದರೆ, ಈಗ ರಸ್ತೆ ಬದಿಯಲ್ಲಿ ಅಡುಗೆ ಮಾಡಿ ಊಟ ಮಾಡಿದರೆ ಕಾನೂನು ಕ್ರಮದ ಜತೆ ವಾಹನ ಕೂಡಾ ಸೀಜ್ ಮಾಡಲಾಗುತ್ತದೆ.
ಇದೀಗ ಗೋವಾಗೆ ಹೋಗುವವರು ವಾಹನದಲ್ಲಿ ಗ್ಯಾಸ್ ಸಿಲಿಂಡರ್, ಸ್ಟವ್ ಮತ್ತು ಪಾತ್ರೆ- ಪಗಡೆ ಸಾಗಿಸಿದ್ರೆ ಗಡಿಯಲ್ಲೇ ಸೀಝ್ ಮಾಡೋದಾಗಿ ಗೋವಾ ಸರ್ಕಾರ ತಿಳಿಸಿದೆ. ಈ ಹಿನ್ನೆಲೆ ಗೋವಾ ಚೆಕ್ ಪೋಸ್ಟ್ ನಲ್ಲಿ ಪೊಲೀಸರಿಂದ ಕಟ್ಟುನಿಟ್ಟಿನ ತಪಾಸಣೆ ಪ್ರಾರಂಭವಾಗಿದೆ. ಗೋವಾ ರಾಜ್ಯದ ಆಹಾರ ಪದ್ಧತಿ ಮತ್ತು ದುಬಾರಿ ಆಹಾರ ಸೇವಿಸಲಾಗದೇ ಹಲವು ಪ್ರವಾಸಿಗರು ರಸ್ತೆ ಬದಿಯಲ್ಲೇ ಅಡುಗೆ ಮಾಡಿ ಊಟ ಮಾಡುತ್ತಿದ್ದರು. ಇನ್ನುಮುಂದೆ ರಸ್ತೆ ಬದಿಯಲ್ಲಿ ಅಡುಗೆ ಮಾಡಿದರೆ ಆಹಾರ ತಯಾರಿಸೋ ವಸ್ತುಗಳ ಜತೆ ಪ್ರವಾಸಿಗರ ವಾಹನವನ್ನೂ ಜಪ್ತಿ ಮಾಡಲಾಗುತ್ತದೆ.
ಇದನ್ನೂ ಓದಿ: ವಿದೇಶದಲ್ಲಿ ಬ್ಯಾನ್ ಆದರೂ ಭಾರತದಲ್ಲಿ ಫುಲ್ ಫೇಮಸ್ ಆಗಿರುವ ವಸ್ತುಗಳು!
ಗೋವಾ ರಾಜ್ಯದ ನಿಯಮವನ್ನು ಪ್ರವಾಸಿಗರು ಹಾಗೂ ಕಾರ್ಮಿಕರು ವಿರೋಧಿಸುತ್ತಿದ್ದಾರೆ. ಲಾರಿ ಚಾಲಕರಿಗೂ ಇಂತಹ ನಿಯಮ ಮಾಡಿದ್ರೆ ಮುಂದಿನ ದಿನ ಹೋರಾಟದ ಹಾದಿ ಹಿಡಿಯಬೇಕಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಗೋವಾ ಸರ್ಕಾರ ಮಾಡಿರುವ ನಿಯಮ ಗೋವಾ ರಾಜ್ಯದ ಪ್ರವಾಸೋದ್ಯಮದ ಮೇಲೂ ಭಾರೀ ಪರಿಣಾಮ ಬೀರಲಿದೆ. ಪ್ರವಾಸಿಗರಿಗೆ ಕಿರಿಕಿರಿ ಮಾಡಿದರೆ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡ ಗೋವಾದ ಆರ್ಥಿಕತೆಗೆ ಪೆಟ್ಟು ಬೀಳುತ್ತದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.