ಬೀಚ್‌ಗಳ ಬಳಿ ಯುವಕರು ಹೋದ್ರೆ ಪಾರ್ಟಿ ಗ್ಯಾರಂಟಿ. ಆದರೆ ಇದು ಸ್ಥಳೀಯರಿಗೆ ತಲೆನೋವಿನ ವಿಷಯ. ಹೀಗಾಗಿ, ಸಂಜೆ ಮೇಲೆ ಯುವಕರನ್ನು ಬೀಚ್ ಬಳಿ ಬರದಂತೆ ನೋಡಿಕೊಳ್ಳಲು ಪೋಲೀಸರು ಒಂದೊಳ್ಳೆ ಐಡಿಯಾ ಮಾಡಿದಾರೆ.
ತಮಾಷೆ ಎನಿಸಬಹುದು. ಆದರೆ, ಇದು ಖಂಡಿತಾ ನಿಜ. ಈ ಬೀಚ್ ಬಳಿ ಯುವಕರ ಪಾರ್ಟಿ, ಮೋಜು ಮಸ್ತಿ ತಡೆಯಲು ಪೋಲೀಸರು ಇನ್ನಿಲ್ಲದ ಪ್ರಯತ್ನ ಮಾಡಿ ಸೋತರು. ಕಡೆಗೆ ಅದ್ಯಾವ ಪುಣ್ಯಾತ್ಮಕ ತಲೆಗೆ ಶಾಸ್ತ್ರೀಯ ಸಂಗೀತದ ಐಡಿಯಾ ಹೊಳೆಯಿತೋ ಏನೋ, ಇದೊಂತೂ ಸಂಪೂರ್ಣ ಕೆಲಸ ಮಾಡಿತು!
ಹೌದು, ಫಿನ್‌ಲ್ಯಾಂಡ್‌ನ ಎಸ್ಪೂ ನಗರದಲ್ಲಿ ಕಳೆದ 6 ವರ್ಷಗಳಿಂದ ಸಂಜೆ ಮೇಲೆ ಯುವಕರನ್ನು ದೂರವಿಡಲು ಶಾಸ್ತ್ರೀಯ ಸಂಗೀತವನ್ನು ಧ್ವನಿವರ್ಧಕಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ!
ಎಸ್ಪೂವಿನ ಹೌಕಿಲಹತಿ ನೆರೆಹೊರೆಯಲ್ಲಿರುವ ಬೀಚ್ ಎಂದರೆ ಮೋಜು ಮಸ್ತಿಗೆ ತುಂಬಾ ಖ್ಯಾತಿ ಪಡೆದಿತ್ತು. ಸಂಜೆ ವೇಳೆಗೆ ಇಲ್ಲಿ ಸೇರುವ ಯುವವರ್ಗ ತಡರಾತ್ರಿಯಾದರೂ ಜಾಗ ಖಾಲಿ ಮಾಡುತ್ತಿರಲಿಲ್ಲ. ಗಲಭೆ ಜೋರಾಗಿರುತ್ತಿತ್ತು. ಸ್ಥಳೀಯರಿಗೆ ತೊಂದರೆಯಾಗುತ್ತಿತ್ತು. ಸಾಲದೆಂಬಂತೆ, ಬೆಳಗ್ಗೆದ್ದರೆ, ಬೀಚ್ ಬಳಿಯಲ್ಲಿ ಖಾಲಿ ಬಾಟಲಿಗಳು, ಪ್ಲ್ಯಾಸ್ಟಿಕ್ ಸೇರಿದಂತೆ ಹಲವಾರು ಕಸಕಡ್ಡಿಗಳು ಬಿದ್ದಿರುತ್ತಿದ್ದವು.
ಈ ಬಗ್ಗೆ ಸ್ಥಳೀಯರಿಂದ ಪದೇ ಪದೆ ದೂರುಗಳು ಬರುವಾಗ ಸ್ಥಳೀಯ ಅಧಿಕಾರಿಗಳು ಯುವಕರನ್ನು ಚದುರಿಸಲು ಹಲವಾರು ಇತರ ವಿಧಾನಗಳನ್ನು ಪ್ರಯತ್ನಿಸಿದರು. ಆದರೆ, ಯಾವುದೂ ಕೆಲಸ ಮಾಡಲಿಲ್ಲ. ಕಡೆಗೆ ಪೊಲೀಸರು ಸೂರ್ಯಾಸ್ತದ ನಂತರ ಯುವಕರು ಅಲ್ಲಿ ಸೇರುವುದನ್ನು ತಡೆಯಲು ಸಮುದ್ರತೀರದಲ್ಲಿ ಒಂದೆರಡು ಧ್ವನಿವರ್ಧಕಗಳಿಂದ ಶಾಸ್ತ್ರೀಯ ಸಂಗೀತವನ್ನು ಪ್ರಸಾರ ಮಾಡಲು ಆರಂಭಿಸಿದರು.
ಅದೇನೋ, ಜಗತ್ತಿನ ಪೂರ್ವದಿಂದ ಪಶ್ಚಿಮದವರೆಗೂ ಶಾಸ್ತ್ರೀಯ ಸಂಗೀತವೆಂದರೆ ಯುವವರ್ಗ ಮೂಗು ಮುರಿಯುವುದೇ ಹೆಚ್ಚು. ಇಲ್ಲೂ ಅದೇ ಆಯ್ತು. ಆ ಸಂಗೀತದ ಆರ್ಭಟದಲ್ಲಿ ಯುವಕರು ನೃತ್ಯ ಮಾಡುವುದಿರಲಿ, ನಿದ್ದೆ ಬರಿಸುತ್ತೆಂದು ದೂರಿ ದೂರವಾಗತೊಡಗಿದರು.
ಇದೀಗ ಈ ಬೀಚ್ ತಟಗಳು ಸ್ವಚ್ಛ ಸುಂದರವಾಗಿವೆ. ಕುಟುಂಬಗಳು ಬಂದು ಎಂಜಾಯ್ ಮಾಡಲು ಹೇಳಿ ಮಾಡಿಸಿದಂತಿವೆ. ಈಗ, ಎಸ್ಪೂ ಪೋಲಿಸ್ ಚಿಂತೆಯಿಲ್ಲದೆ ಬೇರೆ ಕೆಲಸಗಳತ್ತ ಗಮನ ಹರಿಸುತ್ತಾರೆ.
ಹಲವಾರು ಸ್ಥಳೀಯರು ಪೊಲೀಸರ ಉಪಕ್ರಮವು ಸ್ವಲ್ಪ ವಿಚಿತ್ರವಾಗಿದೆ ಎಂದಿದ್ದಾರೆ, ಆದರೆ ಅದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ, ಯಾರೂ ದೂರು ನೀಡುತ್ತಿಲ್ಲ.