Latest Videos

ಟಾಯ್ಲೆಟ್ ಒಳಗೆಷ್ಟು ಹೊತ್ತು ಇದ್ರಿ? ಸುಳ್ಳು ಹೇಳೋಂಗಿಲ್ಲ, ಅಲ್ಲಿಯೂ ಇರುತ್ತೆ ಟೈಮರ್!

By Roopa HegdeFirst Published Jun 14, 2024, 12:52 PM IST
Highlights

ಶೌಚಾಲಯಕ್ಕೆ ಹೋದ್ರೆ ಗಂಟೆ ಕೂರೋರಿದ್ದಾರೆ.  ಅರ್ಜೆಂಟ್ ಆದವರು ಹೊರಗಿನಿಂದ ಕೂಗಿದ್ರೂ ಬಾಗಿಲು ತೆಗೆಯೋದಿಲ್ಲ. ಸಾರ್ವಜನಿಕ ಶೌಚಾಲಯಕ್ಕೆ ಇಂಥವರು ಹೋದ್ರೆ ಕಥೆ ಮುಗೀತು. ಈ ಸಮಸ್ಯೆ ತಪ್ಪಿಸಲು ಪ್ರವಾಸಿ ತಾಣವೊಂದರಲ್ಲಿ ಹೊಸ ವಿಧಾನ ಅಳವಡಿಸಲಾಗಿದೆ. 

ವಿಶ್ವದಾದ್ಯಂತ ಪ್ರವಾಸಿ ತಾಣಗಳ ಸಂಖ್ಯೆ ಸಾಕಷ್ಟಿದೆ. ಪ್ರತಿ ದಿನ ಪ್ರವಾಸಿ ತಾಣಕ್ಕೆ ಸಾವಿರಾರು ಜನರು ಬರ್ತಾರೆ. ಪ್ರವಾಸಿಗರಿಗೆ ಅಗತ್ಯವಿರುವ ಎಲ್ಲ ವಸ್ತುಗಳು ಸಿಗುವಂತೆ ಪ್ರವಾಸಿ ತಾಣದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಕುಡಿಯುವ ನೀರು, ಆಹಾರ ಸೇರಿದಂತೆ ಶೌಚಾಲಯ ಪ್ರವಾಸಿಗರಿಗೆ ಅಗತ್ಯವಾಗಿರುವ ಸೌಲಭ್ಯವಾಗಿದೆ. ಪ್ರತಿಯೊಂದು ಪ್ರವಾಸಿ ತಾಣದಲ್ಲೂ ಶೌಚಾಲಯಗಳಿರುತ್ತವೆ. ನೂರಾರು ಜನರು ಇದನ್ನು ಬಳಕೆ ಮಾಡುವುದ್ರಿಂದ ಪ್ರವಾಸಿ ಸ್ಥಳಗಳಲ್ಲಿ ಇದ್ರ ಕ್ಲೀನಿಂಗ್ ಒಂದು ಸವಾಲು. ಇನ್ನೊಂದು ಬಳಕೆಯ ಸಮಯ. ಅಂದ್ರೆ ಶೌಚಾಲಯದ ಒಳಗೆ ಹೋದವರು ಕಾಲುಗಂಟೆಯಾದ್ರೂ ಹೊರಗೆ ಬರದೆ ಹೋದ್ರೆ ಹೊರಗಿದ್ದವರಿಗೆ ಕಷ್ಟವಾಗುತ್ತದೆ. ಶೌಚಾಲಯದ ಮುಂದೆ ಕೆಲವೊಮ್ಮೆ ಕ್ಯೂ ಇರುತ್ತದೆ. ಎಷ್ಟು ಹೊತ್ತಿಂದ ಇಲ್ಲಿ ಕಾಯ್ತಿದ್ದೇವೆ ಅಂತಾ ಹೊರಗೆ ನಿಂತವರು ಜಗಳ ತೆಗೆಯೋದಿದೆ. ಒಳಗೆ ಹೋದವರು ಈಗಷ್ಟೇ ಹೋಗಿದ್ದೆ ಅಂತ ಹೇಳಿ ತಪ್ಪಿಸಿಕೊಳ್ತಾರೆ. ಆದ್ರೆ ಈಗ ನಾವು ಹೇಳ್ತಿರೋ ಜಾಗದಲ್ಲಿ ಅದಕ್ಕೆ ಅವಕಾಶವಿಲ್ಲ. ಶೌಚಾಲಯದ ಒಳಗೆ ನೀವು ಎಷ್ಟು ಸಮಯ ಇದ್ರಿ ಎಂಬುದನ್ನು ಪತ್ತೆ ಮಾಡಬಹುದು. ಅದಕ್ಕೊಂದು ಪರಿಹಾರ ಈಗ ಸಿಕ್ಕಿದೆ. ಚೀನಾದ ಪ್ರವಾಸಿ ತಾಣದಲ್ಲಿ ಈ ಪರಿಹಾರವನ್ನು ನೀವು ನೋಡ್ಬಹುದು. 

ಚೀನಾ (China) ದಲ್ಲಿ ಯುನೆಸ್ಕೋ (UNESCO) ಮಾನ್ಯತೆ ಪಡೆದ ಪ್ರಸಿದ್ಧ ಬೌದ್ಧ (Buddhist) ದೇವಾಲಯವಿದೆ. ಅದು ಶಾಂಗ್ಕ್ಸಿ ಪ್ರಾಂತ್ಯದಲ್ಲಿದೆ.  ಯುಂಗಾಂಗ್ ಬೌದ್ಧ ಗ್ರೊಟೊಸ್ ಚೀನಾ,  ಪ್ರಸಿದ್ಧ ಬೌದ್ಧ ಮಂದಿರವಾಗಿದೆ. ಇದು ಅತ್ಯಂತ ಪುರಾತನ ದೇವಾಲಯವಾಗಿದ್ದು, ಇಲ್ಲಿ 200ಕ್ಕೂ ಹೆಚ್ಚು ಗುಹೆಗಳಿವೆ. ಅಲ್ಲದೆ ಸಾವಿರಾರು ಬೌದ್ಧನ ಪ್ರತಿಮೆಗಳನ್ನು ನೀವು ಕಾಣಬಹುದು. ಇಲ್ಲಿ ಪ್ರತಿ ದಿನ ಸಾವಿರಾರು ಭಕ್ತರು, ಪ್ರವಾಸಿಗರು ಬಂದು ಹೋಗ್ತಾರೆ. ಈ ಪ್ರವಾಸಿಗರಿಗೆ ದೇವಸ್ಥಾನದಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಅದ್ರಲ್ಲಿ ಶೌಚಾಲಯ ಕೂಡ ಸೇರಿದೆ. ಇಲ್ಲಿನ ಶೌಚಾಲಯ (Toilet) ವಿಶೇಷತೆ ಪಡೆದಿದೆ. ಶೌಚಾಲಯದ ಮೇಲೆ ಟೈಮರ್ ಅಳವಡಿಸಲಾಗಿದೆ. 

SNAKE CAFE : ಮೈಮೇಲೆ ಹಾವು ಬಿಡ್ಕೊಂಡು ಕಾಫಿ ಹೀರ್ತಾರೆ ಇಲ್ಲಿ!

ಶೌಚಾಲಯದ ಮೇಲೆ ಟೈಮರ್ : ಶೌಚಾಲಯದ ಮೇಲೆ ಅಳವಡಿಸಿರುವ ಈ ಟೈಮರ್, ವ್ಯಕ್ತಿ ಎಷ್ಟು ಹೊತ್ತು ಒಳಗಿದ್ದ ಎಂಬುದನ್ನು ತೋರಿಸುತ್ತದೆ. ಒಂದ್ವೇಳೆ ಶೌಚಾಲಯದಲ್ಲಿ ಯಾರೂ ಇಲ್ಲ ಎಂದ ಸಮಯದಲ್ಲಿ ಖಾಲಿ ಎಂದು ತೋರಿಸುತ್ತದೆ. ಸುರಕ್ಷತೆ ದೃಷ್ಟಿಯಿಂದಲೂ ಈ ಟೈಮರ್ ಪ್ರಯೋಜನಕಾರಿ ಎಂದು ಅಲ್ಲಿನ ಸಿಬ್ಬಂದಿ ಹೇಳ್ತಾರೆ.

ಯಾವುದೇ ವ್ಯಕ್ತಿ ಬಾತ್ ರೂಮಿಗೆ ಹೋದಾಗ ಅಥವಾ ಶೌಚಾಲಯಕ್ಕೆ ಹೋಗಿ ತುಂಬಾ ಸಮಯ ಒಳಗಿದ್ದರೆ ಅದರ ಮಾಹಿತಿ ಹೊರಗಿದ್ದವಿಗೆ ಲಭ್ಯವಾಗುತ್ತದೆ. ಒಳಗಿರುವ ವ್ಯಕ್ತಿಗೆ ಏನಾದ್ರೂ ಆದಲ್ಲಿ ಈ ಟೈಮರ್ ನಿಂದ ಸುಲಭವಾಗಿ ಪತ್ತೆ ಮಾಡ್ಬಹುದು. ಒಬ್ಬ ವ್ಯಕ್ತಿ ವಿನಃ ಶೌಚಾಲಯದಲ್ಲಿ ಕಾಲ ಕಳೆಯುತ್ತಿದ್ದರೂ ಅದನ್ನು ಪತ್ತೆ ಮಾಡಬಹುದು ಎನ್ನುತ್ತಾರೆ ಸಿಬ್ಬಂದಿ.

ಬಾತ್ ರೂಮಿನ ಮೇಲೆ ಇರುವ ಟೈಮರ್ ಯಾವುದೇ ಸಮಯ ನಿಗದಿಪಡಿಸೋದಿಲ್ಲ. ಅಂದ್ರೆ ಒಳಗೆ ಹೋದವರು ಇಷ್ಟೇ ಸಮಯಕ್ಕೆ ಹೊರಗೆ ಬರಬೇಕೆಂದೇನಿಲ್ಲ. ಒಂದ್ವೇಳೆ ಅವರು ಹೆಚ್ಚಿನ ಸಮಯ ಬಾತ್ ರೂಮಿನಲ್ಲಿ ಕಳೆದ್ರೆ ಅವರಿಗೆ ವಾರ್ನಿಂಗ್ ಬರೋದಿಲ್ಲ. ಆದ್ರೆ ಹೊರಗಿದ್ದವರು ಬಾಗಿಲು ತಟ್ಟುವ ಅಗತ್ಯವಿರೋದಿಲ್ಲ. ಅಲ್ಲಿನ ಸಿಬ್ಬಂದಿ ಟೈಮರ್ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ನೀಡಿದ್ರೂ ಕೆಲವರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಟೈಮರ್ ತೆಗೆಯುವಂತೆ ಆಗ್ರಹಿಸಿದ್ದರು. 

ಏಲಿಯನ್‌ಗಳು ನಮ್ಮ ಮಧ್ಯೆನೇ ಮನುಷ್ಯರ ಹಾಗೆ ವೇಷ ಮರೆಸಿಕೊಂಡು ಬದುಕ್ತಿರ್ಬೋದು! ಹಾರ್ವರ್ಡ್ ಅಧ್ಯಯನ

ತಮ್ಮ ಖಾಸಗಿತನಕ್ಕೆ ಇದು ಧಕ್ಕೆಯಾಗುತ್ತದೆ ಎಂಬ ಆರೋಪವೂ ಕೇಳಿ ಬಂದಿದೆ. ಬಾತ್ ರೂಮಿನಲ್ಲಿ ಎಷ್ಟು ಸಮಯ ಕಳೆಯಲಾಗಿದೆ ಎಂಬುದನ್ನು ಇದು ತೋರಿಸೋದ್ರಿಂದ ಮುಜುಗರಕ್ಕೊಳಗಾಗುವ ಸಾಧ್ಯತೆ ಇದೆ ಎಂದು ಪ್ರವಾಸಿಗರು, ದೇವಸ್ಥಾನದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದರು. 

click me!