ಏಕಾಂಗಿಯಾಗಿ ದೇಶ ವಿದೇಶ ಸುತ್ತುವುದು ಒಂದು ಸುಂದರ ಅನುಭೂತಿ. ತನ್ನನ್ನು ತಾನು ಕಂಡುಕೊಳ್ಳಲು, ತನ್ನೊಳಗೆ ತಾನು ಇಳಿಯಲು, ತನ್ನ ಶಕ್ತಿ-ದೌರ್ಬಲ್ಯಗಳನ್ನು ಅರಿತುಕೊಳ್ಳಲು ಕೆಲವೊಂದಷ್ಟುಮಂದಿ ಈ ರೀತಿಯ ಏಕಾಂಗಿ ಪಯಣಕ್ಕೆ (ಸೋಲೋ ಟ್ರಿಪ್) ಇಳಿದುಬಿಡುತ್ತಾರೆ.
ಏಕಾಂಗಿಯಾಗಿ ದೇಶ ವಿದೇಶ ಸುತ್ತುವುದು ಒಂದು ಸುಂದರ ಅನುಭೂತಿ. ತನ್ನನ್ನು ತಾನು ಕಂಡುಕೊಳ್ಳಲು, ತನ್ನೊಳಗೆ ತಾನು ಇಳಿಯಲು, ತನ್ನ ಶಕ್ತಿ-ದೌರ್ಬಲ್ಯಗಳನ್ನು ಅರಿತುಕೊಳ್ಳಲು ಕೆಲವೊಂದಷ್ಟುಮಂದಿ ಈ ರೀತಿಯ ಏಕಾಂಗಿ ಪಯಣಕ್ಕೆ (ಸೋಲೋ ಟ್ರಿಪ್) ಇಳಿದುಬಿಡುತ್ತಾರೆ. ಅಂತವರಲ್ಲಿ ನಮ್ಮ ನಟಿ ಮೇಘನಾ ಗಾಂವ್ಕರ್ ಕೂಡ ಒಬ್ಬರು.
ಹಿಂದೆಲ್ಲಾ ಪಾಂಡಿಚೇರಿ, ಯುರೋಪ್ ದೇಶಗಳಲ್ಲಿ ಏಕಾಂಗಿಯಾಗಿ ಸುತ್ತಾಡಿದ್ದ ಮೇಘನಾ ಈಗ ಇಂಡೋನೇಷ್ಯಾದ ಬಾಲಿಯಲ್ಲಿ ಒಂಭತ್ತು ದಿನ ಕಳೆದು ಬಂದಿದ್ದಾರೆ. ಆ ಸುಂದರ ಅನುಭವವನ್ನು ಅವರಿಲ್ಲಿ ಹಂಚಿಕೊಂಡಿದ್ದಾರೆ.
undefined
ಈ ರೀತಿ ಸೋಲೋ ಟ್ರಿಪ್ ಮಾಡಬೇಕು ಎನ್ನುವ ಆಸೆ ಹುಟ್ಟಿಕೊಂಡಿದ್ದು ಎಲ್ಲಿಂದ, ಯಾಕೆ?
ಅವು ನನ್ನ ಕಾಲೇಜು ದಿನಗಳು. ಆಗ ಸಾಕಷ್ಟುಯುರೋಪಿಯನ್, ಹಾಲಿವುಡ್ ಸಿನಿಮಾಗಳನ್ನು ನೋಡುತ್ತಿದ್ದೆ. ಕೆಲವು ಸಿನಿಮಾಗಳಲ್ಲಿನ ನಾಯಕಿಯರು ಒಬ್ಬರೇ ದೇಶ ವಿದೇಶಗಳಿಗೆ ಹೊರಟುಬಿಡುತ್ತಿದ್ದರು. ಏಕಾಂಗಿಯಾಗಿ ಸುತ್ತಾಡುತ್ತಿದ್ದರು. ಏನೇ ಸಮಸ್ಯೆಗಳು ಬಂದರೂ ಧೈರ್ಯವಾಗಿ ಫೇಸ್ ಮಾಡುತ್ತಿದ್ದರು.
ಆಗಲೇ ನನ್ನಲ್ಲಿ ನಾನೂ ಯಾಕೆ ಹೀಗೆ ಸೋಲೋ ಟ್ರಿಪ್ ಮಾಡಬಾರದು ಎನ್ನುವ ಆಸೆ ಮೊಳೆತದ್ದು. ಆದರೆ ಇದು ಕೈಗೂಡಿದ್ದು 2014ರಲ್ಲಿ. ಅದು ಪಾಂಡಿಚೇರಿಗೆ ಒಬ್ಬಳೇ ಹೋಗುವ ಮೂಲಕ. ಒಂದು ವಾರಗಳ ಕಾಲ ಅಲ್ಲಿ ಒಬ್ಬಳೇ ಇದ್ದೆ. ಒಂದಷ್ಟುಪುಸ್ತಕಗಳನ್ನು ತೆಗೆದುಕೊಂಡು ಹೋಗಿ ಅಲ್ಲಿನ ಬೀಚ್‌ಗಳಲ್ಲಿ ಕೂತು ಓದಿದ್ದೆ.
ಮನಸ್ಸು ತಣಿಯುವಷ್ಟು ಸುತ್ತಾಡಿದ್ದೆ. ಆಗಲೇ ನನಗೆ ಒಬ್ಬಳೇ ಹೋಗಬಲ್ಲೆ ಎಂದು ಗೊತ್ತಾಗಿದ್ದು. ಆಗ ಆದ ಸಂತೋಷವೇ ಮುಂದಿನ ನನ್ನ ಎಲ್ಲಾ ಸೋಲೋ ಟ್ರಿಪ್‌ಗಳಿಗೂ ಕಾರಣವಾಯಿತು.
ಪಾಂಡಿಚೇರಿಯಾದ ಮೇಲೆ ಮತ್ತೆಲ್ಲಿಗೆ ಹೋಗಿದ್ರಿ?
2016ರಲ್ಲಿ ಯುರೋಪ್‌ಗೆ ಹೋಗಿದ್ದೆ. ಒಟ್ಟು 25 ದಿನಗಳ ಸೋಲೋ ಟ್ರಿಪ್ ಅದು. ಪಾಂಡಿಚೇರಿಗೆ ಹೋಗಿ ಬಂದ ಮೇಲೆ ಒಬ್ಬಳೇ ವಿದೇಶಕ್ಕೆ ಹೋಗಬೇಕು ಎಂದುಕೊಂಡಿದ್ದೆ. ಹಾಗಾಗಿ ಪ್ಯಾರಿಸ್, ಜರ್ಮನಿ, ಇಟಲಿ, ಬಾರ್ಸಿಲೋನ ಸೇರಿದಂತೆ 7 ದೇಶಗಳಲ್ಲಿ ಸುತ್ತಾಡಿ ಬಂದಿದ್ದೆ.
ಈ ವೇಳೆ ನಾನು ಸಾಕಷ್ಟುಅನುಭವ ಗಳಿಸಿಕೊಂಡೆ. ಅಲ್ಲಿಂದ ಬಂದ ಮೇಲೆ ಯಾವುದೇ ಕೆಲಸವಾದರೂ, ಏನೇ ಸಮಸ್ಯೆ ಬಂದರೂ ನಾನು ಎದುರಿಸುತ್ತೇನೆ ಎನ್ನುವ ಆತ್ಮವಿಶ್ವಾಸ ನನ್ನಲ್ಲಿ ಮೂಡಿತು.
ಟ್ರಿಪ್‌ಗೆ ಹೋಗುವ ಮೊದಲು ಏನೆಲ್ಲಾ ತಯಾರಿ ಮಾಡಿಕೊಳ್ಳುತ್ತೀರಿ?
ಮೊದಲು ಒಂದು ಸ್ಥಳ ಫಿಕ್ಸ್ ಮಾಡಿಕೊಳ್ಳುತ್ತೇನೆ. ಅದಾದ ಮೇಲೆ ಅದರ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡುತ್ತೇನೆ. ಅಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟರ ಮಟ್ಟಿಗೆ ಸುರಕ್ಷತೆ ಇದೆ. ಅಲ್ಲಿನ ವ್ಯವಸ್ಥೆ ಹೇಗಿದೆ ಎಂಬುದೆಲ್ಲವನ್ನೂ ತಿಳಿದುಕೊಂಡು ನನ್ನ ಮನಸ್ಸಿಗೆ ಓಕೆ ಎಂದರೆ ಮಾತ್ರ ನಾನು ಅಲ್ಲಿಗೆ ಹೋಗಲು ಮುಂದಾಗುತ್ತೇನೆ.
ನನ್ನ ತಂದೆ ಹೇಳುವುದೂ ಇದನ್ನೇ. ಒಬ್ಬರೇ ಹೋಗುವಾಗ ಅಲ್ಲಿ ನಮಗೆ ಬೇಕಾದ ಸುರಕ್ಷತೆ ಸಿಗುತ್ತದೆಯೇ ಎಂದು ನೋಡಿಕೊಂಡು ಮುಂದಡಿ ಇಡಬೇಕು ಎಂದು. ಹಾಗಾಗಿ ನಾನು ಸ್ಥಳದ ಬಗ್ಗೆ ಅಧ್ಯಯನ ಮಾಡುತ್ತೇನೆ. ಮಿಕ್ಕಿದ್ದೆಲ್ಲಾ ಮಾಮೂಲಿ ಸಿದ್ಧತೆಗಳಿರುತ್ತವೆ.
ಹೇಗಿದೆ ಬಾಲಿ?
ತುಂಬಾ ಚೆನ್ನಾಗಿದೆ. ಮುಖ್ಯವಾಗಿ ಅಲ್ಲಿನ ಜನ ತುಂಬಾ ಒಳ್ಳೆಯವರು. ಅಲ್ಲಿ ನಮ್ಮ ಇಂಡಿಯನ್ ಕಲ್ಚರ್ ಇದೆ, ದೇವಸ್ಥಾನಗಳಿವೆ. ಅಲ್ಲಿನ ದೇವಸ್ಥಾನಗಳಿಗೆ ಸುಲಭವಾಗಿ ಒಳಗೆ ಹೋಗಲು ಬಿಡುವುದಿಲ್ಲ. ಒಳಗೆ ಹೋಗಬೇಕು ಎಂದರೆ ಎರಡು ದಿನ ಮುಂಚಿತವಾಗಿ ಬುಕ್ ಮಾಡಿಕೊಳ್ಳಬೇಕು. ಅವರು ಹೇಳುವ ನಿಯಮಗಳನ್ನು ಫಾಲೋ ಮಾಡಬೇಕು. ಸಾಂಪ್ರದಾಯಿಕ ಉಡುಗೆ ಉಟ್ಟುಕೊಂಡೇ ಒಳಗೆ ಹೋಗಬೇಕು.
ಹಾಗಾಗಿ ಅಲ್ಲಿನ ದೇವಸ್ಥಾನಗಳು ನಮ್ಮ ದೇವಸ್ಥಾನಗಳಿಗಿಂತಲೂ ಕಟ್ಟುನಿಟ್ಟು. ನಾನು ಸರಸ್ವತಿ ದೇವಸ್ಥಾನ, ಬ್ರಹ್ಮ, ವಿಷ್ಣು, ಹನುಮ ದೇವಸ್ಥಾನಗಳ ಹೊರಗೆಲ್ಲಾ ಹೋಗಿ ಸುತ್ತಾಡಿ ಬಂದೆ. ಒಳ್ಳೆಯ ಶಿಲ್ಪ ಕಲಾಕೃತಿ ಅವು. ಅಲ್ಲಿಗೆ ಹೋದ ಮೇಲೆ ನನಗೆ ಗೊತ್ತಾಗಿದ್ದು, ಒಂದು ಕಾಲದಲ್ಲಿ ಆ ಪ್ರದೇಶವೂ ಭಾರತದ ಭಾಗವೇ ಆಗಿದ್ದು, ಭೌಗೋಳಿಕ ಬದಲಾವಣೆಯಿಂದ ಬೇರೆ ದೇಶವಾಗಿ ಮಾರ್ಪಟ್ಟಿದೆ ಎಂದು.
ಮತ್ತೆ ಅಲ್ಲಿ ಆಸ್ಪ್ರೇಲಿಯಾ ಮತ್ತು ಅಮೆರಿಕನ್ನರ ಪ್ರಭಾವ ಹೆಚ್ಚು. ಎಲ್ಲಿಗೇ ಹೋದರೂ ಆಸ್ಪ್ರೇಲಿಯನ್ ಪ್ರವಾಸಿಗರು ಸಿಕ್ಕುತ್ತಾರೆ. ಸ್ಥಳೀಯ ಭಾಷೆಯನ್ನು ಬಿಟ್ಟರೆ ಇಂಗ್ಲಿಷ್‌ಗೆ ಇಲ್ಲಿ ಮುಖ್ಯಸ್ಥಾನ.
ಅನಿರೀಕ್ಷಿತ ಘಟನೆಗಳು ಹೇಗೆಲ್ಲಾ ಬಂದು ಹೋದವು?
ನನ್ನ ಇಡೀ ಪ್ರಯಾಣದಲ್ಲಿ ಈ ಅನಿರೀಕ್ಷಿತ ಘಟನೆಗಳ ರಾಶಿಯೇ ಇದೆ. ಇವು ಸವಾಲನ್ನೂ ಒಡ್ಡುತ್ತವೆ. ಸಂತೋಷವನ್ನೂ ನೀಡುತ್ತವೆ. ಗುಂಪಿನಲ್ಲಿ ಹೋದಾಗ ಈ ಸಂತೋಷ ಮತ್ತು ಸವಾಲು ಎಲ್ಲರ ನಡುವೆಯೂ ಹಂಚಿಕೆಯಾಗುತ್ತದೆ. ಒಬ್ಬರೇ ಹೋದಾಗ ಇದೆಲ್ಲವೂ ಪೂರ್ಣವಾಗಿ ನಮಗೇ ದಕ್ಕುತ್ತವೆ.
ಒಮ್ಮೆ ನಾನು ಸರಸ್ವತಿ ದೇವಸ್ಥಾನಕ್ಕೆ ಹೋಗಬೇಕು ಎಂದು ಸಾಗುತ್ತಿದ್ದೆ. ಆಗ ಅನಿರೀಕ್ಷಿತವಾಗಿ ಪಕ್ಕದಲ್ಲಿದ್ದ ಕೆಫೆಗೆ ಹೋದೆ. ಅಲ್ಲಿಂದ ದೇವಸ್ಥಾನ ತುಂಬಾ ಚೆನ್ನಾಗಿ ಕಾಣುತ್ತದೆ. ಮತ್ತೆ ಅಲ್ಲಿದ್ದ ವ್ಯಕ್ತಿಗಳು ದೇವಸ್ಥಾನದ ಬಗ್ಗೆ ತುಂಬಾ ಹೇಳಿದರು. ನಾನು ಅಂದುಕೊಂಡಂತೆ ದೇವಸ್ಥಾನಕ್ಕೇ ಹೋಗಿದ್ದರೆ ಈ ಮಾಹಿತಿಗಳೆಲ್ಲಾ ಸಿಗುತ್ತಲೇ ಇರಲಿಲ್ಲ.
ಜೊತೆಗೆ ನಾನು ಒಬ್ಬಳೇ ಇದ್ದುದ್ದರಿಂದ ಫೋಟೋಗಳನ್ನು ತೆಗೆಯಲು ಯಾರದ್ದಾದರೂ ಸಹಾಯ ಬೇಕೇ ಬೇಕಿತ್ತು. ಹಾಗೆ ಯಾರದ್ದೋ ಸಹಾಯ ಕೇಳಿದಾಗ ಅವರು ನಮ್ಮ ಬಗ್ಗೆ ವಿಚಾರಿಸುತ್ತಿದ್ದರು. ನಾನು ಅವರ ಬಗ್ಗೆ ವಿಚಾರಿಸುತ್ತಿದ್ದೆ. ಹೀಗೆ ಒಂದಷ್ಟುಸಮಯ ಮಾತುಕತೆಯಾಗುತ್ತಿತ್ತು. ಹೀಗೆ ಗೊತ್ತಿಲ್ಲದೇ ಇರುವ ಮಂದಿ ಅರೆ ಕ್ಷಣವಾದರೂ ನಮ್ಮೊಂದಿಗೆ ಇರುತ್ತಾರೆ. ಒಂದಷ್ಟುನೆನಪುಗಳನ್ನು ಉಳಿಸುತ್ತಾರೆ. ಇದೆಲ್ಲವೂ ಅನಿರೀಕ್ಷಿತವೇ. ಹಾಗೆ ನೋಡಿದರೆ ಪ್ರವಾಸ ಎನ್ನುವುದು ಅನಿರೀಕ್ಷಿತಗಳ ಒಟ್ಟು ಮೊತ್ತ.
ಒಂಭತ್ತು ದಿನಗಳಲ್ಲಿ ಏನೆಲ್ಲಾ ನೋಡಿದಿರಿ?
ನಾನು ಒಂದೇ ಸ್ಥಳದಲ್ಲಿ ಹೆಚ್ಚು ಸಮಯ ಕಳೆಯುತ್ತಿರಲಿಲ್ಲ. ಎಷ್ಟುಸಾಧ್ಯವಾಗುತ್ತೋ ಅಷ್ಟುಸುತ್ತಾಡಬೇಕು ಎಂದುಕೊಂಡಿದ್ದೆ. ಅಲ್ಲಿನ ಹಳ್ಳಿಗಳಿಗೂ ಭೇಟಿ ನೀಡಿದ್ದೆ. ಅಲ್ಲಿನ ಒಂದು ಕಾಡು ಮಧ್ಯದ ಚಿಕ್ಕ ಮನೆಯನ್ನು ಬಾಡಿಗೆಗೆ ಪಡೆದು ಎರಡು ದಿನ ಅಲ್ಲಿದ್ದೆ. ನನ್ನ ಪಾಲಿಗೆ ಅದೊಂದು ಧ್ಯಾನಸ್ಥ ಸ್ಥಿತಿಯನ್ನು ತಂದುಕೊಟ್ಟಿತ್ತು. ಬೇರೆ ಬೇರೆ ಜನರೊಂದಿಗೆ ಬೆರೆಯುತ್ತಿದ್ದೆ.
ಅಲ್ಲಿ ಕಲೆಗೆ ಒಳ್ಳೆಯ ಪ್ರೋತ್ಸಾಹ ಇದೆ. ಆರ್ಟ್ ಗ್ಯಾಲರಿಯೊಂದರಲ್ಲಿದ್ದ ಚಿತ್ರಗಳು ನನಗೆ ತುಂಬಾ ಇಷ್ಟವಾದವು. ಅದರಲ್ಲಿ ಒಂದು ಚಿತ್ರ ನನ್ನನ್ನು ತುಂಬಾ ಆಕರ್ಷಿಸಿತು. ಅದೇ ರೀತಿಯ ನನ್ನದೂ ಒಂದು ಚಿತ್ರ ಬಿಡಿಸಿಕೊಡಿ ಎಂದು ಆ ಕಲಾವಿದರಲ್ಲಿ ಕೇಳಿಕೊಂಡೆ. ಎರಡು ದಿನದಲ್ಲಿ ಸುಂದರವಾದ ಚಿತ್ರ ಬಿಡಿಸಿಕೊಟ್ಟರು. ಅದು ಈಗ ಇಡೀ ಟ್ರಿಪ್‌ನ ಒಳ್ಳೆಯ ನೆನಪಾಗಿ ನನ್ನಲ್ಲಿದೆ.
ಕಡೆಗೆ ನಿಮ್ಮಂತೆ ಸೋಲೋ ಟ್ರಿಪ್ ಮಾಡುವವರಿಗೆ ನೀವು ಕೊಡುವ ಟಿಫ್ಸ್ ಏನು?
ಸೋಷಲ್ ಮೀಡಿಯಾದಲ್ಲಿ ತುಂಬಾ ಮಂದಿ, ಅದರಲ್ಲೂ ಹೆಣ್ಣು ಮಕ್ಕಳು ಸೋಲೋ ಟ್ರಿಪ್ ಹೇಗೆ ಮಾಡುತ್ತೀರಿ? ಹೇಗಿತ್ತು ಬಾಲಿ ಅನುಭವ? ಎಂದೆಲ್ಲಾ ಪ್ರಶ್ನೆ ಕೇಳಿದ್ದಾರೆ. ಅವರಿಗೆ ನಾನು ಹೇಳುವುದು ಇಷ್ಟು.
ಮೊದಲು ಸುರಕ್ಷತೆಗೆ ಆದ್ಯತೆ ನೀಡಬೇಕು. ಎಲ್ಲಿ ಹೋಗಬೇಕು, ಎಲ್ಲಿಗೆ ಹೋಗಬಾರದು, ಯಾವ ಸಮಯದಲ್ಲಿ ಹೋಗಬೇಕು, ಅಲ್ಲಿನ ಜನ ಹೇಗಿದ್ದಾರೆ ಎಂಬುದನ್ನೆಲ್ಲಾ ಪೂರ್ತಿಯಾಗಿ ತಿಳಿದುಕೊಂಡು ಹೋಗಬೇಕು. ಜೊತೆಗೆ ಅಲ್ಲಿನ ಭಾಷೆ, ಭೌಗೋಳಿಕ ಪರಿಸ್ಥಿತಿ, ಕಲ್ಚರ್ ಮೊದಲಾದವುಗಳ ಬಗ್ಗೆ ನಿಮ್ಮ ಅಭಿರುಚಿ, ಇತಿಮಿತಿಗಳ ಆಧಾರದ ಮೇಲೆ ತಿಳಿದುಕೊಂಡು ಹೋಗುವುದು ಒಳ್ಳೆಯದು.
ಸೋಲೋ ಟ್ರಿಪ್‌ನಿಂದ ನಿಮಗೆ ಆದ ಅನುಕೂಲವೇನು?
ನಾನು ನನ್ನನ್ನು ತಿಳಿದುಕೊಳ್ಳಲು ಇದು ಒಳ್ಳೆಯ ಮಾರ್ಗ ಎನ್ನುವುದು ಅನುಭವಕ್ಕೆ ಬಂದಿದೆ. ನಾವು ನಮ್ಮ ಜೊತೆಯೇ ಇದ್ದಾಗ ಹೊಸ ಐಡಿಯಾಗಳು ಹುಟ್ಟುತ್ತವೆ. ನನಗೆ ಇಂದು ನನ್ನ ಶಕ್ತಿ ಮತ್ತು ದೌರ್ಬಲ್ಯಗಳ ಅರಿವಾಗಿದೆ.
ಏನೇ ಸವಾಲುಗಳು ಬಂದರೂ ನಿಭಾಯಿಸುತ್ತೇನೆ ಎನ್ನುವ ಛಲ ಹುಟ್ಟಿದೆ. ಒಟ್ಟಿನಲ್ಲಿ ಇದರಿಂದ ಇದೇ ಪ್ರಯೋಜನ ಆಯಿತು ಎಂದು ಮಾತಿನಲ್ಲಿ ಹೇಳುವುದಕ್ಕೆ ಕಷ್ಟ. ಅದು ನನ್ನ ಇಡೀ ಬದುಕಿನ ಕ್ರಮದ ಮೇಲೆ ಪರಿಣಾಮ ಬೀರಿರುವುದಂತೂ ಹೌದು.
- ಕೆಂಡಪ್ರದಿ