ಒಂದೇ ಬೈಕ್ ಏರಿ 7 ಜನರ ಪ್ರಯಾಣ: ಹೀಗಾದ್ರೆ ಕಾರು ಕಂಪನಿ ಬಾಗಿಲು ಹಾಕ್ಬೇಕಷ್ಟೇ ಎಂದ ನೆಟ್ಟಿಗರು

By Anusha KbFirst Published Sep 1, 2022, 10:59 AM IST
Highlights

ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಕ್ಕಳ ಜೀವ ಅಪಾಯಕ್ಕೊಳಗಾಗುವ ಬಗ್ಗೆಯೂ ಯೋಚಿಸದೇ ಕುಟುಂಬವೊಂದು ಒಂದೇ ಬೈಕ್‌ನಲ್ಲಿ ಮಕ್ಕಳು ಮರಿಗಳ ಸಮೇತ ಒಟ್ಟು ಏಳು ಜನ ಪ್ರಯಾಣಿಸಿದ್ದಾರೆ.

ಕೆಲ ದಿನಗಳ ಹಿಂದೆ ಒಂದೇ ಬೈಕ್‌ನಲ್ಲಿ ಆರು ಜನ ಯುವಕರು ಪ್ರಯಾಣಿಸುತ್ತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈಗ ಅದೇ ರೀತಿಯ ಮತ್ತೊಂದು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಕ್ಕಳ ಜೀವ ಅಪಾಯಕ್ಕೊಳಗಾಗುವ ಬಗ್ಗೆಯೂ ಯೋಚಿಸದೇ ಕುಟುಂಬವೊಂದು ಒಂದೇ ಬೈಕ್‌ನಲ್ಲಿ ಮಕ್ಕಳು ಮರಿಗಳ ಸಮೇತ ಒಟ್ಟು ಏಳು ಜನ ಪ್ರಯಾಣಿಸಿದ್ದಾರೆ. ಈ ದೃಶ್ಯವನ್ನು ಎಲ್ಲೇ ಇದ್ದವರು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಮಾಡಿದ್ದು, ಈಗ ಸಾಕಷ್ಟು ವೈರಲ್ ಆಗುತ್ತಿದೆ. ಜೊತೆಗೆ ಪ್ರಾಣಕ್ಕೆ ಕಂಟಕ ತರುವಂತೆ ಕಾಣುವ ಈ ಪ್ರಯಾಣದ ಬಗ್ಗೆ ಗಾಬರಿ ವ್ಯಕ್ತಪಡಿಸಿದ್ದಾರೆ. 

ಭಾರತದಲ್ಲಿ ಸಂಚಾರಿ ನಿಯಮವನ್ನು ಪಾಲಿಸುವುದಕ್ಕಿಂತ ಅದನ್ನು ಉಲ್ಲಂಘಿಸುವವರೇ ಹೆಚ್ಚು. ಸಾಮಾನ್ಯವಾಗಿ ಬೈಕ್‌ನಲ್ಲಿ ಇಬ್ಬರಿಗಿಂತ ಹೆಚ್ಚು ಜನ ಕುಳಿತು ಪಯಣಿಸುವಂತಿಲ್ಲ. ತ್ರಿಬಲ್‌ ರೈಂಡಿಂಗ್ ಕೂಡ ನಿಷೇಧವೇ ಆದಾಗ್ಯೂ ಕೂಡ ಅನೇಕರು ಈ ನಿಯಮವನ್ನು ಪಾಲಿಸುವುದೇ ಇಲ್ಲ. ಹಳ್ಳಿ ಕಡೆಯಂತು ಬೈಕ್‌ನಲ್ಲಿ ಮೂವರು ಪ್ರಯಾಣಿಸುವುದು ಮಾಮೂಲಿ, ಇಬ್ಬರು ಮಕ್ಕಳಿರುವ ನಾಲ್ಕು ಸದಸ್ಯರ ಕುಟುಂಬವಿದ್ದರೆ ಸ್ಕೂಟರ್‌ನಲ್ಲಿ ನಾಲ್ವರು ಪ್ರಯಾಣಿಸುವುದು ಮಾಮೂಲಿ. ಇದು ಕುಟುಂಬಗಳ ವಿಚಾರವಾದರೆ ಇನ್ನು ಹುಡುಗರು ಮೋಜಿಗಾಗಿ ನಾಲ್ವರು ಐವರು ಒಂದೇ ಬೈಕ್‌ನಲ್ಲಿ ಕುಳಿತು ಸವಾರಿ ಮಾಡುವುದನ್ನು ಹಾಗೂ ವ್ಹೀಲಿಂಗ್ ಮಾಡುವುದನ್ನು ಕೂಡ ನೋಡಿದ್ದೇವೆ. ಆದರೆ ಇಲ್ಲಿ ಒಂದೇ ಬೈಕ್ ಮೇಲೆ ಮೂವರು ದೊಡ್ಡವರು ನಾಲ್ವರು ಮಕ್ಕಳು ಸೇರಿ ಒಟ್ಟು ಏಳು ಜನ ಪ್ರಯಾಣಿಸಿದ್ದಾರೆ. ಅದರಲ್ಲೂ ದೊಡ್ಡವರಲ್ಲಿ ಇಬ್ಬರು ಹೆಂಗಸ್ಸರು. 

Speechless 😶 pic.twitter.com/O86UZTn4at

— Supriya Sahu IAS (@supriyasahuias)

 

ಬೈಕ್ ಸ್ವಲ್ಪ ಆಯತಪ್ಪಿದರು ಅಪಾಯ ಕಟ್ಟಿಟ್ಟ ಬುತ್ತಿ. ಜೊತೆಗೆ ಮಕ್ಕಳು ಬೇರೆ, ಇದ್ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳದ ಇವರು ಹಾಯಾಗಿ ಪ್ರಯಾಣ ಬೆಳೆಸಿದ್ದಾರೆ. ಈ ವಿಡಿಯೋವನ್ನು ಭಾರತೀಯ ಆಡಳಿತ ಸೇವೆಯ ಅಧಿಕಾರಿ ಸುಪ್ರಿಯಾ ಸಾಹು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಮಾತುಗಳೇ ಹೊರಡುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಬೈಕ್ ಚಲಾಯಿಸುವ ವ್ಯಕ್ತಿ ಮೊದಲಿಗೆ ಬೈಕ್ ಏರಿ ಕುಳಿತಿದ್ದಾರೆ. ಈ ಗುಂಪಿನಲ್ಲಿ ಸಣ್ಣ ಸಣ್ಣ ನಾಲ್ಕು ಮಕ್ಕಳಿದ್ದು, ಬೈಕ್ ಚಲಾಯಿಸುವವರು ಕುಳಿತ ನಂತರ ಸಾರಿ ಧರಿಸಿದ ಮಹಿಳೆಯೊಬ್ಬರು ಒಂದೊಂದು ಮಕ್ಕಳನ್ನೇ ಎತ್ತಿ ಬೈಕ್‌ನಲ್ಲಿ ಈಗಾಗಲೇ ಕುಳಿತಿರುವವರ ಮುಂದೆ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಇಬ್ಬರು ಮಕ್ಕಳನ್ನು ಕುಳಿತುಕೊಳಿಸುತ್ತಾರೆ. ನಂತರ ಸಾರಿ ಧರಿಸಿದ ಇನ್ನೊಬ್ಬರು ಮಹಿಳೆ ಬೈಕ್‌ ಏರುತ್ತಾರೆ. ಅವರ ತೊಡೆಯ ಮೇಲೆ ಒಂದು ಮಗುವನ್ನು ಕುಳ್ಳಿರಿಸಿಕೊಳ್ಳುತ್ತಾರೆ. ನಂತೆ ಉಳಿದ ಇನ್ನೊಂದು ಮಗುವನ್ನು ಎತ್ತಿಕೊಂಡು ಸೀರೆ ಉಟ್ಟ ಮತ್ತೊಬ್ಬರು ಮಹಿಳೆ ಕುಳಿತುಕೊಳ್ಳುತ್ತಾರೆ.

ಇನ್ಸ್ಟಾಗ್ರಾಮ್‌ ಮೇಲೆ ಖಾಕಿ ಕಣ್ಣು: ರಸೀದಿ ಹಿಡಿದು ಮನೆಗೆ ಬಂದ ಪೊಲೀಸರು

ಈ ವಿಡಿಯೋ ನೋಡುಗರಿಗೆ ಗಾಬರಿ ಮೂಡಿಸುತ್ತಿದೆ. ಮತ್ತೆ ಕೆಲವರು ಈ ವೀಡಿಯೋವನ್ನು ತಮಾಷೆ ಮಾಡಿದ್ದು, ಭಾರತೀಯರು ಏನು ಬೇಕಾದರೂ ಮಾಡಬಹುದು ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಇನ್ನೂ ಅನೇಕರು ಸ್ವಾರಸ್ಯಕರವಾಗಿ ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಒಬ್ಬರು, ಎಲ್ಲ ಭಾರತೀಯರು ಹೀಗೆಯೇ ಪ್ರಯಾಣಿಸಲು ಶುರು ಮಾಡಿದರೆ ಕಾರು ತಯಾರಿಕ ಕಂಪನಿಗಳು ಬಾಗಿಲು ಹಾಕಿಕೊಂಡು ಮನೆಗೆ ಹೋಗಬೇಕಾಗಬಹುದು ಎಂದು ಪ್ರತಿಕ್ರಿಯಿಸಿದ್ದಾರೆ. 

  ಭಾರತದಲ್ಲಿ ಇದು ಏನು ಹೊಸ ವಿಚಾರವಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇದು ಅಪಘಾತವನ್ನು ಆಹ್ವಾನಿಸುವ ರೀತಿ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು ಹೀಗೆ ಅಜಾಗರೂಕವಾಗಿ ಪ್ರಯಾಣಿಸುವ ಇವರ ಚಲನಾ ಪರವಾನಗಿಯನ್ನು ರದ್ದುಗೊಳಿಸುವಂತೆ ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು ಗ್ರಾಮೀಣ ಭಾಗಗಳಲ್ಲಿ ಸರಿಯಾದ ಬಸ್‌ ವ್ಯವಸ್ಥೆಗಳಿಲ್ಲದ ಕಾರಣಕ್ಕೆ ಹೀಗಾಗುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಒಂದೇ ಬೈಕ್‌ನಲ್ಲಿ ಆರು ಜನರ ಪ್ರಯಾಣ: ವಿಡಿಯೋ ವೈರಲ್

ಇಂತಹ ಘಟನೆಗಳು ಭಾರತದಲ್ಲಿ ಹೊಸದೇನಲ್ಲ, ಕೆಲ ದಿನಗಳ ಹಿಂದೆ ಉತ್ತರಪ್ರದೇಶದಲ್ಲಿ ಮೂರು ಜನ ಪ್ರಯಾಣಿಸುವ ಆಟೋವೊಂದರಲ್ಲಿ ಒಟ್ಟು 27 ಜನ ಪ್ರಯಾಣಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ತುಂಬಿ ತುಳುಕುತ್ತಿದ್ದ ಆಟೋ ನೋಡಿ ನಿಲ್ಲಿಸಿದ ಟ್ರಾಫಿಕ್ ಪೊಲೀಸ್ ಆಟೋದಿಂದ ಇಳಿದ ಅಷ್ಟೊಂದು ಜನರನ್ನು ನೋಡಿ ದಂಗಾಗಿದ್ದರು.

click me!