ಜೀವನದಲ್ಲಿ ಮೊದಲ ಬಾರಿ ವಿಮಾನ ಪ್ರಯಾಣ ಬೆಳೆಸೋದು ಪ್ರತಿಯೊಬ್ಬರಿಗೂ ಖುಷಿ ನೀಡುತ್ತದೆ. ಇದಕ್ಕಾಗಿ ಅನೇಕ ತಯಾರಿ ನಡೆಸ್ತಾರೆ. ಆದ್ರೆ ಸರಿಯಾದ ಮಾಹಿತಿ ಇಲ್ಲದೆ ಕೆಲವೊಂದು ಯಡವಟ್ಟು ಮಾಡ್ತಾರೆ. ಹಾಗಾಗಿ ವಿಮಾನ ಏರುವ ಮೊದಲು ಕೆಲವೊಂದಿಷ್ಟು ವಿಷ್ಯ ತಿಳಿದಿರಬೇಕು.
ಪ್ರವಾಸಕ್ಕೆ ಹೋಗೋದು ಎಲ್ಲರಿಗೂ ಖುಷಿ ನೀಡುವ ಸಂಗತಿ. ಪ್ರವಾಸ ಅಂದ್ರೆ ಅನೇಕರ ಮುಖದಲ್ಲಿ ಸಂತೋಷ ಮನೆ ಮಾಡುತ್ತದೆ. ಅದ್ರಲ್ಲೂ ಮೊದಲ ಬಾರಿ ವಿಮಾನ ಪ್ರಯಾಣ ಎಂದಾಗ ಖುಷಿ, ಆತುರ, ಕಾತರ ದುಪ್ಪಟ್ಟಾಗುತ್ತದೆ. ವಿಮಾನ ಪ್ರಯಾಣ ಹೇಗಿರುತ್ತದೆ ಎಂಬ ಕುತೂಹಲವಿರುತ್ತದೆ. ಆಕಾಶದಲ್ಲಿ ಮೋಡದ ಮಧ್ಯೆ ಹೋಗುವ ಅನುಭವ ಸವಿಯಲು ಜನರು ತುದಿಗಾಲಿನಲ್ಲಿ ನಿಂತಿರುತ್ತಾರೆ. ವಿಮಾನದಲ್ಲಿ ಮೊದಲ ಬಾರಿ ಪ್ರಯಾಣ ಬೆಳೆಸ್ತಿದ್ದರೆ ಕೆಲವೊಂದು ಎಚ್ಚರಿಕೆ ತೆಗೆದುಕೊಳ್ಳಬೇಕು. ವಿಮಾನ ಪ್ರಯಾಣದ ವೇಳೆ ಏನೆಲ್ಲ ತಯಾರಿ ನಡೆಸಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಲಗೇಜ್ (Luggage) : ಪ್ರವಾಸ (Trip) ಕ್ಕೆ ಹೋಗ್ಬೇಕೆಂದಾಗ ಪ್ಯಾಕಿಂಗ್ (Packing ) ಜೋರಾಗಿ ನಡೆಯುತ್ತೆ. ಅನೇಕರು ಅಗತ್ಯಕ್ಕಿಂತ ಹೆಚ್ಚು ಪ್ಯಾಕಿಂಗ್ ಮಾಡ್ತಾರೆ. ಒಂದು ದಿನದ ಪ್ರವಾಸಕ್ಕೆ ನಾಲ್ಕು ಬ್ಯಾಗ್ ಸಿದ್ಧವಾಗಿರುತ್ತದೆ. ಅನಿವಾರ್ಯವಾದ್ರೆ, ಅಲ್ಲಿ ಅಗತ್ಯವೆನ್ನಿಸಿದ್ರೆ ಎನ್ನುತ್ತ ಬ್ಯಾಗ್ ಪ್ಯಾಕ್ ಮಾಡ್ತಾರೆ. ಸ್ವಂತ ಕಾರ್ ಅಥವಾ ಬಸ್, ಟ್ರೈನ್ ಗೆ ಹೋಗುವ ಸಂದರ್ಭದಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ಯಾಕ್ ಮಾಡಿದ್ರೆ ವಿಶೇಷ ಎನ್ನಿಸುವುದಿಲ್ಲ. ಆದ್ರೆ ವಿಮಾನದಲ್ಲಿ ಪ್ರಯಾಣಿಸುವಾಗ ಲಗೇಜ್ ಮಿತಿಯನ್ನು ನಿಗದಿಪಡಿಸಲಾಗಿದೆ. ನಿರ್ದಿಷ್ಟಪಡಿಸಿದ ಪ್ರಮಾಣಕ್ಕಿಂತ ಹೆಚ್ಚಿನ ವಸ್ತುಗಳನ್ನು ನೀವು ಕೊಂಡೊಯ್ದರೆ ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಹಾಗಾಗಿ ವಿಮಾನ ಪ್ರಯಾಣದ ವೇಳೆ ಎಷ್ಟು ಬ್ಯಾಗ್ ತೆಗೆದುಕೊಂಡು ಹೋಗ್ಬೇಕು ಎಂಬುದನ್ನು ಮೊದಲೇ ತಿಳಿದಿರಬೇಕು. ಆಗ ಅಷ್ಟೇ ತೂಕದ ವಸ್ತುಗಳನ್ನು ನೀವು ಪ್ಯಾಕ್ ಮಾಡಬಹುದು. ಅಗತ್ಯವಿಲ್ಲದ ವಸ್ತುಗಳನ್ನು ತೆಗೆದುಕೊಂಡು ಹೋಗಿ ಹೆಚ್ಚುವರಿ ಹಣ ಪಾವತಿ ಮಾಡುವ ಬದಲು ಬ್ಯಾಗ್ ತೂಕ ಕಡಿಮೆ ಮಾಡೋದು ಒಳ್ಳೆಯದು.
ಇದನ್ನೂ ಓದಿ: Chikkamagaluru: ಕಾಫಿನಾಡಿನ ಗಿರಿ ಶ್ರೇಣಿಯಲ್ಲಿ ರಾರಾಜಿಸುತ್ತಿವೆ ಕುರಂಜಿ ಹೂ ಸೌಂದರ್ಯ
ದಾಖಲೆ ಪರಿಶೀಲನೆ : ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ನಿಮ್ಮ ಪ್ರಮುಖ ದಾಖಲೆಗಳನ್ನು ಗಮನಿಸಿ. ಯಾವುದೇ ದಾಖಲೆಯನ್ನು ಮರೆತು ತಪ್ಪು ಮಾಡಬೇಡಿ. ಅನುಕೂಲಕ್ಕಾಗಿ ನಿಮ್ಮ ಟಿಕೆಟ್‌ನ ಮುದ್ರಣವನ್ನು ತೆಗೆದುಕೊಳ್ಳಿ. ಡಾಕ್ಯುಮೆಂಟ್‌ಗಳ ಸಾಫ್ಟ್ ಕಾಪಿಯ ಫೋಟೋವನ್ನು ನಿಮ್ಮ ಫೋನ್‌ನಲ್ಲಿ ಇರಿಸಿ ಮತ್ತು ಅವುಗಳ ಸ್ಕ್ಯಾನ್ ಮಾಡಿದ ಪ್ರತಿಯನ್ನು ನಿಮ್ಮ ಮೇಲ್‌ನಲ್ಲಿ ಇರಿಸಿ. ಯಾವುದಾದರೂ ಸ್ಥಳದಲ್ಲಿ ಸಿಕ್ಕಿಬಿದ್ದಾಗ ಈ ದಾಖಲೆ ನಿಮ್ಮ ನೆರವಿಗೆ ಬರುತ್ತದೆ.
ಸಮಯಕ್ಕಿಂತ ಮೊದಲು ನಿಲ್ದಾಣದಲ್ಲಿರಿ : ಬಸ್ ನಿಲ್ದಾಣಕ್ಕೆ ಹೋಗಿ ಬಸ್ ಏರಿದಂತಲ್ಲ ವಿಮಾನ ಏರುವುದು. ವಿಮಾನ ಹತ್ತುವ ಮೊದಲು ನೀವು ಹಲವು ಹಂತದ ತಪಾಸಣೆಗೆ ಒಳಪಡಬೇಕಾಗುತ್ತದೆ. ವಿಮಾನ ನಿಲ್ದಾಣದಲ್ಲಿ ಜನಸಂದಣಿಯಿಂದಾಗಿ ಪ್ರವೇಶಕ್ಕಾಗಿ ಬಹಳ ಸಮಯ ಕಾಯಬೇಕಾಗುತ್ತದೆ. ನೀವು ಇರುವ ಸ್ಥಳದಿಂದ ವಿಮಾನ ನಿಲ್ದಾಣದ ದೂರವನ್ನು ಪರಿಶೀಲಿಸಿ. ಎರಡು ಗಂಟೆ ಮೊದಲೇ ನೀವು ವಿಮಾನ ನಿಲ್ದಾಣ ತಲುಪಿ. ಅಲ್ಲಿ ಕಾಯುವ ಪರಿಸ್ಥಿತಿ ಎದುರಾದ್ರೂ ಸಮಸ್ಯೆಯಿಲ್ಲ. ಚೆಕ್ ಇನ್ ಗೆ ಬಹಳ ಸಮಯ ತೆಗೆದುಕೊಳ್ಳಬಹುದು. ತಡವಾದರೆ ಫ್ಲೈಟ್ ಮಿಸ್ ಆಗಬಹುದು.
ಭಯ ಬೇಡ : ವಿಮಾನ ನಿಲ್ದಾಣದಲ್ಲಿ ಸಾಮಾನ್ಯವಾಗಿ ಜನರ ಸಂಖ್ಯೆ ಹೆಚ್ಚಿರುತ್ತದೆ. ವಿಮಾನ ನಿಲ್ದಾಣದಲ್ಲಿರುವ ಜನರನ್ನು ನೋಡಿ ಭಯಪಡಬೇಕಾಗಿಲ್ಲ. ಗಾಬರಿಯಾಗಬೇಕಾಗಿಲ್ಲ. ನಿಮ್ಮ ಕೆಲಸವನ್ನು ನೀವು ಸರಿಯಾಗಿ ಮುಗಿಸಿ. ನೇರವಾಗಿ ನಿಮ್ಮ ಏರ್‌ಲೈನ್ ಡೆಸ್ಕ್ ಗೆ ಹೋಗಿ ಮತ್ತು ಕೌಂಟರ್‌ನಲ್ಲಿ ನಿಮ್ಮ ಐಡಿ ಮತ್ತು ಟಿಕೆಟ್ ಅನ್ನು ತೋರಿಸಿ. ಜರ್ನಿಗೆ ಸಂಬಂಧಿಸಿದ ಪ್ರಶ್ನೆ ನಿಮಗಿದ್ದರೆ ಅಲ್ಲಿರುವ ಅಧಿಕಾರಿಗಳನ್ನು ಕೇಳಿ ಮಾಹಿತಿ ಪಡೆಯಿರಿ.
ಇದನ್ನೂ ಓದಿ: Travel Tips : ಗಿಜಿಗಿಜಿ ಜೀವನಕ್ಕೆ ಶಾಂತಿ ಬೇಕೆಂದ್ರೆ ಇಲ್ಲಿಗೆ ಹೋಗಿ
ಸೂಚನೆ ಆಲಿಸಿ : ಜನರು ಸಾಮಾನ್ಯವಾಗಿ ವಿಮಾನ ನಿಲ್ದಾಣಕ್ಕೆ ಬಂದ ನಂತ್ರ ವಿಶ್ರಾಂತಿ ಪಡೆಯುತ್ತಾರೆ. ಕೆಲವರು ನಿದ್ರೆ ಮಾಡಿದ್ರೆ ಮತ್ತೆ ಕೆಲವರು ಹಾಡು ಹೇಳ್ತಾರೆ. ಮತ್ತೆ ಕೆಲವರು ಫೋನ್ ಬಳ್ತಾರೆ. ಈ ಸಂಬಂಧದಲ್ಲಿ ಅನೇಕ ಬಾರಿ ವಿಮಾನವು ಘೋಷಣೆ ಕೇಳುವುದಿಲ್ಲ. ಮಾರ್ಗಸೂಚಿಗಳ ಬಗ್ಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ವಿಮಾನ ಟೇಕ್ ಆಫ್ ಆಗುವವರೆಗೆ ಎಲ್ಲಾ ಸೂಚನೆಗಳನ್ನು ಎಚ್ಚರಿಕೆಯಿಂದ ಆಲಿಸಿ ಮತ್ತು ಅನುಸರಿಸಿ.