ಬೆಂಗಳೂರು ಸೇರಿದಂತೆ 3 ಮಹಾ ನಗರಗಳಲ್ಲಿ ಉಬರ್ ಹಾರುವ ಟ್ಯಾಕ್ಸಿ!

By Web DeskFirst Published 8, Sep 2018, 5:55 PM IST
Highlights

ಭಾರತದ ಬೆಂಗಳೂರು, ಮುಂಬೈ ಹಾಗೂ ದೆಹಲಿ ಮಹಾನಗರಗಳಲ್ಲಿ ಜನರು ಟ್ರಾಫಿಕ್ ಹಾಗೂ ಮಾಲಿನ್ಯದಿಂದ ರೋಸಿ ಹೋಗಿದ್ದಾರೆ. ಇದೀಗ ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಹಾಡಲು ಉಬರ್ ಸಂಸ್ಥೆ ಪ್ರಧಾನಿ ಮೋದಿ ಜೊತೆ ಮಹತ್ವದ ಮಾತುಕತೆ ನಡೆಸಿದೆ.

ನವದೆಹಲಿ(ಸೆ.08): ಸಾರಿಗೆ ವ್ಯವಸ್ಥೆಯಲ್ಲಿ ಭಾರತ ಇದೀಗ ಅಮೇರಿಕಾ ಸೇರಿದಂತೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಪೈಪೋಟಿ ನೀಡುತ್ತಿದೆ.  ಭಾರತದಲ್ಲಿ ಹಾರುವ ಟ್ಯಾಕ್ಸಿ(ಏರಿಯಲ್ ಟ್ಯಾಕ್ಸಿ) ಪರಿಚಯಿಸಲು ಉಬರ್ ಸಂಸ್ಥೆ ನಿರ್ಧರಿಸಿದೆ.

ವಿಮಾನ, ಹೆಲಿಕಾಪ್ಟನ್ ಟ್ಯಾಕ್ಸಿ ಸೇವೆ ಆರಂಭಿಸಲು ಉಬರ್ ಕಂಪೆನಿ, ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆ ನಡೆಸಿದೆ. ನಗರಗಳಲ್ಲಿ ಮಾಲಿನ್ಯ ರಹಿತ ಟ್ಯಾಕ್ಸಿ ಸೇವೆ ಹಾಗೂ ಹಾರುವ ಟ್ಯಾಕ್ಸಿ ಕುರಿತು ಉಬರ್ ಕಂಪೆನಿ ಮೋದಿ ಜೊತೆ ಮಹತ್ವದ ಮಾತುಕತೆ ನಡೆಸಿದೆ.

5 ಪ್ರಮುಖ ರಾಷ್ಟ್ರಗಳಲ್ಲಿ ಉಬರ್ ಕಂಪೆನಿ ವಿಮಾನ ಹಾಗೂ ಹೆಲಿಕಾಪ್ಟರ್ ಟ್ಯಾಕ್ಸಿ ಸೇವೆಯನ್ನ ಆರಂಭಿಸುತ್ತಿದೆ. ಇದರಲ್ಲಿ ಭಾರತವೂ ಕೂಡ ಒಂದು. ಭಾರತದ ಪ್ರಮುಖ ನಗರಗಳಾದ ಮುಂಬೈ, ದೆಹಲಿ ಹಾಗೂ ಬೆಂಗಳೂರಿನಲ್ಲಿ ಹಾರುವ ಟ್ಯಾಕ್ಸಿ ಸೇವೆ ಆರಂಭಿಸಲು ಉಬರ್ ನಿರ್ಧರಿಸಿದೆ ಎಂದು  ಮೈ ನೇಶನ್.ಕಾಮ್‌ ವರದಿ ಮಾಡಿದೆ.

2023ರ ವೇಳೆಗೆ ಭಾರದದ 3 ನಗರಗಳಲ್ಲಿ ಉಬರ್ ಹಾರುವ ಟ್ಯಾಕ್ಸಿ ಸೇವೆ ಲಭ್ಯವಾಗಲಿದೆ. ಈ ಕುರಿತು 6 ತಿಂಗಳ ಒಳಗೆ ನಿರ್ಧಾರ ಪ್ರಕಟಿಸುವುದಾಗಿ ಮೋದಿ ಮಾತುಕತೆಯಲ್ಲಿ ತಿಳಿಸಿದ್ದಾರೆ ಎಂದು ಉಬರ್ ಕಂಪನಿ ಹೇಳಿದೆ.

ಉಬರ್ ಹಾರುವ ಟ್ಯಾಕ್ಸಿ ಯೋಜನೆ ಜಾರಿಯಾದರೆ ಟ್ರಾಫಿಕ್ ಸಮಸ್ಯೆಗಳಿಂದ ಕೊಂಚ ನಿರಾಳರಾಗಬಹುದು. ಆದರೆ ಹಾರುವ ಟ್ಯಾಕ್ಸಿ ಪ್ರಯಾಣ ವೆಚ್ಚ ಜನಸಾಮಾನ್ಯರ ಕೈಗೆಟುಕುತ್ತಾ ಅನ್ನೋದೇ ಸದ್ಯಕ್ಕಿರುವ ಪ್ರಶ್ನೆ.
 

Last Updated 9, Sep 2018, 10:27 PM IST