ಖ್ಯಾತ ಲೇಖಕಿ ಬಾನು ಮುಷ್ತಾಕ್ ಅವರು ಲೇಖಕಿಯರ ಸಮ್ಮೇಳನದಲ್ಲಿ ಮಹಿಳೆಯರು 'ಗುಡ್ ಗರ್ಲ್ ಸಿಂಡ್ರೋಮ್'ನಿಂದ ಹೊರಬರಲು ಕರೆ ನೀಡಿದರು. ಸಾರ್ವಜನಿಕವಾಗಿ ಮಹಿಳೆಯರ ಕುರಿತು ಬಳಸುವ ಭಾಷೆ ಮತ್ತು ಧೋರಣೆಯನ್ನು ಸಮ್ಮೇಳನ ಖಂಡಿಸಿತು.
ಬೆಂಗಳೂರು (ಮಾ.24) : ಮಹಿಳೆಯರು ‘ಗುಡ್ ಗರ್ಲ್ ಸಿಂಡ್ರೋಮ್’ ನಿಂದ ಹೊರಬನ್ನಿ. ನೀನು ಕೆಟ್ಟವಳು ಎಂದರೆ ಅದನ್ನು ದಾರ್ಷ್ಯ್ಟದಿಂದ ಎದುರಿಸುವ ಛಾತಿ ಇರಲಿ ಎಂದು ಖ್ಯಾತ ಲೇಖಕಿ ಬಾನು ಮುಷ್ತಾಕ್ ಹೇಳಿದ್ದಾರೆ.
ಭಾನುವಾರ ಕರ್ನಾಟಕ ಲೇಖಕಿಯರ ಸಂಘ ಆಯೋಜಿಸಿದ್ದ ಎಂಟನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು.
ಸಾವಿರಾರು ವರ್ಷದಿಂದ ಸ್ತ್ರೀಯನ್ನು ಸಮಾಜದ ಅಧೀನತೆಯಲ್ಲಿ ಇಡಬೇಕು ಎಂಬ ಪ್ರಯತ್ನವನ್ನು ಯಾರು ಮಾಡುತ್ತಿದ್ದಾರೋ ಅವರಿಂದ ಪ್ರಮಾಣ ಪತ್ರ ಪಡೆಯುವ ಅಗತ್ಯವೇನಿದೆ? ನಾವು ಕೆಟ್ಟವರಾದರೇನು? ಒಳ್ಳೆಯವರಾದರೇನು? ಗುಡ್‌ಗರ್ಲ್ ಸಿಂಡ್ರೋಮ್ ನಮಗೆ ಬೇಡ. ಯಾರು ನಮ್ಮನ್ನು ತಿರಸ್ಕಾರ ಮಾಡುತ್ತಾರೋ, ಯಾರು ನೋವು ಕೊಡುತ್ತಾರೋ? ಅವರು ನಮಗೇಕೆ ಸರ್ಟಿಫಿಕೆಟ್ ಕೊಡಬೇಕು? ಅದನ್ನು ನಾವ್ಯಾಕೆ ಸ್ವೀಕರಿಸಬೇಕು? ಇಂತದ್ದನ್ನು ನಾವು ಬರವಣಿಗೆಯಲ್ಲಿ ತರಬೇಕು ಎಂದರು.
ಇದನ್ನೂ ಓದಿ: ನಾಗತಿಹಳ್ಳಿ: ಸಂಸ್ಕೃತಿ ಹಬ್ಬ ಮತ್ತು ಗ್ರಾಮದ ಕಥನ!
ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಹೇಳನ ಮಾಡಿದ ಪ್ರಕರಣ ಉಲ್ಲೇಖಿಸಿದ ಅವರು, 2005ರ ಕೌಟುಂಬಿಕ ದೌರ್ಜನ್ಯ ಕಾಯಿದೆ ಮಹಿಳೆಗೆ ಮಾನಸಿಕ, ದೈಹಿಕ, ಭಾವನಾತ್ಮಕ, ಲೈಂಗಿಕ, ಆರ್ಥಿಕ, ಶಾಬ್ದಿಕ ಹಿಂಸೆ ಮಾಡಬಾರದು ಎಂದು ಹೇಳುತ್ತದೆ. ಹೀಗಿರುವಾಗ ಮಹಿಳೆಯನ್ನು ಸಾರ್ವಜನಿಕವಾಗಿ ವೇಶ್ಯೆ ಎಂದು ಅವಹೇಳನ ಮಾಡಬಹುದೆ ಎಂದು ಪ್ರಶ್ನಿಸಿದರು.
ಮುಸಲ್ಮಾನ ಯುವಕರು ಮುಸ್ಲಿಂ, ಹಿಂದೂ, ಕ್ರಿಶ್ಚಿಯನ್ ಹೆಣ್ಣುಮಕ್ಕಳನ್ನು ಪ್ರೀತಿಸುವುದಾದರೆ ಆ ಹೆಣ್ಣುಮಕ್ಕಳನ್ನು ಬಾಳಿಸುವುದನ್ನು ಕಲಿಯಬೇಕು. ಮುಸ್ಲಿಂ ಸಮುದಾಯದ ಹಿರಿಯರು ಮಕ್ಕಳಿಗೆ ಸರಿಯಾದ ದಾರಿಗೆ ಯಾಕೆ ತರುತ್ತಿಲ್ಲ ಎಂದು ಸಮಾಜ ನನ್ನನ್ನು ಸೇರಿ ಹಿರಿಯರನ್ನು ಪ್ರಶ್ನಿಸುತ್ತಿದೆ. ನಮ್ಮ ನಡುವೆ ಬಂದ ಫಯಾಝ್, ನಿಯಾಝ್ ಅಂತವರ ಕೃತ್ಯಕ್ಕೆ ಸಮಾಜ ನಮ್ಮನ್ನು ಜವಾಬ್ದಾರಿ ಮಾಡುತ್ತಿದೆ ಎಂದು ವಿಷಾದಿಸಿದರು.
ನಾವು ಲೇಖಕಿಯರು ಯಾಕಾಗಿ ಕೋಮುವಾದದ ಬಗ್ಗೆ ಬರೆಯುತ್ತಿಲ್ಲ. ಕೋಮುವಾದದ ವಿರುದ್ಧ ಯಾಕಾಗಿ ಮಾತನಾಡುತ್ತಿಲ್ಲ? ನಮ್ಮ ಅನಿಸಿಕೆಗಳನ್ನು ಬಹಿರಂಗವಾಗಿ ಹೇಳುತ್ತಿಲ್ಲ, ಮಾಡುವುದಾದರೆ ಎಷ್ಟರ ಮಟ್ಟಿಗೆ ಮಾಡುತ್ತಿದ್ದೇವೆ ಎಂಬುದನ್ನು ತಿಳಿಯಲು ಇಂತಹ ಸಮಾವೇಶ ವೇದಿಕೆ ಒದಗಿಸುತ್ತಿವೆ ಎಂದು ಹೇಳಿದರು.
ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ವಿಪರೀತ ದೌರ್ಜನ್ಯ ನಡೆದಿದೆ ಇಂದಿರಾಗಾಂಧಿ ಏನಾದರೂ ಇದ್ದಿದ್ದರೆ ಮತ್ತೊಮ್ಮೆ ಬಾಂಗ್ಲಾದವರನ್ನು ಓಡಿಸಿ ಸ್ವಾತಂತ್ರ್ಯ ಸಿಗುವಂತೆ ಮಾಡುತ್ತಿದ್ದರು. ಆದರೆ, ಇವತ್ತು ಅಲ್ಲಿಂದ ಬಂದ ಶೇಖ್ ಹಸೀನಾ ಅವರಿಗೆ ಆಶ್ರಯ ಕೊಟ್ಟಿದ್ದೇ ಸಾಧನೆ ಎಂದುಕೊಂಡುಬಿಟ್ಟಿದ್ದಾರೆ ಎಂದು ಹೇಳಿದರು.
ಡಾ। ಎಲ್.ಹನುಮಂತಯ್ಯ ಮಾತನಾಡಿ, ಲೇಖಕಿಯರು ಗಂಡಸರನ್ನು ಗುರಿಮಾಡಿ ಬರೆಯಬೇಕಾದ ಅಗತ್ಯವಿಲ್ಲ. ಸಾಹಿತ್ಯ ಗಂಡಸು, ಹೆಂಗಸು ಎಂಬುದನ್ನು ಮೀರಿದ್ದು. ಸಮಾಜವನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯಲು ಪುರುಷರು ಮಾತ್ರವಲ್ಲ, ನಾವೂ ಇದ್ದೇವೆ ಎಂಬ ಹೇಳಬೇಕಾದುದು ಲೇಖಕಿಯರ ಸಾಹಿತ್ಯ ಎಂದರು.
ಸಂಘದ ಅಧ್ಯಕ್ಷೆ ಎಚ್.ಎಲ್.ಪುಷ್ಪಾ, ಮಾಜಿ ಅಧ್ಯಕ್ಷೆ ಡಾ। ವಸುಂಧರಾ ಭೂಪತಿ ಮಾತನಾಡಿದರು.
ಸಮ್ಮೇಳನದ ನಿರ್ಣಯಗಳು
1) ಮರ್ಯಾದಾ ಹತ್ಯೆ ವಿರುದ್ಧ ಕಠಿಣ ಕಾನೂನು ಕ್ರಮಕ್ಕಾಗಿ ಒತ್ತಾಯ. ಉಗ್ರಪ್ಪ ಸಮಿತಿಯ ವರದಿ ಅಂಗೀಕರಿಸಿ, ಶಿಫಾರಸು ಪರಿಗಣಿಸಬೇಕು.
2) ಸೌಜನ್ಯ ಕೊಲೆ ಪ್ರಕರಣ ಮತ್ತು ಇತರ ಹೆಣ್ಣು ಮಕ್ಕಳ ಅಸಹಜ ಸಾವುಗಳ ಪ್ರಕರಣದ ಮರು ತನಿಖೆಗೆ ಒತ್ತಾಯ.
3) ಭ್ರೂಣಹತ್ಯೆ ನಿಯಂತ್ರಿಸಲು ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗಪತ್ತೆ ನಿಷೇಧ ಕಾಯ್ದೆ ಬಲಗೊಳಿಸಬೇಕು. ಇಂತ ಪ್ರಕರಣ ಇತ್ಯರ್ಥಕ್ಕೆ ತ್ವರಿತ ನ್ಯಾಯಾಲಯ ಸ್ಥಾಪನೆಯಾಗಬೇಕು.
4) ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಬದಲು, ಅವನ್ನು ಅಭಿವೃದ್ಧಿಪಡಿಸಬೇಕು. ಗ್ರಾಮಾಂತರದ ಹೆಣ್ಣುಮಕ್ಕಳ ವಿದ್ಯಾಭ್ಯಾಸ ಮುಖ್ಯವಾಗಿ ಪರಿಗಣಿಸಬೇಕು.
5) ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಯಾಗಬೇಕು. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗ ಸಿಗಬೇಕು.
6) ಸಾರ್ವಜನಿಕವಾಗಿ ಮಾಧ್ಯಮಗಳಲ್ಲಿ ಹಾಗೂ ಸದನದಲ್ಲಿ ಮಹಿಳೆಯರ ಕುರಿತು ಬಳಸುವ ಭಾಷೆ ಹಾಗೂ ಧೋರಣೆ ಖಂಡಿಸುತ್ತೇವೆ. ಈ ಕುರಿತು ಮಾಧ್ಯಮ ಹಾಗೂ ಜನಪ್ರತಿನಿಧಿಗಳ ನಿರ್ಧಾರ ಬದಲಾಗಬೇಕು.
7) ಹನಿಟ್ರ್ಯಾಪ್ ಪ್ರಕರಣಗಳಲ್ಲಿ ಹೆಣ್ಣನ್ನು ಆಟಿಕೆಯಂತೆ ಬಳಸಿಕೊಳ್ಳುವ ಕ್ರಮ ಖಂಡಿಸುತ್ತೇವೆ.
8) ಅಖಿಲ ಕರ್ನಾಟಕ ಲೇಖಕಿಯರ ಸಂಘಕ್ಕೆ ವಿಶೇಷ ಆರ್ಥಿಕ ಸೌಲಭ್ಯ ನೀಡಿ ಗೌರವಿಸಿ