ಗುಜರಾತ್‌ನಲ್ಲಿ ಮೋದಿ ತೋರಿಸಿದ ಇಚ್ಛಾಶಕ್ತಿ ರಾಜ್ಯದಲ್ಲಿ ಬಿಎಸ್‌ವೈ-ಕಾರಜೋಳ ತೋರುವರೇ?

By Suvarna NewsFirst Published Sep 6, 2020, 12:21 PM IST
Highlights

ಸಿಎಂ ಯಡಿಯೂರಪ್ಪ ಅವರು ಮಲಪ್ರಭಾ ನದಿಯ ಒತ್ತುವರಿ ತೆರವುಗೊಳಿಸಿ, ಪುನಶ್ಚೇತನಗೊಳಿಸುವ ಮೂಲಕ ಪ್ರವಾಹ ತಡೆ ಯೋಜನೆ ರೂಪಿಸಲು ಒಪ್ಪಿಗೆ ನೀಡಿದ್ದಾರೆ. ಆ ಯೋಜನೆ ಹೇಗಿರಬೇಕು? ಇಲ್ಲಿದೆ ವಿವರ!

ಹುಬ್ಬಳ್ಳಿ (ಸೆ. 06):  2007, 2009, 2019ರಲ್ಲಿ ಮಲಪ್ರಭೆಗೆ ಪ್ರವಾಹ ಉಕ್ಕೇರಿ ನಾಲ್ಕಾರು ಕಿಮೀ ವಿಸ್ತಾರ ಹರವಿನಲ್ಲಿ ಹರಿಯುತ್ತ ಅಕ್ಕಪಕ್ಕದ ಗ್ರಾಮಗಳ ಮನೆಗಳು, ಬೆಳೆಗಳು, ಜನ-ಜಾನುವಾರುಗಳನ್ನು ಆಪೋಶನ ಮಾಡಿತ್ತು. ಅಂದು ಕೊಚ್ಚಿಹೋದ ಸಂತ್ರಸ್ತರ ಬದುಕು ಈಗಲೂ ಸರಿದಾರಿಗೆ ಬಂದಿಲ್ಲ.

ಈ ಅಪಾಯವನ್ನು ಮನಗಂಡ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೋವಿಂದ ಕಾರಜೋಳ ಅವರು ಈ ನದಿಗೆ ‘ಮೂಲಸ್ವರೂಪ’ ನೀಡುವ ಮೂಲಕ ಪ್ರವಾಹ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಹೊರಟಿದ್ದಾರೆ. ಇಂಥ ಪ್ರಯತ್ನ ಹಿಂದೆಯೂ ನಡೆದಿತ್ತು. ಆದರೆ, ನದಿ ಪಾತ್ರ ಅತಿಕ್ರಮಿಸಿದ ಜನರ ಅಸಹಕಾರ, ಜನಪ್ರತಿನಿಧಿಗಳ ನಿಷ್ಕಾಳಜಿ, ಅಧಿಕಾರಿಗಳ ಅಸಡ್ಡೆ, ಕಳಪೆ ಕಾಮಗಾರಿಯಿಂದಾಗಿ ಸುಮಾರು 7 ಕೋಟಿ ಅನುದಾನ ನೀರಲ್ಲಿ ಹೋಮವಾಗಿದೆ. ಹಾಗಾಗಿ ಈಗ ಸರ್ಕಾರಕ್ಕೆ ಅದೆಲ್ಲ ಪಾಠವಾಗಬೇಕಿದೆ ಎನ್ನುವ ಕಿವಿಮಾತುಗಳೂ ಕೇಳಿಬರುತ್ತಿವೆ.

ಕಾರಜೋಳ ಅವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇತ್ತೀಚೆಗೆ ಉತ್ತರ ಕರ್ನಾಟಕದ ಪ್ರವಾಹ ಪರಿಸ್ಥಿತಿಯ ವೈಮಾನಿಕ ಸಮೀಕ್ಷೆಗೆ ಬಂದಾಗ ಆಲಮಟ್ಟಿಯಲ್ಲಿ ಮಲಪ್ರಭೆಗೆ ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಸಿ ‘ಮಲಪ್ರಭೆ ಶಾಪ ವಿಮೋಚನೆ’ಗೆ ಹಸಿರು ನಿಶಾನೆ ತೋರಿಸಿರುವುದು ಮಲಪ್ರಭೆಯ ಮಕ್ಕಳಲ್ಲಿ ಆಶಾಭಾವ ಮೂಡಿಸಿದೆ. ಇದೇ ಮಲಪ್ರಭೆಗೆ ರೋಣ ತಾಲೂಕು ಮೆಣಸಗಿ ಬಳಿ ಕೂಡಿಕೊಳ್ಳುವ ಬೆಣ್ಣಿಹಳ್ಳದ ಅಪಾಯಕ್ಕೆ ತಡೆಯೊಡ್ಡುವ ಕೆಲಸವೂ ಇದೇ ಸಂದರ್ಭದಲ್ಲಿ ಆಗಬೇಕಿದೆ. ಬೆಣ್ಣಿಹಳ್ಳದ ಪ್ರವಾಹ ನಿರ್ವಹಣೆಗೆ ಜಲತಜ್ಞ ಪರಮಶಿವಯ್ಯ ನೀಡಿದ ವರದಿಯನ್ನು ಅನುಷ್ಠಾನಕ್ಕೆ ತರುವುದರ ಅಗತ್ಯವನ್ನು ಕಾರಜೋಳ ಮನಗಾಣಬೇಕಿದೆ. ಅಂದಾಗ ಮಾತ್ರ ಅವರು ಮಲಪ್ರಭೆ ಪುನಶ್ಚೇತನಕ್ಕಾಗಿ ಇಟ್ಟಿರುವ ಗಟ್ಟಿಹೆಜ್ಜೆಗಳು ಇನ್ನಷ್ಟು ದೃಢವಾಗಲು ಸಾಧ್ಯ.

ಡಿಜೆ ಹಳ್ಳಿ ಗಲಭೆ: ಸಿಎಂಗೆ ಸಲ್ಲಿಸಿದ ವರದಿಯಿಂದ ಸ್ಫೋಟಕ ಮಾಹಿತಿ ಬಹಿರಂಗ

ಗುಜರಾತಿನ ಸಬರಮತಿ ಮಾದರಿ

ಬಿಜೆಪಿ ಸರ್ಕಾರ ಯಾವುದಾದರೂ ಯೋಜನೆ ಕೈಗೆತ್ತಿಕೊಳ್ಳುವಾಗ ‘ಗುಜರಾತ್‌ ಮಾದರಿ’ ಎನ್ನುತ್ತದೆ. ಗುಜರಾತ್‌ನಲ್ಲಿ ನಿಂತಲ್ಲೇ ಮಲೆತು, ಇಂಗಿ, ಬತ್ತಿ ಸತ್ತುಹೋಗಿದ್ದ ‘ಸಬರಮತಿ’ ನದಿಯನ್ನು ಪುನಶ್ಚೇತನಗೊಳಿಸಿ, ಪ್ರವಾಸಿ ತಾಣ ಮಾಡಿರುವ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ದಿಟ್ಟತನವೂ ಕಾರಜೋಳ ಅವರಿಗೆ ‘ಮಾದರಿ’ ಆಗಬೇಕಿದೆ. ಅಂದಾಗ ಮಾತ್ರ ಮಲಪ್ರಭೆ ಮರುಜನ್ಮ ಪಡೆಯಲು ಸಾಧ್ಯ. ಸಬರಮತಿ ನದಿಯ ಅತಿಕ್ರಮಣ ತೆರವುಗೊಳಿಸಿ ಮೂಲಸ್ವರೂಪ ನೀಡುವ ಜತೆಗೆ ಅಕ್ಕಪಕ್ಕದ ತುಸು ಜಮೀನನ್ನು ಸ್ವಾಧೀನ ಮಾಡಿಕೊಂಡು ಸುಂದರ ಉದ್ಯಾನವನ ನಿರ್ಮಿಸಿದ್ದರಿಂದ ಇಡೀ ಪರಿಸರ ನಳನಳಿಸುತ್ತಿದೆ.

ಸಬರಮತಿ ನದಿಯ ಒಡಲಲ್ಲಿನ ಹೂಳು ತೆಗೆಯಲಾಗಿದೆ. ಇಕ್ಕೆಲದಲ್ಲಿ ಎತ್ತರದ ತಡೆಗೋಡೆ, ಕಾಂಕ್ರೀಟ್‌ ರಸ್ತೆ, ಅಲ್ಲಲ್ಲಿ ಮನೋಹರ ಸೇತುವೆಗಳನ್ನು ನಿರ್ಮಿಸಲಾಗಿದೆ. ನದಿ ಮಧ್ಯದಲ್ಲಿ ಚಿಮ್ಮುವ ಕಾರಂಜಿ, ಬೋಟಿಂಗ್‌ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲ ಸುಮಾರು 28 ಕಿ.ಮೀ ಉದ್ದದ ನದಿಯ ಭಾಗವನ್ನು ಜಲಮಾರ್ಗವಾಗಿ ಬಳಸಿಕೊಂಡಿದ್ದು, ಇಡೀ ಅಹ್ಮದಾಬಾದ್‌ ಮಹಾನಗರಕ್ಕೆ ಮುಕುಟಪ್ರಾಯವಾಗಿದೆ!

ಮಲಪ್ರಭೆಯ ನಿಟ್ಟುಸಿರು

ಖಾನಾಪುರ ತಾಲೂಕು ಕಣಕುಂಬಿಯಲ್ಲಿ ಹುಟ್ಟಿನವಿಲುತೀರ್ಥ ಅಣೆಕಟ್ಟೆಗೆ ಬರುವವರೆಗೆ ತುಂಬ ನಿರಾಳವಾಗಿ ಹರಿಯುವ ಮಲಪ್ರಭೆ, ಅಣೆಕಟ್ಟೆಕೆಳಭಾಗದಿಂದ ಕೂಡಲಸಂಗಮದ ವರೆಗೆ ಗುರ್ತು ಸಿಗದಷ್ಟುಕೃಶಗೊಂಡಿದೆ. ಸುಮಾರು 182 ಕಿ.ಮೀ ಉದ್ದಕ್ಕೂ ಎಲ್ಲೂ ಇದು ನದಿ ಎನಿಸುವುದೇ ಇಲ್ಲ. ಬರೀ ಮಳ್ಳುಕಂಟಿ, ಕೊರಕಲಿನ ಮಧ್ಯೆ ಜಿನುಗುವ ನೀರು ಅಕ್ಷರಶಃ ಕೊಳಚೆಯಂತೆ ಭಾಷವಾಗುತ್ತದೆ. ಮೂಲ ಸ್ವರೂಪದಲ್ಲಿ ಸುಮಾರು 130 ಮೀಟರ್‌ ಅಗಲದ ಈ ನದಿ, ಈಗ ಒಂದೊಂದು ಕಡೆ 10 ಮೀಟರ್‌ ಅಗಲವೂ ಇಲ್ಲ. ಎಲ್ಲೂ 25 ಮೀಟರ್‌ ಅಗಲ ದಾಟುವುದಿಲ್ಲ. ಅಷ್ಟುಭೀಕರ ಒತ್ತುವರಿಯಾಗಿದೆ. ಸುಮಾರು ವರ್ಷಗಳ ಹಿಂದೆ ಒತ್ತುವರಿ ಮಾಡಿದವರ ಜಮೀನಿನಲ್ಲಿ ಹೇರಳ ಉಸುಕು (ಮರಳು) ಸಂಗ್ರಹವಾಗಿದ್ದರಿಂದ ಸರ್ಕಾರವೇ ಆಯಾ ಹೊಲದ ಮಾಲಿಕರಿಗೆ ‘ಸ್ಯಾಂಡ್‌ ಬ್ಲಾಕ್‌’ ಗುರುತಿಸಿ ಮರಳು ಗಣಿಗಾರಿಕೆಗೆ ಪರವಾನಗಿ ನೀಡಿದೆ. ಅವರು ತಮ್ಮದೂ ಸೇರಿದಂತೆ ನದಿಯ ಒಡಲಲ್ಲಿನ ಉಸುಕನ್ನೂ ತೆಗೆದು ಮಾರಾಟ ಮಾಡಿದ್ದರಿಂದ ಈಗ ನದಿ ಎಂದು ಹೇಳಿಕೊಳ್ಳುವ ಪರಿಸ್ಥಿತಿಯಲ್ಲಿ ಮಲಪ್ರಭೆ ಇಲ್ಲ.

ಸಿಎಂ ಭೇಟಿ ಬಳಿಕ ರಹಸ್ಯ ಸ್ಥಳಕ್ಕೆ ಗೃಹ ಸಚಿವ: ಕುತೂಹಲ ಮೂಡಿಸಿದೆ ಬೆಳವಣಿಗೆ

ದಿಟ್ಟ ನಿಲುವು, ಇಚ್ಛಾಶಕ್ತಿ ಬೇಕು

ಮಲಪ್ರಭೆಯ ಈ ವಿಕಾರಕ್ಕೆ ಕೊನೆಹಾಡುವುದು ಅಷ್ಟುಸುಲಭವಿಲ್ಲ. ಆದಾಗ್ಯೂ ಡ್ರೋನ್‌ ತಂತ್ರಜ್ಞಾನ ಬಳಸಿ ನದಿಯ ಸರ್ವೇ ನಡೆಸಬೇಕು. ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನಿರ್ದಾಕ್ಷಿಣ್ಯವಾಗಿ ಒತ್ತುವರಿ ತೆರವುಗೊಳಿಸಬೇಕು. ನದಿಯ ಒಡಲಲ್ಲಿನ ಮುಳ್ಳುಕಂಟಿ, ಹೂಳು ತೆಗೆಸಬೇಕು. ಅಗತ್ಯವೆನಿಸಿದಲ್ಲೆಲ್ಲ ಚೆಕ್‌ಡ್ಯಾಮ್‌, ಸೇತುವೆಗಳ ನಿರ್ಮಾಣ, ನದಿ ಪಾತ್ರದಲ್ಲಿ ಕಡ್ಡಾಯವಾಗಿ ಅರಣ್ಯ ಬೆಳೆಸಬೇಕು. ಅಂದಾಗ ಮಾತ್ರ ನಿಸ್ತೇಜಗೊಂಡಿರುವ ಮಲಪ್ರಭೆಯನ್ನು ಪುನಶ್ಚೇತನಗೊಳಿಸಲು ಸಾಧ್ಯವಿದೆ.

ಪೂರ್ಣಿಮಾ ಗೌರೋಜಿ ಹೋರಾಟ

ನರ್ಮದೆಗೆ ಮೇಧಾ ಪಾಟ್ಕರ್‌, ಮಲಪ್ರಭೆಗೆ ಪೂರ್ಣಿಮಾ ಗೌರೋಜಿ ಎನ್ನುವ ಮಾತು ಜನಜನಿತವಾಗಿದೆ. ಕೃಷ್ಣೆಯ ಸ್ವಚ್ಛಂದ ಮಡಿಲಲ್ಲಿ ಬೆಳೆದ ಪೂರ್ಣಿಮಾಗೆ ರಾಮದುರ್ಗದ ತಮ್ಮ ಗಂಡನ ಮನೆಯ ಮಗ್ಗುಲಲ್ಲೆ ಕೊಳಚೆಯಂತೆ ಹರಿಯುತ್ತಿದ್ದ ಮಲಪ್ರಭೆಯ ಕರುಣಾಜನಕ ಸ್ಥಿತಿ ಕಂಡು ಕರುಳು ಹಿಂಡಿದಂತಾಗಿದೆ. ಅವರ ಬಳಿ ಚಿಕಿತ್ಸೆಗೆ ಬರುವ ಮಹಿಳೆಯರು, ಮಕ್ಕಳು ಅತಿಸಾರ, ಭೇದಿ, ಹೊಟ್ಟೆನೋವು, ಜ್ವರ, ಕಾಲರಾದಂತ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಚಿಕಿತ್ಸೆ ನೀಡುತ್ತಲೇ ಇದಕ್ಕೆಲ್ಲ ಮೂಲ ಕಾರಣ ಮಲಪ್ರಭೆಯ ಕಲುಷಿತ ನೀರು ಎನ್ನುವ ಸತ್ಯವನ್ನು ಮನಗಂಡು 1988ರಿಂದ ‘ಮಲಪ್ರಭೆಯ ಶಾಪವಿಮೋಚನೆ’ಗೆ ಪಣ ತೊಟ್ಟಏಕಾಂಗಿ ಹೋರಾಟ ಶುರುಮಾಡಿದರು.

ಮನವಿ, ಕರಪತ್ರಗಳೆಲ್ಲ ವ್ಯರ್ಥವಾದಾಗ ‘ಶುದ್ಧ ಕುಡಿಯುವ ನೀರು ನಮ್ಮ ನ್ಯಾಯಯುತ ಹಕ್ಕು’ ಎಂದು ಹೈಕೋರ್ಟ್‌ ಮೆಟ್ಟಿಲೇರಿ ಸರ್ಕಾರಕ್ಕೆ ನಿರ್ದೇಶನ ಕೊಡಿಸಿದರು. ಅದರ ಫಲವಾಗಿ ನವಿಲುತೀರ್ಥ ಅಣೆಕಟ್ಟೆಯಿಂದ ಪೈಪ್‌ಲೈನ್‌ ಮೂಲಕ ನದಿ ದಂಡೆಯ 13 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ 68.76 ಕೋಟಿ ವೆಚ್ಚದ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿತು. ಮುಂದೆ ಅದು ನದಿ ತೀರದ 68 ಗ್ರಾಮಗಳಿಗೂ ಅನ್ವಯವಾಯಿತು. ರಾಮದುರ್ಗ ಪಟ್ಟಣದಲ್ಲಿ 19 ಕೋಟಿ ವೆಚ್ಚದಲ್ಲಿ ಒಳಚರಂಡಿ ನಿರ್ಮಾಣವಾಗಿ ನದಿಗೆ ಸೇರುತ್ತಿದ್ದ ಕಲ್ಮಶ ತಪ್ಪಿತು.

7 ಕೋಟಿ ವೆಚ್ಚದಲ್ಲಿ ನದಿಯಲ್ಲಿನ ಹೂಳು ತೆಗೆದು ಇಕ್ಕೆಲದಲ್ಲಿ ತಡೆಗೋಡೆ ನಿರ್ಮಿಸುವ ಕಾಮಗಾರಿಯೂ ನಡೆಯಿತು. ಇನ್ನುಳಿದ 175 ಕಿಮೀ ಉದ್ದದ ನದಿಗೂ ಇದೇ ಉಪಚಾರವಾಗಬೇಕು. ರಾಮದುರ್ಗದ ಮಾದರಿಯಲ್ಲಿ 175 ಕೋಟಿ ನೀಡಿ ಮಲಪ್ರಭೆಯನ್ನು ಶಾಪಮುಕ್ತಗೊಳಿಸಿ ಎಂದು ಹೋರಾಡುತ್ತಿದ್ದಾರೆ. ಬೆಳಗಾವಿ ಪ್ರಾದೇಶಿಕ ಆಯುಕ್ತರಾಗಿದ್ದ ಪಿ.ಎ.ಮೇಘಣ್ಣವರ ಲೋಕಾಯುಕ್ತರ ನಿರ್ದೇಶನದಂತೆ ಮಲಪ್ರಭೆಯ ಪುನಶ್ಚೇತನಕ್ಕೆ ಸೂಕ್ತ ವರದಿ ರೂಪಿಸಿದ್ದಾರೆ.

ನದಿ ಉಳಿಸುವ ಮಾತು

ನದಿಗಳ ಪುನಶ್ಚೇತನ ವಿಷಯದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದು ಲಂಡನ್‌. ಅದು ತನ್ನ ಥೇಮ್ಸ್‌ ನದಿಯನ್ನು ಪುನರುಜ್ಜೀವನ ಮಾಡುವ ಮೂಲಕ ಜಗತ್ತಿಗೇ ಒಂದು ಸಿದ್ಧ ಮಾದರಿ ನೀಡಿತು. ಮೋದಿ ಸಬರಮತಿ ನದಿಯನ್ನು ವೈಜ್ಞಾನಿಕವಾಗಿ ಪುನಶ್ಚೇತನಗೊಳಿಸಿ ಲಂಡನ್‌ ಜನತೆಯೂ ಹುಬ್ಬೇರಿಸುವಂತೆ ಮಾಡಿದರು. ಅದರಂತೆ ಗಂಗಾನದಿ ಸ್ವಚ್ಛತೆಯಲ್ಲೂ ಅವರು ಅಷ್ಟೇ ಆಸ್ಥೆ ವಹಿಸಿದ್ದಾರೆ. ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಹಿರೇಹಳ್ಳವನ್ನು ಅಭಿವೃದ್ಧಿಪಡಿಸಲು ಆಂದೋಲನವನ್ನೇ ಹುಟ್ಟುಹಾಕಿ ಯಶಸ್ಸು ಕಂಡಿದ್ದಾರೆ. ರಾಜಸ್ಥಾನದ ಜಲತಜ್ಞ ಡಾ.ರಾಜೇಂದ್ರ ಸಿಂಗ್‌ ಅವರು ಗದುಗಿನ ಈಚಲು ಹಳ್ಳಕ್ಕೆ ಮರುಜೀವ ನೀಡಿದರು. ಇಂಥ ಗಮನೀಯ ಜಲಕಾಳಜಿಯ ಮಧ್ಯೆ ಇದೀಗ ಹೊಸದೊಂದು ವಿಷಯ ರಾಜ್ಯದ ಗಮನ ಸೆಳೆಯುತ್ತಿದೆ. ಅದು ‘ಮಲಪ್ರಭಾ ನದಿಗೆ ಮೂಲಸ್ವರೂಪ ನೀಡುವುದು.’

- ಮಲ್ಲಿಕಾರ್ಜುನ ಸಿದ್ದಣ್ಣವರ

 

click me!