ಮೋದಿ ಸರ್ಕಾರದ ಲಸಿಕೆ ಪಡೆದವರು ಸಾಯ್ತಿದ್ದಾರೆ: ಪ್ರಿಯಾಂಕಾ ಗಾಂಧಿ

By Govindaraj S  |  First Published May 5, 2024, 7:03 AM IST

ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಕೋವಿಡ್‌ ಲಸಿಕೆ ವಿಚಾರ ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 


ದಾವಣಗೆರೆ (ಮೇ.05): ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಕೋವಿಡ್‌ ಲಸಿಕೆ ವಿಚಾರ ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ಅವರ ಪಕ್ಷಕ್ಕೆ 52 ಕೋಟಿ ರು. ಚುನಾವಣಾ ದೇಣಿಗೆ ನೀಡಿರುವ ಕಂಪನಿ ಉತ್ಪಾದಿಸಿದ ಕೋವಿಡ್‌ ಲಸಿಕೆ ಪಡೆದ ದೇಶದ ಆರೋಗ್ಯವಂತ ಯುವಕರು ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ನಗರದ ಹೈಸ್ಕೂಲ್ ಮೈದಾನದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರಚಾರ ಸಮಾವೇಶದಲ್ಲಿ ಕೋವಿಡ್‌ ಲಸಿಕೆ ಮತ್ತು ವಿವಾದಾತ್ಮಕ ಚುನಾವಣಾ ಬಾಂಡ್‌ ಅನ್ನು ಸಮೀಕರಿಸಿ ಮಾತನಾಡಿದರು.

ಕೋವಿಡ್‌ ಲಸಿಕೆ ಪಡೆವರಿಗೆ ನೀಡಿದ ಪ್ರಮಾಣ ಪತ್ರದಲ್ಲಿ ಯಾರ ಫೋಟೋ ಇತ್ತೆಂಬುದು ನಿಮಗೆ ನೆನಪಿದೆಯಾ? ಅದರಲ್ಲಿ ಮೋದಿ ಅವರ ಫೋಟೋ ಇತ್ತೋ, ಇಲ್ವೋ ಎಂದು ಸಭಿಕರನ್ನು ಪ್ರಶ್ನಿಸುವ ಮೂಲಕ ಪ್ರಧಾನಿ ವಿರುದ್ಧ ಹರಿಹಾಯ್ದರು. ಯಾವುದೇ ಖಾಯಿಲೆ ಇಲ್ಲದಿದ್ದರೂ ದೇಶದಲ್ಲಿ ಅನೇಕ ಆರೋಗ್ಯವಂತ ಹಾಗೂ ಗಟ್ಟಿಮುಟ್ಟಾದ ಯುವಕರು ಹೃದಾಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಅವರು ಪಡೆದ ಕೋವಿಡ್‌ ಲಸಿಕೆಯಿಂದಾಗಿ ಈ ರೀತಿ ಆಗುತ್ತಿದೆ ಎಂದು ಹೇಳಿದ ಪ್ರಿಯಾಂಕಾ ಗಾಂಧಿ, ಈ ಎಲ್ಲ ಲಸಿಕೆಗಳನ್ನು ಒಂದೇ ಕಂಪನಿ ಉತ್ಪಾದಿಸಿದೆ. ಆ ಕಂಪನಿ ಮೋದಿ ಅವರ ಪಕ್ಷಕ್ಕೆ 52 ಕೋಟಿ ರು. ಚುನಾವಣಾ ದೇಣಿಗೆ ನೀಡಿದೆ ಎಂದು ತಿಳಿಸಿದರು.

Tap to resize

Latest Videos

ಕೇಂದ್ರ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ನೇರ ಆರೋಪ ಮಾಡಿದ ಅವರು, ಲಸಿಕೆಗಳು ಅಥವಾ ಕೇಸು ದಾಖಲಿಸಿ ನಂತರ ವಾಪಸ್ ಪಡೆಯುವ ಮೂಲಕ ಇಲ್ಲವೇ ತನಿಖಾ ಸಂಸ್ಥೆಗಳಿಂದ ದಾಳಿ ನಡೆಸಿ ದೇಣಿಗೆ ಪಡೆಯುವುದೂ ಸೇರಿದಂತೆ ಕೇಂದ್ರ ಸರ್ಕಾರದ ಭ್ರಷ್ಚಾಚಾರದ ಕುರಿತು ಅನೇಕ ಉದಾಹರಣೆಗಳಿವೆ. ಮೋದಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ದೂರಿದರು. ಚುನಾವಣಾ ಬಾಂಡ್‌ ನೀತಿ ಜಾರಿಗೆ ತಂದು ಅದರ ಮೂಲಕ ಬಿಜೆಪಿ ಪ್ರತಿಯೊಬ್ಬರಿಂದಲೂ ದೇಣಿಗೆ ಪಡೆಯಿತು. ಗುಜರಾತ್‌ನಲ್ಲಿ ಇತ್ತೀಚೆಗೆ ಸೇತುವೆಯೊಂದು ಕುಸಿದು ಬಿದ್ದು ನೂರಾರು ಮಂದಿ ಸಾವಿಗೀಡಾದರು. ಆ ಸೇತುವೆ ನಿರ್ಮಿಸಿದ್ದ ಗುತ್ತಿಗೆದಾರರಿಂದಲೂ ಬಿಜೆಪಿ ದೇಣಿಗೆ ಪಡೆದಿದೆ. ಕೋವಿಡ್‌ ಲಸಿಕೆ ಉತ್ಪಾದಿಸಿದವರಿಂದಲೂ ದೇಣಿಗೆ ಪಡೆದಿದೆ ಎಂದು ಕಿಡಿಕಾರಿದರು.

ಪ್ರಜ್ವಲ್‌ ರೇವಣ್ಣ ಸಂತ್ರಸ್ತರಿಗೆ ನೆರವಾಗಿ: ಸಿಎಂ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಪತ್ರ

ರೈತರ ಸಾಲ ಮನ್ನಾ ಮಾಡಲ್ಲ: ಇದೇ ವೇಳೆ ದೇಶದ ದೊಡ್ಡ ಉದ್ಯಮಿಗಳು, ಬಂಡವಾಳಶಾಹಿಗಳ ₹17 ಲಕ್ಷ ಕೋಟಿ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ. ಆದರೆ ರೈತರ ಸಾಲ ಮನ್ನಾ ಮಾಡಲ್ಲ ಎಂದು ಆರೋಪಿಸಿದರು. ಕೇವಲ ಹತ್ತೇ ವರ್ಷದಲ್ಲಿ ಬಿಜೆಪಿ ವಿಶ್ವದಲ್ಲೇ ಅತ್ಯಂತ ಶ್ರೀಮಂತ ರಾಜಕೀಯ ಪಕ್ಷವಾಗಿ ಬಿಟ್ಟಿದೆ. ಬಿಜೆಪಿ ಅಷ್ಟೊಂದು ಹಣ ಮಾಡಿದ್ದರೂ ದೇಶದ ಮಹಿಳೆಯರು, ರೈತರ ಕೈಯಲ್ಲಿ ಹಣ ಇಲ್ಲ. ರೈತರಿಗೆ ತಮ್ಮ ಮಕ್ಕಳ ಹಸಿವು ನೀಗಿಸುವ ಶಕ್ತಿಯೂ ಇಲ್ಲದಂತಾಗಿದೆ. ಕೇವಲ ₹10 ಸಾವಿರ ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ರೈತರ ಸಾಲ ಮನ್ನಾ ಮಾಡಲು ಮಾತ್ರ ಕೇಂದ್ರ ಸರ್ಕಾರಕ್ಕೆ ಯಾವುದೇ ಆಸಕ್ತಿ ಇಲ್ಲ ಎಂದು ಆಕ್ರೋಶ ಹೊರಹಾಕಿದರು.

click me!