ಜೆಡಿಎಸ್‌ನವರು ಬಿಜೆಪಿ ಜತೆ ಮೈತ್ರಿಯಾದರೂ ಮಾಡಿಕೊಳ್ಳಲಿ, ಪಕ್ಷವನ್ನು ವಿಲೀನವಾದರೂ ಮಾಡಿಕೊಳ್ಳಲಿ ಅದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು (ಮೇ.05): ‘ಪ್ರಜ್ವಲ್ ರೇವಣ್ಣ ಅವರ ವಿಚಾರದಿಂದ ಜೆಡಿಎಸ್‌ನ 12 ಮಂದಿ ಶಾಸಕರು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ ಎಂಬ ವಿಚಾರವೆಲ್ಲಾ ಸುಳ್ಳು. ಊಹಾಪೋಹಗಳನ್ನು ಹರಡಲಾಗುತ್ತಿದೆ. ಜೆಡಿಎಸ್‌ನವರು ಬಿಜೆಪಿ ಜತೆ ಮೈತ್ರಿಯಾದರೂ ಮಾಡಿಕೊಳ್ಳಲಿ, ಪಕ್ಷವನ್ನು ವಿಲೀನವಾದರೂ ಮಾಡಿಕೊಳ್ಳಲಿ ಅದಕ್ಕೂ ನಮಗೂ ಸಂಬಂಧ ಇಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ವಿಚಾರದಿಂದ ಜೆಡಿಎಸ್ ಪಕ್ಷದ 12 ಶಾಸಕರು ಕಾಂಗ್ರೆಸ್ ಸೇರುತ್ತಿದ್ದಾರೆ ಎಂಬ ಚರ್ಚೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಅದೆಲ್ಲವೂ ಸುಳ್ಳು, ನನ್ನ ಜತೆ ಯಾರೊಬ್ಬರೂ ಸಂಪರ್ಕದಲ್ಲಿಲ್ಲ. ನಾನು ಯಾರ ಜತೆಯೂ ಮಾತುಕತೆ ನಡೆಸಿಲ್ಲ. ಸುಮ್ಮನೆ ಊಹಾಪೋಹದ ಸುದ್ದಿಗಳನ್ನು ಹರಡಿಸುತ್ತಿದ್ದಾರೆ. ಎಂತಹವರಾದರೂ ಈ ವಿಚಾರದಲ್ಲಿ ಹತಾಶರಾಗಿರುತ್ತಾರೆ. ಅವರ ಪಕ್ಷದಲ್ಲಿ ಹಾಗೂ ಕುಟುಂಬದಲ್ಲಿನ ಆಂತರಿಕ ಸಮಸ್ಯೆಗಳು ಎಲ್ಲರಿಗೂ ಗೊತ್ತಿದೆ. ಈಗ ನಾನು ಆ ಬಗ್ಗೆ ಚರ್ಚೆ ಮಾಡುವುದಿಲ್ಲ’ ಎಂದು ಹೇಳಿದರು. ಇನ್ನು ವಿಧಾನಸಭೆ ಚುನಾವಣೆ ಟಿಕೆಟ್ ಹಂಚಿಕೆ ಮಾಡುವ ಸಮಯದಿಂದಲೂ ಅವರ ಕುಟುಂಬದವರ ಹೇಳಿಕೆಗಳನ್ನು ಗಮನಿಸಿಕೊಂಡು ಬನ್ನಿ.
Lok Sabha Elections 2024: ಕಾಂಗ್ರೆಸ್ ಹೇಡಿ ಪಕ್ಷ: ಪ್ರಧಾನಿ ಮೋದಿ ಹರಿತ ವಾಗ್ದಾಳಿ
ಅವರು ಬಿಜೆಪಿ ಜತೆ ಮೈತ್ರಿಯಾದರೂ ಮಾಡಿಕೊಳ್ಳಲಿ, ಪಕ್ಷವನ್ನು ವಿಲೀನವಾದರೂ ಮಾಡಿಕೊಳ್ಳಲಿ, ಅದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು. 30 ವರ್ಷಗಳ ಹಿಂದೆ ಇಂಗ್ಲೆಂಡ್‌ನಲ್ಲಿ ರೇವಣ್ಣ ಅವರದ್ದು ಇಂತಹ ಪ್ರಕರಣ ನಡೆದಿತ್ತು ಎಂಬ ಶಿವರಾಮೇಗೌಡರ ಹೇಳಿಕೆ ಬಗ್ಗೆ ಕೇಳಿದಾಗ, ‘ಆ ವಿಚಾರ ನಾನು ಕೇಳಿದ್ದೇನೆ. ಆಗ ಹೋಟೆಲ್‌ನಿಂದ ರೇವಣ್ಣ ಅವರನ್ನು ಖಾಲಿ ಮಾಡಿಸಿದ್ದರು ಎಂದು ಕೇಳಿದ್ದೇನೆ. ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ’ ಎಂದರು.
ದಕ್ಷಿಣಕ್ಕಿಂತ ಉತ್ತರದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ: ಚುನಾವಣಾ ಪ್ರಚಾರದ ಬಗ್ಗೆ ಮಾತನಾಡಿದ ಅವರು, ಎಲ್ಲೆಡೆ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. ದಕ್ಷಿಣ ಕರ್ನಾಟಕಕ್ಕಿಂತಲೂ ಉತ್ತರ ಕರ್ನಾಟದ ಭಾಗಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಐದಕ್ಕೆ ಐದೂ ಸೀಟು ಗೆಲ್ಲುವ ವಿಶ್ವಾಸವಿದೆ. ಎರಡನೇ ಹಂತದಲ್ಲಿ 12 ಸ್ಥಾನ ಗೆಲ್ಲುವ ಸಾಧ್ಯತೆಗಳು ಕಾಣುತ್ತಿವೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಹಾಗೂ ರಾಜ್ಯ ಸರ್ಕಾರದ ಆಡಳಿತ ವೈಖರಿ ಜನರಿಗೆ ಮೆಚ್ಚುಗೆಯಾಗಿದೆ.
ಪ್ರಜ್ವಲ್ ರೇವಣ್ಣ ಸಂತ್ರಸ್ತರಿಗೆ ನೆರವಾಗಿ: ಸಿಎಂ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಪತ್ರ
ಹಳ್ಳಿ ಮಟ್ಟದಲ್ಲೂ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಅಲೆ ನಡೆಯುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಮಳೆ ಬೀಳುತ್ತಿರುವ ವಿಚಾರವಾಗಿ ಮಾತನಾಡಿ, ಒಂದು ಸುತ್ತು ಮಳೆ ಬಿದ್ದರೆ ಸಾಕಷ್ಟು ಇಂಧನ ಉಳಿಯುತ್ತದೆ. ಆರೋಗ್ಯ ಸುಧಾರಿಸುತ್ತದೆ. ಒಂದು ದಿನ ಮಳೆ ಬಿದ್ದರೆ ಸಾವಿರಾರು ಕೋಟಿ ಉಳಿಯುತ್ತದೆ. ಮಳೆ ಬೀಳದೇ ಇದ್ದರೆ ಕೊಳವೆ ಬಾವಿ ಕೊರೆಯುತ್ತಲೇ ಇರುತ್ತಾರೆ. ಚೆನ್ನಾಗಿ ಮಳೆಯಾಗಲಿ, ಭೂಮಿ ನೆನೆಯಲಿ ಎಂದು ಹೇಳಿದರು.