
ಬೆಂಗಳೂರು(ನ.22): ಕೊರೋನಾ ಲಸಿಕೆಯ ವಿತರಣೆ ಭ್ರಷ್ಟಾಚಾರದ ಕೂಪವಾಗಬಾರದು. ಲಸಿಕೆ ಮಾರುಕಟ್ಟೆಗೆ ಬಂದಾಗ ಆರ್ಥಿಕವಾಗಿ ಸಮರ್ಥರಾಗಿರುವವರಿಗೆ ಸೂಕ್ತ ಬೆಲೆ ನಿಗದಿ ಮಾಡಿಯೇ ನೀಡಬೇಕು. ಅದರಿಂದ ಬರುವ ಹಣದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ಲಸಿಕೆ ನೀಡಬೇಕು ಎಂದು ಸದ್ಗುರು ಜಗ್ಗಿ ವಾಸುದೇವ್ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ, ಕೊರೋನಾ ಅವಧಿಯಲ್ಲಿ ದುಡಿಯುತ್ತಿರುವ ವೈದ್ಯರು, ಪೊಲೀಸರು ಸೇರಿ ಕೊರೋನಾ ಯೋಧರು ಹಾಗೂ ಅಪಾಯದ ಸ್ಥಿತಿಯಲ್ಲಿರುವವರಿಗೆ ಮೊದಲು ಲಸಿಕೆ ನೀಡಬೇಕು ಎಂದು ಸಲಹೆ ನೀಡಿದರು.
ಬೆಂಗಳೂರು ತಂತ್ರಜ್ಞಾನ ಮೇಳ-2020ದ ಕೊನೆಯ ದಿನವಾದ ಶನಿವಾರ ‘ಸ್ವಾಸ್ಥ್ಯಕ್ಕಾಗಿ ತಂತ್ರಜ್ಞಾನಗಳಲ್ಲಿ ಹೂಡಿಕೆ’ ಕುರಿತ ಸಂವಾದಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮುಂಬರುವ ದಿನಗಳಲ್ಲಿ ಕೊರೋನಾ ಲಸಿಕೆ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಈ ವೇಳೆ ಲಸಿಕೆ ವಿತರಣೆಯು ಭ್ರಷ್ಟಾಚಾರಕ್ಕೂ ಎಡೆಮಾಡಿಕೊಡಬಹುದು. ಈ ರೀತಿ ಆಗದಂತೆ ಎಚ್ಚರವಹಿಸಬೇಕು. ಅಗತ್ಯವಿರುವವರಿಗೆ ಮೊದಲ ಹಂತದಲ್ಲಿ ಲಸಿಕೆ ಸಿಗಬೇಕು. ಬಡವರಿಗೆ ಉಚಿತವಾಗಿ ಪೂರೈಕೆಯಾಗಬೇಕು ಎಂದರು.
ಆಧ್ಯಾತ್ಮದ ಚಿಂತನಾ ವ್ಯಾಪ್ತಿ ವಿಜ್ಞಾನಕ್ಕಿಂತ ವಿಶಾಲ:
ಬುದ್ಧಿ ಎಂದರೆ ಕೇವಲ ನೆನಪಿನ ಶಕ್ತಿ ಅಲ್ಲ. ಬುದ್ಧಿಗೆ ನಾಲ್ಕು ಆಯಾಮಗಳಿವೆ. ಬೌದ್ಧಿಕತೆ, ಅಹಂಕಾರ, ಮನಸ್ಸು (ಸಂಸ್ಕಾರ), ಚಿತ್ತ ಎಂಬ ಆಯಾಮಗಳ ಬಗ್ಗೆ ಭಾರತೀಯರು ಪ್ರಾಚೀನ ಕಾಲದಲ್ಲೇ ಮನಗಂಡಿದ್ದರು. ಬ್ರಹ್ಮಾಂಡದಲ್ಲಿ ಗ್ರಹಗಳು, ನಕ್ಷತ್ರಗಳು, ಎಲ್ಲಾ ಆಕಾಶಕಾಯಗಳನ್ನು ಸೇರಿಸಿದರೂ ಭೌತಿಕ ಪ್ರಪಂಚವು ಹೆಚ್ಚೆಂದರೆ ಅದು ಶೇ.1ರಷ್ಟು ಮಾತ್ರ ಆಗುತ್ತದೆ. ಉಳಿದ ಶೇ.99ರಷ್ಟು ಭಾಗವು ನಮಗೆ ಏನೂ ಎಂದು ಗೊತ್ತಿಲ್ಲದ ಶೂನ್ಯವೇ ಆಗಿದೆ. ವಿಜ್ಞಾನವು ಶೇ.1ರಷ್ಟಿರುವ ಭೌತಿಕ ಪ್ರಪಂಚದ ಬಗ್ಗೆ ವಿವರಿಸಲು ಪ್ರಯತ್ನಿಸುತ್ತದೆ. ಆದರೆ ಅಧ್ಯಾತ್ಮವು ಶೇ.99ರಷ್ಟಿರುವ ಶೂನ್ಯವನ್ನೂ ದೃಷ್ಟಿಯಲ್ಲಿರಿಸಿಕೊಂಡು ಆಲೋಚನಾ ಮಗ್ನವಾಗಿರುತ್ತದೆ. ಹೀಗಾಗಿ ಅಧ್ಯಾತ್ಮದ ಚಿಂತನಾ ವ್ಯಾಪ್ತಿ ವಿಜ್ಞಾನಕ್ಕಿಂತ ವಿಶಾಲವಾದುದು ಎಂದು ಹೇಳಿದರು.
4 ತಿಂಗಳಲ್ಲಿ 1.1 ಕೋಟಿ ಸಸಿ ನೆಡುವ ಗುರಿ: ಸದ್ಗುರು ಜಗ್ಗಿ ವಾಸುದೇವ್
ಆರೋಗ್ಯ, ನೈರ್ಮಲ್ಯ ಆದ್ಯತೆಯಾಗಬೇಕು:
ತಮ್ಮ ಈಶ ಪ್ರತಿಷ್ಠಾನವು ಕಾರ್ಯನಿರ್ವಹಿಸುತ್ತಿರುವ 49 ಗ್ರಾಮಗಳಲ್ಲಿ ಕೊರೋನಾ ಸೋಂಕು ಪ್ರಕರಣಗಳು ವರದಿಯಾಗಲಿಲ್ಲ (ಹೊರಗಿನಿಂದ ಬಂದ ಬೆರಳೆಣಿಕೆಯಷ್ಟುಪ್ರಕರಣಗಳನ್ನು ಹೊರತುಪಡಿಸಿ). ತಜ್ಞರು ಕೂಡ ಇದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆರೋಗ್ಯ, ನೈರ್ಮಲ್ಯ ಹಾಗೂ ರೋಗ ನಿರೋಧಕ ಶಕ್ತಿ ಬಗ್ಗೆ ನಾವು ಆದ್ಯತೆ ನೀಡುತ್ತಿದ್ದೇವೆ. ಎಲ್ಲರೂ ಇದನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.
ನಾವು ಉಸಿರಾಡಿ ಹೊರಗೆ ಬಿಟ್ಟಿದ್ದನ್ನು ಸಸ್ಯಗಳು ಉಸಿರಾಡುತ್ತವೆ. ಅವು ಹೊರಗೆ ಬಿಟ್ಟಿದ್ದನ್ನು ನಾವು ಉಸಿರಾಡುತ್ತೇವೆ. ಇದನ್ನು ನಮ್ಮ ಈಶ ಪ್ರತಿಷ್ಠಾನ ಅರ್ಥ ಮಾಡಿಸಿದ್ದರಿಂದ ಜನ ತಾವಾಗಿಯೇ ಗಿಡಗಳನ್ನು ಬೆಳೆಸುತ್ತಿದ್ದಾರೆ. ಒಟ್ಟಾರೆ ದಕ್ಷಿಣ ಭಾರತದಲ್ಲಿ ಹಸಿರು ಹೊದಿಕೆ ಶೇ.10ರಷ್ಟು ಹೆಚ್ಚಾಗಿದೆ ಎಂದು ಈಶ ಫೌಂಡೇಷನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ