ಕೊರೋನಾ ಸಾವಿಗೆ ಜನರ ನಿರ್ಲಕ್ಷ್ಯವೇ ಕಾರ​ಣ: ಸಚಿವ ಸುಧಾಕರ್‌

By Kannadaprabha NewsFirst Published Jun 12, 2020, 9:09 AM IST
Highlights

ಕೊನೆ ಕ್ಷಣದಲ್ಲಿ ಆಸ್ಪತ್ರೆಗೆ ಬಂದರೆ ಚಿಕಿತ್ಸೆ ಅಸಾಧ್ಯ| ಸೋಂಕು ಲಕ್ಷಣ ಕಂಡರೆ ಕೂಡಲೇ ಫೀವರ್‌ ಕ್ಲಿನಿಕ್‌ಗೆ ಹೋಗಿ| ಬೆಂಗಳೂರಿನಲ್ಲಿ ಕೊರೋನಾ ಶಂಕಿತರು ಹಾಗೂ ಹೊರ ರಾಜ್ಯಗಳಿಂದ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕ್ವಾರಂಟೈನ್‌ ಕೇಂದ್ರಗಳ ಕೊರತೆ| ಕಂಠೀರವ ಕ್ರೀಡಾಂಗಣ ವಶಕ್ಕೆ ಪಡೆದು ಕ್ವಾರಂಟೈನ್‌ ಕೇಂದ್ರವಾಗಿ ಪರಿವರ್ತಿಸಲು ಚಿಂತನೆ|

ಬೆಂಗಳೂರು(ಜೂ.12): ರಾಜ್ಯದಲ್ಲಿ ರೋಗ ತೀವ್ರವಾಗಿ ಉಲ್ಬಣಗೊಂಡ ಬಳಿಕ ಆಸ್ಪತ್ರೆಗೆ ಬರುವ ಪ್ರವೃತ್ತಿ ಹೆಚ್ಚುತ್ತಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾದ ಒಂದು ಗಂಟೆಯೊಳಗೆ ಹಲವು ಸೋಂಕಿತರು ಮೃತಪಟ್ಟಿದ್ದಾರೆ. ಆದ್ದರಿಂದ ಯಾರಿಗಾದರೂ ಕೊರೋನಾ ರೋಗ ಲಕ್ಷಣಗಳು ಕಂಡುಬಂದರೆ ಕೂಡಲೇ ಹತ್ತಿರದ ಜ್ವರ ತಪಾಸಣಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಕರೆ ನೀಡಿದ್ದಾರೆ.

"

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶೀತಜ್ವರ ಲಕ್ಷಣ (ಐಎಲ್‌ಐ) ಹೊಂದಿರುವ ವ್ಯಕ್ತಿಗಳು ಕೂಡಲೇ ಫೀವರ್‌ ಕ್ಲಿನಿಕ್‌ಗೆ ಹೋಗಿ ತಪಾಸಣೆ ಮಾಡಿಕೊಳ್ಳಬೇಕು. ರೋಗ ಉಲ್ಬಣಗೊಂಡ ಬಳಿಕ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಫಲಕಾರಿಯಾಗದಿದ್ದರೆ ಅದು ಇಲಾಖೆಯ ಲೋಪವಲ್ಲ. ಉದಾಸೀನ ಮಾಡಿದರೆ ದೇವರೂ ಕಾಪಾಡುವುದಿಲ್ಲ ಎಂದರು.

'ಜುಲೈ ತಿಂಗಳಲ್ಲಿ ಸೋಂಕು ಭಾರೀ ಸ್ಫೋಟ, ಪರಿಸ್ಥಿತಿ ಎದುರಿಸಲು ಸರ್ಕಾರ ಸರ್ವಸಿದ್ಧ'

ಮುಖ್ಯವಾಗಿ 60 ವರ್ಷ ಮೇಲ್ಪಟ್ಟವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ತಕ್ಷಣ ಮನೆಯಲ್ಲಿರುವ ಯುವಕರು ಜವಾಬ್ದಾರಿ ತೆಗೆದುಕೊಂಡು ಫೀವರ್‌ ಕ್ಲಿನಿಕ್‌ಗೆ ಕರೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಬೆಂಗಳೂರಿನಲ್ಲಿ ಒಟ್ಟು ಕೊರೋನಾ ಪ್ರಕರಣಗಳಲ್ಲಿ ಶೇ.50ರಷ್ಟುಜನರು ಗುಣಮುಖರಾಗಿದ್ದಾರೆ. ಉಳಿದ ಶೇ.50 ಪ್ರಕರಣದಲ್ಲಿ ಶೇ.97 ಮಂದಿಗೆ ರೋಗ ಲಕ್ಷಣಗಳೇ ಇಲ್ಲ. ಉಳಿದ ಶೇ.3ರಷ್ಟುಮಂದಿಗೆ ಮಾತ್ರ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ರೋಗ ಲಕ್ಷಣಗಳಿರುವವರಿಗೆ ಚಿಕಿತ್ಸೆ ಅನಿವಾರ್ಯ. ಹೀಗಾಗಿ ರೋಗ ಲಕ್ಷಣಗಳಿರುವವರು ನಿರ್ಲಕ್ಷ್ಯ ಮಾಡಬಾರದು ಎಂದು ಹೇಳಿದರು.

ರೋಗ ಲಕ್ಷಣ ಪತ್ತೆಗೆ ಬಿಬಿಎಂಪಿ 800 ತಂಡ ರಚನೆ:

ಬೆಂಗಳೂರು ವ್ಯಾಪ್ತಿಯಲ್ಲಿ ರೋಗ ಲಕ್ಷಣ ಹೊಂದಿರುವವರ ಪತ್ತೆಗೆ ಬಿಬಿಎಂಪಿಯಿಂದ 800 ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಮನೆ-ಮನೆಗೆ ಹೋಗಿ ಸಮೀಕ್ಷೆ ನಡೆಸಲಿವೆ. ಸಮೀಕ್ಷೆಗೆ ಸಾರ್ವಜನಿಕರು ಸಹಕರಿಸಿ ರೋಗ ಲಕ್ಷಣಗಳಿರುವವರು ಮುಕ್ತವಾಗಿ ಮಾಹಿತಿ ನೀಡಬೇಕು. ಇದರಿಂದ ತ್ವರಿತವಾಗಿ ಸೋಂಕು ಪತ್ತೆ ಹಚ್ಚಿ ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ನೀಡಲು ನೆರವಾಗಲಿದೆ ಎಂದರು.

ಕಂಟೈನ್‌ಮೆಂಟ್‌ ಪ್ರದೇಶಗಳ ವ್ಯಾಖ್ಯಾನ ಬದಲು:

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಂಟೈನ್‌ಮೆಂಟ್‌ ಪ್ರದೇಶಗಳು ಹೆಚ್ಚಾಗುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಕಂಟೈನ್‌ಮೆಂಟ್‌ ಪ್ರದೇಶಗಳ ವ್ಯಾಖ್ಯಾನ ಬದಲಾಗಿದೆ. ಮೊದಲು ಪೂರ್ಣ ವಾರ್ಡ್‌ಗಳನ್ನು ಅಥವಾ 1 ಕಿ.ಮೀ ವ್ಯಾಪ್ತಿಯ ಸಂಪೂರ್ಣ ಪ್ರದೇಶವನ್ನು ಕಂಟೈನ್‌ಮೆಂಟ್‌ ಆಗಿ ಘೋಷಿಸಲಾಗುತ್ತಿತ್ತು. ಆ ವ್ಯಾಪ್ತಿಯಲ್ಲಿ ಎಷ್ಟುಪ್ರಕರಣ ವರದಿಯಾಗಿದ್ದರೂ ಒಂದೇ ಕಂಟೈನ್‌ಮೆಂಟ್‌ ಪ್ರದೇಶ ಎಂದು ಪರಿಗಣಿಸಲಾಗುತ್ತಿತ್ತು. ಇದೀಗ ಕೇವಲ ಸೋಂಕಿತ ವ್ಯಕ್ತಿಯ ಮನೆಯ ಸುತ್ತಮುತ್ತ ಮಾತ್ರ ಕಂಟೈನ್‌ಮೆಂಟ್‌ ಮಾಡುತ್ತಿದ್ದೇವೆ. ಹೀಗಾಗಿ 1.2 ಕೋಟಿ ಜನಸಂಖ್ಯೆ ಹೊಂದಿರುವ ಬೆಂಗಳೂರಿನಲ್ಲಿ 60 ಕಂಟೈನ್‌ಮೆಂಟ್‌ ಪ್ರದೇಶ ಹೆಚ್ಚೇನೂ ಅಲ್ಲ ಎಂದು ಸ್ಪಷ್ಟಪಡಿಸಿದರು.

ಕಂಠೀರವ ಕ್ರೀಡಾಂಗಣ ಕ್ವಾರಂಟೈನ್‌ಗೆ ಬಳಕೆ

ಬೆಂಗಳೂರಿನಲ್ಲಿ ಕೊರೋನಾ ಶಂಕಿತರು ಹಾಗೂ ಹೊರ ರಾಜ್ಯಗಳಿಂದ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕ್ವಾರಂಟೈನ್‌ ಕೇಂದ್ರಗಳ ಕೊರತೆ ಉಂಟಾಗಿದೆ. ಹೀಗಾಗಿ ಕಂಠೀರವ ಕ್ರೀಡಾಂಗಣವನ್ನು ವಶಕ್ಕೆ ಪಡೆದು ಕ್ವಾರಂಟೈನ್‌ ಕೇಂದ್ರವಾಗಿ ಪರಿವರ್ತಿಸಲು ಚಿಂತಿಸಲಾಗಿದೆ ಎಂದು ಸಚಿವ ಡಾ.ಕೆ. ಸುಧಾಕರ್‌ ಹೇಳಿದರು. ಜೊತೆಗೆ ಅವಕಾಶವಿರುವ ಇತರೆ ದೊಡ್ಡ ಕ್ರೀಡಾಂಗಣ, ನಗರದ ಸಮ್ಮೇಳನ ಕೇಂದ್ರ, ಕಲ್ಯಾಣ ಮಂಟಪಗಳನ್ನೂ ಸಹ ಬಳಸಿಕೊಳ್ಳಲಾಗುವುದು ಎಂದರು.
 

click me!