ಕಿಡ್ನಿಗಾಗಿ 3000 ಮಂದಿಯಿಂದ ಬೇಡಿಕೆ!

By Kannadaprabha NewsFirst Published Mar 12, 2020, 10:04 AM IST
Highlights

ಮೂತ್ರಪಿಂಡ (ಕಿಡ್ನಿ) ವೈಫಲ್ಯದಿಂದ ಬಳಲುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಒಟ್ಟು 3054 ಮಂದಿ ಕಿಡ್ನಿ ಪಡೆಯಲು ನೋಂದಾ​ಯಿ​ಸಿ​ಕೊಂಡಿ​ದ್ದಾರೆ. ಆದರೆ ಕಿಡ್ನಿ ಕೊರತೆ ಕಾಡುತ್ತಿದೆ. 

ಶಂಕರ ಎನ್‌. ಪರಂಗಿ

ಬೆಂಗಳೂರು [ಮಾ.12]:  ರಾಜ್ಯದಲ್ಲಿ ಮೂತ್ರಪಿಂಡ (ಕಿಡ್ನಿ) ವೈಫಲ್ಯದಿಂದ ಬಳಲುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಒಟ್ಟು 3054 ಮಂದಿ ಕಿಡ್ನಿ ಪಡೆಯಲು ನೋಂದಾ​ಯಿ​ಸಿ​ಕೊಂಡಿ​ದ್ದಾರೆ. ಆದರೆ ಅಷ್ಟುಪ್ರಮಾ​ಣ​ದಲ್ಲಿ ಕಿಡ್ನಿ ಲಭ್ಯ​ವಿ​ಲ್ಲದ ಹಿನ್ನೆ​ಲೆ​ಯ​ಲ್ಲಿ ರೋಗಿ​ಗ​ಳು ವರ್ಷ​ವಿಡೀ ಕಾಯು​ವಂತಾ​ಗಿದೆ.

ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಜೀವ ಸಾರ್ಥಕತೆ ಟ್ರಾನ್ಸ್‌ಪ್ಲಾಂಟ್‌ ಅಥಾರಿಟಿ ಆಫ್‌ ಕರ್ನಾಟಕ’ ಕೇಂದ್ರದಲ್ಲಿ ರಾಜ್ಯಾದ್ಯಂತ ಒಟ್ಟು 3614 ಸ್ವಯಂಪ್ರೇರಿತ ದಾನಿಗಳು ಮೂತ್ರಪಿಂಡ ದಾನ ಮಾಡುವುದಾಗಿ ಒಪ್ಪಿ​ದ್ದಾ​ರೆ. ಅಪಘಾತ ಮತ್ತಿತರ ಕಾರಣಗಳಿಂದ ಮೆದುಳಿನ ತೀವ್ರ ಹಾನಿ ಅಥವಾ ನಿಷ್ಕ್ರೀಯಗೊಂಡ ವ್ಯಕ್ತಿಗಳ ಅಂಗಾಂಗಗಳನ್ನು ಕುಟುಂಬಸ್ಥರ ಅನುಮತಿ ಮೇರೆಗೆ ಮೂತ್ರ ಪಿಂಡ ಸೇರಿದಂತೆ 2010 ವಿವಿಧ ಅಂಗಾಂಗ ಪಡೆಯಲಾಗಿದೆ. ಈವರೆಗೆ ಒಟ್ಟು 759 ಕಸಿ ಜೋಡಣೆ ಯಶಸ್ವಿಯಾಗಿದೆ.

‘ಮಾರಕ ಕೊರೋನಾಗೆ ಔಷಧಿ ಇದೆ!’...

ಬೆಂಗಳೂರು, ಮಂಗಳೂರು, ಬೆಳಗಾವಿ, ಧಾರವಾಡ ಸೇರಿ ರಾಜ್ಯಾದ್ಯಂತ 48 ಅಂಗಾಂಗ ಕಸಿ ಆಸ್ಪ​ತ್ರೆ​ಗಳು ಜೀವಸಾರ್ಥತೆಯಲ್ಲಿ ನೋಂದಾಯಿತವಾಗಿದ್ದರೂ ಸಹ ಜಾಗೃತಿ ಕೊರ​ತೆ, ಸ್ವಯಂಪ್ರೇ​ರಿತ ದಾನಿ​ಗಳ ಕೊರ​ತೆಯಿಂದ ಕಿಡ್ನಿ ವೈಫಲ್ಯದಿಂದ ಬಳಲುವಂತಾ​ಗಿ​ದೆ. ಒಬ್ಬ ರೋಗಿ ತನಗೆ ಸರಿ​ಹೊಂದುವ ಅಂಗಾಂಗ ಸಿಗಲು ಸುಮಾ​ರು ನಾಲ್ಕು ವರ್ಷದ ಕಾಯಬೇಕಾ​ದ ಸ್ಥಿತಿ ಇದೆ. ಅದರಲ್ಲೂ ಓ-ಪ್ಲಸ್‌ ಮತ್ತು ಬಿ-ಪ್ಲಸ್‌ ರಕ್ತಗುಂಪಿನ ಜನಸಂಖ್ಯೆಯವ​ರು ಹೆಚ್ಚಿದ್ದಾರೆ ಎಂದು ಜೀವಸಾರ್ಥಕತೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕಿಡ್ನಿ ಸಮ​ಸ್ಯೆಗೆ ಕಾರ​ಣ:

ಹೆಚ್ಚುತ್ತಿರುವ ಜನಸಂಖ್ಯೆ ಬೆನ್ನಲ್ಲೇ ಕಿಡ್ನಿ, ಹೃದಯ ಸಂಬಂಧಿ ಕಾಯಿಲೆಗಳು ಬಳ​ಲು​ವ​ವರ ಸಂಖ್ಯೆಯು ಹೆಚ್ಚು​ತ್ತಿದೆ. ಸಕ್ಕರೆ ಕಾಯಿಲೆ, ಪಾಶ್ಚಾತ್ಯ ಆಹಾರ ಪದ್ಧತಿ ಅನುಕರಣೆ, ಧಾವಂತದ ಬದುಕಿಗೆ ಅಂಟಿಕೊಂಡ ಫಾಸ್ಟ್‌ಫುಡ್‌ ಆಹಾರ ಶೈಲಿ ಕಿಡ್ನಿ ಸಮ​ಸ್ಯೆಗೆ ಮೂಲ ಕಾರಣ. ಫಾಸ್ಟ್‌ಫುಡ್‌ನಲ್ಲಿ ಉಪ್ಪಿನಂಶ ಮತ್ತು ಕ್ಯಾಲೋರಿ ಹೆಚ್ಚಿರಿವುದರಿಂದ ರಕ್ತದೊತ್ತಡ, ತೂಕದಲ್ಲಿ ಏರಿಕೆ ಸಮಸ್ಯೆ ಎದು​ರಾ​ಗು​ತ್ತದೆ. ಅಲ್ಲದೇ ಆಹಾರ ಸಂರಕ್ಷಣೆ ಮೂಲಕ ಸಂಗ್ರಹಿಸಿಡಲಾದ ಆಹಾರ ಸೇವನೆಯು ಕಿಡ್ನಿ ವೈಫಲ್ಯಕ್ಕೆ ಕಾರಣವಾಗಿದೆ. ಪೂರ್ವ​ಜರ ಸಾಂಪ್ರದಾಯಿಕ ಆಹಾರ ಶೈಲಿ ಅಳವಡಿಸಿಕೊಂಡರೆ ಕಿಡ್ನಿ ವೈಫಲ್ಯದಿಂದ ತಪ್ಪಿಸಿ​ಕೊ​ಳ್ಳ​ಬ​ಹು​ದೆಂದು ಮೂತ್ರ​ಪಿಂಡ ತಜ್ಞ ವೈದ್ಯರು ತಿಳಿ​ಸಿದ್ದಾರೆ.

 ವಿಕ್ಟೋರಿಯಾದಲ್ಲಿ 250ಕ್ಕೂ ಹೆಚ್ಚು ಮೂತ್ರಪಿಂಡ ಕಸಿ ಯಶಸ್ವಿ

ವಿಕ್ಟೋರಿಯಾ ಆಸ್ಪತ್ರೆಯ ಐಎನ್‌ಯು (ಇನ್ಸ್‌ಟಿಟ್ಯೂಟ್‌ ನೆಪ್ರೋ ಯೂರಾಲಜಿ) ವಿಭಾಗದಲ್ಲಿ ರಾಜ್ಯದ ವಿವಿಧ ಆಸ್ಪತ್ರೆ ಮೂಲಕ ಒಟ್ಟು 425ಕ್ಕೂ ಅಧಿಕ ಮಂದಿ ಕಿಡ್ನಿ​ಗಾಗಿ ನೋಂದಣಿ ಮಾಡಿಸಿದ್ದಾರೆ. ಆಸ್ಪತ್ರೆಯಿಂದ ವಾರ್ಷಿಕ ಸುಮಾರು 30ಕ್ಕೂ ಅಧಿಕ ಮೂತ್ರಪಿಂಡ ಕಸಿ ಮಾಡಲಾಗುತ್ತಿದೆ. ಈವರೆಗೂ ಅಂದಾಜು 250ಕ್ಕೂ ಅಧಿಕ ಯಶಸ್ವಿ ಮೂತ್ರಪಿಂಡ ಕಸಿ ಮಾಡಲಾಗಿದೆ. ಈ ಯಶಸ್ವಿ ಕಸಿ ಚಿಕಿತ್ಸೆಗೆ ಸಂಬಂಧಿಕರಿಂದ (ಲೈವ್‌ ಕಿಡ್ನಿ ಕಸಿ) ದಾನವಾಗಿ 150ಕ್ಕೂ ಅಧಿಕ ಕಿಡ್ನಿ ದೊರೆತರೆ, ಮೆದುಳು ನಿಷ್ಕ್ರೀಯದಿಂದ (ಕೆಡವರ್‌ ಕಿಡ್ನಿ) 50ಕ್ಕೂ ಅಧಿಕ ಮೂತ್ರಪಿಂಡ ದಾನ​ವಾಗಿ ದೊರೆತಿವೆ.

ಕಿಡ್ನಿಗಾಗಿ ಒಟ್ಟು ನೋಂದಣಿ -3054

ಸ್ವಯಂಪ್ರೇರಿತ ದಾನಿಗಳು - 3614
ಕಿಡ್ನಿ ಸೇರಿ ವಿವಿಧ ಅಂಗಾಂಗ - 2010

ಕಿಡ್ನಿ ಕಸಿ ಯಶಸ್ವಿ ಸಂಖ್ಯೆ- 759.

click me!