ರಾಜ್ಯಾದ್ಯಂತ ಜನಜೀವನ ಶೇ.90ರಷ್ಟು ಅನ್‌ಲಾಕ್ ಆಗಿದೆ. ಆದರೆ, ಕೋವಿಡ್ಗೆ ಮೊದಲಿದ್ದ ವ್ಯಾಪಾರ ವಹಿವಾಟಿಗೆ ಹೋಲಿಸಿದರೆ ಸದ್ಯ ಶೇ.45ರಷ್ಟೇ ಚೇತರಿಕೆ ಕಂಡಿದೆ. ಪ್ರವಾಸೋದ್ಯವನ್ನೇ ನಂಬಿಕೊಂಡಿರುವ ಕೊಡಗು, ಚಿಕ್ಕಮಗಳೂರು, ಮೈಸೂರಿನ ಆರ್ಥಿಕತೆ ಮಾತ್ರ ಸಂಪೂರ್ಣ ನೆಲಕಚ್ಚಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು(ಸೆ.08): ಕೊರೋನಾ ಆತಂಕ ಮುಂದುವರಿದಿರುವ ನಡುವೆಯೇ ರಾಜ್ಯಾದ್ಯಂತ ಜನಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಶಾಲಾ-ಕಾಲೇಜುಗಳು, ಪಾರ್ಕ್‌ಗಳು, ಸಿನಿಮಾ ಮಂದಿರ, ಮನರಂಜನಾ ಕೇಂದ್ರ, ಸಂಪೂರ್ಣ ರೈಲು ಹಾಗೂ ವಿಮಾನ ಸಂಚಾರ ಹೊರತುಪಡಿಸಿ ರಾಜ್ಯಾದ್ಯಂತ ಜನಜೀವನ ಶೇ.90ರಷ್ಟು ಅನ್‌ಲಾಕ್ ಆಗಿದೆ. ಆದರೆ, ಕೋವಿಡ್ಗೆ ಮೊದಲಿದ್ದ ವ್ಯಾಪಾರ ವಹಿವಾಟಿಗೆ ಹೋಲಿಸಿದರೆ ಸದ್ಯ ಶೇ.45ರಷ್ಟೇ ಚೇತರಿಕೆ ಕಂಡಿದೆ. ಪ್ರವಾಸೋದ್ಯವನ್ನೇ ನಂಬಿಕೊಂಡಿರುವ ಕೊಡಗು, ಚಿಕ್ಕಮಗಳೂರು, ಮೈಸೂರಿನ ಆರ್ಥಿಕತೆ ಮಾತ್ರ ಸಂಪೂರ್ಣ ನೆಲಕಚ್ಚಿದೆ.
undefined
ದೇಶಾದ್ಯಂತ ಕೋವಿಡ್ ಆತಂಕ ಕಾಣಿಸಿಕೊಂಡಾಗ ಮಾ.25ರಿಂದ ದೇಶದ ಉಳಿದ ಭಾಗದಂತೆ ರಾಜ್ಯದಲ್ಲೂ ಲಾಕ್ಡೌನ್ ಜಾರಿಗೊಳಿಸಲಾಗಿತ್ತು. ಆ ನಂತರ ಹಂತ ಹಂತವಾಗಿ ಲಾಕ್ಡೌನ್ ಅನ್ನು ತೆರವುಗೊಳಿಸಲಾಗಿದ್ದು, ಸೆಪ್ಟೆಂಬರ್‌ನಿಂದ ಸಾರ್ವಜನಿಕ ಕಾರ್ಯಕ್ರಮಗಳು, ಮೆಟ್ರೋ ರೈಲು, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್ ಸೇರಿ ಅನೇಕ ನಿರ್ಬಂಧಿತ ಕ್ಷೇತ್ರಗಳಿಗೂ ಷರತ್ತು ವಿಧಿಸಿ ಅನುವು ಮಾಡಿಕೊಡಲಾಗಿದೆ.
ಸಾರ್ವಜನಿಕ ಸಾರಿಗೆಯಿಂದ ದೂರ: ಇತ್ತ ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚುತ್ತಲೇ ಇದ್ದರೂ ನಾಲ್ಕೈದು ತಿಂಗಳಿಂದ ಮನೆಯಲ್ಲೇ ಕೂತಿದ್ದ ಜನ ಆಗಸ್ಟ್ ತಿಂಗಳಿಂದೀಚೆಗೆ ಎಂದಿನ ಚಟುವಟಿಕೆಯತ್ತ ಮರಳುತ್ತಿದ್ದಾರೆ. ಹಾಗಂತ ಸಂಪೂರ್ಣವಾಗಿ ಜನ ಕೊರೋನಾ ಪೂರ್ವ ಸ್ಥಿತಿಗೆ ಮರಳಿಲ್ಲ. ಸಾರ್ವಜನಿಕ ಸಾರಿಗೆ ಬಳಸಲು ಈಗಲೂ ಹಿಂದೇಟು ಹಾಕುತ್ತಿದ್ದಾರೆ. ರಾಜ್ಯಾದ್ಯಂತ ಶೇ.45ರಷ್ಟು ಸರ್ಕಾರಿ ಬಸ್, ಸುಮಾರು ಶೇ.40ರಷ್ಟುಖಾಸಗಿ ಬಸ್ಗಳ ಓಡಾಟ ಆರಂಭವಾಗಿದ್ದರೂ ಬಸ್ ಹತ್ತುವ ಮಂದಿ ಶೇ.30 ದಾಟುತ್ತಿಲ್ಲ ಎನ್ನುತ್ತಾರೆ ಸಾರಿಗೆ ಉದ್ಯಮದ ಮಂದಿ.
ಆದರೆ, ಜನರ ಓಡಾಟ ಹೆಚ್ಚುತ್ತಿದ್ದಂತೆ ಆಗಸ್ಟ್‌ಗೂ ಮೊದಲು ಶೇ.30ರ ಆಸುಪಾಸಿನಲ್ಲಿದ್ದ ವಾಣಿಜ್ಯ ವಹಿವಾಟಲ್ಲಿ ದಿಢೀರ್ ಹೆಚ್ಚಳವಾಗಿದೆ. ಕಳೆದೊಂದು ತಿಂಗಳಲ್ಲೇ ಶೇ.20ರಷ್ಟು ವಹಿವಾಟು ಹೆಚ್ಚಳವಾಗಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ವರ್ತಕರು. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ದೀಪಾವಳಿ ಹೊತ್ತಿಗೆ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವ ಆಶಾಭಾವನೆಯನ್ನೂ ಅವರು ವ್ಯಕ್ತಪಡಿಸುತ್ತಿದ್ದಾರೆ.
ಅನ್‌ಲಾಕ್ 4.0 ಗೆ ಕರ್ನಾಟಕ ತೆರೆದುಕೊಂಡ ರೀತಿ
ಹೋಟೆಲ್ ಉದ್ಯಮಕ್ಕೆ ಪೆಟ್ಟು: ಕೊರೋನಾ ಹಿನ್ನೆಲೆಯಲ್ಲಿ ಹೆಚ್ಚು ಪೆಟ್ಟು ತಿಂದ ಕ್ಷೇತ್ರವೆಂದರೆ ಅದು ಹೋಟೆಲ್ ಮತ್ತು ಪ್ರವಾಸೋದ್ಯಮ. ಲಾಕ್ಡೌನ್ ಜಾರಿಯಾದ ಮೊದಲೆರಡು ತಿಂಗಳಲ್ಲಿ ಹೋಟೆಲ್ ಉದ್ಯಮ ಸಂಪೂರ್ಣ ಮಕಾಡೆ ಮಲಗಿತ್ತು. ರಾಜ್ಯಾದ್ಯಂತ ಹಲವು ಸಣ್ಣ, ಮಧ್ಯಮ ಹೋಟೆಲ್ಗಳು ಬಾಗಿಲು ಮುಚ್ಚಿದ್ದೂ ಆಯ್ತು. ಆದರೆ, ಇದೀಗ ಉದ್ಯಮದಲ್ಲಿ ನಿಧಾನಗತಿಯಲ್ಲಿ ಚೇತರಿಕೆ ಕಾಣುತ್ತಿದ್ದು, ಸಣ್ಣ ಹೋಟೆಲ್ಗಳಲ್ಲಿ ಶೇ.30ರಿಂದ 40ರಷ್ಟುವಹಿವಾಟು ನಡೆಯುತ್ತಿದೆ ಎಂದು ಮಾಲೀಕರು ಹೇಳಿಕೊಳ್ಳುತ್ತಾರೆ. ದೊಡ್ಡ ಹೋಟೆಲ್ಗಳು ಸಹಜ ಸ್ಥಿತಿಗೆ ಮರಳಲು ಹಲವು ತಿಂಗಳುಗಳೇ ಬೇಕಾಗಬಹುದು ಎನ್ನುವುದು ಬಹುತೇಕರ ಅಭಿಪ್ರಾಯ.
ಏತನ್ಮಧ್ಯೆ, ಕೋವಿಡ್ನಿಂದಾಗಿ ಕಳೆಗುಂದಿರುವ ಪ್ರವಾಸೋದ್ಯಮ ಮಾತ್ರ ಚೇತರಿಕೆ ಕಾಣಲು ಇನ್ನಷ್ಟುದಿನ ಕಾಯುವುದು ಅನಿವಾರ್ಯ. ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಮೈಸೂರು, ಕೊಡಗು ಮತ್ತು ಚಿಕ್ಕಮಗಳೂರಿನಂಥ ಜಿಲ್ಲೆಗಳಲ್ಲಿ ವ್ಯಾಪಾರ ವಹಿವಾಟಿಗೆ ಭಾರೀ ಹೊಡೆತವೇ ಬಿದ್ದಿದೆ. ಕೊಡಗಿನಲ್ಲೇ ಶೇ. 35ರಷ್ಟುರೆಸಾರ್ಟ್ಗಳು, ಹೋಮ್ ಸ್ಟೇಗಳಷ್ಟೇ ಬಾಗಿಲು ತೆರೆದಿವೆ. ಇವೂ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ. ಸದಾ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಮೈಸೂರಿನ ಅರಮನೆ, ಮೃಗಾಲಯಕ್ಕೆ ಭೇಟಿ ಕೊಡುವವರ ಪ್ರಮಾಣ ಬಹುತೇಕ ಕ್ಷೀಣಿಸಿದೆ. ಕಾಫಿನಾಡು ಚಿಕ್ಕಮಗಳೂರಲ್ಲಿ ಇತ್ತೀಚೆಗೆ ವಾರಾಂತ್ಯದಲ್ಲಷ್ಟೇ ಪ್ರವಾಸಿಗರ ಉಪಸ್ಥಿತಿ ಕಾಣುತ್ತದೆ. ಈ ಜಿಲ್ಲೆಗಳಲ್ಲಿ ವ್ಯಾಪಾರ, ವಹಿವಾಟಿನ ಚೇತರಿಕೆ ಶೇ.45ರೊಳಗೆ ಇದೆ.
ಮಾಲ್ಗಳು ಬಣಬಣ: ಬೆಂಗಳೂರಲ್ಲಿ ಬಹುತೇಕ ಐಟಿ ಕಂಪನಿಗಳು ವರ್ಕ್ ಫ್ರಂ ಹೋಮ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿವೆ. ಹೀಗಾಗಿ ಇಲ್ಲಿ ಹೋಟೆಲ್ ಉದ್ಯಮಕ್ಕೆ ಕೊಂಚ ಜಾಸ್ತಿಯೇ ಏಟು ಬಿದ್ದಿದೆ. ಓಲಾ, ಉಬರ್ನಂಥ ಕ್ಯಾಬ್ ಸೇವೆ ಬಳಸಲು ಜನ ಇನ್ನೂ ಧೈರ್ಯ ತೋರುತ್ತಿಲ್ಲ. ಮಾಲ್ಗಳಲ್ಲೂ ಮೊದಲಿನಷ್ಟುಜನಜಂಗುಳಿ ಇಲ್ಲ.
ಕರಾವಳಿಯಲ್ಲಿ ಆತಂಕ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ ಮೀನುಗಾರಿಕೆ ಉದ್ಯಮಕ್ಕೆ ಪೆಟ್ಟು ಬಿದ್ದಿದೆ. ಮೀನುಮಾರುಕಟ್ಟೆಯಲ್ಲಿ ಮೊದಲಿನಷ್ಟುವ್ಯವಹಾರವಿಲ್ಲ. ಇನ್ನು ಈ ಜಿಲ್ಲೆಗಳಲ್ಲಿ ಶೇ.50ರಷ್ಟುಹೋಟೆಲ್ಗಳ ಬಾಗಿಲು ತೆರೆದಿದ್ದರೂ ಮೊದಲಿನಷ್ಟುಗ್ರಾಹಕರಿಲ್ಲ. ಬಹುತೇಕ ದೇವಸ್ಥಾನಗಳು ಬಾಗಿಲು ಹಾಕಿರುವ ಕಾರಣ ಧಾರ್ಮಿಕ ಪ್ರವಾಸೋದ್ಯಮಕ್ಕೂ ಹೊಡೆತ ಬಿದ್ದಿದೆ. ಬೀಚ್ಗಳೂ ಖಾಲಿಹೊಡೆಯುತ್ತಿವೆ.