
ಬೆಂಗಳೂರು (ಜು.09): ತರಕಾರಿ ಬೆಲೆ ವಿಪರೀತ ಏರಿಕೆಯಿಂದ ಬೀದಿಬದಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೆಚ್ಚಿನ ತರಕಾರಿ ಕೊಂಡು ವ್ಯಾಪಾರ ಮಾಡಲಾಗದೆ ಬಾಡಿಗೆ ಕಟ್ಟಲೂ ಪರದಾಡುತ್ತಿದ್ದಾರೆ. ಟೊಮೆಟೋ, ಬೀನ್ಸ್, ಗಜ್ಜರಿ ಸೇರಿ ಹಲವು ತರಕಾರಿಗಳ ಬೆಲೆ ಗಗನಮುಖಿ ಆಗಿರುವುದು ಗ್ರಾಹಕರಿಗೆ ಮಾತ್ರವಲ್ಲ, ಜೊತೆಗೆ ಸಣ್ಣಪುಟ್ಟವ್ಯಾಪಾರಿಗಳಿಗೂ ತೊಂದರೆ ತಂದಿಟ್ಟಿದೆ. ತಳ್ಳುಗಾಡಿಯಲ್ಲಿ ಮಾರಾಟ ಮಾಡುವವರು, ರಸ್ತೆ ಬದಿಯ ಹಾಗೂ ಸಣ್ಣಪುಟ್ಟಅಂಗಡಿಯಲ್ಲಿ ತರಕಾರಿ ಮಾರುವವರಿಗೆ ನಿರೀಕ್ಷಿತ ವ್ಯಾಪಾರ ಆಗುತ್ತಿಲ್ಲ.
ಸಗಟು ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳದ ಕಾರಣ ಹೆಚ್ಚಿನ ತರಕಾರಿ ಕೊಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ದೈನಂದಿನ ವಹಿವಾಟು ಇಳಿಕೆಯಾಗಿದೆ. ಇನ್ನೊಂದು ಕಡೆ ದುಬಾರಿ ಬೆಲೆ ಕಾರಣ ಗ್ರಾಹಕರು ಕೂಡ ಕಡಿಮೆ ಬೆಲೆ ಇರುವೆಡೆ ಹುಡುಕಿ ಹೋಗುತ್ತಿದ್ದಾರೆ. ಅಲ್ಲದೆ ಕಡಿಮೆ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದಾರೆ. ಸನಿಹದ ಮಾರುಕಟ್ಟೆಕಡೆಗೆ ಹೋಗುತ್ತಿದ್ದಾರೆ. ಇದು ಏರಿಯಾಗಳ ಬೀದಿ ವ್ಯಾಪಾರಸ್ಥರ ವ್ಯಾಪಾರ ಕುಗ್ಗಲು ಕಾರಣವಾಗಿದೆ.
ಕಳೆದು ಹೋದ ಪಾಸ್‌ಪೋರ್ಟ್ ಮತ್ತೆ ಪಡೆಯಲು ಎಫ್‌ಐಆರ್ ಕಾಪಿ ಕಡ್ಡಾಯ: ಹೈಕೋರ್ಟ್
ಬೆಲೆ ಏರಿಕೆಗೂ ಮುನ್ನ ಬಾಕ್ಸ್ ಟೊಮೆಟೋ .600-.800 ದರವಿದ್ದಾಗ ಪ್ರತಿದಿನ ಎರಡು ಬಾಕ್ಸ್ ಟೊಮೆಟೋ ಸಗಟಲ್ಲಿ ಖರೀದಿಸಿ ಮಾರುತ್ತಿದ್ದೆವು. ಈಗ ಒಂದು ಬಾಕ್ಸ್‌ಗೆ .1600 ಕ್ಕಿಂತಲೂ ಹೆಚ್ಚು ಬೆಲೆಯಿದೆ. ಹೀಗಾಗಿ ಬಾಕ್ಸ್‌ವೊಂದನ್ನು ಮಾತ್ರ ತೆಗೆದುಕೊಳ್ಳುತ್ತಿದ್ದೇವೆ. ದಿನದ ಅಂತ್ಯಕ್ಕೆ ಇದು ಕೂಡ ಪೂರ್ತಿಯಾಗಿ ಖರ್ಚಾಗುತ್ತಿಲ್ಲ. ಹೀಗಾಗಿ ನಾವೇ ಖರೀದಿ ಮಾಡುವುದನ್ನು ಕಡಿಮೆ ಮಾಡಬೇಕಾಗಿದೆ ಎಂದು ರಾಜಗೋಪಾಲ ನಗರ ಮಾರ್ಕೆಟ್‌ನ ವ್ಯಾಪಾರಸ್ಥೆ ಪುಷ್ಪಲತಾ ಬೇಸರ ವ್ಯಕ್ತಪಡಿಸಿದರು.
ವ್ಯಾಪಾರ ಗಣನೀಯವಾಗಿ ಕಡಿಮೆಯಾಗಿದೆ. ಚಿಕ್ಕ ಮಳಿಗೆಯವರು ತಿಂಗಳ ಬಾಡಿಗೆ ಕಟ್ಟಲಾಗದ ಸ್ಥಿತಿಗೆ ಬಂದಿದ್ದೇವೆ. ತರಕಾರಿ ಮಾರಿ ಬದುಕು ನಡೆಸುವುದು ಕಷ್ಟವಾಗಿದೆ ಎಂದು ಕೆ.ಆರ್.ಪುರ ಮಾರುಕಟ್ಟೆಯ ವ್ಯಾಪಾರಿ ಸಿ.ವಿ.ಶಂಕ್ರಪ್ಪ ಹೇಳಿದರು. ಬೆಂಗಳೂರು ನಗರದಲ್ಲಿ ಸುಮಾರು 1.50 ಲಕ್ಷಕ್ಕೂ ಅಧಿಕ ಬೀದಿ ವ್ಯಾಪಾರಿಗಳಿದ್ದಾರೆ. ಇದರಲ್ಲಿ ಶೇ.65ರಷ್ಟುತರಕಾರಿ ವ್ಯಾಪಾರಸ್ಥರೇ ಇದ್ದಾರೆ. 2018ರಲ್ಲಿ ಸರ್ವೇ ನಡೆದ ಸಂದರ್ಭದಲ್ಲಿ 63 ಸಾವಿರ ಬೀದಿ ವ್ಯಾಪಾರಸ್ಥರ ನೋಂದಣಿ ಆಗಿದ್ದು ಅದರಲ್ಲಿ 26 ಸಾವಿರ ವ್ಯಾಪಾರಿಗಳು ಮಾತ್ರ ಗುರುತಿನ ಚೀಟಿ ಹೊಂದಿದ್ದಾರೆ. ಐದು ವರ್ಷಗಳಲ್ಲಿ ಈ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.
ಬ್ರ್ಯಾಂಡ್ ಬೆಂಗಳೂರಿಗೆ ಹರಿಯಲಿದೆ ಹಣ: ಬಿಬಿಎಂಪಿಗೆ 4093 ಕೋಟಿ ಅನುದಾನ
ಬೆಲೆ ಏರಿಕೆಯಿಂದ ಬೀದಿಬದಿ ವ್ಯಾಪಾರಸ್ಥರಿಗೆ ಕಷ್ಟವಾಗಿದೆ. ನಗರಾಭಿವೃದ್ಧಿ ಇಲಾಖೆಯಡಿ ಬೀದಿಬದಿ ವ್ಯಾಪಾರಸ್ಥರನ್ನು ತಂದು ಸಹಾಯಧನ ಸೇರಿ ಒಂದಿಷ್ಟುನೆರವಾಗುವಂತೆ ಸರ್ಕಾರವನ್ನು ಕೇಳಲು ನಿರ್ಧರಿಸಿದ್ದೇವೆ. ಜೊತೆಗೆ ಸರ್ವೆ ನಡೆಸಿ ವ್ಯಾಪಾರಿಗಳನ್ನು ಗುರುತಿಸಿ ಗುರುತಿನ ಚೀಟಿ ನೀಡಲು ಕೋರಲಿದ್ದೇವೆ.
-ಡಾ.ಸಿ.ಇ.ರಂಗಸ್ವಾಮಿ, ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ