
ಬೆಂಗಳೂರು[ಜ.06]: ‘ಪತ್ನಿಯು ಪತಿಯನ್ನು ಬಿಟ್ಟು ತವರು ಮನೆಯಲ್ಲಿಯೇ ಹಲವು ವರ್ಷ ನೆಲೆಸುವುದು ಕ್ರೌರ್ಯ ಮತ್ತು ಪರಿತ್ಯಾಗವಾಗಲಿದ್ದು, ವಿವಾಹ ವಿಚ್ಛೇದನ ಪಡೆಯಲು ಪತಿ ಅರ್ಹನಾಗುತ್ತಾನೆ’ ಎಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ತವರು ಮನೆಗೆ ಹೋದ ಮಹಿಳೆಯು 12 ವರ್ಷ ಕಳೆದರೂ ಪತಿಯ ಮನೆಗೆ ಮರಳಿ ಬಾರದ ಪ್ರಕರಣದಲ್ಲಿ ಹೈಕೋರ್ಟ್ ಈ ತೀರ್ಪು ನೀಡಿದೆ. ಅಲ್ಲದೆ, ಪತಿಯ ಜೊತೆಗೂಡಿ ವೈವಾಹಿಕ ಜೀವನ ಮುಂದುವರಿಸಲು ಪತ್ನಿಯು ಕೊಂಚ ಆಸಕ್ತಿ ಹಾಗೂ ಪ್ರಯತ್ನ ತೋರದ ಹಿನ್ನೆಲೆಯಲ್ಲಿ ದಂಪತಿಯ ವಿವಾಹ ಅನೂರ್ಜಿತಗೊಳಿಸಿ ವಿಚ್ಛೇದನ ಮಂಜೂರು ಮಾಡಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಇದೇ ವೇಳೆ ಪುರಸ್ಕರಿಸಿದೆ.
ಬಾಗಲಕೋಟೆ ಜಿಲ್ಲೆಯ ಉಷಾ ಮತ್ತು ರಾಮಪ್ಪ (ಇಬ್ಬರ ಹೆಸರು ಬದಲಿಸಲಾಗಿದೆ) 2002ರಲ್ಲಿ ಮದುವೆಯಾಗಿದ್ದರು. ದಂಪತಿಗೆ ಗಂಡು ಮಗುವಿದ್ದು, ಕೆಲ ವರ್ಷ ದಾಂಪತ್ಯ ಜೀವನ ಸುಖಮಯವಾಗಿಯೇ ಇತ್ತು. ಆದರೆ, 2007ರಲ್ಲಿ ಪತಿಗೆ ಯಾವುದೇ ಮಾಹೀತಿ ನೀಡದೆ ತವರು ಮನೆಗೆ ಹೋಗಿದ್ದ ಉಷಾ, ಮರಳಿ ಗಂಡನ ಮನೆಗೆ ಬಂದಿರಲಿಲ್ಲ. ಇದರಿಂದ ವಿಚ್ಛೇದನ ಕೋರಿ 2010ರಲ್ಲಿ ರಾಮಪ್ಪ ಸಲ್ಲಿಸಿದ್ದ ಅರ್ಜಿಯನ್ನು ಬೀಳಗಿ ಕೌಟುಂಬಿಕ ನ್ಯಾಯಾಲಯ ಪುರಸ್ಕರಿಸಿತ್ತು. ಪತ್ನಿ ಕ್ರೌರ್ಯ ಹಾಗೂ ಪರಿತ್ಯಾಗ ಮಾಡಿದ್ದಾರೆ ಎಂದು ತಿಳಿಸಿ ವಿಚ್ಛೇದನ ಮಂಜೂರು ಮಾಡಿ 2013ರ ನ.30ರಂದು ಆದೇಶಿಸಿತ್ತು. ಆ ಆದೇಶ ರದ್ದತಿಗೆ ಕೋರಿ ಉಷಾ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
'ನನ್ನ ಜುಟ್ಟು ಹಿಡಿದು ಮನೆಯಿಂದ ಹೊರದಬ್ಬಿದ್ರು' ಅತ್ತೆ ಮೇಲೆ ಐಶ್ವರ್ಯಾ ರೈ ಆರೋಪ
ಪ್ರಕರಣದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಹೈಕೋರ್ಟ್, ಉಷಾ ಹಲವು ವರ್ಷಗಳಿಂದ ತವರು ಮನೆಯಲ್ಲಿ ಜೀವನ ನಡೆಸುವ ಮೂಲಕ ಪತಿಯನ್ನು ಪರಿತ್ಯಜಿಸಿದ್ದಾರೆ. ಗಂಡನ ಮನೆಗೆ ಹಿಂದಿರುಗಲಿಲ್ಲ. ಪತಿಯ ಜೊತೆಗೂಡಿ ದಾಂಪತ್ಯ ನಡೆಸಲು ಆಸಕ್ತಿಯನ್ನೇ ತೋರಿಲ್ಲ. ಆ ನಿಟ್ಟಿನಲ್ಲಿ ಪ್ರಯತ್ನವನ್ನೂ ನಡೆಸಿಲ್ಲ. ಸಾಲದೆ 2007ರಲ್ಲಿ ಜೀವನಾಂಶ, ನಂತರ ಆಸ್ತಿಯಲ್ಲಿ ಪಾಲು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಎರಡೂ ಅರ್ಜಿಗಳಲ್ಲಿಯೂ ಅವರ ಪರವಾಗಿಯೇ ಆದೇಶ ಬಂದಿದೆ ಎಂದು ಅಭಿಪ್ರಾಯಪಟ್ಟಿತು.
ಅಲ್ಲದೆ, ವೈವಾಹಿಕ ಹಕ್ಕುಗಳ ಮರು ಸ್ಥಾಪನೆಗೆ ಕೋರಿ ರಾಮಪ್ಪ ಅರ್ಜಿ ಸಲ್ಲಿಸಿದಾಗ ಗಂಡನ ಮನೆಗೆ ಮರಳುವುದಾಗಿ ಉಷಾ ಹೇಳಿದ್ದರು. ಆ ನಂಬಿಕೆಯಿಂದ ರಾಮಪ್ಪ ಅರ್ಜಿ ಹಿಂಪಡೆದಿದ್ದರು. ಆದರೆ ನಂತರ ಪತ್ನಿ ವರಸೆ ಬದಲಿಸಿದರು. ಗಂಡನ ಜೊತೆಗೆ ಜೀವನ ಸಾಗಿಸುವ ಆಸಕ್ತಿ ಹೊಂದಿರುವ ಬಗ್ಗೆ ಎಲ್ಲಿಯೂ ಲಿಖಿತ ಹಾಗೂ ಮೌಖಿಕವಾಗಿ ಹೇಳಿಲ್ಲ. ಆ ಕುರಿತ ಯಾವುದೇ ದಾಖಲೆಯನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ. ಹಿತೈಷಿಗಳು ಹಾಗೂ ಕುಟುಂಬದ ಹಿರಿಯರ ಹಿತವಚನಗಳ ಹೊರತಾಗಿಯೂ ಆಕೆ ಗಂಡನ ಮನೆಗೆ ವಾಪಸಾಗಲಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಪತ್ನಿಯ ವಾದಕ್ಕಿಲ್ಲ ಮನ್ನಣೆ
ನನ್ನಿಂದ ಪತಿ ಯಾವುದೇ ರೀತಿಯ ಕ್ರೌರ್ಯ ಅನುಭವಿಸಿಲ್ಲ. ನಾನು ಕ್ರೌರ್ಯ ಎಸಗಿರುವುದಕ್ಕೆ ಹಾಗೂ ಪತಿಯನ್ನು ಪರಿತ್ಯಜಿಸಿರುವುದಕ್ಕೆ ದಾಖಲೆ ಇಲ್ಲ. ಆದರೂ ಅಧೀನ ನಾಯಾಲಯವು ವಿಚ್ಛೇದನ ಮಂಜೂರು ಮಾಡಿರುವುದು ತಪ್ಪು. ಪತಿಯ ಜತೆಗೆ ಸೇರಲು ಹಾಗೂ ವೈವಾಹಿಕ ಜೀವನ ಮುಂದುವರಿಸಲು ನಾನು ಸಿದ್ಧವಾಗಿದ್ದೆ. ಅದನ್ನು ಪತಿಯೇ ತಪ್ಪಿಸಿದರು. ಆದ್ದರಿಂದ ವಿಚ್ಛೇದನ ಮಂಜೂರಾತಿ ಆದೇಶ ರದ್ದುಪಡಿಸಬೇಕು ಎಂದು ಉಷಾ ವಾದ ಮಂಡಿಸಿದ್ದರು. ಆಕೆಯ ಎಲ್ಲಾ ವಾದವನ್ನು ಅಲ್ಲಗಳೆದ ರಾಮಪ್ಪ ವಿಚ್ಛೇದನ ಮಂಜೂರಾತಿ ಆದೇಶ ಸೂಕ್ತವಾಗಿದೆ ಎಂದು ಪ್ರತಿಪಾದಿಸಿದ್ದರು.
82 ರ ಪತಿ, 80 ವರ್ಷದ ಪತ್ನಿ ಗೆ ಕಡೆಗೂ ಡೈವೋರ್ಸ್!
ಪತಿಯ ಜೊತೆಗೆ ವಾಸಿಸಲು ಸಿದ್ಧವಾಗಿದ್ದೆ ಎಂಬುದಾಗಿ ಉಷಾ ಹೇಳಿದ್ದಾರೆ. ಅದಕ್ಕೆ ಸಾಕಷ್ಟುಅವಕಾಶವು ಪ್ರಕರಣ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದಾಗಲೇ ಇತ್ತು. 2013ರಲ್ಲೇ ವಿವಾಹ ವಿಚ್ಛೇದನದ ಆದೇಶ ಪ್ರಕಟಗೊಂಡರೂ ಈವರೆಗೂ ಪತಿಯ ಜೊತೆಗೆ ಜೀವಿಸಲು ಆಸಕ್ತಿ ತೋರಿಲ್ಲ. ಇದು 2019ನೇ ವರ್ಷ. ನಿಜವಾಗಿಯೂ ಪತಿಯೊಂದಿಗೆ ಬದುಕಲು ಆಸಕ್ತಿ ಇದ್ದಿದ್ದರೆ ಅಧೀನ ನ್ಯಾಯಾಲಯ ಹಾಗೂ ಹೈಕೋರ್ಟ್ ದಂಪತಿಯನ್ನು ಒಂದುಗೂಡಿಸಲು ಪ್ರಯತ್ನ ನಡೆಸುತ್ತಿತ್ತು. ಆದರೆ, ಪತಿಯ ಮನೆಗೆ ಬಾರದ ಉಷಾ ನಡವಳಿಕೆ ಮದುವೆ ವಿಫಲವಾಗಿರುವುದನ್ನು ತೋರಿಸುತ್ತದೆ. ಸುಮಾರು ಒಂದೂವರೆ ದಶಕದಿಂದಲೂ ತವರು ಮನೆಯಲ್ಲಿಯೇ ಉಳಿದು ಪ್ರತ್ಯೇಕವಾಗಿ ಜೀವನ ನಡೆಸುತ್ತಿರುವುದು ಕ್ರೌರ್ಯ ಮತ್ತು ಪರಿತ್ಯಾಗವಾಗಲಿದೆ. ಆದ್ದರಿಂದ ವಿಚ್ಛೇದನ ಆದೇಶ ಸೂಕ್ತವಾಗಿದೆ. ಅದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯತೆ ಕಂಡು ಬಂದಿಲ್ಲ ಎಂದು ಆದೇಶಿಸಿದ ಹೈಕೋರ್ಟ್, ಉಷಾ ಅವರ ಮೇಲ್ಮನವಿ ವಜಾಗೊಳಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ