
ಬೆಂಗಳೂರು (ನ. 25): ರಾಜ್ಯ ಉನ್ನತ ಶಿಕ್ಷಣ ಇಲಾಖೆಯು ಐ-ಕೇರ್ ಎಂಬ ಖಾಸಗಿ ಸಂಸ್ಥೆಯ ಸಹಯೋಗದಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳಿಗೆ ನೀಡುತ್ತಿರುವ ‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ರೇಟಿಂಗ್ ಫ್ರೇಂ ವರ್ಕ್’ (ಕೆ-ಎಸ್‌ಯುಆರ್‌ಎಫ್) ಈಗ ಶಿಕ್ಷಣ ತಜ್ಞರು ಹಾಗೂ ಉಪನ್ಯಾಸಕ ವೃಂದದಿಂದ ತೀವ್ರ ಆಕ್ಷೇಪಕ್ಕೆ ಗುರಿಯಾಗಿದೆ.
ಮೂಲ ಸೌಕರ್ಯ ಹಾಗೂ ಸಿಬ್ಬಂದಿ ನೇಮಕ ಸೇರಿ ಹಲವು ಯೋಜನೆಗಳಿಗೆ ಹಣಕಾಸು ತೊಂದರೆ ಅನುಭವಿಸುತ್ತಿರುವ ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಿಂದ ಲಕ್ಷಾಂತರ ರು. ವಸೂಲಿ ಮಾಡಿ ಖಾಸಗಿ ವಿಶ್ವವಿದ್ಯಾಲಯಗಳಿಗೆ ರ್ಯಾಂಕ್ ನೀಡುತ್ತಿರುವುದು ಈ ಆಕ್ಷೇಪಕ್ಕೆ ಮೂಲ ಕಾರಣ.
105ನೇ ವಯಸ್ಸಲ್ಲಿ 4ನೇ ತರಗತಿ ಪರೀಕ್ಷೆ ಬರೆದ ಕೇರಳದ ಅಜ್ಜಿ!
ಚೆನ್ನೈ ಮೂಲದ ಐ-ಕೇರ್ ಸಂಸ್ಥೆ ಸಹಯೋಗದಲ್ಲಿ ಉನ್ನತ ಶಿಕ್ಷಣ ಪರಿಷತ್ತು ರಾಜ್ಯದ ವಿವಿಗಳಿಗೆ ರ್ಯಾಂಕ್ ನೀಡುತ್ತಿದೆ. ರಾರಯಂಕಿಂಗ್‌ನ ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸುವುದಕ್ಕಾಗಿಯೇ ಲಕ್ಷಾಂತರ ರು.ಗಳ ದುಬಾರಿ ಶುಲ್ಕ ನಿಗದಿ ಮಾಡಿದೆ. ರಾಜ್ಯದ ಸರ್ಕಾರಿ ವಿವಿಗಳಿಗೆ 1.5 ಲಕ್ಷ ರು., ಖಾಸಗಿ ಮತ್ತು ಡೀಮ್ಡ್ ವಿವಿಗಳಿಗೆ 2.5 ಲಕ್ಷ ರು. ಶುಲ್ಕ ನಿಗದಿ ಮಾಡಿದೆ.
ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳು ಕೊಠಡಿ, ಶೌಚಾಲಯ, ಗ್ರಂಥಾಲಯ, ಡಿಜಿಟಲ್ ಮೌಲ್ಯಮಾಪನ ಸೇರಿದಂತೆ ಹತ್ತಾರು ಯೋಜನೆಗಳಿಗೆ ವಿನಿಯೋಗ ಮಾಡುವುದಕ್ಕೆ ಅನುದಾನವಿಲ್ಲದೆ ಒದ್ದಾಡುತ್ತಿವೆ. ಇಂತಹ ಸಮಯದಲ್ಲಿ ಉನ್ನತ ಶಿಕ್ಷಣ ಇಲಾಖೆಯು ರ್ಯಾಂಕ್ ನೀಡುವುದಕ್ಕಾಗಿ 1.5 ಲಕ್ಷ ರು. ಕೇಳಿದರೆ ಎಲ್ಲಿಂದ ಹಣ ತರಬೇಕು? ಅಲ್ಲದೆ, ರಾಷ್ಟ್ರೀಯ ಮೌಲ್ಯಾಂಕ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ರಾರಯಂಕ್ ನೀಡುತ್ತಿದೆ. ಖಾಸಗಿ ಸಂಸ್ಥೆ ಜತೆ ಸೇರಿ ರ್ಯಾಂಕ್ ನೀಡುವ ಅನಿವಾರ್ಯತೆ ಏನಿದೆ ಎಂಬ ಪ್ರಶ್ನೆ ಉದ್ಭವಿಸಿದೆ.
ಮರಗಳಿಗೂ QR ಕೋಡ್! ಕಾಲೇಜಿನ ಐಡಿಯಾಗೆ ವಿದ್ಯಾರ್ಥಿಗಳು ಬೌಲ್ಡ್
ಆದರೆ, ಐ-ಕೇರ್ ಸಂಸ್ಥೆಗೆ ರ್ಯಾಂಕ್ ನೀಡಲು ಅವಕಾಶ ನೀಡಿರುವುದನ್ನು ಸಮರ್ಥಿಸಿಕೊಳ್ಳುವ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯಕಾರಿ ನಿರ್ದೇಶಕ, ಡಾ.ಎಸ್.ಎ. ಕೋರಿ ಅವರು, ನ್ಯಾಕ್ ರ್ಯಾಂಕ್ ಪಡೆಯುವುದಕ್ಕೆ ವಿವಿಗಳನ್ನು ಸ್ಪರ್ಧಾತ್ಮಕಗೊಳಿಸಲು ಈ ರ್ಯಾಂಕಿಂಗ್ ವ್ಯವಸ್ಥೆ ಸಹಕಾರಿಯಾಗಲಿದೆ ಎಂದು ಹೇಳುತ್ತಾರೆ.
ಶಿಕ್ಷಣ ಪರಿಷತ್ತೇ ಇದನ್ನು ಮಾಡಬಹುದಲ್ಲ:
ಉತ್ಕೃಷ್ಟಸಂಶೋಧನೆ, ಆವಿಷ್ಕಾರ, ಬೋಧನೆ ಗುಣಮಟ್ಟ, ಉದ್ಯೋಗಾವಕಾಶಗಳು, ಮೂಲ ಸೌಕರ್ಯಗಳು ಮತ್ತು ಸಾಮಾಜಿಕ ಪರಿಣಾಮಗಳನ್ನು ಒಳಗೊಂಡ ಐದು ಮಾನದಂಡಗಳು ಹಾಗೂ 25ಕ್ಕೂ ಹೆಚ್ಚಿನ ಸೂಚ್ಯಂಕಗಳನ್ನು ಪರಿಗಣಿಸಿ ರ್ಯಾಂಕ್ ನೀಡಲಾಗಿದೆ ಎಂದು ಐ-ಕೇರ್ ಸಂಸ್ಥೆಯು ಸಮರ್ಥಿಸಿಕೊಳ್ಳುತ್ತದೆ. ಆದರೆ, ರಾಜ್ಯದ ವಿ.ವಿ.ಗಳಿಂದ ಹಣ ಸಂಗ್ರಹಿಸಿ ಖಾಸಗಿ ಸಂಸ್ಥೆಗೆ ನೀಡುವ ಅಗತ್ಯವೇನು? ಶಿಕ್ಷಣ ಪರಿಷತ್ತೇ ಇಂತಹದ್ದೊಂದು ವ್ಯವಸ್ಥೆಯನ್ನು ಮಾಡಬಹುದಲ್ಲವೇ ಎಂದು ಪ್ರಶ್ನಿಸಲಾಗುತ್ತಿದೆ.
ಖಾಸಗಿ ವಿವಿಗಳಿಗೆ ಮಣೆ:
ಈ ರ್ಯಾಂಕಿಂಗ್‌ಗಾಗಿ ಹೊಸ ವಿಶ್ವವಿದ್ಯಾಲಯ ಆರಂಭವಾದ 0-5 ವರ್ಷ, ಯುವ ವಿಶ್ವವಿದ್ಯಾಲಯ 5-10 ವರ್ಷ, ಸಂಸ್ಥಾಪಿತ ವಿಶ್ವವಿದ್ಯಾಲಯ (10ಕ್ಕಿಂತ ಹೆಚ್ಚಿನ ವರ್ಷ) ಮತ್ತು ವಿಶಿಷ್ಟವಿಶ್ವವಿದ್ಯಾಲಯ ಎಂಬ ನಾಲ್ಕು ವಿಭಾಗಗಳನ್ನು ಮಾಡಲಾಗಿದೆ. ಇದರಡಿ ರ್ಯಾಂಕಿಂಗ್ ನೀಡುವ ಪದ್ಧತಿ ಪಾರದರ್ಶಕವಾಗಿಲ್ಲ ಎಂದೂ ಆರೋಪಿಸಲಾಗುತ್ತಿದೆ. ಐ-ಕೇರ್ ನೀಡಿರುವ ರ್ಯಾಂಕಿಂಗ್ ಪಟ್ಟಿಯನ್ನೇ ಬಂಡವಾಳ ಮಾಡಿಕೊಳ್ಳುವ ಖಾಸಗಿ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಂದ ದುಬಾರಿ ಶುಲ್ಕ ವಸೂಲಿಗೆ ಇಳಿಯಬಹುದು. ಇದು ಅಂತಿಮವಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಹೊರೆಯಾಗಲಿದೆ ಎಂದು ಶಿಕ್ಷಣ ತಜ್ಞರ ಆರೋಪ.
ವಿವಿಗಳಿಗೆ ರ್ಯಾಂಕ್ ನೀಡುವುದಕ್ಕಾಗಿಯೇ ನ್ಯಾಕ್ ಇದೆ. ಇದರಲ್ಲಿ ಖಾಸಗಿ ವಿವಿಗಳಿಗೆ ಉನ್ನತ ಶ್ರೇಣಿಯ ರ್ಯಾಂಕ್‌ಗಳು ಬರುತ್ತಿಲ್ಲ. ಹೀಗಾಗಿ ರ್ಯಾಂಕ್ ಪಡೆಯುವುದಕ್ಕಾಗಿಯೇ ಅವೈಜ್ಞಾನಿಕ ಕ್ರಮ ಅನುಸರಿಸಲಾಗುತ್ತಿದೆ. ಶೈಕ್ಷಣಿಕ ದೃಷ್ಟಿಯಿಂದ ಈ ರೀತಿಯ ಬೆಳವಣಿಗೆ ಒಳಿತಲ್ಲ. ವಿವಿಗಳಿಗೆ ರ್ಯಾಂಕ್ ನೀಡುವುದಕ್ಕಾಗಿಯೇ ನ್ಯಾಕ್ ಇರುವಾಗ ಐ-ಕೇರ್ ಸಂಸ್ಥೆ ಅವಶ್ಯಕತೆ ಏನಿದೆ?
- ಡಾ.ಎಂ.ಎಸ್. ತಿಮ್ಮಪ್ಪ, ವಿಶ್ರಾಂತ ಕುಲಪತಿ
ರಾಜ್ಯ ಮಟ್ಟದಲ್ಲಿ ವಿವಿಗಳಿಗೆ ರಾರಯಂಕ್ ನೀಡುವುದರಿಂದ ಈ ವಿವಿಗಳಲ್ಲಿ ಸ್ಪರ್ಧೆ ಹುಟ್ಟುಹಾಕಿ, ಮುಂದೆ ನ್ಯಾಕ್ ರಾರಯಂಕ್ ಪಡೆಯಲು ಹಾಗೂ ವಿವಿಗಳ ಗುಣಮಟ್ಟಕಾಪಾಡಿಕೊಳ್ಳಲು ಸಹಾಯಕವಾಗಲಿದೆ ಎಂಬ ಉದ್ದೇಶದಿಂದ ಖಾಸಗಿ ಸಂಸ್ಥೆಗೆ ಈ ಅವಕಾಶ ನೀಡಲಾಗಿದೆ.
- ಡಾ.ಎಸ್.ಎ. ಕೋರಿ, ಕಾರ್ಯಕಾರಿ ನಿರ್ದೇಶಕ, ಉನ್ನತ ಶಿಕ್ಷಣ ಪರಿಷತ್ತು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ