ಆ ಜಗಳವನ್ನು ಎಂದೂ ಮರೆಯಲಾರೆ, ದೊರೆಸ್ವಾಮಿ ಸಿಟ್ಟಿಗೆ ಭಯಪಟ್ಟಿದ್ದೆ: ಸಿದ್ದರಾಮಯ್ಯ

By Kannadaprabha NewsFirst Published May 27, 2021, 10:01 AM IST
Highlights

* ಹಟಮಾರಿ ಹಿರಿಯನಂತೆ ಕಂಡರೂ ಮೃದು ಸ್ವಭಾವ

* ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ನನ್ನ ಜತೆ ದೊರೆಸ್ವಾಮಿ ಜಗಳ, ಆ ಜಗಳವನ್ನು ಎಂದೂ ಮರೆಯಲಾರೆ

* ಅವರ ಪ್ರಾಮಾಣಿಕ ಸಿಟ್ಟಿಗೆ ನಾನು ಭಯಪಟ್ಟಿದ್ದೆ, 

* ಬೇಡಿಕೆ ಇರಿಸಿ ಅದಕ್ಕೆ ಅವರೇ ಪರಿಹಾರ ಸೂಚಿಸುತ್ತಿದ್ದರು

* ನಮ್ಮ ಜನಪರ ಯೋಜನೆ ಹಿಂದೆ ಬಂಡೆಗಲ್ಲಿನಂತೆ ನಿಂತಿದ್ದರು

* ನನಗೀಗ ಮನೆಯ ಹಿರಿಯನನ್ನು ಕಳೆದುಕೊಂಡ ದುಃಖ

ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕರು

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಸಾವಿನಿಂದ ಆವರಿಸಿರುವ ಕತ್ತಲನ್ನು ಸಾವಿರ ಸೂರ್ಯೋದಯಗಳಿಂದಲೂ ದೂರ ಮಾಡಲು ಸಾಧ್ಯವಾಗಲಾರದು. ಅವರು ಅಂತಹದ್ದೊಂದು ಬೆಳಕಿನ ಪುಂಜವಾಗಿದ್ದರು. ಕೊನೆ ಉಸಿರಿನವರೆಗೆ ಹೋರಾಟದ ಬದುಕಿನಿಂದ ನಿವೃತ್ತರಾಗದೇ ಸಕ್ರಿಯರಾಗಿದ್ದ ದೊರೆಸ್ವಾಮಿ ಅವರ ದೇಶಪ್ರೇಮದ ಬದ್ಧತೆ, ಪ್ರಾಮಾಣಿಕತೆ ಹೋರಾಟದ ಛಲ, ಶಿಸ್ತುಬದ್ಧ ಜೀವನ, ಆರೋಗ್ಯದ ಬಗೆಗಿನ ಕಾಳಜಿ ಎಲ್ಲವೂ ಎಲ್ಲರಿಗೂ ಆದರ್ಶವಾದುದು.

ನನ್ನ ಮತ್ತು ಅವರ ಸಂಬಂಧ ಕೇವಲ ಒಬ್ಬ ರಾಜಕಾರಣಿ ಮತ್ತು ಹೋರಾಟಗಾರನದ್ದಾಗಿರಲಿಲ್ಲ. ತಪ್ಪು ಕಂಡಾಗ ಮುಲಾಜಿಲ್ಲದೆ ಎಚ್ಚರಿಸುತ್ತಿದ್ದರು. ಸರಿ ಕಂಡಾಗ ನನ್ನ ನಿಲುವಿನ ಪರವಾಗಿ ಬಂಡೆಗಲ್ಲಿನಂತೆ ನಿಂತು ಬೆಂಬಲಿಸುತ್ತಿದ್ದರು. ಈಗ ವೈಯಕ್ತಿಕವಾಗಿ ನಾನು ಮನೆ ಹಿರಿಯನನ್ನು ಕಳೆದುಕೊಂಡ ದುಃಖದಲ್ಲಿದ್ದೇನೆ.

ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಪಂಚಭೂತಗಳಲ್ಲಿ ಲೀನ

ಅವರು ಬ್ರಿಟಿಷರ ವಿರುದ್ಧ ಪ್ರಾಣವನ್ನು ಒತ್ತೆ ಇಟ್ಟು ಹೋರಾಡಿದ ವೀರ ಸೇನಾನಿಯಾಗಿದ್ದರು. ದೇಶಕ್ಕೆ ಸ್ವಾತಂತ್ರ್ಯಸಿಕ್ಕ ನಂತರ ಆ ಹೋರಾಟವನ್ನೇ ಬಂಡವಾಳ ಮಾಡಿಕೊಂಡು ಬಹಳ ಸುಲಭದಲ್ಲಿ ರಾಜಕೀಯ ಪ್ರವೇಶ ಮಾಡಿ ಶಾಸಕ, ಸಂಸದ, ಸಚಿವರಾಗಿಬಿಡಬಹುದಿತ್ತು. ಚುನಾವಣಾ ರಾಜಕೀಯದಿಂದ ಬಹುಬೇಗ ದೂರ ಸರಿದ ದೊರೆಸ್ವಾಮಿಯವರು ಸ್ವತಂತ್ರ ಭಾರತದಲ್ಲಿ ವಿರಮಿಸದೇ ತಮ್ಮ ಹೋರಾಟವನ್ನು ಮುಂದುವರಿಸಿದ್ದರು.

ದೇಶದ ಯಾವುದೇ ಮೂಲೆಯಲ್ಲಿ ಅನ್ಯಾಯ-ಅಕ್ರಮ ನಡೆದರೂ ಹೋರಾಟದ ಕಣಕ್ಕಿಳಿಯುತ್ತಿದ್ದರು. ನಾನು ಸಚಿವನಾಗಿದ್ದಾಗ, ಮುಖ್ಯಮಂತ್ರಿಯಾಗಿದ್ದಾಗ ಹಲವಾರು ಬಾರಿ ನನ್ನನ್ನು ಭೇಟಿಯಾಗಿದ್ದರು. ಅವೆಲ್ಲವೂ ಸಾರ್ವಜನಿಕ ಮಹತ್ವದ ವಿಷಯಕ್ಕೆ ಸಂಬಂಧಿಸಿದ ಭೇಟಿಯಾಗಿದ್ದವು. ಅವರೆಂದೂ ವೈಯಕ್ತಿಕವಾದ ಯಾವುದೇ ಬೇಡಿಕೆಯನ್ನು ಮಂಡಿಸಿಲ್ಲ. ಸ್ವಾರ್ಥದ ಲವಲೇಶವೂ ಇಲ್ಲದ ಅವರ ಕಠೋರ ನೈತಿಕತೆ ಎದುರು ರಾಜಕಾರಣದಲ್ಲಿರುವ ನಾವೆಲ್ಲರೂ ತಲೆತಗ್ಗಿಸಲೇಬೇಕಾಗುತ್ತಿತ್ತು.

ನಕ್ಸಲೀಯ ಹೋರಾಟದಲ್ಲಿದ್ದವರು ಹಿಂಸೆಯ ಮಾರ್ಗ ತ್ಯಜಿಸಿ ನೆಲದ ಕಾನೂನಿಗೆ ಬದ್ಧರಾಗುವಂತೆ ಮನಪರಿವರ್ತಿಸಲು ಅವರು ಪಟ್ಟಪ್ರಯತ್ನ ಮಾದರಿಯಾದುದು. ಈ ವಿಷಯಕ್ಕೆ ಸಂಬಂಧಿಸಿದಂತೆ ಅವರು ದಿವಂಗತ ಪತ್ರಕರ್ತೆ ಗೌರಿ ಲಂಕೇಶ್‌ ಜೊತೆ ಹಲವಾರು ಬಾರಿ ನನ್ನನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಕೇವಲ ಬೇಡಿಕೆಗಳನ್ನು ಮುಂದಿಟ್ಟು ಹೋರಾಡುತ್ತಿರಲಿಲ್ಲ, ಬೇಡಿಕೆಗಳ ಈಡೇರಿಕೆಗೆ ಕಾನೂನಿನಡಿಯಲ್ಲಿಯೇ ಇರುವ ಪರಿಹಾರದ ಮಾರ್ಗವನ್ನೂ ತೋರಿಸಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುತ್ತಿದ್ದರು. ಇದರಿಂದಾಗಿಯೇ ಅವರ ಹೋರಾಟ ಫಲಪ್ರದವಾಗಿತ್ತು.

ಸ್ವಾತಂತ್ರ್ಯ ಹೋರಾಟಗಾರ ಎಚ್‌. ಎಸ್. ದೊರೆಸ್ವಾಮಿ ವಿಧಿವಶ

ಕೊಡಗಿನಲ್ಲಿ ಭೂ ಮಾಲೀಕರು ಬಡ ಆದಿವಾಸಿಗಳ ಒಕ್ಕಲೆಬ್ಬಿಸಿದಾಗ ಕೆಂಡಾಮಂಡಲವಾಗಿದ್ದ ದೊರೆಸ್ವಾಮಿ ಅವರು ನನ್ನ ಜೊತೆ ಜಗಳಕ್ಕೆ ನಿಂತಿದ್ದನ್ನು ನಾನು ಮರೆಯಲಾರೆ. ಆದಿವಾಸಿಗಳಿಗೆ ನ್ಯಾಯ ಸಿಕ್ಕಿದ್ದರೆ ಅದಕ್ಕೆ ದೊರೆಸ್ವಾಮಿಯವರು ಕಾರಣ. ಅವರ ಸಾತ್ವಿಕ, ಅಷ್ಟೇ ಪ್ರಾಮಾಣಿಕವಾದ ಸಿಟ್ಟಿಗೆ ಎಷ್ಟೋ ಬಾರಿ ನಾನು ಭಯಪಡುವಂತಾಗಿತ್ತು. ನಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳ ವಿರುದ್ಧ ಟೀಕೆ-ಟಿಪ್ಪಣಿಗಳು ವ್ಯಕ್ತವಾದಾಗ ನಮ್ಮ ಪರವಾಗಿ ಗಟ್ಟಿಯಾಗಿ ನಿಂತು ಸಮರ್ಥಿಸಿ ಶಕ್ತಿ ತುಂಬಿದ್ದನ್ನು ಕೂಡಾ ನಾನು ಮರೆಯಲಾರೆ.

ಈ ದೇಶದ ಏಕತೆ, ಸೌಹಾರ್ದತೆ, ಜಾತ್ಯತೀತತೆಯ ರಕ್ಷಣೆಗಾಗಿ ಹಗಲಿರುಳು ಚಿಂತಿಸುತ್ತಿದ್ದ ದೊರೆಸ್ವಾಮಿಯವರು ಈ ಮೌಲ್ಯಗಳೂ ಇತ್ತೀಚಿನ ದಿನಗಳಲ್ಲಿ ಅಪಮೌಲ್ಯಗೊಳ್ಳುತ್ತಿರುವುದನ್ನು ಕಂಡು ಚಿಂತಿತರಾಗಿದ್ದರು.

ವೈಯಕ್ತಿಕವಾಗಿ ನನ್ನ ಬಗ್ಗೆ ಅವರಿಗೆ ಅಪಾರವಾದ ಪ್ರೀತಿ ಇತ್ತು, ನನಗೆ ಅವರ ಬಗ್ಗೆ ಅಷ್ಟೇ ಗೌರವ ಇತ್ತು. ದೊರೆಸ್ವಾಮಿಯವರು ಭೇಟಿಯಾಗಲು ಬರುತ್ತಾರೆಂದ ಕೂಡಲೆ ನಾನು ಸ್ವಲ್ಪ ವಿಚಲಿತನಾಗುತ್ತಿದ್ದೆ. ರಾಜಕೀಯದ ಚಕ್ರವ್ಯೂಹದೊಳಗಿದ್ದು ನಮ್ಮದೇ ಇತಿಮಿತಿಯೊಳಗೆ ಕೆಲಸ ಮಾಡಬೇಕಾದ ನನ್ನಂತಹವರಿಗೆ ದೊರೆಸ್ವಾಮಿಯವರಂತಹ ಪ್ರಾಮಾಣಿಕ ಹೋರಾಟಗಾರರ ಎಲ್ಲ ಬೇಡಿಕೆಗಳನ್ನು ಈಡೇರಿಸುವುದು ಕಷ್ಟವಾಗುತ್ತಿತ್ತು. ಮೇಲ್ನೋಟಕ್ಕೆ ಹಟಮಾರಿ ಹಿರಿಯನಂತೆ ಕಂಡರೂ ದೊರೆಸ್ವಾಮಿಯವರ ಮನಸ್ಸು ಮೃದು ಮಾತ್ರವಲ್ಲ ಅಷ್ಟೇ ಉದಾರವಾಗಿತ್ತು. ನಮ್ಮ ಇತಿಮಿತಿ-ಅಸಹಾಯಕತೆಯನ್ನು ಅರ್ಥಮಾಡಿಕೊಂಡು ಸಹಕರಿಸುತ್ತಿದ್ದ ಅವರ ಔದಾರ್ಯದ ಗುಣ ಹೋರಾಟಗಾರರೆಲ್ಲರಿಗೂ ಅನುಕರಣೀಯವಾದುದು.

ದೇಶದಲ್ಲಿ ಪ್ರಜಾಪ್ರಭುತ್ವ ಅತಂತ್ರವಾಗಿದೆ: ದೊರೆಸ್ವಾಮಿ

ಒಂದು ಸಾರ್ಥಕವಾದ ಬದುಕನ್ನು ಪೂರ್ಣವಾಗಿ ಬದುಕಿ ದೊರೆಸ್ವಾಮಿಯವರು ನಮ್ಮನ್ನಗಲಿ ಹೋಗಿದ್ದಾರೆ. ಇದರಿಂದ ಸಾರ್ವಜನಿಕ ಬದುಕಿನಲ್ಲಿ ಯಾರೂ ತುಂಬಲಾರದ ನಿರ್ವಾತವೊಂದು ನಿಸ್ಸಂಶಯವಾಗಿ ಸೃಷ್ಟಿಯಾಗಿದೆ. ಸಾರ್ವಜನಿಕ ಹೋರಾಟ ಮತ್ತು ಹೋರಾಟಗಾರ ಹೇಗಿರಬೇಕು ಎನ್ನುವುದಕ್ಕೆ ಅವರ ಬದುಕು ಒಂದು ಮಾದರಿ. ಅವರು ಬಹುವಾಗಿ ನಂಬಿದ್ದ ಹೊಸ ತಲೆಮಾರು ದೊರೆಸ್ವಾಮಿಯವರ ಹೋರಾಟವನ್ನು ಮುಂದುವರಿಸಿಕೊಂಡು ಹೋದರೆ ಅದೇ ಈ ಹಿರಿಯನಿಗೆ ಸಲ್ಲಿಸುವ ನಿಜವಾದ ಗೌರವವಾಗಲಿದೆ

click me!