ಕ್ಯಾನ್ಸರ್‌ ಆಸ್ಪತ್ರೆಗೆ ಕೊರೋನಾ ಭೀತಿ!

By Kannadaprabha NewsFirst Published Apr 22, 2020, 8:09 AM IST
Highlights

ಕ್ಯಾನ್ಸರ್‌ ಆಸ್ಪತ್ರೆಗೆ ಕೊರೋನಾ ಭೀತಿ!| ರೋಗಿಗಳ ಸಂಖ್ಯೆ ಹೆಚ್ಚಳ!| ಲಾಕ್‌ಡೌನ್‌ ನಡುವೆಯೂ ಬರುತ್ತಿದ್ದಾರೆ ರೋಗಿಗಳು|  ಕೊರೋನಾ ಸೋಂಕಿದ್ದರೆ ಶಸ್ತ್ರಚಿಕಿತ್ಸೆ ನಡೆಸಲ್ಲ

ಶ್ರೀಕಾಂತ್‌ ಎನ್‌.ಗೌಡಸಂದ್ರ

ಬೆಂಗಳೂರು(ಏ.22): ಕೊರೋನಾ ಲಾಕ್‌ಡೌನ್‌ ಹೊರತಾಗಿಯೂ ಕಿದ್ವಾಯಿ ಆಸ್ಪತ್ರೆಗೆ ಬರುತ್ತಿರುವ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಒಬ್ಬ ಕೊರೋನಾ ಸೋಂಕಿತ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಕರ್ನಾಟಕದ ಅತಿದೊಡ್ಡ ಸಾರ್ವಜನಿಕ ಕ್ಯಾನ್ಸರ್‌ ಆಸ್ಪತ್ರೆ ಬಂದ್‌ ಮಾಡಬೇಕಾದ ಅನಿವಾರ್ಯತೆ ಉಂಟಾಗಲಿದೆ.

ಅಲ್ಲದೆ, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುವ ಭೀತಿ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯನ್ನು (ಕಿದ್ವಾಯಿ ಆಸ್ಪತ್ರೆ) ಕಾಡುತ್ತಿದೆ. ಹೀಗಾಗಿ ಮುಂದಿನ ವಾರದಿಂದ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಿಸಿಕೊಳ್ಳುವ ಪ್ರತಿಯೊಬ್ಬ ರೋಗಿಯನ್ನೂ ಕೊರೋನಾ ಸೋಂಕಿನ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಆಸ್ಪತ್ರೆಯಲ್ಲಿ ಕೊರೋನಾ ಪರೀಕ್ಷಾಲಯವನ್ನೂ ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ.

ಕ್ಯಾನ್ಸರ್‌, ಹೃದ್ರೋಗ ಔಷಧ ಸಿಗದೆ ಜನರ ಪರದಾಟ!

ಹೌದು, ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆ ಹಾಗೂ ಲಾಕ್‌ಡೌನ್‌ ಕಾರಣ ನೀಡಿ ಎರಡು ತಿಂಗಳ ಕಾಲ ತೀರಾ ಅನಿವಾರ್ಯವಲ್ಲದ ಹೊರತು ಯಾರೂ ಆಸ್ಪತ್ರೆಯತ್ತ ಸುಳಿಯಬಾರದು ಎಂದು ಕಿದ್ವಾಯಿ ಆಸ್ಪತ್ರೆ ನಿರ್ದೇಶಕರು ಸೂಚನೆ ನೀಡಿದ್ದರು. ಹೀಗಿದ್ದರೂ 200ರಿಂದ 250 ಮಂದಿ ಹೊಸ ಹಾಗೂ ಫಾಲೋಅಪ್‌ ಚಿಕಿತ್ಸೆಗಾಗಿ ಬರುವ ರೋಗಿಗಳು ಆಗಮಿಸುತ್ತಿದ್ದಾರೆ. ಇವರ ಸಹಾಯಕರೂ ಸೇರಿ ನಿತ್ಯ 600 ಮಂದಿ ಆಸ್ಪತ್ರೆಗೆ ಆಗಮಿಸುತ್ತಿದ್ದು ವ್ಯಾಪಕವಾಗಿ ಸೋಂಕು ಹರಡುವ ಭೀತಿ ಉಂಟಾಗಿದೆ.

ಒಬ್ಬರಿಗೆ ಸೋಂಕು ಬಂದರೂ ಆಸ್ಪತ್ರೆ ಬಂದ್‌!

ಪ್ರಸ್ತುತ ರೋಗ ಲಕ್ಷಣಗಳಿಲ್ಲದಿದ್ದರೂ ಸೋಂಕು ಹೊಂದಿರಬಹುದಾದ ಸಾಧ್ಯತೆಗಳು ದಟ್ಟವಾಗಿರುತ್ತವೆ. ಹೀಗಾಗಿ ಸೋಂಕಿತರೊಬ್ಬರಿಗೆ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಶಸ್ತ್ರಚಿಕಿತ್ಸೆ ನಡೆಸಿದರೆ ಇಡೀ ಆಸ್ಪತ್ರೆ ಬಂದ್‌ ಮಾಡಬೇಕಾದ ಅನಿವಾರ್ಯತೆ ಉಂಟಾಗಲಿದೆ. ಒಬ್ಬ ರೋಗಿ ಹೊರ ರೋಗಿ ವಿಭಾಗ, ಕ್ಯಾಶ್‌ ಕೌಂಟರ್‌, ರಕ್ತ ಪರೀಕ್ಷೆ, ಸಾಮಾನ್ಯ ವಾರ್ಡ್‌, ಶಸ್ತ್ರಚಿಕಿತ್ಸೆ ಕೊಠಡಿ, ಐಸಿಯು, ವಾರ್ಡ್‌, ರೇಡಿಯೋಥೆರಪಿ ವಿಭಾಗ ಸೇರಿದಂತೆ ಹಲವೆಡೆ ಓಡಾಡಬೇಕಾಗುತ್ತದೆ.

ಹೀಗಾಗಿ ಇವೆಲ್ಲವೂ ಸೋಂಕು ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಇದ್ದು, ಸೋಂಕು ವರದಿಯಾದರೆ ಕನಿಷ್ಠ ಹದಿನೈದು ದಿನ ಇಡೀ ಆಸ್ಪತ್ರೆ ಬಂದ್‌ ಮಾಡಬೇಕಾಗುತ್ತದೆ ಎಂದು ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಡಾ.ಸಿ. ರಾಮಚಂದ್ರ ಆತಂಕ ವ್ಯಕ್ತಪಡಿಸಿದರು.

7 ಕಿ.ಮೀ ನಡೆದುಕೊಂಡು ಬೆಂಗಳೂರಿಗೆ ಬಂದು ಡೆಂಟಲ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ!

ಪರೀಕ್ಷೆ ಬಳಿಕವೇ ಚಿಕಿತ್ಸೆ

ತುರ್ತು ಶಸ್ತ್ರಚಿಕಿತ್ಸೆ ತುಂಬಾ ದಿನಗಳ ಕಾಲ ಮುಂದೂಡಲು ಸಾಧ್ಯವಿಲ್ಲ. ಹೀಗಾಗಿ ಕೊರೋನಾ ಪರೀಕ್ಷೆ ನಡೆಸಿ ಸೋಂಕು ಇಲ್ಲದವರಿಗೆ ಮಾತ್ರ ಚಿಕಿತ್ಸೆಗೆ ದಾಖಲಿಸಿಕೊಳ್ಳಲಾಗುವುದು. ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಪಿಪಿಇ ಕಿಟ್‌, ಎನ್‌-95 ಮಾಸ್ಕ್‌ ಒದಗಿಸಲಾಗಿದೆ. ಇದೀಗ ಆಸ್ಪತ್ರೆಯಲ್ಲೇ ಕೊರೋನಾ ಪರೀಕ್ಷೆ ನಡೆಸುವುದರಿಂದ ಸೋಂಕು ಇರುವವರನ್ನು ಕೂಡಲೇ ಕೊರೋನಾ ಆಸ್ಪತ್ರೆಗೆ ಸ್ಥಳಾಂತರಿಸಬಹುದು. ಈ ಮೂಲಕ ಆಸ್ಪತ್ರೆಯ ಇತರೆ ವಿಭಾಗದ ಸಿಬ್ಬಂದಿಯು ಕೊರೋನಾ ಸೋಂಕಿಗೆ ಮುಕ್ತವಾಗುವುದನ್ನು ತಪ್ಪಿಸಬಹುದು.

ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಎಲ್ಲರೂ ಸಾಮಾಜಿಕ ಜವಾಬ್ದಾರಿ ಅರಿಯಬೇಕು. ತೀರಾ ಅನಿವಾರ್ಯತೆ ಇರುವವರು ಮಾತ್ರ ಆಸ್ಪತ್ರೆಗೆ ಬರಬೇಕು. ಒಬ್ಬರು ಸೋಂಕಿತರು ಆಗಮಿಸಿದ್ದರೂ ಇತರೆ ರೋಗಿಗಳು, ಸಂಬಂಧಿಕರು, ಆಸ್ಪತ್ರೆ ಸಿಬ್ಬಂದಿ, ರೋಗಿಗಳ ಊರುಗಳಿಗೂ ಸೋಂಕು ಹರಡಬಹುದು. ಹೀಗಾಗಿ ಎಚ್ಚರ ಅಗತ್ಯ.

-ಡಾ.ಸಿ. ರಾಮಚಂದ್ರ, ನಿರ್ದೇಶಕರು, ಕಿದ್ವಾಯಿ ಆಸ್ಪತ್ರೆ.

click me!