
ಬೆಂಗಳೂರು (ನ.19) : ಬರೋಬ್ಬರಿ 22 ವರ್ಷ ಸಹಜೀವನ ನಡೆಸಿದ ನಂತರ ಪ್ರಿಯತಮನ ವಿರುದ್ಧ ಮಹಿಳೆಯೊಬ್ಬಳು ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.
ಅತ್ಯಾಚಾರ, ಜೀವ ಬೆದರಿಕೆ ಮತ್ತು ವಂಚನೆ ಸೇರಿದಂತೆ ಇನ್ನಿತರ ಆರೋಪಗಳ ಸಂಬಂಧ ತನ್ನ ವಿರುದ್ಧ ಮಾಜಿ ಗೆಳತಿಯು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದಾಖಲಿಸಿರುವ ದೂರು ರದ್ದುಪಡಿಸುವಂತೆ ಕೋರಿ ನೆಲಮಂಗಲದ ನಿವಾಸಿ ಸತೀಶ್ ಎಂಬಾತ ಸಲ್ಲಿಸಿರುವ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ. ಆದೇಶ ಪ್ರತಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ನಗರದ ಅಂದ್ರಹಳ್ಳಿಯಲ್ಲಿ ನೆಲೆಸಿರುವ ಗಂಗಾವತಿ ಎಂಬಾಕೆ ಮೊದಲಿಗೆ ಮಲ್ಲಯ್ಯ ಎಂಬುವವರನ್ನು ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಜನಿಸಿದ್ದರು. ಮಾರಣಾಂತಿಕ ರೋಗದಿಂದ ಪತಿ ಬಳಲುತ್ತಿದ್ದ ಹಿನ್ನೆಲೆಯಲ್ಲಿ 2004ರಲ್ಲಿ ಬೆಂಗಳೂರಿಗೆ ಬಂದಿದ್ದ ಗಂಗಾವತಿ ಹೋಟೆಲ್ ಕೆಲಸಕ್ಕೆ ಸೇರಿದ್ದರು.
ಪ್ರೇಯಸಿ ದಲಿತೆ ಎಂದು ತಿಳಿದು ಮದುವೆಗೆ ನಿರಾಕರಿಸಿದ್ದ ವ್ಯಕ್ತಿಗೆ ಹೈಕೋರ್ಟ್ ಜಾಮೀನು
ಈ ವೇಳೆ ಪರಿಚಯವಾದ ಸತೀಶ್ ಜೊತೆಗೆ ಸಲುಗೆ ಬೆಳೆದಿತ್ತು. ಗಂಗಾವತಿಯನ್ನು ಮದುವೆಯಾಗಿ ಉತ್ತಮ ಜೀವನ ನೀಡುವುದಾಗಿ ಸತೀಶ್ ಸಹ ಭರವಸೆ ಸಹ ನೀಡಿದ್ದ. ಇದರಿಂದ ಸತೀಶ್ ಮನೆಯಲ್ಲಿಯೇ ಆಕೆ ವಾಸ ಮಾಡತೊಡಗಿದ್ದು, ಇಬ್ಬರ ನಡುವೆ ದೈಹಿಕ ಸಂಬಂಧ ಬೆಳೆದಿತ್ತು.
ನಂತರ ಸತೀಶ್ ತನ್ನ ಹುಟ್ಟೂರಿಗೆ ಹೋಗಿ ಹಿರಿಯರು ನಿಶ್ವಯಿಸಿದ್ದ ಹುಡುಗಿಯನ್ನು ವಿವಾಹವಾಗಿದ್ದರು. ಈ ವಿಚಾರ ತಿಳಿದ ಗಂಗಾವತಿ ತನ್ನನ್ನು ಮದುವೆಯಾಗುವಂತೆ ಸತೀಶ್ ಅವರನ್ನು ಬಲವಂತ ಮಾಡಿದ್ದರು. ಅದಕ್ಕೆ ನಿರಾಕರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದ ಆರೋಪ ಸತೀಶ್ ಮೇಲಿತ್ತು. ಪರಿಣಾಮ ಸತೀಶ್ ವಿರುದ್ಧ ಗಂಗಾವತಿಯು ಅತ್ಯಾಚಾರ, ವಂಚನೆ, ಜೀವ ಬೆದರಿಕೆ, ಉದ್ದೇಶಪೂರ್ವಕವಾಗಿ ಅವಮಾನ ಮಾಡಿರುವುದು ಸೇರಿದಂತೆ ಇನ್ನಿತರ ಆರೋಪ ಹೊರಿಸಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಬ್ಯಾಡರಹಳ್ಳಿ ಠಾಣಾ ಪೊಲೀಸರು, ಸತೀಶ್ ವಿರುದ್ಧ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ ತನ್ನ ವಿರುದ್ಧದ ಪ್ರಕರಣ ರದ್ದು ಕೋರಿ ಸತೀಶ್ ಹೈಕೋರ್ಟ್ ಮೊರೆ ಹೋಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ