ರಕ್ಷಿಸಿದ ಹೆಣ್ಣು ಮಗುವನ್ನು ಶಿಶುಮಂದಿರಕ್ಕೆ ಕಳಿಸುವಂತಿಲ್ಲ; ವಿಶೇಷ ಬಾಲಾಪರಾಧಿ ಪೊಲೀಸ್‌ ಘಟಕಕ್ಕೇ ನೀಡಬೇಕು -ಹೈಕೋರ್ಟ್

By Kannadaprabha News  |  First Published Nov 19, 2024, 12:01 PM IST

ನಾಪತ್ತೆ ಪ್ರಕರಣದಲ್ಲಿ ರಕ್ಷಿಸಿದ ಹೆಣ್ಣು ಮಗುವನ್ನು ಪೊಲೀಸ್‌ ಠಾಣೆಗೆ ಹೊಂದಿಕೊಂಡಿರುವ ವಿಶೇಷ ಬಾಲಾಪರಾಧಿ ಪೊಲೀಸ್‌ ಘಟಕಕ್ಕೆ ಹಸ್ತಾಂತರಿಸಬೇಕು. ನ್ಯಾಯಾಲಯ ಅಥವಾ ಮಕ್ಕಳ ಕಲ್ಯಾಣ ಸಮಿತಿಯ ಆದೇಶವಿಲ್ಲದೆ ಮಗುವನ್ನು ಶಿಶುಮಂದಿರಕ್ಕೆ ಕಳುಹಿಸಬಾರದು ಎಂದು ಹೈಕೋರ್ಟ್‌ ನಿರ್ದೇಶಿಸಿದೆ.


ವೆಂಕಟೇಶ್‌ ಕಲಿಪಿ

 ಬೆಂಗಳೂರು : ನಾಪತ್ತೆ ಪ್ರಕರಣದಲ್ಲಿ ರಕ್ಷಿಸಿದ ಹೆಣ್ಣು ಮಗುವನ್ನು ಪೊಲೀಸ್‌ ಠಾಣೆಗೆ ಹೊಂದಿಕೊಂಡಿರುವ ವಿಶೇಷ ಬಾಲಾಪರಾಧಿ ಪೊಲೀಸ್‌ ಘಟಕಕ್ಕೆ ಹಸ್ತಾಂತರಿಸಬೇಕು. ನ್ಯಾಯಾಲಯ ಅಥವಾ ಮಕ್ಕಳ ಕಲ್ಯಾಣ ಸಮಿತಿಯ ಆದೇಶವಿಲ್ಲದೆ ಮಗುವನ್ನು ಶಿಶುಮಂದಿರಕ್ಕೆ ಕಳುಹಿಸಬಾರದು ಎಂದು ಹೈಕೋರ್ಟ್‌ ನಿರ್ದೇಶಿಸಿದೆ.

Tap to resize

Latest Videos

undefined

ಮಾಜಿ ಗೆಳೆಯನಿಂದ ಅಪಹರಣಕ್ಕೆ ಒಳಗಾಗಿರುವ ತನ್ನ ಐದು ವರ್ಷದ ಮಗುವನ್ನು ಪತ್ತೆಹಚ್ಚಲು ಪೊಲೀಸರಿಗೆ ನಿರ್ದೇಶಿಸಲು ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್‌.ಮುದಗಲ್‌ ಮತ್ತು ನ್ಯಾಯಮೂರ್ತಿ ವಿಜಯಕುಮಾರ್‌ ಎ. ಪಾಟೀಲ್‌ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ಪ್ರಕರಣದಲ್ಲಿ ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಹೆಣ್ಣು ಮಗುವನ್ನು ಒಡಿಶಾದಲ್ಲಿ ಪತ್ತೆಹಚ್ಚಿ ಕರೆತಂದಿದ್ದ ಪೊಲೀಸರು, ಕೋರ್ಟ್‌ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಆದೇಶವಿಲ್ಲದೆ ಹಾಗೂ ಅಪಹರಣಕಾರ ಎನ್ನಲಾದ ವ್ಯಕ್ತಿಯನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ವಿಚಾರಣೆಗೆ ಒಳಪಡಿಸಿದ ಬಗ್ಗೆ ದಾಖಲೆ ಸಲ್ಲಿಸದ ಕುರಿತು ಹೈಕೋರ್ಟ್‌ ಇದೇ ವೇಳೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

22 ವರ್ಷದ ಲಿವ್‌ ಇನ್‌ ಬಳಿಕ ಪ್ರಿಯಕರನ ವಿರುದ್ಡ ರೇಪ್‌ ಕೇಸ್‌; ಮಹಿಳೆ ಕೇಸ್‌ ರದ್ದುಪಡಿಸಿದ ಹೈಕೋರ್ಟ್‌

ಹೆಣ್ಣು ಮಗುವಿನ ನಾಪತ್ತೆ ಪ್ರಕರಣವನ್ನು ಅತ್ಯಂತ ಸಂವೇದನಾರಹಿತವಾಗಿ ಪೊಲೀಸರು ನಿಭಾಯಿಸಿದ್ದಾರೆ ಎಂದು ಕಟುವಾಗಿ ಟೀಕೆ ಮಾಡಿರುವ ಹೈಕೋರ್ಟ್‌, ಇಂತಹ ಪ್ರಕರಣಗಳಲ್ಲಿ ತನಿಖಾಧಿಕಾರಿಗಳು ಸಂವೇದನಾಶೀಲತೆಯಿಂದ ನಡೆದುಕೊಳ್ಳಬೇಕಿದೆ. ಈ ಕುರಿತು ತನಿಖಾಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲು ನಗರ ಪೊಲೀಸ್ ಆಯುಕ್ತರಿಗೆ ಪ್ರಕರಣದ ಆದೇಶ ಪ್ರತಿಯನ್ನು ಕಳುಹಿಸಿಕೊಡಬೇಕು ಎಂದು ರಿಜಿಸ್ಟ್ರಿಗೆ ಸೂಚನೆ ಸಹ ನೀಡಿದೆ. ಅಂತಿಮವಾಗಿ ನಾಪತ್ತೆಯಾಗಿದ್ದ ಮಗುವನ್ನು ತಾಯಿ ಮಡಿಲಿಗೆ ಸೇರಿಸುವ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿದೆ.

ಪ್ರಕರಣದ ವಿವರ:

ಬೆಂಗಳೂರಿನ ಮಹಿಳೆಯೋಬ್ಬರು 2024ರ ಸೆ.9ರಂದು ಪೊಲೀಸರಿಗೆ ದೂರು ನೀಡಿ, ‘ನಾನು ಪತಿಯನ್ನು ತೊರೆದು ಐದು ವರ್ಷದ ಹೆಣ್ಣು ಮಗುವಿನೊಂದಿಗೆ ಪ್ರಿಯತಮನೊಂದಿಗೆ ಲಿವಿಂಗ್ ಟುಗೆದರ್‌ನಲ್ಲಿದ್ದೆ. ಪ್ರಿಯತಮನೊಂದಿಗೆ ಹೊಂದಾಣಿಕೆಯಾಗದ ಕಾರಣ ಪುನಃ ಪತಿಯೊಂದಿಗೆ ಹೋಗಿ ವಾಸ ಮಾಡುತ್ತಿದ್ದೆ. ಇದರಿಂದ ಕೋಪಗೊಂಡ ಪ್ರಿಯತಮ ಸೆ.24ರಂದು ಸಂಜೆ ಮಾತುಕತೆಗೆ ಬಂದಿದ್ದರು. ಕೆಲ ಸಮಯದ ನಂತರ ಊಟ ಕೊಡಿಸುವುದಾಗಿ ಮಗಳನ್ನು ಕರೆದೊಯ್ದು ಹಿಂದಿರುಗಲಿಲ್ಲ. ಆತನಿಗೆ ಕರೆ ಮಾಡಿದರೆ ಪೋನ್‌ ಸ್ವಿಚ್‌ ಆಫ್‌ ಆಗಿತ್ತು. ಸುತ್ತಲೂ ಹುಡುಕಿದರೂ ಮಗಳು ಪತ್ತೆಯಾಗಲಿಲ್ಲ. ಹಾಗಾಗಿ, ಮಗಳನ್ನು ಪತ್ತೆ ಮಾಡಿಕೊಡಬೇಕು’ಎಂದು ಕೋರಿದ್ದರು.

ನಂತರ ಅ.28ರಂದು ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದ ಮಹಿಳೆ, ಪೊಲೀಸರು ಮಗಳನ್ನು ಪತ್ತೆ ಮಾಡಿಕೊಟ್ಟಿಲ್ಲ ಎಂದು ಆರೋಪಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಮಗವಿನ ಪತ್ತೆಗೆ ಸೂಚಿಸಿತ್ತು. ಅದರಂತೆ ಪೊಲೀಸರು ಹುಡುಕಾಟ ನಡೆಸಿ ಒಡಿಶಾದಲ್ಲಿ ಅರ್ಜಿದಾರೆಯ ಮಗಳನ್ನು ಪತ್ತೆಹಚ್ಚಿದ್ದರು. ಬಳಿಕ ಮಗುವನ್ನು ಬೆಂಗಳೂರಿಗೆ ಕರೆತಂದು, ಸರ್ಕಾರಿ ಶಿಶುಮಂದಿರದ ಸುಪರ್ದಿಗೆ ಒಪ್ಪಿಸಿದ್ದರು.

ಅರ್ಜಿ ಇತ್ತೀಚೆಗೆ ವಿಚಾರಣೆಗೆ ಬಂದಾಗ ಪೊಲೀಸರು ಶಿಶುಮಂದಿರದ ಮಹಿಳಾ ಅಧಿಕಾರಿಯ ಮೂಲಕವೇ ಮಗುವನ್ನು ಕೋರ್ಟ್‌ಗೆ ಒಪ್ಪಿಸಿದ್ದರು. ಅರ್ಜಿದಾರೆಯ ಪ್ರಿಯತಮನನ್ನು ಸಹ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಮೂರ್ತಿಗಳು ಮಗುವಿನೊಂದಿಗೆ ಸಮಾಲೋಚನೆ ನಡೆಸಿದ್ದರು. ತಾನು ತಾಯಿಯೊಂದಿಗೆ ಹೋಗುವುದಾಗಿ ಮಗು ಹೇಳಿತ್ತು. ಈ ಅಂಶ ದಾಖಲಿಸಿಕೊಂಡು ಮಗುವನ್ನು ತಾಯಿ ಸುಪರ್ದಿಗೆ ನೀಡಿದ ಹೈಕೋರ್ಟ್‌, ಅಪಹರಣ ಪ್ರಕರಣವನ್ನು ಕಾನೂನು ಪ್ರಕಾರ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿತು.

ಆದರೆ, ಮಗುವನ್ನು ಶಿಶುಮಂದಿರಕ್ಕೆ ನೀಡಿದ್ದ ಪೊಲೀಸರ ಕ್ರಮವನ್ನು ನ್ಯಾಯಪೀಠ ತೀವ್ರವಾಗಿ ಆಕ್ಷೇಪಿಸಿತು.

ಪ್ರೇಯಸಿ ದಲಿತೆ ಎಂದು ತಿಳಿದು ಮದುವೆಗೆ ನಿರಾಕರಿಸಿದ್ದ ವ್ಯಕ್ತಿಗೆ ಹೈಕೋರ್ಟ್ ಜಾಮೀನು

ಜೊತೆಗೆ, ಕೋರ್ಟ್‌ಗೆ ಹಾಜರಾಗಿದ್ದ ಶಿಶುಮಂದಿರ ಮಹಿಳಾ ಅಧಿಕಾರಿಯು ತನ್ನ ಗುರುತಿನ ಚೀಟಿಯನ್ನೂ ಕೋರ್ಟ್‌ಗೆ ನೀಡಿಲ್ಲ. ಇನ್ನು, ಆಪಾದಿತ ಅಪಹರಣಕಾರ ತಾನೇ ಮಗುವಿನ ತಂದೆಯೆಂದು ಸಮರ್ಥಿಸಿಕೊಂಡಿದ್ದಾರೆ ಎಂಬುದಾಗಿ ಪೊಲೀಸರು ವರದಿ ಸಲ್ಲಿಸಿದ್ದಾರೆ. ಆದರೆ, ಆತನನ್ನು ಮ್ಯಾಜಿಸ್ಟ್ರೇಟ್ ಮುಂದೆ ವಿಚಾರಣೆಗೆ ಗುರಿಪಡಿಸಿದ ಅಥವಾ ಹಾಜರುಪಡಿಸಿರುವುದನ್ನು ತೋರಿಸಲು ಯಾವುದೇ ದಾಖಲೆ ಸಲ್ಲಿಸಿಲ್ಲ. ಇದು ಪೊಲೀಸರು ಹೆಣ್ಣು ಮಗುವಿನ ಪ್ರಕರಣವನ್ನು ಅತ್ಯಂತ ಸಂವೇದನಾ ರಹಿತವಾಗಿ ನಿಭಾಯಿಸಿರುವುದನ್ನು ತೋರಿಸುತ್ತದೆ ಎಂದು ಆದೇಶದಲ್ಲಿ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

click me!