ಕಾರು ಪ್ರಯಾಣಿಕರ ಸುರಕ್ಷೆಗೆ ವಿಶೇಷ ಕಾನೂನು ಅಗತ್ಯ: ಸರ್ಕಾರಕ್ಕೆ ತಜ್ಞರ ಆಗ್ರಹ

By Kannadaprabha NewsFirst Published Sep 9, 2022, 2:30 AM IST
Highlights

ಫೋನ್‌ ಬಳಕೆಗೆ ಡ್ರಿಂಕ್‌-ಡ್ರೈವ್‌ನಷ್ಟೇ ಶಿಕ್ಷೆ ನಿಗದಿಯಾಗಲಿ, ಹೆದ್ದಾರಿ ವೈಜ್ಞಾನಿಕ ನಿರ್ಮಾಣ, ನಿರ್ವಹಣೆಗೆ ಆದ್ಯತೆ ನೀಡಿ: ಸರ್ಕಾರಕ್ಕೆ ತಜ್ಞರ ಸಲಹೆ 

ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು(ಸೆ.09):  ಹೆದ್ದಾರಿಗಳ ವೈಜ್ಞಾನಿಕ ನಿರ್ಮಾಣ, ವೇಗ ನಿರ್ವಹಣೆ, ಸೌಕರ್ಯ ಹೆಚ್ಚಳ ಜತೆಗೆ ವಿಶೇಷ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಕಾರು ಪ್ರಯಾಣಿಕರ ಸುರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ತಜ್ಞರ ಸಲಹೆ ನೀಡಿದ್ದಾರೆ. ಟಾಟಾ ಕಂಪನಿ ಮಾಜಿ ಮುಖ್ಯಸ್ಥ ಸೈರಸ್‌ ಮಿಸ್ತ್ರಿ ಕಾರು ಅಪಘಾತದಲ್ಲ ಸಾವನ್ನಪ್ಪಿದ ಹಿನ್ಕೆಲೆಯಲ್ಲಿ ತಜ್ಞರು ಈ ಆಗ್ರಹ ಮಾಡಿದ್ದಾರೆ.

ಕಾರುಗಳ ಅಪಘಾತಗಳು ಶೇ.80ರಷ್ಟುರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಸಂಭವಿಸುತ್ತವೆ. ಇದಕ್ಕೆ ಪ್ರಮುಖ ಕಾರಣ ಆ ಹೆದ್ದಾರಿಗಳ ಅವೈಜ್ಞಾನಿಕ ನಿರ್ಮಾಣ ಮತ್ತು ನಿರ್ವಹಣೆ. ಮುಖ್ಯವಾಗಿ ಹೆದ್ದಾರಿ ಅಂಚುಗಳು ಅದರ ಪಕ್ಕದ ಭೂಭಾಗಕ್ಕೂ ಅರ್ಧಅಡಿಗಳಷ್ಟುವ್ಯತ್ಯಾಸವಿರುತ್ತದೆ. ವೇಗವಾಗಿ ಚಲಿಸುವ ಕಾರುಗಳು ರಸ್ತೆ ಬಿಟ್ಟು ಕೆಳಗಿಳಿದರೆ ಅಂಚಿನ ವ್ಯತ್ಯಾಸದಿಂದ ಅಪಘಾತಕ್ಕೀಡಾಗುತ್ತಿವೆ. ಹೀಗಾಗಿ, ಹೆದ್ದಾರಿ ಗುಂಡಿ ನಿರ್ವಹಣೆಯಷ್ಟೇ ಅಂಚು ನಿರ್ವಹಣೆಗೆ ಗಮನ ಹರಿಸಬೇಕು ಎನ್ನುತ್ತಾರೆ ತಜ್ಞರು.

ನಿತಿನ್ ಗಡ್ಕರಿ-ಬೊಮ್ಮಾಯಿ ಸಭೆ: ಬೆಂಗಳೂರಿನ ರಸ್ತೆ, ಟ್ರಾಫಿಕ್ ಬಗ್ಗೆ ಮಹತ್ವದ ಚರ್ಚೆ

ಜತೆಗೆ ಹೆದ್ದಾರಿಗಳಲ್ಲಿ ಅಗತ್ಯವಿರುವ ಕಡೆ ಮೇಲ್ಸೇತುವೆ, ಕೆಳ ಸೇತುವೆ ನಿರ್ಮಿಸದೇ ಪಾದಚಾರಿಗಳ ಓಡಾಟಕ್ಕೆ ಅವಕಾಶ ಮಾಡಿಕೊಟ್ಟು ದಿಢೀರ್‌ ಬ್ರೇಕ್‌ ಹಾಕಿ, ಪಾದಚಾರಿಗಳನ್ನು ತಪ್ಪಿಸುವ ಬರದಲ್ಲಿ ಅಪಘಾತಕ್ಕೀಡಾಗುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ತಜ್ಞರು.

ವೇಗ ನಿರ್ವಹಣೆ ಮಾಡಿ

ಹೆದ್ದಾರಿಗಳಲ್ಲಿ ಶೇ.75 ರಷ್ಟುಕಾರುಗಳ ಅಪಘಾತಕ್ಕೆ ವೇಗದ ಚಾಲನೆಯೇ ಕಾರಣವಾಗಿರುತ್ತದೆ. ಹೀಗಾಗಿ, ವೇಗ ನಿರ್ವಹಣೆಗೆ ಹೆದ್ದಾರಿ ಪ್ರಾಧಿಕಾರ ಗಮನಹರಿಸಬೇಕು. ಟೋಲ್‌ ಗೇಟ್‌ಗಳ ನಡುವೆ ಇಂತಿಷ್ಟುಕಿ.ಮೀ ಒಂದರಂತೆ ಸಿಸಿ ಕ್ಯಾಮರಾ ಅಳವಡಿಸಬೇಕು. ನಿಗದಿಗಿಂತ ಅತ್ಯಂತ ವೇಗವಾಗಿ ಸಾಗುವ ಕಾರುಗಳಿಗೆ ಮುಂದಿನ ಟೋಲ್‌ಗೇಟ್‌ಗಳಲ್ಲಿ ಸೂಚನೆ ನೀಡುವುದು ಅಥವಾ ದಂಡವಿಧಿಸಬೇಕು. ನಿಗಾ ಇಟ್ಟಿದ್ದಾರೆ ಎಂಬ ಕಾರಣಕ್ಕಾದರೂ ನಿಯಮಿತ ವೇಗದಲ್ಲಿ ಚಾಲಕರು ಕಾರುಗಳನ್ನು ಓಡಿಸುತ್ತಾರೆ. ಜತೆಗೆ ಈ ಸಿಸಿ ಕ್ಯಾಮೆರಾಗಳು ಅಪಘಾತ ನೆರವು, ಸಂಚಾರಿ ನಿಯಮ ಉಲ್ಲಂಘನೆ ಪತ್ತೆಗೂ ನೆರವಾಗುತ್ತವೆ ಎನ್ನುತ್ತಾರೆ ಸಾರಿಗೆ ಮತ್ತು ಮೂಲ ಸೌಕರ್ಯ ತಜ್ಞ ರಾಜಕುಮಾರ್‌ ದುಗಾರ್‌.
ನಿಗದಿಗಿಂತ ಪಥ ಕಡಿಮೆ ಮಾಡಬಾರದು

ಹೆದ್ದಾರಿಗಳಲ್ಲಿ ನಿಗದಿ ಪಡಿಸಿದ ಪಥಗಳ ಸಂಖ್ಯೆಯನ್ನು ಮಧ್ಯೆದಲ್ಲಿ ಏಕಾಏಕಿ ಕಡಿತ ಮಾಡಿರಲಾಗುತ್ತದೆ. ಜಾಗದ ಕೊರತೆ, ಸೇತುವೆ ಇತ್ಯಾದಿ ನೆಪಗಳನ್ನು ಒಡ್ಡಿ ಅಷ್ಟಪಥಗಳು ಷಟ್ಪಥಕ್ಕೆ, ಷಟ್ಪಥಗಳನ್ನು ಚತುಷ್ಪಥ, ಚತುಷ್ಪಥಗಳು ದ್ವಿಪಥಗಳಿಗೆ ಇಳಿಕೆಯಾಗಿರುತ್ತವೆ. ಬಹುತೇಕ ಚಾಲಕರು ಪಥಗಳು ಕಡಿಮೆಯಾಗದರೂ ವೇಗವನ್ನು ತಗ್ಗಿಸಿರುವುದಿಲ್ಲ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ ಎಚ್ಚರ ವಹಿಸಬೇಕು.

ಹೈವೇನಲ್ಲಿ ಪ್ರಯಾಣಿಕರಿಗೆ ಸೌಲಭ್ಯ ಹೆಚ್ಚಿಸಿ

ಸುಂಕಕ್ಕೆ ತಕ್ಕಂತೆ ಹೆದ್ದಾರಿ ಪ್ರಾಧಿಕಾರಗಳು ಸೌಲಭ್ಯಗಳನ್ನು ನೀಡುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ದೊಡ್ಡ ಟ್ರಕ್‌ಗಳು, ಲಾರಿಗಳಿಗೆ ವಿಶ್ರಾಂತಿ ಸ್ಥಳಗಳಿರುತ್ತವೆ. ಕಾರುಗಳಿಗೆ ಇರುವುದಿಲ್ಲ. ಇನ್ನು ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಾರುಗಳಿಗೂ ವಿಶ್ರಾಂತಿ (ರೆಸ್ಟ್‌ ಏರಿಯಾ) ಸ್ಥಳ ಸೌಲಭ್ಯ ಕಲ್ಪಿಸಬೇಕು. ಇದರಿಂದ ರಸ್ತೆ ಮಧ್ಯೆ ಅನಧಿಕೃತ ನಿಲುಗಡೆ ತಪ್ಪುತ್ತದೆ. ರಸ್ತೆಯ ಗುಂಡಿಗಳು, ಅವೈಜ್ಞಾನಿಕ ಹಂಪ್‌ಗಳನ್ನು ತೆರವು ಮಾಡಬೇಕು. ನಿರ್ವಹಣೆ ಉತ್ತಮವಾಗಿರಬೇಕು. ತುರ್ತು ಸಂದರ್ಭದ ನೆರವನ್ನು ಸೂಕ್ತವಾಗಿ ನೀಡಬೇಕು.

Cyrus Mistry Death: ಖ್ಯಾತ ವೈದ್ಯೆ ಚಲಾಯಿಸುತ್ತಿದ್ದ ಕಾರು; ಸೀಟ್ ಬೆಲ್ಟ್ ಧರಿಸಿರಲಿಲ್ಲ ಸೈರಸ್‌ ಮಿಸ್ತ್ರಿ..!

ಫೋನ್‌ ಸಂಭಾಷನೆಗೆ ಡ್ರಿಂಕ್‌-ಡ್ರೈವ್‌ ಮಾದರಿ ಶಿಕ್ಷೆ ನೀಡಿ

ವಿದೇಶಿ ವಿಶ್ವವಿದ್ಯಾಲಯಗಳ ಅಧ್ಯಯನಗಳ ಪ್ರಕಾರ, ವಾಹನಗಳಲ್ಲಿ ಚಾಲನೆ ಮಾಡುವಾಗ ಫೋನ್‌ನಲ್ಲಿ ಮಾತನಾಡುವುದು ಅತ್ಯಂತ ಅಪಾಯಕಾರಿ. ಕಾರು ವೇಗವಾಗಿ ಚಲಿಸುವಾಗ ಚಾಲಕರಿಗೆ ನಿಯಂತ್ರಣ ಕಷ್ಟಸಾಧ್ಯ. ಹೀಗಾಗಿ, ವಾಹನ ಚಾಲನೆ ಸಂದರ್ಭದಲ್ಲಿ ಪೋನ್‌ ಬಳಕೆಯನ್ನು ಡ್ರಿಂಕ್‌ ಅಂಡ್‌ ಡ್ರೈವ್‌ ಮಾದರಿಯಲ್ಲಿ ಪರಿಗಣಿಸಿ ಕಠಿಣ ಕಾನೂನು ರೂಪಿಸಬೇಕು. ಜತೆಗೆ ಹೆದ್ದಾರಿಗಳಲ್ಲಿ ಸುರಕ್ಷಿತ ಪ್ರಾಧಿಕಾರ ಅಥವಾ ಸ್ಥಳೀಯ ಜಿಲ್ಲಾಡಳಿತಗಳ ನೆರವಿನೊಂದಿಗೆ ವಾಹನ ತಪಾಸಣೆಯನ್ನು ಹೆಚ್ಚಿಸಬೇಕು ಎಂದು ಸಾರಿಗೆ ತಜ್ಞರು ಸಲಹೆ ನೀಡುತ್ತಾರೆ.

ವೇಗ ಗರಿಷ್ಠ ಮಿತಿ ಸರಿಯಾಗಿ ಅರಿತುಕೊಳ್ಳಿ

ಬಹುತೇಕರು ರಸ್ತೆಯಲ್ಲಿ ಹಾಕಿರುವ ವೇಗ ಮಿತಿ ಫಲಕಗಳನ್ನು ಇಷ್ಟುವೇಗದಲ್ಲಿ ಸಾಗಲೇ ಬೇಕು ಎಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ವೇಗ ಕಡಿಮೆ ಇದ್ದರೆ ಎಡಭಾಗದಲ್ಲಿ ಚಲಿಸಬೇಕು ಎಂಬ ಸಾಮಾನ್ಯ ಅರಿವು ಇರುವುದಿಲ್ಲ. ಚಾಲಕರು ಸದಾ ವೇಗವಾಗಿ ಚಲಿಸುವುದು ಸಾಮರ್ಥ್ಯ ಎಂದು ಭಾವಿಸದೇ ಸುರಕ್ಷಿತ ಚಾಲನೆಗೆ ಆದ್ಯತೆ ನೀಡಬೇಕು ಎನ್ನುವುದು ತಜ್ಞರ ಸಲಹೆ.
 

click me!