ಕೋವಿಡ್‌ನಿಂದ ಮನೇಲೆ ಸಾಯೋರ ಸಂಖ್ಯೆ ಏರಿಕೆ..!

Kannadaprabha News   | Asianet News
Published : May 08, 2021, 08:01 AM ISTUpdated : May 08, 2021, 10:46 AM IST
ಕೋವಿಡ್‌ನಿಂದ ಮನೇಲೆ ಸಾಯೋರ ಸಂಖ್ಯೆ ಏರಿಕೆ..!

ಸಾರಾಂಶ

ರಾಜ್ಯದಲ್ಲಿ ಮೇ ಮೊದಲ ವಾರ ನಿವಾಸದಲ್ಲೇ 204 ಮಂದಿ ಸಾವು| ನಿತ್ಯ 25ರಿಂದ 30 ಜನರ ಮರಣ| ಕೋವಿಡ್‌ ಪರೀಕ್ಷೆ ಫಲಿತಾಂಶ ವಿಳಂಬ, ಆಸ್ಪತ್ರೆಯಲ್ಲಿ ಬೆಡ್‌ ಸಿಗದಿರುವುದೇ ಇದಕ್ಕೆ ಕಾರಣ: ವೈದ್ಯರು| 

ರಾಕೇಶ್‌ ಎನ್‌.ಎಸ್‌.

ಬೆಂಗಳೂರು(ಮೇ.08):  ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ಇರುವುದು, ತಡವಾಗಿ ಆರ್‌ಟಿ-ಪಿಸಿಆರ್‌ ಫಲಿತಾಂಶ ದೊರಕುವುದು, ಆಮ್ಲಜನಕ ಮಟ್ಟ ಕಡಿಮೆಯಾಗುತ್ತಿದ್ದರೂ ಅರಿವಿಗೆ ಬಾರದಿರುವುದು ಸೇರಿದಂತೆ ನಾನಾ ಕಾರಣಗಳಿಂದ ರಾಜ್ಯದಲ್ಲಿ ಕೊರೋನಾ ಸೋಂಕಿತರು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ದೊಡ್ಡ ಸಂಖ್ಯೆಯಲ್ಲಿ ಮರಣ ಹೊಂದುತ್ತಿದ್ದಾರೆ. 

"

ಕಳೆದೆರಡು ದಿನದಲ್ಲಿ ರಾಜ್ಯದಲ್ಲಿ ಬರೋಬ್ಬರಿ 123 ಮಂದಿ ಚಿಕಿತ್ಸೆ ದೊರಕದೆ ಮೃತರಾಗಿದ್ದಾರೆ. ಮೇ ತಿಂಗಳಿಂದ ಈವರೆಗೆ ಸರಾಸರಿ 25 ರಿಂದ 30 ಮಂದಿ ಕೋವಿಡ್‌ ಪೀಡಿತರು ನಿತ್ಯ ಮನೆಯಲ್ಲೇ ಇಹಲೋಕ ತ್ಯಜಿಸಿದ್ದಾರೆ.
ಮೇ 1 ರಿಂದ ಮೇ 7 ರವರೆಗೆ ಒಟ್ಟು 204 ಮಂದಿ ಮನೆಯಲ್ಲೇ ಅಥವಾ ಆಸ್ಪತ್ರೆಗೆ ದಾಖಲಾಗುವ ಮುಂಚಿತವಾಗಿ ಮೃತರಾಗಿದ್ದಾರೆ. ಏಪ್ರಿಲ್‌ 17ರಿಂದ 30 ಅವಧಿಯಲ್ಲಿ 143 ಜನರು ಮನೆಯಲ್ಲೇ ಸೋಂಕಿಗೆ ಬಲಿಯಾಗಿದ್ದಾರೆ.
ಮೇ ತಿಂಗಳಲ್ಲಿ ಚಿಕಿತ್ಸೆ ದೊರಕದೇ ಮೃತರಾದವರಲ್ಲಿ 180 ಮಂದಿ ಬೆಂಗಳೂರು ನಗರ ವ್ಯಾಪ್ತಿಗೆ ಸೇರಿದವರು. ಉಳಿದಂತೆ ಉತ್ತರ ಕನ್ನಡ, ಮೈಸೂರು, ಚಾಮರಾಜನಗರದಲ್ಲಿ ಇಂತಹ ಪ್ರಕರಣಗಳು ವರದಿಯಾಗಿವೆ. ಆದರೆ ಸರ್ಕಾರಿ ಅಂಕಿ- ಅಂಶವನ್ನು ಬದಿಗಿಟ್ಟು ನೋಡಿದರೆ ಮೃತಪಟ್ಟವರು ಸಂಖ್ಯೆ ಇನ್ನೂ ಜಾಸ್ತಿ ಇರುವ ಸಾಧ್ಯತೆಯೇ ಹೆಚ್ಚು.

"

ಕೋವಿಡ್‌ ಪರೀಕ್ಷೆಗೆ ಮಾದರಿ ನೀಡಿ ಫಲಿತಾಂಶ ಪಡೆಯಲು ನಾಲ್ಕೈದು ದಿನ ಕಾಯುವುದರಿಂದ ರೋಗಿಯಲ್ಲಿಯೂ ಚಿಕಿತ್ಸೆಯ ಬಗ್ಗೆ ಗೊಂದಲ ಇರುತ್ತದೆ. ಆ ಬಳಿಕ ಫಲಿತಾಂಶ ಪಾಸಿಟಿವ್‌ ಬಂದರೂ ತಕ್ಷಣ ಆಸ್ಪತ್ರೆಯಲ್ಲಿ ಬೆಡ್‌ ಸಿಗುವುದಿಲ್ಲ. ಇದರಿಂದ ಚಿಕಿತ್ಸೆ ಸಿಗದೆ ರೋಗಿ ಸಾವನ್ನಪ್ಪುತ್ತಾನೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರೊಬ್ಬರು ಅಭಿಪ್ರಾಯ ಪಡುತ್ತಾರೆ.

ಕೊರೋನಾ ವಿರುದ್ಧ ಹೋರಾಟ: ಬೋಯಿಂಗ್‌ ಇಂಡಿಯಾದಿಂದ ಬೆಂಗ್ಳೂರು, ಕಲಬುರಗಿಯಲ್ಲಿ ಆಸ್ಪತ್ರೆ

ಸೋಂಕಿತರಲ್ಲಿ ಬಹುತೇಕರು ಸಾಮಾನ್ಯ ಮಾತ್ರೆ, ಔಷಧಿಯಿಂದ ಚೇತರಿಸಿಕೊಳ್ಳುತ್ತಾರೆ. ಆದರೆ ಕೆಲವರಿಗೆ ಆಮ್ಲಜನಕ, ವೆಂಟಿಲೇಟರ್‌, ರೆಮ್‌ಡೆಸಿವಿರ್‌, ಪ್ಲಾಸ್ಮಾ ಚಿಕಿತ್ಸೆ, ಸ್ಟಿರಾಯ್ಡ್‌ ಸೇರಿದಂತೆ ಆಧುನಿಕ ಸೌಲಭ್ಯ ಅಥವಾ ಚಿಕಿತ್ಸೆ ಬೇಕಾಗುತ್ತದೆ. ಕೋವಿಡ್‌ನಿಂದ ಆರೋಗ್ಯ ಪರಿಸ್ಥಿತಿ ಹದಗೆಡುತ್ತಿದ್ದಂತೆ ಉತ್ತಮ ಚಿಕಿತ್ಸೆ ಸಿಕ್ಕರೆ ರೋಗಿ ಸಾವಿನ ದವಡೆಯಿಂದ ಪಾರಾಗಬಹುದು. ಆದರೆ ರಾಜ್ಯದ ತೀವ್ರ ನಿಗಾ ವಿಭಾಗಗಳು ಈಗಾಗಲೇ ತುಂಬಿರುವುದರಿಂದ ರೋಗಿಗೆ ’ಸುವರ್ಣ ಘಳಿಗೆ’ಯಲ್ಲಿ ಚಿಕಿತ್ಸೆ ಸಿಗುತ್ತಿಲ್ಲ ಎಂದು ರಾಜ್ಯದ ಕೋವಿಡ್‌ ತಾಂತ್ರಿಕ ಸಮಿತಿಯ ಸದಸ್ಯರೊಬ್ಬರು ಹೇಳುತ್ತಾರೆ.

ಅರಿವಿಗೆ ಬಾರದ ಆಮ್ಲಜನಕ ಮಟ್ಟದ ಇಳಿಕೆ

ಕೆಲವು ಕೋವಿಡ್‌ ರೋಗಿಗಳಿಗೆ ತಮ್ಮಲ್ಲಿ ಉಸಿರಾಟದ ತೊಂದರೆ ಆಗುತ್ತಿರುವುದು ಅವರ ಅರಿವಿಗೆ ಬರುತ್ತಿಲ್ಲ. ಆಮ್ಲಜನಕದ ಮಟ್ಟ90 ಕ್ಕಿಂತ ಕಡಿಮೆ ಆದರೂ ಅವರು ಸಾಮಾನ್ಯ ಸ್ಥಿತಿಯಲ್ಲೇ ಇದ್ದೇವೆ ಎಂದು ಭಾವಿಸುತ್ತಾರೆ. ಇದನ್ನು ವೈಜ್ಞಾನಿಕವಾಗಿ ‘ಹ್ಯಾಪಿ ಹೈಪೊಕ್ಸಿಯಾ’ ಎನ್ನುತ್ತಾರೆ. ಪರಿಸ್ಥಿತಿ ಅರಿವಿಗೆ ಬರುವಾಗ ತಡವಾಗಿ ಮನೆಯಲ್ಲೇ ಅಥವಾ ಆಸ್ಪತ್ರೆಗೆ ದಾಖಲಾಗುವ ಮುನ್ನ ಪ್ರಾಣ ಬಿಡುತ್ತಾರೆ ಎಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ. ಗಿರಿಧರ್‌ ಬಾಬು ಹೇಳುತ್ತಾರೆ.

ಇಂತಹ ಸಾವು ತಪ್ಪಿಸಬೇಕು ಎಂದಾದರೆ ಪಲ್ಸ್‌ ಅಕ್ಸಿಮೀಟರ್‌ನಲ್ಲಿ ದಿನಕ್ಕೆ ಎರಡು ಬಾರಿ (ಬೆಳಗ್ಗೆ, ಸಂಜೆ) ಕೋವಿಡ್‌ ಲಕ್ಷಣ ಇರುವವರು ತಮ್ಮ ಆಮ್ಲಜನಕದ ಮಟ್ಟನೋಡಿಕೊಳ್ಳಬೇಕು. ಅಕ್ಸಿಮೀಟರ್‌ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮತ್ತು ತಿಳುವಳಿಕೆ ಮೂಡಿಸಬೇಕು. ಪ್ರತಿ ಮನೆಯಲ್ಲಿಯೂ ಅಕ್ಸಿಮೀಟರ್‌ ಇರಬೇಕು. ಹಾಗೆಯೇ ಟೆಲಿಮೆಡಿಸಿನ್‌ ವ್ಯವಸ್ಥೆ ಇನ್ನಷ್ಟುಸದೃಢಗೊಳ್ಳಬೇಕು ಎಂದು ಡಾ. ಗಿರಿಧರ ಬಾಬು ಸಲಹೆ ನೀಡುತ್ತಾರೆ.

ಸದ್ಯ 3 ರಿಂದ 4 ಲಕ್ಷ ಸಕ್ರಿಯ ಪ್ರಕರಣಗಳಿದ್ದು ಶೇ. 90 ರಷ್ಟು ರೋಗಿಗಳು ಮನೆಯಲ್ಲಿ ಪ್ರತ್ಯೇಕವಾಸ ಇರುವಾಗಲೇ ಟೆಲಿ ಮೆಡಿಸಿನ್‌ ವ್ಯವಸ್ಥೆ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಇನ್ನೂ ಸಕ್ರಿಯ ಪ್ರಕರಣಗಳು 7-8 ಲಕ್ಷಕ್ಕೆ ಏರಿದರೆ ಆಗ ಟೆಲಿ ಮೆಡಿಸಿನ್‌ ವ್ಯವಸ್ಥೆಯ ಮೇಲೂ ಒತ್ತಡ ಬೀಳಲಿದೆ. ಹಾಗೆಯೇ ಆಸ್ಪತ್ರೆಗಳಲ್ಲಿನ ಬೆಡ್‌ ಸಮಸ್ಯೆ ಕೂಡ ತಕ್ಷಣ ಪರಿಹಾರ ಕಾಣುವ ಸಾಧ್ಯತೆಯಿಲ್ಲ. ಆದ್ದರಿಂದ ಕೋವಿಡ್‌ ಲಕ್ಷಣಗಳಿರುವವರು ತಮ್ಮ ಆರೋಗ್ಯದ ಏರುಪೇರಿನ ಮೇಲೆ ಗರಿಷ್ಠ ನಿಗಾ ಇಟ್ಟುಕೊಂಡು ಆಮ್ಲಜನಕದ ಮಟ್ಟ 95ಕ್ಕಿಂತ ಕೆಳಗಿಳಿಯುತ್ತಿದ್ದಂತೆ ಚಿಕಿತ್ಸೆ ಪಡೆಯಲು ಪ್ರಯತ್ನಿಸುವುದು ಒಳಿತು ಎಂದು ಹಿರಿಯ ವೈದ್ಯರೊಬ್ಬರು ಅಭಿಪ್ರಾಯ ಪಡುತ್ತಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪರಿಷತ್ತಿನಲ್ಲಿ ಬಸವರಾಜ ಹೊರಟ್ಟಿ ಬದಲಾವಣೆ ಇಲ್ಲ, ಈ ಕುರಿತು ಚರ್ಚೆ ಆಗಿಲ್ಲ: ಸಲೀಂ ಅಹ್ಮದ್
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು