ಬೆಂಗಳೂರು (ಮೇ.27): ಬ್ಲ್ಯಾಕ್ ಫಂಗಸ್ ಚಿಕಿತ್ಸಾ ವಿಧಾನಗಳ ಕುರಿತು ಸೂಕ್ತ ನೀತಿ ರೂಪಿಸಲಾಗುತ್ತಿದ್ದು, ತಕ್ಷಣದಿಂದಲೇ ಕೋವಿಡ್ ಚಿಕಿತ್ಸೆ ಪಡೆದ ರೋಗಿಗಳಿಗೆ ಮನೆಯಲ್ಲಿಯೇ ಕೌನ್ಸೆಲಿಂಗ್ ಮತ್ತು ನಿಗಾ ವ್ಯವಸ್ಥೆಗೂ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ರೋಗದ ಮೂಲ ಪತ್ತೆ ಮತ್ತು ಚಿಕಿತ್ಸಾ ವಿಧಾನಗಳ ಕುರಿತು ತೀರ್ಮಾನ ಕೈಗೊಳ್ಳುವ ಸಲುವಾಗಿ ವಿಕ್ಟೋರಿಯಾ ಆಸ್ಪತ್ರೆಯ ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥೆ ಡಾ.ಅಂಬಿಕಾ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಸಚಿವ ಡಾ.ಸಚ್ಚಿದಾನಂದ ಅಧ್ಯಕ್ಷತೆಯ ಎರಡು ಪ್ರತ್ಯೇಕ ಸಮಿತಿಗಳ ಜತೆ ಸಮಾಲೋಚನೆ ನಡೆಸಿದರು.
undefined
ರಾಜ್ಯದಲ್ಲಿ ಮತ್ತೆ ಕೊರೋನಾ ಏರಿಕೆ: ಆದ್ರೂ ಸೋಂಕಿತರಿಗಿಂತ ಗುಣಮುಖರಾದವರೇ ಹೆಚ್ಚು ...
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಎರಡೂ ಸಮಿತಿಗಳ ತಜ್ಞರ ಜತೆ ಸುದೀರ್ಘವಾಗಿ ಸಮಾಲೋಚನೆ ನಡೆಸಲಾಗಿದೆ. ಅವರು ನೀಡಿರುವ ಅಭಿಪ್ರಾಯಗಳ ಆಧಾರದ ಮೇಲೆ ಕೋವಿಡ್ ಚಿಕಿತ್ಸೆಗೆ ದಾಖಲಾಗುವ ರೋಗಿಗಳಿಗೆ ಮೊದಲ ವಾರ ಅನಗತ್ಯವಾಗಿ ಸ್ಟಿರಾಯ್ಡ್ ನೀಡದಂತೆ ವೈದ್ಯರಲ್ಲಿ ಮನವಿ ಮಾಡಲಾಗುತ್ತಿದೆ. ಚಿಕಿತ್ಸೆ ಆರಂಭಿಸಿದ ಎರಡನೇ ವಾರದಲ್ಲಿ ಅಗತ್ಯವಿದ್ದರೆ ಮಾತ್ರ ವೈದ್ಯರ ನಿಗಾ ವ್ಯವಸ್ಥೆಯಲ್ಲಿ ಸ್ಟಿರಾಯ್ಡ್ ನೀಡಬಹುದಾಗಿದೆ. ಈ ಕುರಿತು ಎಲ್ಲಾ ವೈದ್ಯರಿಗೂ ಸೂಚನೆ ನೀಡಲಾಗುವುದು ಎಂದರು.
ಬೆಂಗಳೂರು ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ರೋಗದ ಸೋಂಕಿನಿಂದ 95 ಮಂದಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ಪೈಕಿ 70ಕ್ಕೂ ಹೆಚ್ಚು ಮಂದಿ ಅತಿಯಾದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ರಾಜ್ಯದ ಇತರೆ ಆಸ್ಪತ್ರೆಯಲ್ಲಿರುವ ರೋಗಿಗಳಲ್ಲಿ ಸಹ ಕಂಡು ಬಂದಿರುವ ಈ ಅಂಶವನ್ನು ತಜ್ಞರು ಸ್ಪಷ್ಟಪಡಿಸಿದ್ದಾರೆ. ಅತಿಯಾದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಸ್ಟಿರಾಯ್ಡ್ ನೀಡಿದಾಗ ಬ್ಲ್ಯಾಕ್ ಫಂಗಸ್ ಕಂಡು ಬಂದಿದೆ ಎಂದು ತಜ್ಞರು ಹೇಳಿದ್ದಾರೆ. ಇದಲ್ಲದೆ, ಸಕ್ಕರೆ ಮತ್ತು ಗುರುತಿಸಿರುವ ಇತರೆ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಕೋವಿಡ್ ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಬಿಡುಗಡೆಗೆ ಸಂಬಂಧಪಟ್ಟಂತೆ ಸ್ಪಷ್ಟಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಬಿಡುಗಡೆಗೂ ಮುನ್ನ ಎನ್‌ಇಟಿ ತಜ್ಞರಿಂದ ಪರಿಶೀಲನೆ, ಅಗತ್ಯವಿದ್ದರೆ ಎಂಆರ್‌ಐ ಪರೀಕ್ಷೆ ಬಿಡುಗಡೆಯಾಗಿ ಮನೆಗೆ ಹಿಂತಿರುಗಿದ ಒಂದು ವಾರದ ಬಳಿಕ ಅವರಾಗಿಯೇ ಬಂದು ಜಿಲ್ಲಾಸ್ಪತ್ರೆಯಲ್ಲಿ ಆರಂಭಿಸಲಿರುವ ಕೋವಿಡ್ ನಂತರದ ಚಿಕಿತ್ಸಾ ವಾರ್ಡ್‌ಗಳಲ್ಲಿ ಪರೀಕ್ಷಿಸಬೇಕು. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗುವುದು ಎಂದು ತಿಳಿಸಿದರು.
ವಿಡಿಯೋ ಕಾಲ್ ಕೌನ್ಸೆಲಿಂಗ್
ಕೋವಿಡ್ ನಂತರದ ಚಿಕಿತ್ಸಾ ವಾರ್ಡ್‌ಗೆ ತಪಾಸಣೆಗೆ ಬರಲು ಸಾಧ್ಯವಾಗದವರಿಗೆ ವಿಡಿಯೋ ಕಾಲ್ ಮೂಲಕ ಕೌನ್ಸೆಲಿಂಗ್ ಮಾಡಲಾಗುವುದು. 15 ದಿನಗಳ ಕಾಲ ಅವರನ್ನು ಪರಿಶೀಲನೆಗೆ ಒಳಪಡಿಸಲಾಗುವುದು. ಒಂದು ವೇಳೆ ಯಾರಿಗಾದರೂ ರೋಗ ಲಕ್ಷಣ ಕಂಡು ಬಂದಲ್ಲಿ ಅವರನ್ನು ವಿಡಿಯೋ ಕಾಲ್ ಮೂಲಕ ಪರಿಶೀಲಿಸಿ ಅಗತ್ಯವಿದ್ದರೆ ಆಸ್ಪತ್ರೆಗೆ ಕರೆತರಲು ವ್ಯವಸ್ಥೆ ಮಾಡಲಾಗುವುದು. ಈ ಎಲ್ಲಾ ಅಂಶಗಳನ್ನು ಡಿಸ್ಚಾಚ್‌ರ್ ನೀತಿಯಲ್ಲಿ ಅಳವಡಿಸಲಾಗುವುದು ಎಂದು ಇದೇ ವೇಳೆ ಸುಧಾಕರ್ ಹೇಳಿದರು.
ಮತ್ತೆ 2 ಲಕ್ಷ ಡೋಸ್ ಕೋವಿಶೀಲ್ಡ್ ರಾಜ್ಯಕ್ಕೆ
ಕೇಂದ್ರ ಸರ್ಕಾರದ ಕೋಟಾದಡಿಯಲ್ಲಿ ಬುಧವಾರ 2 ಲಕ್ಷ ಡೋಸ್ ಕೋವಿಶೀಲ್ಡ್ ಕರ್ನಾಟಕಕ್ಕೆ ಬಂದಿದೆ. ಲಸಿಕೆಯನ್ನು ಪೂರೈಸಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ. ಕೇಂದ್ರದಿಂದ ಪಡೆದ ಒಟ್ಟು ಕೋವಿಶೀಲ್ಡ್ ಪ್ರಮಾಣ 1.07 ಕೋಟಿ ಡೋಸ್ ಮತ್ತು ರಾಜ್ಯವು ನೇರವಾಗಿ ಖರೀದಿಸಿದ ಒಟ್ಟು ಕೋವಿಶೀಲ್ಡ್ ಪ್ರಮಾಣ 13.54 ಲಕ್ಷ ಡೋಸ್ ಆಗಿದೆ ಎಂದಿದ್ದಾರೆ.
ಏನೇನು ಸಲಹೆ?
- ಕೊರೋನಾ ಪೀಡಿತರಿಗೆ ಮೊದಲ ವಾರ ಅನಗತ್ಯವಾಗಿ ಸ್ಟಿರಾಯ್ಡ್ ನೀಡದಂತೆ ವೈದ್ಯರಿಗೆ ಸೂಚನೆ
- ಅನ್ಯರೋಗ ಇರುವ ಕೋವಿಡ್ ಸೋಂಕಿತರ ಬಿಡುಗಡೆಗೆ ಮುನ್ನ ಎನ್‌ಐಟಿ ತಜ್ಞರಿಂದ ತಪಾಸಣೆ
- ಮನೆಗೆ ಹಿಂತಿರುಗಿದ 1 ವಾರ ಬಳಿಕ ರೋಗಿಯು ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು
- ತಪಾಸಣೆಗೆ ಬರಲು ಸಾಧ್ಯವಾಗದವರಿಗೆ ವಿಡಿಯೋ ಕಾಲ್ ಮೂಲಕ ಕೌನ್ಸೆಲಿಂಗ್ ಮಾಡುವ ವ್ಯವಸ್ಥೆ
- ಸೋಂಕಿನಿಂದ ಚೇತರಿಸಿಕೊಂಡವರ ಬಗ್ಗೆ ಸತತ 15 ದಿನಗಳ ಕಾಲ ನಿಗಾ: ಶೀಘ್ರ ಡಿಸ್ಚಾರ್ಜ್ ನೀತಿ