1 ತಿಂಗಳಲ್ಲಿ 50 ಸಾವಿರ ಮಕ್ಕಳಿಗೆ ಕೊರೋನಾ ಸೋಂಕು..!

Kannadaprabha News   | Asianet News
Published : Jun 23, 2021, 07:10 AM ISTUpdated : Jun 23, 2021, 07:18 AM IST
1 ತಿಂಗಳಲ್ಲಿ 50 ಸಾವಿರ ಮಕ್ಕಳಿಗೆ ಕೊರೋನಾ ಸೋಂಕು..!

ಸಾರಾಂಶ

* ಮೇ 20ರಿಂದ ಜೂನ್‌ 20ರವೆರಗೆ 50 ಸಾವಿರ ಮಕ್ಕಳಿಗೆ ಸೋಂಕು * ಹತ್ತು ದಿನಗಳಲ್ಲಿ ನಿತ್ಯ ಸರಾಸರಿ 700 ಮಕ್ಕಳಿಗೆ ಸೋಂಕು * ಬೆಂಗಳೂರು ಸುತ್ತಲಿನ ಜಿಲ್ಲೆಗಳಲ್ಲಿ ಕೇಸ್‌ ಏರಿಕೆ

ಬೆಂಗಳೂರು(ಜೂ.23): ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಕಡಿಮೆ ಆಗುತ್ತಿದ್ದರೂ ಮಕ್ಕಳಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಕ್ರಮೇಣ ಹೆಚ್ಚುತ್ತಿದೆ. ಕಳೆದ ಒಂದು ತಿಂಗಳಲ್ಲಿ 50 ಸಾವಿರಕ್ಕೂ ಹೆಚ್ಚು ಮಕ್ಕಳು ಸೋಂಕಿತರಾಗಿದ್ದು, 44 ಮಕ್ಕಳು ಈ ಮಹಾಮಾರಿಗೆ ಬಲಿಯಾಗಿದ್ದಾರೆ.

ಕೋವಿಡ್‌ ರಾಜ್ಯಕ್ಕೆ ಕಾಲಿಟ್ಟ 15 ತಿಂಗಳ ಪೈಕಿ ಕಳೆದ 30 ದಿನದಲ್ಲಿ ಮಕ್ಕಳಲ್ಲಿ ಗರಿಷ್ಠ ಸಾವು ಮತ್ತು ಸೋಂಕಿನ ಸಂಖ್ಯೆ ವರದಿಯಾಗಿದೆ. ಅನ್‌ಲಾಕ್‌ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಬೆಂಗಳೂರು ನಗರ, ಮೈಸೂರು, ರಾಮನಗರ, ಮಂಡ್ಯ, ಚಿಕ್ಕಬಳ್ಳಾಪುರ, ಗದಗ ಜಿಲ್ಲೆಗಳಲ್ಲಿ ಮಕ್ಕಳಲ್ಲಿನ ಸೋಂಕಿನ ಪ್ರಕರಣ ಕೂಡ ಭಾರಿ ಏರಿಕೆ ಆಗುತ್ತಿದೆ. ರಾಜ್ಯದಲ್ಲಿ ಕಳೆದ ಹತ್ತು ದಿನಗಳಿಂದ ಪ್ರತಿದಿನ ಸರಾಸರಿ 700 ಮಕ್ಕಳಲ್ಲಿ ಕೋವಿಡ್‌ ಸೋಂಕು ಪತ್ತೆಯಾಗುತ್ತಿದೆ.

ಮೇ 20ರ ಹೊತ್ತಿಗೆ ರಾಜ್ಯದಲ್ಲಿ 9 ವರ್ಷದೊಳಗಿನ ಒಟ್ಟು 68,635 ಮತ್ತು 10 ರಿಂದ 18 ವರ್ಷದೊಳಗಿನ 1,73,286 ಮಕ್ಕಳು ಕೋವಿಡ್‌ನಿಂದ ಬಾಧಿತರಾಗಿದ್ದರು. ಒಟ್ಟು 106 ಮಕ್ಕಳು ಮೃತಪಟ್ಟಿದ್ದರು. ಅದೇ ಜೂನ್‌ 20ರ ಹೊತ್ತಿಗೆ ಮತ್ತೆ 12 ಸಾವಿರ ಎಳೆಯ ಮಕ್ಕಳು ಮತ್ತು 10 ವರ್ಷ ಮೇಲ್ಟಟ್ಟ40 ಸಾವಿರ ಮಕ್ಕಳಲ್ಲಿ ಹೊಸದಾಗಿ ಸೋಂಕು ದೃಢ ಪಟ್ಟಿದೆ. ಈ ಒಂದು ತಿಂಗಳ ಅವಧಿಯಲ್ಲೇ 44 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ.

ಕೊರೋನಾ ಕಾಲದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಬಹುದಾ? ವೈದ್ಯರ ಉತ್ತರ

ಕೊರೋನಾ ಸೋಂಕು ದೇಹ ಪ್ರವೇಶಿಸಲು ಅವಕಾಶ ನೀಡುವ ಅಂಗಾಣು ಬೆಳೆದಿರುವುದಿಲ್ಲವಾದ್ದರಿಂದ ಮಕ್ಕಳಿಗೆ ಸೋಂಕು ಹರಡುವ ಸಾಧ್ಯತೆ ಕಡಿಮೆ ಎಂದು ನಾವೆಲ್ಲ ಭಾವಿಸಿದ್ದೆವು. ಆದರೆ ಈಗ ಮಕ್ಕಳಲ್ಲಿಯೂ ಸೋಂಕು ದೊಡ್ಡ ಮಟ್ಟದಲ್ಲಿ ಕಾಣಿಸಿಕೊಳ್ಳುತ್ತಿದೆ. ಅನ್‌ಲಾಕ್‌ ಆರಂಭಗೊಳ್ಳುತ್ತಿದ್ದಂತೆ ಮಕ್ಕಳಲ್ಲಿನ ಸೋಂಕಿನ ಪ್ರಕರಣ ಕೂಡ ಭಾರಿ ಏರಿಕೆ ಆಗುತ್ತಿದೆ. ಐದು ವರ್ಷದೊಳಗಿನ ಮಕ್ಕಳಿಗೆ ನೀಡುವ ವಿವಿಧ ಲಸಿಕೆಗಳು ಕೋವಿಡ್‌ ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಈ ವರ್ಷ ಲಸಿಕಾ ಅಭಿಯಾನ ಕೂಡ ಸೂಕ್ತ ರೀತಿಯಲ್ಲಿ ನಡೆದಿಲ್ಲ. ಹಾಗೆಯೇ ಸಾಮಾನ್ಯವಾಗಿ ಮಕ್ಕಳು ಶಾಲೆಗಳಿಗೆ ಹೋಗುವಾಗ ವರ್ಷಕ್ಕೆ 5 ರಿಂದ 8 ಬಾರಿ ವಿವಿಧ ವೈರಾಣುಗಳ ದಾಳಿಗೆ ತುತ್ತಾಗುತ್ತಾರೆ.

ಇದರಿಂದ ಅವರಲ್ಲಿ ಪ್ರತಿರೋಧ ಶಕ್ತಿ ಬೆಳೆಯುತ್ತದೆ. ಆದರೆ ಕಳೆದ 15 ತಿಂಗಳಿನಿಂದ ಇದಕ್ಕೂ ಅವಕಾಶ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಮಕ್ಕಳು ಕೋವಿಡ್‌ನಿಂದ ಈ ಬಾರಿ ತೊಂದರೆಗೆ ಸಿಲುಕುವ ಸಾಧ್ಯತೆಯಿದೆ ಎಂದು ಚಂದ್ರಮ್ಮ ದಯಾನಂದ ಸಾಗರ ಮೆಡಿಕಲ್‌ ಕಾಲೇಜಿನ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ. ಆಶಾ ಬೆನಕಪ್ಪ ಹೇಳುತ್ತಾರೆ.

ಮಕ್ಕಳಿಗೆ ಕೋವಿಡ್‌ ಚಿಕಿತ್ಸೆ ನೀಡಲು ನಮ್ಮಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆಯಿದೆ. ವೈದ್ಯರ ಕೊರತೆಯೂ ದೊಡ್ಡ ಮಟ್ಟದಲ್ಲಿದೆ. ಹಾಗೆಯೇ ಮಕ್ಕಳು ಇನ್ನೂ ಲಸಿಕಾ ಅಭಿಯಾನದ ವ್ಯಾಪ್ತಿಗೆ ಬಂದಿಲ್ಲ. ಆದ್ದರಿಂದ ಮಕ್ಕಳೊಂದಿಗೆ ಹಿರಿಯರು ವ್ಯವಹರಿಸುವಾಗ ಸಾಮಾಜಿಕ ಅಂತರ, ಮಾಸ್ಕ್‌ ಧಾರಣೆ ಮತ್ತು ಹ್ಯಾಂಡ್‌ ಸ್ಯಾನಿಟೈಸ್‌ ಮಾಡುವ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದು ಡಾ. ಆಶಾ ಬೆನಕಪ್ಪ ಹೇಳುತ್ತಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ