
ಬೆಂಗಳೂರು[ನ.28]: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕದಲ್ಲಿ ಪಾಲಿಸಲಾಗುತ್ತಿರುವ ಪಾಲುದಾರಿಕೆ ವ್ಯವಸ್ಥೆ ಇದೀಗ ಶಿಕ್ಷಣ ಇಲಾಖೆಗೂ ಕಾಲಿಟ್ಟಿದೆ. ರಾಜ್ಯದ 19 ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರ ನೇಮಕದಲ್ಲಿ ಈ ಪಾಲುದಾರಿಕೆ ಆರಂಭವಾಗಿದೆ. ಅಷ್ಟೇ ಅಲ್ಲ ಉಭಯ ಪಕ್ಷಗಳು ತಮ್ಮ ಪಾಲನ್ನು ಹೆಚ್ಚಿಸಿಕೊಳ್ಳಲು ತೀವ್ರ ಪ್ರಯತ್ನ ನಡೆಸಿವೆ.
ಪ್ರತಿ ವಿಶ್ವವಿದ್ಯಾಲಯಗಳ ನೇಮಕಾತಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಸದಸ್ಯತ್ವಕ್ಕಾಗಿ ಲಾಬಿ ಮಾಡುತ್ತಿದ್ದಾರೆ. ನೇಮಕಾತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡರ ಬಳಿ ಅರ್ಜಿಗಳನ್ನು ನೀಡುತ್ತಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸಚಿವರ ಸಂಖ್ಯೆಯನ್ನು ಇಂತಿಷ್ಟುಎಂದು ಹಂಚಿಕೊಂಡಿರುವಂತೆ ವಿವಿಗಳ ಸಿಂಡಿಕೇಟ್ ನೇಮಕಾತಿಗೂ ರಾಜಕೀಯ ಲೆಕ್ಕಾಚಾರ ಹಾಕಲಾಗುತ್ತಿದೆ. ಇದಕ್ಕಾಗಿಯೇ ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ಕಾಂಗ್ರೆಸ್ ಶೇ.75ರಷ್ಟುಸ್ಥಾನಗಳು ತನಗೆ ಬೇಕು. ಉಳಿದ 25 ಜೆಡಿಎಸ್ಗೆ ಬಿಟ್ಟುಕೊಡಬಹುದು ಎಂಬ ಲೆಕ್ಕಾಚಾರದಲ್ಲಿದ್ದರೆ, ಜೆಡಿಎಸ್ 60:40 ಅನುಪಾತವೇ ಆಗಬೇಕು ಎಂದು ಪಟ್ಟು ಹಿಡಿದಿದೆ ಎನ್ನಲಾಗಿದೆ. ಹೀಗಾಗಿ ಈ ವಿಚಾರ ಇನ್ನೂ ಬಗೆಹರಿಯಬೇಕಿದೆ. ಇದರ ಪರಿಣಾಮ ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕಾತಿಯಂತೆ ಸಿಂಡಿಕೇಟ್ ಸದಸ್ಯತ್ವ ಕೂಡ ವಿಳಂಬವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
111 ಹುದ್ದೆಗೆ 4520 ಅರ್ಜಿ:
ಒಟ್ಟಾರೆ ರಾಜ್ಯದ 19 ವಿವಿಗಳಿಂದ 111 ಸಿಂಡಿಕೇಟ್ ಹುದ್ದೆಗಳಿವೆ. ಈ ಪೈಕಿ ಪರಿಶಿಷ್ಟಜಾತಿ, ಪಂಗಡ ಕೋಟಾದಡಿ 23 ಹುದ್ದೆಗಳಿದ್ದು, ಹಿಂದುಳಿದ ವರ್ಗಕ್ಕೆ 16, ಮಹಿಳೆಯರಿಗೆ 19, ಧಾರ್ಮಿಕ ಅಲ್ಪಸಂಖ್ಯಾತರಿಗೆ 17 ಮತ್ತು ಇತರೆ 36 ಹುದ್ದೆಗಳು ಸೇರಿ ಒಟ್ಟಾರೆ 111 ಹುದ್ದೆಗಳಿಗೆ ನೇಮಕಾತಿ ಮಾಡಬೇಕಿದೆ. ಸರ್ಕಾರಕ್ಕೆ ಅಧಿಕೃವಾಗಿಯೇ 4520 ಅರ್ಜಿಗಳು ಬಂದಿವೆ. ಇದಲ್ಲದೆ, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರ ಬಳಿಯೂ ನೂರಾರು ಅರ್ಜಿಗಳು ಬಂದಿವೆ.
ಅಂದಾಜು 30 ಲಕ್ಷ ರು.ಗೆ ಡೀಲ್:
ಅಂದಾಜು 30ರಿಂದ 35 ಲಕ್ಷ ರು.ಗಳಿಗೆ ಸಿಂಡಿಕೇಟ್ ಸದಸ್ಯತ್ವದ ಡೀಲ್ ಕುದುರಿಸಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಅರ್ಹತೆ ಹೊಂದಿದ್ದರೂ ಸದಸ್ಯತ್ವ ಪಡೆಯುವುದಕ್ಕಾಗಿ ಲಾಬಿ ದೊಡ್ಡ ಮಟ್ಟದಲ್ಲಿಯೇ ನಡೆಯುತ್ತಿದೆ. ಮಾನದಂಡದ ಆಧಾರದಲ್ಲಿ ನೇಮಕಾತಿ ಮಾಡಿದರೂ ಆಕಾಂಕ್ಷಿಗಳು ಮತ್ತು ಅರ್ಹತೆ ಹೊಂದಿರುವವರು ಸಾಕಷ್ಟುಸಂಖ್ಯೆಯಲ್ಲಿರುವುದರಿಂದ ಲಾಬಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಬೆಳಗಾವಿ ಅಧಿವೇಶನದ ಬಳಿಕ ನೇಮಕ:
ಬೆಳಗಾವಿ ಅಧಿವೇಶನ ಮುಗಿದ ಬಳಿಕ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ. ಬಂದಿರುವ ಅರ್ಜಿಗಳನ್ನು ಪರಿಶೀಲನೆ ನಡೆಸಿದ ಬಳಿಕ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಂಡಿಕೇಟ್ ಸದಸ್ಯರಾಗಲು ಅರ್ಹತೆ ಏನು?
ಪ್ರಾಧ್ಯಾಪಕರು, ಸಂಶೋಧನಾ ವಿಭಾಗದಲ್ಲಿ ಕಾರ್ಯನಿರ್ವಹಿಸುವವರು, ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕುಲಸಚಿವರಾಗಿ ಅನುಭವ ಹೊಂದಿರುವವರು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ನಡೆಸುತ್ತಿರುವ ವಿದ್ವಾಂಸರು ಸೇರಿದಂತೆ ಉನ್ನತ ಶಿಕ್ಷಣದಲ್ಲಿ ಅನುಭವವುಳ್ಳವರನ್ನು ಸಿಂಡಿಕೇಟ್ ಸದಸ್ಯರಾಗಿ ನೇಮಕ ಮಾಡಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ