ಸೊಲ್ಲಾಪುರದ ಕನ್ನಡ ಶಿಕ್ಷಕ ಡಿಸ್ಲೆಗೆ ಶಾಸಕ ಸ್ಥಾನ?

By Kannadaprabha NewsFirst Published Dec 6, 2020, 9:12 AM IST
Highlights

ವಿಧಾನಪರಿಷತ್‌ಗೆ ನಾಮಕರಣ: ಬಿಜೆಪಿ ಮುಖಂಡ ಪ್ರವೀಣ್‌ ದಾರೇಕರ್‌ ಘೋಷಣೆ| ರಾಜ್ಯಪಾಲರಿಗೆ ಪತ್ರ ಬರೆಯಲಾಗುವುದು| ರಾಜ್ಯ ವಿಧಾನಸಭೆಯಲ್ಲಿ ಡಿಸ್ಲೆ ಅವರನ್ನು ಪ್ರಶಂಸಿಸುವ ನಿರ್ಣಯ ಪಾಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಕೋರಲಾಗುವುದು: ಪ್ರವೀಣ್‌ ದಾರೇಕರ್‌| 

ಪುಣೆ(ಡಿ.06): ಜಾಗತಿಕ ಶಿಕ್ಷಕ ಪ್ರಶಸ್ತಿ ಪಡೆದ ಮಹಾರಾಷ್ಟ್ರದ ಕನ್ನಡ ಶಿಕ್ಷಕ ರಣಜಿತ್‌ಸಿಂಹ ಡಿಸ್ಲೆ ಅವರಿಗೆ ಈಗ ಶಾಸಕನಾಗುವ ಯೋಗ ಒಲಿದು ಬಂದಿದೆ. ಡಿಸ್ಲೆ ಅವರನ್ನು ವಿಧಾನಪರಿಷತ್‌ ಸದಸ್ಯ ಹುದ್ದೆಗೆ ನಾಮಕರಣ ಮಾಡುವಂತೆ ಶಿಫಾರಸು ಮಾಡುತ್ತೇವೆ ಎಂದು ಮಹಾರಾಷ್ಟ್ರ ಬಿಜೆಪಿ ಮುಖಂಡ ಪ್ರವೀಣ್‌ ದಾರೇಕರ್‌ ಹೇಳಿದ್ದಾರೆ.

ಡಿಸ್ಲೆ ಅವರನ್ನು ಶನಿವಾರ ಭೇಟಿಯಾಗಿ ಮಾತನಾಡಿದ ದಾರೇಕರ್‌ ಈ ವಿಷಯ ತಿಳಿಸಿದರು. ‘ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ ಪಾಟೀಲ್‌ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರ ಜತೆ ಈ ಬಗ್ಗೆ ಮಾತನಾಡುವೆ ಹಾಗೂ ನಂತರ ರಾಜ್ಯಪಾಲರಿಗೆ ಪತ್ರ ಬರೆಯಲಾಗುವುದು’ ಎಂದರು.

ಕನ್ನಡ ಕಲಿಸುವ 32 ವರ್ಷದ ಶಿಕ್ಷಕಗೆ ಒಲಿದ 7.5 ಕೋಟಿ ರು. : ಇಲ್ಲಿದೆ ಅವರ ಯಶೋಗಾಥೆ

ಇದಲ್ಲದೆ, ರಾಜ್ಯ ವಿಧಾನಸಭೆಯಲ್ಲಿ ಡಿಸ್ಲೆ ಅವರನ್ನು ಪ್ರಶಂಸಿಸುವ ನಿರ್ಣಯ ಪಾಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಕೋರಲಾಗುವುದು ಎಂದರು. ಮರಾಠಿ ಮಾತೃಭಾಷೆ ಆಗಿದ್ದರೂ ಕನ್ನಡ ಕಲಿತು ಸೊಲ್ಲಾಪುರದ ಕನ್ನಡ ಭಾಷಿಕ ವಿದ್ಯಾರ್ಥಿನಿಯರಿಗೆ ಕನ್ನಡ ಮಾಧ್ಯಮ ಬೋಧಿಸಿದ ಹೆಗ್ಗಳಿಕೆ ಡಿಸ್ಲೆ ಅವರದು. ಇದಕ್ಕೆಂದೇ ಅವರಿಗೆ ಇತ್ತೀಚೆಗೆ ಜಾಗತಿಕ ಶಿಕ್ಷಕ ಪ್ರಶಸ್ತಿ ದೊರಕಿತ್ತು.

ಕನ್ನಡ ಕಲಿಸಿ ಜಾಗತಿಕ ಪ್ರಶಸ್ತಿ ಗೆದ್ದ ಡಿಸ್ಲೆಗೆ ಕಸಾಪ ಅಭಿನಂದನೆ

ಮಾತೃಭಾಷೆ ಮರಾಠಿಯಾದರೂ ಕನ್ನಡ ಕಲಿತು ಮತ್ತು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಮಕ್ಕಳಿಗೆ ಕನ್ನಡದಲ್ಲಿಯೇ ಕಲಿಸಿ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ರಂಜಿತ್‌ ಸಿಂಹ ಡಿಸ್ಲೆ ಅವರಿಗೆ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮನು ಬಳಿಗಾರ್‌ ಅಭಿನಂದನೆ ಸಲ್ಲಿಸಿದ್ದಾರೆ.

ಕಲಿಕೆಯ ಅನುಕೂಲಗಳು ಜಾಸ್ತಿ ಇಲ್ಲದ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಜೀವನದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬ ಎಂತಹ ಮಹತ್ತರ ಬದಲಾವಣೆ ತರಬಹುದು ಎಂಬುದನ್ನು ನಮ್ಮ ಮುಂದೆ ತೆರೆದಿಟ್ಟಿರುವ ಡಿಸ್ಲೆ ಅವರು ತಮ್ಮ ಪ್ರಶಸ್ತಿ ಮೊತ್ತವನ್ನು ಇತರ ಸ್ಪರ್ಧಿಗಳ ಜೊತೆಗೆ ಹಂಚಿಕೊಳ್ಳುವ ಮೂಲಕ ತಾವು ದೊಡ್ಡ ಮನಸ್ಸಿನ ವ್ಯಕ್ತಿ ಎಂಬುದನ್ನೂ ಸಾಬೀತು ಮಾಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪತ್ರಿಕೆಗಳ ಮೂಲಕ ತಿಳಿದು ಬಂದಿರುವಂತೆ ಡಿಸ್ಲೆ ಅವರು ಕ್ಯು.ಆರ್‌.ಕೋಡ್‌ ತಂತ್ರಜ್ಞಾನವನ್ನು ವಿಶೇಷವಾಗಿ ಬಳಸಿ, ಮರಾಠಿ ಭಾಷೆಯಲ್ಲಿನ ಪಠ್ಯಗಳನ್ನು ಕನ್ನಡಕ್ಕೆ ಅಳವಡಿಸಿ ಗಡಿ ಪ್ರದೇಶದಲ್ಲಿನ ಕನ್ನಡದ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಬೆಳೆಸಿದ್ದಾರೆ. ಅವರ ಈ ಅಮೋಘ ಸಾಧನೆಯನ್ನು ರಾಜ್ಯದ ಕನ್ನಡ ಶಾಲೆಗಳಲ್ಲಿಯೂ ಬಳಸಲು ಸಾಧ್ಯವೇ ಎಂದು ಯೋಚಿಸಬೇಕು. ಕರ್ನಾಟಕಕ್ಕೆ ಹೊಂದಿಕೊಂಡ ಇತರ ಗಡಿ ಪ್ರದೇಶದಲ್ಲಿನ ಶಾಲೆಗಳಲ್ಲಿಯೂ ಅಳವಡಿಸಿ ಅಲ್ಲಿನ ಕನ್ನಡ ಮಾಧ್ಯಮದ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದ್ದಾರೆ.

click me!