15 ಕೋಟಿ ವೆಚ್ಚದಲ್ಲಿ ರಾಡಾರ್ ಅನುಷ್ಠಾನ|200 ಕಿ.ಮೀ. ವ್ಯಾಪ್ತಿಯಲ್ಲಿ ಮಳೆಯ ಮುನ್ಸೂಚನೆ ಲಭ್ಯ,ಪ್ರತಿ ನಿಮಿಷದ ಮಳೆ ಮಾಹಿತಿ|ರಾಜ್ಯದಲ್ಲೇ ಮೊದಲ ಬಾರಿಗೆ ನಗರದಲ್ಲಿ ಅಳವಡಿಕೆ: ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್|
ಬೆಂಗಳೂರು(ಆ.08): ಎಲ್ಲಿ, ಯಾವಾಗ ಎಷ್ಟು ಪ್ರಮಾಣದಲ್ಲಿ ಮಳೆಯಾಗಲಿದೆ ಎಂಬುದರ ಬಗ್ಗೆ ಪ್ರತಿ ನಿಮಿಷ ಮಾಹಿತಿ ನೀಡುವ ಸುಮಾರು 15 ಕೋಟಿ ವೆಚ್ಚದಲ್ಲಿ ಡೆಪ್ಲರ್ ವೆದರ್ ರಾಡಾರ್’ ಅನ್ನು ರಾಜ್ಯದಲ್ಲಿ ಪ್ರಥಮ ಬಾರಿಗೆ ಅಳವಡಿಸಲು ತೀರ್ಮಾನಿಸಲಾಗಿದೆ.
ವಿಪತ್ತು ನಿರ್ವಹಣೆ ಅನುದಾನಡಿ ಈ ರಾಡಾರ್ ಅಳವಡಿಸಲು ತೀರ್ಮಾನಿಸಲಾಗಿದೆ. ಈ ರಾಡಾರ್ ವಿಶೇಷವೆಂದರೆ, 100 ಕಿ.ಮೀ.ಯಿಂದ 200 ಕಿ.ಮೀ. ವ್ಯಾಪ್ತಿಯಲ್ಲಿ ಮೋಡಗಳನ್ನು ಅಳೆಯಲಿದೆ. ಅಂತೆಯೆ ಮೋಡ ಪ್ರಮಾಣ ಎಷ್ಟಿದೆ ಎಂಬುದನ್ನು ವಿಶ್ಲೇಷಿಸಲಿದೆ. ಜೊತೆಗೆ ಎಲ್ಲಿ ಮಳೆಯಾಗುತ್ತದೆ, ಎಷ್ಟು ಪ್ರಮಾಣದಲ್ಲಿ ಮಳೆಯಾಗುತ್ತದೆ ಎಂಬುದರ ಬಗ್ಗೆ ಮುನ್ಸೂಚನೆ ನೀಡಲಿದೆ. ಸಾಮಾನ್ಯ ಇಂತಹ ರಾಡಾರ್‌ಗಳನ್ನು ಕರಾವಳಿ ಮತ್ತು ವಿಮಾನ ನಿಲ್ದಾಣಗಳಲ್ಲಿ ಬಳಕೆ ಮಾಡಲಾಗುತ್ತದೆ. ಭಾರತೀಯ ಹವಾಮಾನ ಇಲಾಖೆ ಈ ರಾಡಾರ್ ಅಳವಡಿಕೆ ಮಾಡುತ್ತದೆ. ಈ ಮಾದರಿಯ ರಾಡಾರ್‌ಗಳು ದೇಶದಲ್ಲಿ ಒಟ್ಟು 30 ಮಾತ್ರ ಇವೆ ಎನ್ನಲಾಗಿದೆ.
undefined
ವಿಪತ್ತು ನಿರ್ವಹಣೆ ಅಡಿ ಕಂದಾಯ ಇಲಾಖೆ ಬಿಬಿಎಂಪಿಗೆ ನೀಡಿರುವ 50 ಕೋಟಿ ಪೈಕಿ 15 ಕೋಟಿ ವೆಚ್ಚದಲ್ಲಿ ಯಾವ ಸ್ಥಳದಲ್ಲಿ ಎಷ್ಟು ಮಳೆ ಬಿದ್ದಿದೆ ಎಂಬ ಅಂಕಿ-ಅಂಶ ಪಡೆಯಲು ರಾಡಾರ್ ಅನುಷ್ಠಾನಗೊಳಿಸಲು ಸೂಚಿಸಲಾಗಿದೆ. ಉಳಿದ 35 ಕೋಟಿ ಅನುದಾನದಿಂದ ಪ್ರವಾಹ ತಡೆಗೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಬಗ್ಗೆ ಯೋಜನೆ ರೂಪಿಸಲು ಇಂಜಿನಿಯರ್‌ಗಳಿಗೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಕೆಂಪೇಗೌಡ ಏರ್‌ಪೋರ್ಟ್ ರಾಡಾರ್‌ನಿಂದ ವಾಯುಪಡೆ ವಿಮಾನಗಳ ಮೇಲೆ ಕಣ್ಗಾವಲು!
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ಪಾಲಿಕೆ ವ್ಯಾಪ್ತಿಯಲ್ಲಿ ಮಳೆಯ ಮುಂಜಾಗ್ರತ ಕ್ರಮಗಳ ಸಿದ್ಧತೆ ಪರಿಶೀಲನೆ ಸಭೆ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್, ರಾಜಧಾನಿಯಲ್ಲಿ ಮಳೆ ಹಾಗೂ ಪ್ರವಾಹ ಎದುರಿಸಲು 63 ವಿಭಾಗಗಳಿಗೆ ತಲಾ ಒಂದು ನಿಯಂತ್ರಣ ಕೊಠಡಿ, 28 ವಿಧಾನಸಭಾ ಕ್ಷೇತ್ರಗಳಿಗೆ ಒಂದರಂತೆ ತುರ್ತು ಪರಿಹಾರ ಕಾರ್ಯ ಮಾಡುವ ತಂಡ ರಚನೆ ಸೇರಿದಂತೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಬಿಬಿಎಂಪಿ ಕೈಗೊಂಡಿದೆ. ನಗರದಲ್ಲಿ ಹೆಚ್ಚಿನ ಮಳೆ ಬಂದರೆ ಯಾವ ರೀತಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ, ಯಾವ ಕ್ರಮ ಕೈಗೊಳ್ಳಬೇಕು ಎಂಬುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಬಿಬಿಎಂಪಿಯ ವಿವಿಧ ವಿಭಾಗಗಳ ಇಂಜಿನಿಯರ್‌ಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಅಗತ್ಯ ಸಲಹೆ ಸೂಚನೆ ನೀಡಲಾಗಿದೆ ಎಂದರು.
28 ತಂಡ ರಚನೆ:
ನಗರದಲ್ಲಿ ಮಳೆ ಬಂದಾಗ ಪ್ರಮುಖವಾಗಿ ಎದುರಾಗುವ ಮಳೆ, ಗಾಳಿಗೆ ಮರದ ಕೊಂಬೆ, ಮರ ಮುರಿದು ಬೀಳುವುದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದು ಹಾಗೂ ರಸ್ತೆ ಗುಂಡಿ ಸಮಸ್ಯೆಗಳನ್ನು ಎದುರಿಸಲು ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 28 ತಂಡ ರಚಿಸಲಾಗಿದೆ. ತಂಡದ ವಾಹನಗಳಿಗೆ ಜಿಪಿಎಸ್ ಅಳವಡಿಸಿದ್ದು, ಯಾವ ತಂಡ ಎಲ್ಲಿದೆ ಎಂದು ಟ್ರ್ಯಾಕ್ ಮಾಡಲು ಅವಕಾಶವಿದೆ ಎಂದರು.
ನೀರಿನ ಮಟ್ಟ ತಿಳಿಯಲು ಸೆನ್ಸರ್ ಅಳವಡಿಕೆ
ನಗರದಲ್ಲಿ ಒಟ್ಟು 842 ಕಿ.ಮೀ. ಉದ್ದದ ರಾಜಕಾಲುವೆಯಿದ್ದು, ಈ ಪೈಕಿ 389 ಕಿ.ಮೀ. ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡಿದ್ದು, ಇಲ್ಲಿ ಯಾವುದೇ ಸಮಸ್ಯೆಯಿಲ್ಲ. ಉಳಿದ 453 ಕಿ.ಮೀ. ಉದ್ದದ ರಾಜಕಾಲುವೆ ಕಚ್ಚಾ ಕಾಲುವೆಯಾಗಿದ್ದು, ಇದರಲ್ಲಿ 209 ಹಾಳಾಗಿರುವ ಸ್ಥಳಗಳನ್ನು ಗುರುತಿಸಲಾಗಿದೆ. ಈ ಪೈಕಿ 153 ಸೂಕ್ಷ್ಮ ಹಾಗೂ 56 ಅತಿಸೂಕ್ಷ್ಮ ಸ್ಥಳ ಗುರುತಿಸಲಾಗಿದೆ. ಈ ಸ್ಥಳಗಳಲ್ಲಿ ಮಳೆಯಿಂದ ನೀರಿನ ಮಟ್ಟಹೆಚ್ಚಾಗಿ ಉಕ್ಕಿ ಹರಿಯುವ ಸಾಧ್ಯತೆಯಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ನೀರಿನ ಮಟ್ಟ ಏರಿಕೆ ಬಗ್ಗೆ ಮಾಹಿತಿ ಪಡೆಯಲು ಈ 209 ಸ್ಥಳಗಳಲ್ಲಿ 28 ಕಡೆ ಸೆನ್ಸಾರ್ ಅಳಡಿಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಸ್ಥಳಗಳಿಗೂ ಸೆನ್ಸಾರ್ ಅಳವಡಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಗುತ್ತಿಗೆದಾರನಿಗೆ ರಸ್ತೆ ನಿರ್ವಹಣೆ ಹೊಣೆ:
ಮಳೆಗಾಲದಲ್ಲಿ ಸಾಮಾನ್ಯವಾಗಿ ರಸ್ತೆ ಗುಂಡಿಗಳದ್ದೂ ಒಂದು ಪ್ರಮುಖ ಸಮಸ್ಯೆಯಾಗುತ್ತದೆ. ಹೊಸ ರಸ್ತೆಗಳನ್ನು ಟೆಂಡರ್ ನಿಯಮದ ಅನ್ವಯ ಒಂದು ವರ್ಷದವರೆಗೆ ಗುತ್ತಿಗೆದಾರನೇ ನಿರ್ವಹಣೆ ಮಾಡಬೇಕು. ಉಳಿದ ರಸ್ತೆಗಳನ್ನು ಈ ಬಾರಿ ಬಿಬಿಎಂಪಿಯಿಂದಲೇ ನಿರ್ವಹಣೆ ಮಾಡಲು ತೀರ್ಮಾನಿಸಲಾಗಿದೆ. ಹೀಗಾಗಿ ಬಿಬಿಎಂಪಿಯಿಂದ ಹಾಟ್ ಮಿಕ್ಸ್ ಬಳಸಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಮಾಡಲಾಗುತ್ತದೆ ಎಂದು ಹೇಳಿದರು.
63 ನಿಯಂತ್ರಣ ಕೊಠಡಿ ಆರಂಭ
ಮಳೆ ಹಾಗೂ ಪ್ರವಾಹದ ಸಂದರ್ಭದಲ್ಲಿ ಸಾರ್ವಜನಿಕರ ದೂರು ಆಲಿಸಲು 198 ವಾರ್ಡ್‌ಗಳ ವ್ಯಾಪ್ತಿಯ 63 ಉಪ ವಿಭಾಗಗಳಿಗೆ ತಲಾ ಒಂದರಂತೆ 63 ನಿಯಂತ್ರಣ ಕೊಠಡಿ ಆರಂಭಿಸಲಾಗಿದೆ. ಸಾರ್ವಜನಿಕರು ಸಮಸ್ಯೆ ಹೇಳಿಕೊಂಡರೆ ತಕ್ಷಣ ಸ್ಪಂದಿಸಿ, ಸ್ಥಳಕ್ಕೆ ರಕ್ಷಣಾ ತಂಡಗಳನ್ನು ಕಳುಹಿಸಲಾಗುತ್ತದೆ. ಈ ನಿಯಂತ್ರಣ ಕೊಠಡಿಯ ಸಿಬ್ಬಂದಿ ಕಾರ್ಯ ವೈಖರಿ ಮೇಲೆ ನಿಗಾ ವಹಿಸಬೇಕು. ನಿಯಂತ್ರಣ ಕೊಠಡಿಗಳ ಸಂಖ್ಯೆ, ಸಿಬ್ಬಂದಿ ಮಾಹಿತಿಯನ್ನು ಪಾಲಿಕೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಹೇಳಿದರು.