ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಬೆನ್ನಲ್ಲೇ ಉತ್ತರಾಧಿಕಾರಿಯಾಗಿ ಲತಾಗೆ ಪಟ್ಟ?

By Chethan Kumar  |  First Published Nov 20, 2024, 9:00 AM IST

ನಕ್ಸಲ್ ನಾಯಕನ ವಿಕ್ರಂ ಗೌಡನನ್ನು ಪೊಲೀಸರು ಕಾರ್ಯಾಚರಣೆ ಮೂಲಕ ಎನ್‌ಕೌಂಟರ್ ಮಾಡಿದ್ದಾರೆ. ರಾಜ್ಯ ನಕ್ಸಲ್ ನಾಯಕತ್ವ ವಹಿಸಿದ್ದ ವಿಕ್ರಂ ಹತ್ಯೆ ಬೆನ್ನಲ್ಲೇ ಇದೀಗ ಉತ್ತರಾಧಿಕಾರಿಯಾಗಿ ಮುಂಡಗಾರು ಲತಾಗೆ ಪಟ್ಟ ಕಟ್ಟಲು ಸಿದ್ಧತೆ ನಡೆದಿದೆ.


ಕಾರ್ಕಳ(ನ.20) ಕಾರ್ಕಳ ಹೆಬ್ರಿಯ ಕಬ್ಬಿನಾಲೆ ಬಳಿ ಭಾನುವಾರ ರಾತ್ರಿ ನಕ್ಸಲ್‌ ವಿರುದ್ಧದ ಎನ್‌ಕೌಂಟರ್‌ನಲ್ಲಿ ನಕ್ಸಲ್‌ ಮುಖಂಡ ವಿಕ್ರಂ ಗೌಡ ಹತ್ಯೆಯಾಗಿದ್ದಾನೆ. ಈತ ಈ ಹಿಂದೆಯೇ ದ.ಕ.ಜಿಲ್ಲೆಯ ಗಡಿಭಾಗಗಳಲ್ಲೂ ತನ್ನ ಸಹಚರರೊಂದಿಗೆ ಸುತ್ತಾಡುತ್ತಿದ್ದ. ಮಾತ್ರವಲ್ಲ ಪೊಲೀಸ್‌ ಎನ್‌ಕೌಂಟರ್‌ನಿಂದ ಈ ಹಿಂದೆ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದ.ಕರ್ನಾಟಕದಲ್ಲಿ ನಕ್ಸಲ್ ಸಂಘಟನೆಯ ನೇತೃತ್ವ ವಹಿಸಿಕೊಂಡಿದ್ದ ವಿಕ್ರಂ ಗೌಡ ಹತ್ಯೆಯಾಗುತ್ತಿದ್ದಂತೆ ಇದೀಗ ಉತ್ತರಾಧಿಕಾರಿ ಆಯ್ಕೆಗೆ ಕಸರತ್ತು ನಡೆದಿದೆ. ಕಳೆರೆಡು ದಶಕಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮುಂಡಗಾರು ಲತಾ ನಾಯಕತ್ವ ವಹಿಸುವ ಸಾಧ್ಯತೆ ಇದೆ.

ವಿಕ್ರಂ ಗೌಡ ಎನ್‌ಕೌಂಟರ್‌ನಿಂದ ರಾಜ್ಯ ನಕ್ಸಲ್ ಚಟುವಟಿಕೆಯ ಮುಂದಾಳತ್ವ ವಹಿಸಲು ನಾಯಕನಿಲ್ಲದಾಗಿದೆ. ಹೀಗಾಗಿ ಈ ಸ್ಥಾನಕ್ಕೆ  ಸುಮಾರು ಎರಡು ದಶಕಗಳಿಂದ ನಕ್ಸಲ್‌ ಸಂಘಟನೆಯಲ್ಲಿರುವ ಮುಂಡಗಾರು ಲತಾ ನಾಯಕತ್ವ ವಹಿಸುವ ಸಾಧ್ಯತೆ ಇದೆ. ಹಾಗಾಗಿ ಪೊಲೀಸರ ಮತ್ತು ನಕ್ಸಲ್‌ ನಿಗ್ರಹ ಪಡೆಯ ಮುಂದಿನ ಟಾರ್ಗೆಟ್‌ ಮುಂಡಗಾರು ಲತಾ ಎನ್ನಲಾಗುತ್ತಿದೆ.

Tap to resize

Latest Videos

undefined

ಪೊಲೀಸರ ಕಾಟಕ್ಕೆ ಬೇಸತ್ತು ನಕ್ಸಲ್? ವಿಕ್ರಂ ಗೌಡನ ರೋಚಕ ಇತಿಹಾಸ!

ದ.ಕ.ದಲ್ಲಿ ನಕ್ಸಲ್‌ ಎನ್‌ಕೌಂಟರ್‌:
ದ.ಕ.ಜಿಲ್ಲೆಯಲ್ಲಿ ನಕ್ಸಲ್‌ ವಿರುದ್ಧದ ಮೊದಲ ಎನ್‌ಕೌಂಟರ್‌ ನಡೆದಿರುವುದು 2012ರಲ್ಲಿ. ಸೆ.2ರಂದು ಸುಬ್ರಹ್ಮಣ್ಯ ಸಮೀಪದ ಪಳ್ಳಿಗದ್ದೆ ಎಂಬಲ್ಲಿ ನಕ್ಸಲ್‌ ನಿಗ್ರಹದಳ(ಎಎನ್‌ಎಫ್‌) ಹಾಗೂ ನಕ್ಸಲರ ನಡುವೆ ಮುಖಾಮುಖಿ ನಡೆದಿತ್ತು. ಎಎನ್‌ಎಫ್‌ ಐಜಿಪಿ ಅಲೋಕ್‌ ಕುಮಾರ್‌ ನೇತೃತ್ವದಲ್ಲಿ ಎಎನ್‌ಎಫ್‌ ಸಿಬ್ಬಂದಿ ಕೂಂಬಿಂಗ್‌ ನಡೆಸಿದ್ದರು. ಸೆ.7ರಂದು ಬೆಳಗ್ಗೆ 7.45 ಗಂಟೆ ಸುಮಾರಿಗೆ ಬಾಗಿನಮಲೆ ರಕ್ಷಿತಾರಣ್ಯದಲ್ಲಿ ಮೀಸಲು ಪೊಲೀಸ್‌ ಪಡೆ, ಎಎನ್‌ಎಫ್‌ ಜೊತೆಯಾಗಿ ಕೂಂಬಿಂಗ್‌ ನಡೆಸುತ್ತಿದ್ದಾಗ ನಕ್ಸಲರು ಪತ್ತೆಯಾಗಿದ್ದರು. ಆಗ ಪೊಲೀಸ್‌ ಹಾಗೂ ನಕ್ಸಲರ ನಡುವೆ ಗುಂಡಿನ ಕಾಳಗ ನಡೆದಿದ್ದು, 10-12 ಮಂದಿ ನಕ್ಸಲರು ಕಾಡಿನಲ್ಲಿ ಓಡಿ ತಪ್ಪಿಸಿಕೊಂಡಿದ್ದರು. ಆದರೆ ಒಬ್ಬಾತ ಮೃತಪಟ್ಟಿದ್ದು. ಆತನನ್ನು ರಾಯಚೂರಿನ ಮುದ್ದುಗೋಡೆ ನಿವಾಸಿ ಯಲ್ಲಪ್ಪ(35) ಎಂದು ಗುರುತಿಸಲಾಗಿತ್ತು. ಈ ತಂಡದಲ್ಲಿ ವಿಕ್ರಂ ಗೌಡ, ಸುಂದರಿ ಮತ್ತಿತರರು ಇದ್ದರು ಎಂದು ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

11 ವರ್ಷ ಬಳಿಕ ಮತ್ತೆ ಪ್ರತ್ಯಕ್ಷ:
ನಂತರ ನಕ್ಸಲ್‌ ಸಂಚಾರ ಅಷ್ಟಾಗಿ ಪತ್ತೆಯಾಗದಿದ್ದರೂ 11 ವರ್ಷ ಬಳಿಕ 2023ರಲ್ಲಿ ದ.ಕ.-ಕೊಡಗು ಗಡಿ ಭಾಗಗಳಲ್ಲಿ ನಕ್ಸಲರು ಪ್ರತ್ಯಕ್ಷರಾಗಿ ಜನತೆಯಲ್ಲಿ ಮತ್ತೆ ಆತಂಕಕ್ಕೆ ಕಾರಣವಾಗಿತ್ತು.

ನೆಲ್ಯಾಡಿ ಬಳಿ ಮನೆಗೆ ಬಂದ ನಕ್ಸಲರು ದಿನಸಿ ಸಾಮಗ್ರಿಗೆ ಬೇಡಿಕೆ ಸಲ್ಲಿಸಿ ಮರಳಿದ್ದರು. ಸುಬ್ರಹ್ಮಣ್ಯದ ಕಲ್ಮಕಾರು ಕೂಜಿಮಲೆ ಅರಣ್ಯದ ಅಂಚಿನ ಮನೆಗೆ ಮಾರ್ಚ್‌ 17ರಂದು ಆಗಮಿಸಿದ್ದ ಐದಾರು ಮಂದಿಯ ನಕ್ಸಲ್‌ ತಂಡ ಆಹಾರ ಸಾಮಗ್ರಿ ಪಡೆದುಕೊಂಡು ತೆರಳಿತ್ತು. ಮನೆ ಮಂದಿಯಿಂದ ಅಕ್ಕಿ, ಸಾಮಗ್ರಿ, ನೀರುಳ್ಳಿ ಪಡೆದ ತಂಡದಲ್ಲಿ ಕನ್ನಡ ಮಾತನಾಡುವವರು ಇದ್ದರು. ಹೀಗಾಗಿ ಈ ತಂಡದಲ್ಲಿ ನಕ್ಸಲ್‌ ಮೋಸ್ಟ್‌ ವಾಂಟೆಡ್‌ ವಿಕ್ರಂ ಗೌಡನೇ ಇದ್ದಾನೆ. ಆತನ ಜೊತೆ ಸುಂದರಿ ಹಾಗೂ ಇತರರು ಇದ್ದಾರೆ ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದರು.

ಈದು ಎನ್‌ಕೌಂಟರ್‌ ಬಳಿಕ ಪಶ್ಚಿಮ ಘಟ್ಟ, ಪುಷ್ಪಗಿರಿ ಅರಣ್ಯ ಮೂಲಕ ಕೇರಳಕ್ಕೆ ಪರಾರಿಯಾಗಿದ್ದ ನಕ್ಸಲರು ಅಲ್ಲಿಂದ ಪಶ್ಚಿಮ ಘಟ್ಟಕ್ಕೆ ಮರಳಿದ್ದಾರೆ ಎಂದು ಹೇಳಲಾಗಿತ್ತು.

ಗುರಿ ತಪ್ಪಿದ ಎನ್‌ಕೌಂಟರ್‌:
2011ರಲ್ಲಿ ಬೆಳ್ತಂಗಡಿಯ ಸವಣಾಲಿನ ಕುತ್ಲೂರಿನಲ್ಲಿ ನಕ್ಸಲ್ ಶಂಕೆ ಮೇರೆಗೆ ನಡೆದ ಎನ್‌ಕೌಂಟರ್‌ ಗುರಿ ತಪ್ಪಿ ಎಎನ್‌ಎಫ್‌ ಸಿಬ್ಬಂದಿಯನ್ನೇ ಬಲಿ ತೆಗೆದುಕೊಂಡಿತ್ತು.

ಪಶ್ಚಿಮ ಘಟ್ಟ ತಪ್ಪಲಲ್ಲಿ ನಕ್ಸಲರ ಸಂಚಾರದ ಮಾಹಿತಿ ಮೇರೆಗೆ ಎಎನ್‌ಎಫ್‌ ತಂಡ ಕೂಂಬಿಂಗ್‌ ನಡೆಸುತ್ತಿತ್ತು. ರಾತ್ರಿ ವೇಳೆ ಇನ್ನೊಂದು ಎಎನ್‌ಎಫ್‌ ತಂಡವನ್ನು ನಕ್ಸಲರು ಎಂದು ಭಾವಿಸಿ ಒಂದು ಎಎನ್‌ಎಫ್‌ ತಂಡ ಗುಂಡು ಹಾರಿಸಿತ್ತು. ಅದು ಎಎನ್‌ಎಫ್‌ ಸಿಬ್ಬಂದಿ ವಿಜಯಪುರದ ಮಹದೇವ ಮಾನೆ ಎಂಬವರ ಸಾವಿಗೆ ಕಾರಣವಾಗಿತ್ತು. ಇದುವರೆಗೆ ಒಂದು ಎನ್‌ಕೌಂಟರ್‌ ನಡೆದಿರುವುದು ಬಿಟ್ಪರೆ ಕಳೆದ ವರ್ಷವಷ್ಟೆ ಮತ್ತೆ ದ.ಕ. ಗಡಿಭಾಗದಲ್ಲಿ ನಕ್ಸಲ್‌ ಚಲನವಲನ ಕಾಣಿಸಿತ್ತು.
 

click me!