ಮಂಡ್ಯದ ಯುವತಿಯನ್ನು ಹೊಗಳಿದ್ದ ಅಲ್‌ಖೈದಾ ಮುಖ್ಯಸ್ಥ ಜವಾಹಿರಿ ಅಮೆರಿಕದಿಂದ ಹತ್ಯೆ

By Gowthami KFirst Published Aug 2, 2022, 2:44 PM IST
Highlights

‘ಅಲ್ಲಾ ಹು ಅಕ್ಬರ್‌’ ಘೋಷಣೆಯಿಂದ  ಮುಸಲ್ಮಾನ ನಾಯಕರು, ಮುಖಂಡರ ಮೆಚ್ಚುಗೆಗೆ ಪಾತ್ರಳಾಗಿದ್ದ ಮಂಡ್ಯದ ಯುವತಿ ಮುಸ್ಕಾನ್‌ ಳನ್ನು ಪ್ರಶಂಸಿದ್ದ  ಅಲ್‌ಖೈದಾ ಮುಖ್ಯಸ್ಥನನ್ನು ಅಮೆರಿಕ ಹತ್ಯೆ ಮಾಡಿದೆ.

ಬೆಂಗಳೂರು (ಆ.2): ‘ಅಲ್ಲಾ ಹು ಅಕ್ಬರ್‌’ ಘೋಷಣೆಯಿಂದ  ಮುಸಲ್ಮಾನ ನಾಯಕರು, ಮುಖಂಡರ ಮೆಚ್ಚುಗೆಗೆ ಪಾತ್ರಳಾಗಿದ್ದ ಮಂಡ್ಯದ ಯುವತಿ ಮುಸ್ಕಾನ್‌ ಖಾನ್ ಳನ್ನು ಪ್ರಶಂಸಿದ್ದ  ಅಲ್‌ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿಯನ್ನು ಅಮೆರಿಕ ಸೇನೆ ಮಟಾಶ್ ಮಾಡಿದೆ. ಜು. 31 ರಂದು ಕಾಬೂಲ್ ನಗರದ ಶೆರ್ಪುರ್ ಪ್ರದೇಶದ ವಸತಿ ಗೃಹದ ಮೇಲೆ ವಾಯುದಾಳಿ ನಡೆಸಿ ಅಲ್‌ಖೈದಾ ನಾಯಕನನ್ನು ಕೊಲ್ಲಲಾಗಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಕರ್ನಾಟಕದಲ್ಲಿ ಹಿಜಾಬ್‌-ಕೇಸರಿ ಶಾಲು ನಡುವೆ ಸಮರ ನಡೆಯುತ್ತಿದ್ದ  ಸಮಯದಲ್ಲಿ ಮಂಡ್ಯದ ಮುಸ್ಕಾನ್‌ ಖಾನ್‌ ಕಾಲೇಜಿಗೆ ಬುರ್ಖಾ ಧರಿಸಿ ಬಂದಾಗ ಕೆಲವು ಕೇಸರಿ ಶಾಲುಧಾರಿ ಯುವಕರು ‘ಜೈ ಶ್ರೀರಾಂ’ ಎಂದು ಕೂಗಿ ಆಕೆಗೆ ಅಡ್ಡಿಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಆಕೆ ‘ಅಲ್ಲಾ ಹು ಅಕ್ಬರ್‌’ ಎಂದು ಕೂಗಿ ಸುದ್ದಿ ಆಗಿದ್ದಳು.  ಮಂಡ್ಯದ ಪಿಇಎಸ್‌ ಪದವಿ ಕಾಲೇಜು ವಿದ್ಯಾರ್ಥಿನಿ ಮುಸ್ಕಾನ್‌ ಧೈರ್ಯವನ್ನು ಅಲ್‌ಖೈದಾ ಸಂಘಟನೆಯ ಮುಖ್ಯಸ್ಥ ಅಲ್‌ ಜವಾಹರಿ ಟ್ವೀಟ್ಟರ್‌ನಲ್ಲಿ ಕೊಂಡಾಡಿದ್ದನು. ಮುಸ್ಕಾನ್‌ ಮುಸ್ಲಿಂ ಮಹಿಳೆಯರ ಆಶಾಕಿರಣ. ಮುಸಲ್ಮಾನ ಮಹಿಳೆಯರು ಮುಸ್ಕಾನ್‌ಳನ್ನು ಅನುಸರಿಸಬೇಕು.  ಭಾರತದಲ್ಲಿ ಯುವತಿಯರು ಹಿಜಾಬ್‌ ಧರಿಸಲು ಅವಕಾಶ ಮಾಡಿಕೊಡಬೇಕು.   ಭಾರತದಲ್ಲಿ ಮುಸ್ಲಿಮರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಮುಸಲ್ಮಾನರ ಬೇಡಿಕೆಯನ್ನು ಸರ್ಕಾರದಿಂದ ಹತ್ತಿಕ್ಕಲಾಗುತ್ತಿದೆ. ಅದರ ವಿರುದ್ಧ ಮಹಿಳೆಯರು ಮುಸ್ಕಾನ್‌ಳ ಮಾದರಿಯಲ್ಲಿ ಸಿಡಿದು ನಿಲ್ಲಬೇಕು ಎಂದು ಕರೆ ಕೊಟ್ಟಿದ್ದ. 

ಉಗ್ರ ಜವಾಹಿರಿ ಹೇಳಿದ್ದೇನು?:
ವಿಶ್ವದ ಹಲವು ದೇಶಗಳಲ್ಲಿ ಕೆಲ ಇಸ್ಲಾಂ ಆಚರಣೆಗಳಿಗೆ ಎದುರಾಗಿರುವ ತೊಡಕಿನ ಕುರಿತು ಅಲ್‌ಖೈದಾ ಮುಖ್ಯಸ್ಥ ಅಲ್‌ ಜವಾಹಿರಿ 8.43 ನಿಮಿಷಗಳ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ, ಅದನ್ನು ಅಲ್‌ಖೈದಾದ ಅಧಿಕೃತ ಮಾಧ್ಯಮವಾದ ‘ಶಬಾಬ್‌ ಮೀಡಿಯಾ’ ಬಿಡುಗಡೆ ಮಾಡಿದ್ದ. ‘ಹಿಜಾಬ್‌ ವಿವಾದವು ‘ಹಿಂದೂ ಭಾರತ’ದ ನಿಜ ಬಣ್ಣ ಬಯಲು ಮಾಡಿದೆ. ಆದರೆ ಇಂಥ ಸಂದರ್ಭದಲ್ಲಿ ಹಿಜಾಬ್‌ ಧರಿಸಿ ಬಂದ ತನ್ನನ್ನು ವಿರೋಧಿಸಿದ ವ್ಯಕ್ತಿಗಳನ್ನು ಮುಸ್ಕಾನ್‌ ಖಾನ್‌ (ಮಂಡ್ಯದ ವಿದ್ಯಾರ್ಥಿನಿ) ದಿಟ್ಟತನದಿಂದ ಎದುರಿಸಿದ್ದಾಳೆ. ಆಕೆ ‘ಅಲ್ಲಾ ಹು ಅಕ್ಬರ್‌’ ಎಂದು ಕೂಗಿದ್ದು ಶ್ಲಾಘನೀಯ. ಈ ಮೂಲಕ ಮುಸ್ಲಿಂ ಧರ್ಮದಲ್ಲಿ ಕೀಳರಿಮೆ ಹೊಂದಿರುವ ಇತರ ಮಹಿಳೆಯರಿಗೆ ಮುಸ್ಕಾನ್‌ ಖಾನ್‌ ನೈತಿಕ ಪಾಠ ಕಲಿಸಿದ್ದಾಳೆ. ಹಿಂದೂ ಬಹುದೇವತಾ ಆರಾಧಕರ ವಿರುದ್ಧ ಆಕೆ ತೋರಿದ ಧೈರ್ಯವು ಮುಸ್ಲಿಂ ಸಮುದಾಯವನ್ನು ಬಡಿದೆಬ್ಬಿಸಿದೆ ಹಾಗೂ ಧರ್ಮಯುದ್ಧಕ್ಕೆ (ಜಿಹಾದ್‌) ಪ್ರೇರೇಪಣೆ ನೀಡಿದೆ’ ಎಂದು ಆತ ಹೇಳಿದ್ದ.

‘ಸಾಮಾಜಿಕ ಮಾಧ್ಯಮಗಳು ಹಾಗೂ ವಿಡಿಯೋಗಳ ಮೂಲಕ ಮುಸ್ಕಾನ್‌ ಖಾನ್‌ ಬಗ್ಗೆ ನಾನು ತಿಳಿದುಕೊಂಡೆ. ಈ ‘ಮುಜಾಹಿದ್‌ ಸೋದರಿ’ಯ ನಡೆ ನೋಡಿ ನನಗೆ ಮನದುಂಬಿ ಬಂತು. ‘ಅಲ್ಲಾ ಹು ಅಕ್ಬರ್‌’ಎಂಬ ಆಕೆಯ ಉದ್ಘೋಷ ಕೇಳಿ ಕವಿತೆಯೊಂದನ್ನು ಬರೆಯಲು ನಿರ್ಧರಿಸಿದೆ. ನಾನೇನೂ ಕವಿಯಲ್ಲ. ಆದರೂ ನಾನು ಬರೆದ ಪದ್ಯವನ್ನು ಮುಸ್ಕಾನ್‌ ಸ್ವೀಕರಿಸುವಳು ಎಂಬ ಆಶಾಭಾವವಿದೆ. ಇಂಥ ಧರ್ಮಬಾಹಿರ ದೇಶದ ಹಾಗೂ ಹಿಂದೂ ಭಾರತದ ಮುಖವಾಡ ಬಯಲಿಗೆಳೆದ ಮುಸ್ಕಾನ್‌ಳನ್ನು ಅಲ್ಲಾಹು ಆಶೀರ್ವದಿಸಲಿ’ ಎಂದು ಜವಾಹಿರಿ ಆಶಿಸಿದ್ದ.

 21 ವರ್ಷದ ಸೇಡು ತೀರಿಸಿಕೊಂಡ ಅಮೆರಿಕ, ಅಲ್‌ಖೈದಾ ಮುಖ್ಯಸ್ಥ AYMAN AL-ZAWAHIRI ಹತ್ಯೆ

ಇದಲ್ಲದೆ, ಹಿಜಾಬ್‌ ನಿಷೇಧಿಸಿರುವ ಫ್ರಾನ್ಸ್‌, ಹಾಲೆಂಡ್‌ ಹಾಗೂ ಸ್ವಿಜರ್ಲೆಂಡ್‌ ವಿರುದ್ಧ ಜವಾಹಿರಿ ಕಿಡಿಕಾರಿ, ಪಾಕಿಸ್ತಾನ, ಬಾಂಗ್ಲಾದೇಶಗಳು ಪಾಶ್ಚಾತ್ಯ ದೇಶಗಳ ಜೊತೆ ಸಖ್ಯ ಬೆಳೆಸುತ್ತಿವೆ ಎಂದು ತರಾಟೆಗೆ ತೆಗೆದುಕೊಂಡಿದ್ದ, ‘ಇಸ್ಲಾಂ ತುಳಿಯಲು ನಡೆದಿರುವ ಇಂಥ ಯತ್ನಗಳ ವಿರುದ್ಧ ಚೀನಾದಿಂದ ಇಸ್ಲಾಮಿಕ್‌ ಮಘ್ರೇಬ್‌ವರೆಗಿನ ಮುಸ್ಲಿಮರು ಹಾಗೂ ಕೌಕಾಸಸ್‌ನಿಂದ ಸೊಮಾಲಿಯಾವರೆಗಿನ ಮುಸ್ಲಿಮರು ಒಂದಾಗಬೇಕು. ಭಾರತದಲ್ಲಿನ ಮುಸ್ಲಿಂ ಸಮುದಾಯ ಜಾಗೃತರಾಗಬೇಕು. ಬುದ್ಧಿಮತ್ತೆಯಿಂದ ಮಾಧ್ಯಮಗಳನ್ನು ಬಳಸಿ ಹಾಗೂ ಯುದ್ಧಭೂಮಿಯಲ್ಲಿ ಶಸ್ತ್ರ ಬಳಸಿ ಹೋರಾಡಬೇಕು’ ಎಂದು ಕರೆ ನೀಡಿದ್ದ.

Hijab Row: ಮಂಡ್ಯದ ಮುಸ್ಕಾನ್‌ ಹೊಗಳಿದ್ದ ಖೈದಾ ವಿಡಿಯೋ ತನಿಖೆ: ಸಿಎಂ ಬೊಮ್ಮಾಯಿ

 ಇದು ದೇಶಾದ್ಯಂತ ದೊಡ್ಡ ಸುದ್ದಿಯಾಗಿ ವಿರೋಧವು ವ್ಯಕ್ತವಾಗಿತ್ತು. ಇದಕ್ಕೆ ಮುಸ್ಕಾನ್‌ ತಂದೆ ಮಹಮದ್‌ ಹುಸೇನ್‌ ಖಾನ್‌ ಅವರು, ಅಲ್‌ ಜವಾಹಿರಿ ಯಾರೆಂದೇ ನನಗೆ ಗೊತ್ತಿಲ್ಲ. ನನ್ನ ಮಗಳಿಗೆ ಇಂತಹ ಹೊಗಳಿಕೆ ಬೇಕಾಗಿಲ್ಲ. ಜಗಳ ತಂದಿಡಲು ಇದನ್ನೆಲ್ಲಾ ಮಾಡುತ್ತಿದ್ದಾರೆ. ನಾವು ಎಲ್ಲರ ಜತೆ ಅಣ್ಣ-ತಮ್ಮಂದಿರ ರೀತಿ ಇದ್ದೇವೆ ಎಂದಿದ್ದರು.

click me!