21 ವರ್ಷದ ಸೇಡು ತೀರಿಸಿಕೊಂಡ ಅಮೆರಿಕ, ಅಲ್‌ಖೈದಾ ಮುಖ್ಯಸ್ಥ Ayman al-Zawahiri ಹತ್ಯೆ
ಅಲ್‌ಖೈದಾ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿಯನ್ನು ಅಮೆರಿಕ ಸೇನೆ ಡ್ರೋನ್ ದಾಳಿ ಮೂಲಕ ಹತ್ಯೆಗೈದಿದೆ. ಈ ಕುರಿತು ಕುರಿತು ಅಧ್ಯಕ್ಷ ಜೋ ಬೈಡನ್ ಘೋಷಣೆ ಮಾಡಿದ್ದಾರೆ.
ಕಾಬೂಲ್ (ಆ.2): ಅಘ್ಘಾನಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದ ಅಲ್‌ಖೈದಾ ಮುಖ್ಯಸ್ಥ 71 ವರ್ಷದ ಅಯ್ಮನ್ ಅಲ್-ಜವಾಹಿರಿಯನ್ನು ಅಮೆರಿಕ ಸೇನೆ ಡ್ರೋನ್ ದಾಳಿ ಮೂಲಕ ಹತ್ಯೆಗೈದಿದೆ. ಅಫ್ಘಾನಿಸ್ತಾನದಲ್ಲಿ ಅಲ್-ಖೈದಾ ವಿರುದ್ಧದ ಯಶಸ್ವಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಕುರಿತು ಅಧ್ಯಕ್ಷ ಜೋ ಬೈಡನ್ ಘೋಷಣೆ ಮಾಡಿದ್ದಾರೆ. ವಾರಾಂತ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ಅಫ್ಘಾನಿಸ್ತಾನದಲ್ಲಿ ಗಮನಾರ್ಹ ಅಲ್ ಖೈದಾ ಉಗ್ರರ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ನಡೆಸಿದೆ. ಸೆಪ್ಟೆಂಬರ್ 11, 2001 ದಾಳಿಯ ಶಂಕಿತ ಮಾಸ್ಟರ್ ಮೈಂಡ್ ವಿರುದ್ಧದ ಕಾರ್ಯಾಚರಣೆ ಯಶಸ್ವಿಯಾಗಿದೆ. ಅಲ್ ಖೈದಾ ನಾಯಕ ಅಯ್ಮಾನ್ ಅಲ್-ಜವಾಹಿರಿಯನ್ನು ಹತ್ಯೆ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಜು. 31 ರಂದು ಕಾಬೂಲ್ ನಗರದ ಶೆರ್ಪುರ್ ಪ್ರದೇಶದ ವಸತಿ ಗೃಹದ ಮೇಲೆ ವಾಯುದಾಳಿ ನಡೆಸಿ ಅಲ್‌ಖೈದಾ ನಾಯಕನನ್ನು ಕೊಲ್ಲಲಾಗಿದೆ. ಈ ಮೂಲಕ WTC ದಾಳಿಯ ಅಪರಾಧಿಯನ್ನು ಹತ್ಯೆಗೈದು 21 ವರ್ಷದ ಸೇಡನ್ನು ಅಮೆರಿಕ ತೀರಿಸಿಕೊಂಡಿದೆ. 2011 ರಲ್ಲಿ ಒಸಮಾ ಬಿನ್ ಲಾಡೆನ್ ಹತ್ಯೆಯಾದ ಬಳಿಕ ಆತನ ಉತ್ತರಾಧಿಕಾರಿಯಾಗಿ ಅಲ್‌ಖೈದಾ ಉಗ್ರ ಸಂಘಟನೆಯನ್ನು ಅಯ್ಮನ್ ಅಲ್-ಜವಾಹಿರಿ ಮುನ್ನಡೆಸುತ್ತಿದ್ದ.
ವಿಶೇಷವೆಂದರೆ ಅಘ್ಘಾನಿಸ್ತಾನದಲ್ಲಿದ್ದ ತನ್ನ ಸೇನೆಯನ್ನು ಅಮೆರಿಕ ಸಂಪೂರ್ಣ ಹಿಂತೆಗೆದುಕೊಂಡ ಬಳಿಕ ಮೊದಲ ದಾಳಿಯಾಗಿದೆ. ಅಮೆರಿಕ ತನ್ನ ಸೇನೆಯನ್ನು ಹಿಂತೆಗೆದುಕೊಂಡ ಬಳಿಕ ಅಘ್ಘಾನಿಸ್ತಾನ ಉಗ್ರ ಸಂಘಟನೆ ತಾಲಿಬಾನ್ ಅಧಿಪತ್ಯದಲ್ಲಿದೆ.
ಶನಿವಾರ, ನನ್ನ ನಿರ್ದೇಶನದ ಮೇರೆಗೆ, ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಯುನೈಟೆಡ್ ಸ್ಟೇಟ್ಸ್ ಸೇನೆ ಯಶಸ್ವಿಯಾಗಿ ವೈಮಾನಿಕ ದಾಳಿಯನ್ನು ನಡೆಸಿತು, ಅದು ಅಲ್-ಖೈದಾದ ಜವಾಹಿರಿಯನ್ನು ಕೊಂದಿತು. ನ್ಯಾಯ ಸಿಕ್ಕಿದೆ. ಎಂದು ಅಮೆರಿಕ ಅಧ್ಯಕ್ಷ ಬೈಡೆನ್ ಟ್ವೀಟ್ ಮಾಡಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ತನ್ನ ಸಂಕಲ್ಪವನ್ನು ಮುಂದುವರೆಸಿದೆ. ನಮಗೆ ಹಾನಿ ಮಾಡಲು ಬಯಸುವವರ ವಿರುದ್ಧ ಅಮೆರಿಕನ್ ಜನರನ್ನು ರಕ್ಷಿಸುವ ನಮ್ಮ ಸಾಮರ್ಥ್ಯವನ್ನು ತೋರಿಸಿದೆ. ಇಂದು ರಾತ್ರಿ ನಾವು ಸ್ಪಷ್ಟಪಡಿಸಿದ್ದೇವೆ. ಎಷ್ಟು ಹೊತ್ತಾದರೂ ಸರಿ. ಎಲ್ಲಿ ಅಡಗಲು ಪ್ರಯತ್ನಿಸಿದರೂ ಸರಿ. ನಾವು ನಿಮ್ಮನ್ನು ಹುಡುಕುತ್ತೇವೆ ಎಂದು ಎಚ್ಚರಿಕೆಯ ಟ್ವೀಟ್ ಕೂಡ ಮಾಡಿದ್ದಾರೆ ಬೈಡೆನ್.
ಜವಾಹಿರಿ ಬಗ್ಗೆ ತಿಳಿದುಕೊಳ್ಳಬೇಕಾದ 5 ವಿಷಯಗಳು:
- ಈಜಿಪ್ಟ್ ಪ್ರಜೆ, ಅಯ್ಮಾನ್ ಅಲ್-ಜವಾಹಿರಿ ಜೂನ್ 19, 1951 ರಂದು ಆಫ್ರಿಕನ್ ರಾಷ್ಟ್ರದ ಗಿಜಾದಲ್ಲಿ ಜನಿಸಿದ. 2011 ಮೇನಲ್ಲಿ ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಅಮೆರಿಕ ದಾಳಿಯಲ್ಲಿ ಹಿಂದಿನ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ನನ್ನು ಹತ್ಯೆ ಮಾಡಿದ ಬಳಿಕ ಜವಾಹಿರಿಯನ್ನು ಲಾಡೆನ್ ಉತ್ತರಾಧಿಕಾರಿ ಎಂದು ಘೋಷಿಸಲಾಯಿತು.
- ಬಿನ್ ಲಾಡೆನ್‌ನಂತೆಯೇ ವ್ಯಾಪಾರ ಮತ್ತು ಅರ್ಥಶಾಸ್ತ್ರದ ಆಡಳಿತವನ್ನು ಅಧ್ಯಯನ ಮಾಡಿದ್ದನಂತೆ ಜವಾಹಿರಿ , ಮತ್ತು ಕೆಲವು ವರದಿಗಳ ಪ್ರಕಾರ, ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಪಡೆದಿದ್ದ, ಈತನ ಉತ್ತರಾಧಿಕಾರಿಯೂ ಸಹ ಉನ್ನತ ಶಿಕ್ಷಣವನ್ನು ಹೊಂದಿದ್ದಾನೆ. ಈಜಿಪ್ಟ್ ಸೈನ್ಯದಲ್ಲಿ ಶಸ್ತ್ರಚಿಕಿತ್ಸಕ ನಾಗಿದ್ದ ಮತ್ತು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ
- 30 ವರ್ಷ ವಯಸ್ಸಿನ ಯುವಕನಾಗಿದ್ದಾಗ, ಅಕ್ಟೋಬರ್ 1981 ರಲ್ಲಿ ಈಜಿಫ್ಟ್ ಅಧ್ಯಕ್ಷ ಅನ್ವರ್ ಸಾದತ್ ಅವರ ಹತ್ಯೆಗಾಗಿ ಬಂಧಿಸಲ್ಪಟ್ಟ ನೂರಾರು ಜನರಲ್ಲಿ ಜವಾಹಿರಿ ಸೇರಿದ್ದಾನೆ. ಆ ಸಮಯದಲ್ಲಿ ಮುಸ್ಲಿಂ ಬ್ರದರ್‌ಹುಡ್‌ನ ಸದಸ್ಯನಾಗಿದ್ದ ಈತ ಜೈಲಿನಲ್ಲಿ ಪೊಲೀಸರಿಂದ ಚಿತ್ರಹಿಂಸೆಗೊಳಗಾದ.
- 1998 ರಲ್ಲಿ, ಅಲ್-ಜವಾಹಿರಿ ನೇತೃತ್ವದ ಈಜಿಪ್ಟಿನ ಇಸ್ಲಾಮಿಕ್ ಜಿಹಾದ್ ಅನ್ನು ಅಲ್-ಖೈದಾ ಉಗ್ರಸಂಘಟನೆ ಜೊತೆ ವಿಲೀನಗೊಳಿಸಿತು. ಬಿನ್ ಲಾಡೆನ್‌ನ ಪ್ರಮುಖ ಸಹಾಯಕನಾಗಿದ್ದ, ಯುನೈಟೆಡ್ ಸ್ಟೇಟ್ಸ್ ವಿರುದ್ಧದ ಹಲವಾರು ದಾಳಿಗಳಲ್ಲಿ ಈ ಇಬ್ಬರು ನೇರ ಸಂಚುಗಾರರಾಗಿದ್ದರು, ಆಗಸ್ಟ್ 1998 ರಲ್ಲಿ ದಾರ್ ಎಸ್ ಸಲಾಮ್ (ತಾಂಜಾನಿಯಾ) ಮತ್ತು ನೈರೋಬಿ (ಕೀನ್ಯಾ) ನಲ್ಲಿರುವ US ರಾಯಭಾರ ಕಚೇರಿಗಳನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ, ಜೊತೆಗೆ 9/11 ದಾಳಿ ಇತ್ಯಾದಿ
- 9/11ರ WTC ದಾಳಿ ಹಿನ್ನೆಲೆಯಲ್ಲಿ, ಅಲ್-ಜವಾಹಿರಿಯನ್ನು ಸೆರೆಹಿಡಿಯಲು US ಸ್ಟೇಟ್ ಡಿಪಾರ್ಟ್ಮೆಂಟ್ 25 ಮಿಲಿಯನ್ ಡಾಲರ್ ಬಹುಮಾನವನ್ನು ಘೋಷಿಸಿತು. ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (FBI) ಪ್ರಕಾರ ಈತ ದಾಳಿಯ ಪ್ರಮುಖ ಮಾಸ್ಟರ್ ಮೈಂಡ್ ಆಗಿದ್ದ.
ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಕೂಡ ಈ ಮಾಹಿತಿಯನ್ನು ಟ್ವಿಟ್ಟರ್ ನಲ್ಲಿ ದೃಢಪಡಿಸಿದ್ದು, ಈ ದಾಳಿಯನ್ನು ಖಂಡಿಸಿದ್ದಾರೆ. ಅಘ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ಸ್ ಈ ದಾಳಿಯನ್ನು ಖಂಡಿಸುತ್ತದೆ. ಇದು ಅಂತರಾಷ್ಟ್ರೀಯ ತತ್ವಗಳು ಮತ್ತು ದೋಹಾ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಮುಜಾಹಿದ್ ಹೇಳಿಕೆ ನೀಡಿದ್ದಾರೆ.