ವೈರಸ್‌ ಅಟ್ಟಹಾಸದ ಮಧ್ಯೆ ಆಘಾತಕಾರಿ ಸುದ್ದಿ..!

By Kannadaprabha News  |  First Published Apr 26, 2021, 11:45 AM IST

ಕಳೆದ ಬಾರಿ ಕೋವಿಡ್‌ ವೇಳೆ ಕೆಲಸ ಬಿಟ್ಟವರು ಮರಳಿ ಬಂದಿಲ್ಲ| ಊರಿಗೆ ಹೋಗಿದ್ದಾರೆ ಇಲ್ಲಾ ಫಾರಿನ್‌ಗೆ ಹೋಗಿದ್ದಾರೆ| ವೈದ್ಯರಿಲ್ಲದೇ ಆಸ್ಪತ್ರೆಗಳಲ್ಲಿ ಸಮಸ್ಯೆ ಉಲ್ಬಣಿಸುವ ಆತಂಕ| ಈ ಬಗ್ಗೆ ಸಮಾಲೋಚನೆ ನಡೆಸಿದ ಖಾಸಗಿ ಆಸ್ಪತ್ರೆಗಳ ಒಕ್ಕೂಟ| 


ರಾಕೇಶ್‌ ಎನ್‌.ಎಸ್‌.

ಬೆಂಗಳೂರು(ಏ.26): ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಹಾಸಿಗೆ, ವೆಂಟಿಲೇಟರ್‌ ಮತ್ತಿತರ ಸೌಲಭ್ಯಗಳ ಕೊರತೆ ಹೆಚ್ಚಾಗುತ್ತಿರುವ ಆತಂಕದ ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿಯ ತೀವ್ರ ಕೊರತೆ ಎದುರಾಗುತ್ತಿರುವುದು ಕಳವಳಕಾರಿಯಾಗಿದೆ.

Latest Videos

undefined

ರಾಜ್ಯದಲ್ಲಿ ಮೊದಲ ಕೊರೋನಾ ಅಲೆ ಬಂದ ಸಂದರ್ಭದಲ್ಲಿ ಕೆಲಸ ಬಿಟ್ಟವರು ಪುನಃ ವಾಪಸ್‌ ಬಂದಿಲ್ಲ. ಅನೇಕರು ವಿದೇಶಗಳಲ್ಲಿ ಕೆಲಸ ಪಡೆದುಕೊಂಡಿದ್ದಾರೆ. ಹೀಗಾಗಿ ಖಾಸಗಿ ಆಸ್ಪತ್ರೆಗಳು ಈಗ ತರಬೇತಿ ಹೊಂದಿರುವ ವೈದ್ಯಕೀಯ ಸಿಬ್ಬಂದಿಯ ಕೊರತೆಯನ್ನು ಎದುರಿಸುತ್ತಿವೆ. ಇರುವ ವೈದ್ಯಕೀಯ ಸಿಬ್ಬಂದಿಯ ಮೇಲೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ.

ಈ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿರುವ ಖಾಸಗಿ ಆಸ್ಪತ್ರೆಗಳ ಒಕ್ಕೂಟ (ಫನಾ)ದ ಅಧ್ಯಕ್ಷ ಡಾ.ಎಚ್‌.ಎಂ.ಪ್ರಸನ್ನ, ರಾಜ್ಯದ ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಸಿಬ್ಬಂದಿ ಕೊರತೆ ಎದುರಿಸುತ್ತಿವೆ. ಈ ಬಗ್ಗೆ ಭಾನುವಾರ ಒಕ್ಕೂಟದ ಸದಸ್ಯರ ಜೊತೆ ಸಮಾಲೋಚನೆ ನಡೆಸಲಾಗಿದ್ದು, ತಮ್ಮಲ್ಲಿನ ಸಿಬ್ಬಂದಿಯ ಕೊರತೆಯನ್ನು ಒಕ್ಕೂಟಕ್ಕೆ ತಿಳಿಸುವಂತೆ ಸೂಚಿಸಲಾಗಿದೆ.

ಕೊರೋನಾ ಇದೆಯಾ? ಇವರನ್ನು ಸಂಪರ್ಕಿಸಿ

ಮೊದಲ ಅಲೆಯ ಸಂದರ್ಭದಲ್ಲಿದ್ದ ಸಿಬ್ಬಂದಿಗಳಲ್ಲಿ ಶೇ.30ರಷ್ಟು ಮಂದಿ ಆ ಬಳಿಕ ಕೆಲಸ ಬಿಟ್ಟಿದ್ದಾರೆ. ರಾಜ್ಯದ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದ ಅನ್ಯ ರಾಜ್ಯಗಳ ಸಿಬ್ಬಂದಿ ಊರಿಗೆ ಹೋದವರು ಮತ್ತೆ ಹಿಂತಿರುಗಿಲ್ಲ. ಇನ್ನೂ ಅನೇಕರಿಗೆ ವಿದೇಶದಲ್ಲಿ ಕೆಲಸ ಸಿಕ್ಕಿರುವ ಕಾರಣದಿಂದ ರಾಜೀನಾಮೆ ನೀಡಿದ್ದಾರೆ ಎಂದು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಶೇ.20 ಸಿಬ್ಬಂದಿ ಕೋವಿಡ್‌ ಪಾಸಿಟಿವ್‌:

ಹಾಗೆಯೇ ಕೋವಿಡ್‌ ಲಸಿಕೆ ಪಡೆದಿದ್ದರೂ ಕೂಡ ಕಳೆದ ಕೆಲ ದಿನಗಳಿಂದ ಆರೋಗ್ಯ ಸಿಬ್ಬಂದಿಗಳಲ್ಲಿ ದೊಡ್ಡ ಮಟ್ಟದಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಕರಣ ಬರುತ್ತಿದೆ. ನಮ್ಮ ಆಸ್ಪತ್ರೆಯಲ್ಲೇ 6 ಮಂದಿ ಪಾಸಿವಿಟ್‌ ಆಗಿದ್ದಾರೆ. ಪಾಸಿಟಿವ್‌ ಬರುವ ಹೆಚ್ಚಿನ ಸಿಬ್ಬಂದಿ ಕೋವಿಡ್‌ ಲಕ್ಷಣಗಳನ್ನು ಹೊಂದಿದ್ದಾರೆ. ನಮಗೆ ಈವರೆಗೆ ಲಭಿಸಿರುವ ಮಾಹಿತಿಯ ಪ್ರಕಾರ ಸುಮಾರು ಶೇ.20ರಷ್ಟು ವೈದ್ಯಕೀಯ ಸಿಬ್ಬಂದಿ ಕೋವಿಡ್‌ನಿಂದ ಬಳಲುತ್ತಿದ್ದಾರೆ ಎಂದು ಡಾ.ಪ್ರಸನ್ನ ಹೇಳಿದರು.

ಇಂತಹ ಪರಿಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಮೇಲೆ ನಿಗಾ ಇಡಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಹೋಟೆಲ್‌ಗಳನ್ನು ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಅಲ್ಲಿ ಚಿಕಿತ್ಸೆ ನೀಡುವುದು ಹೇಗೆ ಸಾಧ್ಯ? ರಾಜ್ಯದ 4-5 ದೊಡ್ಡ ಆಸ್ಪತ್ರೆಗಳು ಮಾತ್ರ ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ವಹಿಸಬಹುದು ಆಷ್ಟೇ ಎಂದು ಡಾ.ಪ್ರಸನ್ನ ಅಭಿಪ್ರಾಯ ಪಡುತ್ತಾರೆ.

ಹಾಗೆಯೇ ಹೊಸ ಸಿಬ್ಬಂದಿ ನೇಮಕ ಮಾಡಿಕೊಳ್ಳೋಣ ಎಂದರೆ ನರ್ಸಿಂಗ್‌ ಕಾಲೇಜುಗಳಲ್ಲಿ ಪರೀಕ್ಷೆ ನಡೆದು ಫಲಿತಾಂಶ ಬಂದಿಲ್ಲ. ನಮ್ಮ ಮುಂದೆ ಆತಂಕಕಾರಿ ಸ್ಥಿತಿ ಇದೆ. ಇಂದಿನಿಂದ ನಾಳೆಗೆ ಮಾನವ ಸಂಪನ್ಮೂಲ ಸೃಷ್ಟಿಸಲು ಸಾಧ್ಯವಿಲ್ಲ. ಈಗ ಲಭ್ಯವಿರುವ ಮಾನವ ಸಂಪನ್ಮೂಲವನ್ನು ಹೇಗೆ ನಿರ್ವಹಿಸಬಹುದು ಎಂಬುದರ ಬಗ್ಗೆ ನಾವು ಚಿಂತನ ಮಂಥನ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.

ರಫ್ತಾಗಿರುವುದು ಕೈಗಾರಿಕಾ ಆಮ್ಲಜನಕ, ಮೆಡಿಕಲ್ ಆಕ್ಸಿಜನ್ ಅಲ್ಲ: ಕೇಂದ್ರ!

ಸರ್ಕಾರಿ ಆಸ್ಪತ್ರೆಯಲ್ಲೂ ಸಮಸ್ಯೆ:

ಮೆಡಿಕಲ್‌ ಕೌನ್ಸಿಲ್‌ ಆಫ್‌ ಇಂಡಿಯಾ (ಎಂಸಿಐ) ನಿಯಮದ ಪ್ರಕಾರ ಜನರಲ್‌ ವಾರ್ಡ್‌ನಲ್ಲಿ 10 ಬೆಡ್‌ಗೆ, ಎಚ್‌ಡಿಯು 3 ಬೆಡ್‌ಗೆ, ಐಸಿಯು 2 ಬೆಡ್‌ಗೆ ಮತ್ತು ವೆಂಟಿಲೇಟರ್‌ಯುಕ್ತ ಐಸಿಯು ಬೆಡ್‌ಗೆ ತಲಾ ಒಬ್ಬರು ನರ್ಸ್‌ ಇರುವುದು ಕಡ್ಡಾಯ. ಇವರ ಜೊತೆಗೆ ವಾರ್ಡ್‌ ಬಾಯ್‌ಗಳು ಕೂಡ ಇರಬೇಕಾಗುತ್ತದೆ.

ಇತ್ತ ಸರ್ಕಾರಿ ಆಸ್ಪತ್ರೆಯಲ್ಲಿಯೂ ಹಿರಿಯ ಮತ್ತು ಸಹ ಅಸ್ವಸ್ಥತೆ ಹೊಂದಿರುವ ನರ್ಸ್‌ಗಳು ಕೋವಿಡ್‌ -19 ಡ್ಯೂಟಿ ಮಾಡಲು ಹಿಂಜರಿಯುತ್ತಿದ್ದಾರೆ ಎಂದು ಬೆಂಗಳೂರಿನ ಪ್ರಮುಖ ಸರ್ಕಾರಿ ಆಸ್ಪತ್ರೆಯೊಂದರ ಕೋವಿಡ್‌ ವಿಭಾಗದ ಉಸ್ತುವಾರಿ ಹೊತ್ತಿರುವ ವೈದ್ಯರು ಬೇಸರ ವ್ಯಕ್ತಪಡಿಸಿದ್ದಾರೆ.

ನೇಮಕಕ್ಕೆ ಮುಂದಾಗಿರುವ ಪಾಲಿಕೆ:

ಈ ನಡುವೆ ಬೆಂಗಳೂರಿನಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಇತ್ತೀಚೆಗೆ ವೈದ್ಯರು, ನರ್ಸ್‌ ಸೇರಿದಂತೆ ವಿವಿಧ ಸಿಬ್ಬಂದಿಗಳ ನೇಮಕಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
 

click me!