ವಿಂಬಲ್ಡನ್ ಮಹಿಳಾ ಸಿಂಗಲ್ಸ್‌ನಲ್ಲಿ ಮಾರ್ಕೆಟಾ ವೊಂಡ್ರೊಸೋವಾ ಚಾಂಪಿಯನ್
ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್‌ನಲ್ಲಿ ಈ ಬಾರಿಯೂ ನವ ತಾರೆಯ ಉದಯ
1968ರ ಬಳಿಕ ವಿಂಬಲ್ಡನ್ ಚಾಂಪಿಯನ್‌ಶಿಪ್ ಗೆದ್ದ ಮೊಟ್ಟ ಮೊದಲ ಶ್ರೇಯಾಂಕ ರಹಿತ ಆಟಗಾರ್ತಿ
ಲಂಡನ್(ಜು.16): ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್‌ನಲ್ಲಿ ಈ ಬಾರಿಯೂ ನವ ತಾರೆಯ ಉದಯವಾಗಿದ್ದು, ಚೆಕ್ ಗಣರಾಜ್ಯದ ಮಾರ್ಕೆಟಾ ವೊಂಡ್ರೊಸೋವಾ ಮಹಿಳಾ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇದರೊಂದಿಗೆ ಓಪನ್ ಎರಾದಲ್ಲಿ ಅಂದರೆ 1968ರ ಬಳಿಕ ವಿಂಬಲ್ಡನ್ ಚಾಂಪಿಯನ್‌ಶಿಪ್ ಗೆದ್ದ ಮೊಟ್ಟ ಮೊದಲ ಶ್ರೇಯಾಂಕ ರಹಿತ ಆಟಗಾರ್ತಿ ಎಂಬ ಹಿರಿಮೆಗೆ ಚೆಕ್ ತಾರೆ ಪಾತ್ರರಾಗಿದ್ದಾರೆ.
ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ 24 ವರ್ಷದ ಮಾರ್ಕೆಟಾ, ಟ್ಯುನೀಶಿಯಾದ ಒನ್ಸ್ ಜಬುರ್ ವಿರುದ್ಧ 6-4, 6-4 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಕ್ವಾರ್ಟರ್ ಹಾಗೂ ಸೆಮಿಫೈನಲ್‌ನಲ್ಲಿ ಕ್ರಮವಾಗಿ ಹಾಲಿ ಚಾಂಪಿಯನ್ ಎಲೆನಾ ರಬೈಕೆನಾ ಹಾಗೂ ವಿಶ್ವ ನಂ.2 ಅರೈನಾ ಸಬಲೆಂಕಾ ವಿರುದ್ಧ ಅಭೂತಪೂರ್ವ ಪ್ರದರ್ಶನ ತೋರಿ ಗೆದ್ದಿದ್ದ ಜಬುರ್, ಫೈನಲ್‌ನಲ್ಲಿ ನಿರೀಕ್ಷಿತ ಆಟವಾಡದೆ ಪ್ರಶಸ್ತಿ ಕೈಚೆಲ್ಲಿದರು.
undefined
ಕಳೆದ ವರ್ಷ ರಬೈಕೆನಾ ವಿರುದ್ಧ ಫೈನಲ್‌ನಲ್ಲಿ ಸೋತಿದ್ದ 6ನೇ ಶ್ರೇಯಾಂಕಿತ ಜಬುರ್ ಸತತ 2ನೇ ಬಾರಿಯೂ ಪ್ರಶಸ್ತಿ ತಪ್ಪಿಸಿ ಕಣ್ಣೀರಿಟ್ಟರು. ಈ ಮೊದಲು 4 ಬಾರಿ ವಿಂಬಲ್ಡನ್ ಆಡಿದ್ದರೂ 2ನೇ ಸುತ್ತಿನಿಂದ ಮುಂದೆ ಸಾಗದ ಮಾರ್ಕೆಟಾ ಈ ಬಾರಿ ಅಚ್ಚರಿಯ ರೀತಿದಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. 2019ರ ಫ್ರೆಂಚ್ ಓಪನ್ ಫೈನಲ್‌ಗೇರಿ ಸೋತಿದ್ದ ಅವರು ಈ ಬಾರಿ ಚೊಚ್ಚಲ ಗ್ರ್ಯಾನ್‌ಸ್ಲಾಂ ಗೆಲುವಿನ ಹಾದಿಯಲ್ಲಿ ಯಾವುದೇ ತಪ್ಪು ಎಸಗಲಿಲ್ಲ.
ವರ್ಷದಲ್ಲಿ 3ನೇ ರನ್ನರ್-ಅಪ್:
28 ವರ್ಷದ ಜಬುರ್ ಕಳೆದೊಂದು ವರ್ಷದಲ್ಲಿ 3ನೇ ಬಾರಿ ಫೈನಲ್‌ನಲ್ಲಿ ಸೋತಿದ್ದಾರೆ. ಕಳೆದ ವರ್ಷ ವಿಂಬಲ್ಡನ್ ಬಳಿಕ, ಯುಎಸ್ ಓಪನ್ ಫೈನಲ್‌ನಲ್ಲಿ ವಿಶ್ವ ನಂ.1 ಇಗಾ ಸ್ವಿಯಾಟೆಕ್ ವಿರುದ್ಧ ಸೋತು ಚಾಂಪಿಯನ್ ಪಟ್ಟದಿಂದ ವಂಚಿತರಾಗಿದ್ದರು.
'ನಾನು ಈವರೆಗೂ ಮಾಡಿದ ಅತ್ಯಂತ ಮುಜುಗರದ ಸಂಗತಿ..' ತಾಯಿಗೆ ಮುಖ ತೋರಿಸಲು ನಾಚಿಕೆ ಪಟ್ಟಿದ್ದೇಕೆ ದ್ರಾವಿಡ್!
25 ಕೋಟಿ ರು. ಬಹುಮಾನ
ಪ್ರಶಸ್ತಿ ಗೆದ್ದ ಮಾರ್ಕೆಟಾ 2.35 ಮಿಲಿಯನ್ ಪೌಂಡ್ಸ್(ಸುಮಾರು 25.25 ಕೋಟಿ ರು.) ನಗದು ಬಹುಮಾನ ಪಡೆದರು. ರನ್ನರ್-ಅಪ್ ಜಬುರ್‌ಗೆ 12.62 ಕೋಟಿ ರು. ಲಭಿಸಿತು.
ಕಳೆದ ಬಾರಿ ಪ್ರೇಕ್ಷಕಿ, ಈ ಸಲ ಚಾಂಪಿಯನ್!
ಸತತ ಗಾಯದಿಂದ ಬಳಲುತ್ತಿದ್ದ ಮಾರ್ಕೆಟಾ ಕಳೆದ ಬಾರಿ ವಿಂಬಲ್ಡನ್‌ನಲ್ಲಿ ಆಡಿರಲಿಲ್ಲ. ಹೀಗಾಗಿ ಅವರು ಟೂರ್ನಿಗೆ ಆಗಮಿಸಿ ಗ್ಯಾಲರಿಯಲ್ಲಿ ಕುಳಿತು ತಮ್ಮ ಆಪ್ತ ಸ್ನೇಹಿತೆ ಮಿರಿಯಮ್‌ರ ಆಟವನ್ನು ವೀಕ್ಷಿಸಿದ್ದರು.
Asian Games 2023: ಭಾರತ ಕ್ರಿಕೆಟ್ ತಂಡ ಪ್ರಕಟ, ಗಾಯಕ್ವಾಡ್‌ಗೆ ನಾಯಕ ಪಟ್ಟ, ರಿಂಕು ಸಿಂಗ್‌ಗೆ ಜಾಕ್‌ಪಾಟ್
ಸತತ 6ನೇ ಬಾರಿ ಹೊಸ ಚಾಂಪಿಯನ್!
ವಿಂಬಲ್ಡನ್ ಮಹಿಳಾ ಸಿಂಗಲ್ಸ್‌ನಲ್ಲಿ ಸತತ 6ನೇ ಬಾರಿಗೆ ಬೇರೆ ಬೇರೆ ಆಟಗಾರ್ತಿಯರು ಪ್ರಶಸ್ತಿ ಗೆದ್ದಿದ್ದಾರೆ. 2015, 2016ರಲ್ಲಿ ಸೆರೆನಾ ವಿಲಿಯಮ್ಸ್ ಚಾಂಪಿಯನ್ ಆದ ಬಳಿಕ ಸ್ಪೇನ್‌ನ ಮುಗುರುಜಾ (2017), ಜರ್ಮನಿಯ ಕೆರ್ಬೆರ್(2018), ರೊಮೇನಿಯಾದ ಸಿಮೋನಾ ಹಾಲೆಪ್(2019), ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ(2021), ಕಜಕಸ್ತಾನದ ರಬೈಕೆನಾ(2022) ಪ್ರಶಸ್ತಿ ಗೆದ್ದಿದ್ದರು. ಈ ಬಾರಿ ಮಾರ್ಕೆಟಾ ಚಾಂಪಿಯನ್ ಆಗಿದ್ದಾರೆ.
ಮಾರ್ಕೆಟಾಗೆ ಶ್ರೇಯಾಂಕ ಸಿಗದಿರಲು ಏನು ಕಾರಣ?
ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ 32 ಸ್ಥಾನ ಹೊಂದಿರುವ ಟೆನಿಸಿಗರಿಗೆ ಮಾತ್ರ ಗ್ರ್ಯಾನ್ ಸ್ಲಾಂಗಳಲ್ಲಿ ಶ್ರೇಯಾಂಕ ದೊರೆಯಲಿದೆ. ಮಾರ್ಕೆಟಾ ವಿಶ್ವ ರ್‍ಯಾಂಕಿಂಗ್‌ನಲ್ಲಿ 42ನೇ ಸ್ಥಾನದಲ್ಲಿರುವ ಕಾರಣ ಅವರು ಶ್ರೇಯಾಂಕ ರಹಿತ ಆಟಗಾರ್ತಿಯಾಗಿ ಕಣಕ್ಕಿಳಿದರು. 1975ರಲ್ಲಿ ರ‍್ಯಾಂಕಿಂಗ್ ವ್ಯವಸ್ಥೆ ಪರಿಚಯಗೊಂಡ ಬಳಿಕ ವಿಂಬಲ್ಡನ್‌ನಲ್ಲಿ ಚಾಂಪಿಯನ್ ಆದ ಅತ್ಯಂತ ಕೆಳ ರ್‍ಯಾಂಕಿಂಗ್ ಹೊಂದಿರುವ ಆಟಗಾರ್ತಿ ಎನ್ನುವ ಹಿರಿಮೆಗೂ ಮಾರ್ಕೆಟಾ ಪಾತ್ರರಾಗಿದ್ದಾರೆ.