
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಮಹಿಳೆಯರಿಗೆ ಹೊಸ ಟೂರ್ನಿಯನ್ನು ಪರಿಚಯಿಸಿದೆ. ಪುರುಷರಂತೆ ಮಹಿಳೆಯರಿಗೂ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಲೀಗ್ ಆಯೋಜಿಸುವುದಾಗಿ ಘೋಷಿಸಿದೆ. ಚೊಚ್ಚಲ ಆವೃತ್ತಿ ಟೂರ್ನಿ 2027ರಲ್ಲಿ ಶ್ರೀಲಂಕಾದಲ್ಲಿ ನಡೆಯಲಿದೆ.
ಸೋಮವಾರ ಐಸಿಸಿ 2025-29ರ ಕ್ರಿಕೆಟ್ ಟೂರ್ನಿ ಹಾಗೂ ಸರಣಿಗಳ ವೇಳಾಪಟ್ಟಿ ಪ್ರಕಟಿಸಿತು. ಈ ಅವಧಿಯಲ್ಲಿ 5 ಜಾಗತಿಕ ಮಟ್ಟದ ಟೂರ್ನಿಗಳು ನಡೆಯಲಿವೆ. 2025ರಲ್ಲಿ ಏಕದಿನ ವಿಶ್ವಕಪ್, 2026ಕ್ಕೆ ಟಿ20 ವಿಶ್ವಕಪ್, 2027ಕ್ಕೆ ಚೊಚ್ಚಲ ಚಾಂಪಿಯನ್ಸ್ ಟ್ರೋಫಿ, 2028ಕ್ಕೆ ಟಿ20 ವಿಶ್ವಕಪ್, 2029ರಲ್ಲಿ ಏಕದಿನ ವಿಶ್ವಕಪ್ ಆಯೋಜನೆಗೊಳ್ಳಲಿದೆ ಎಂದು ಮಾಹಿತಿ ನೀಡಿದೆ. 2028ರಲ್ಲಿ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲೂ ಮಹಿಳಾ ಕ್ರಿಕೆಟ್ ಟೂರ್ನಿ ನಡೆಯಲಿದೆ.
ಆಟದ ವೇಳೆ ಮೈದಾನಕ್ಕೆ ಸಿಡಿಲು ಬಡಿದು ಫುಟ್ಬಾಲಿಗನ ಸಾವು! ವಿಡಿಯೋ ವೈರಲ್
ಇನ್ನು, 2025-29ರ ಐಸಿಸಿ ಮಹಿಳಾ ಏಕದಿನ ಚಾಂಪಿಯನ್‌ಶಿಪ್‌ಗೆ ಜಿಂಬಾಬ್ವೆ ಕೂಡಾ ಸೇರ್ಪಡೆಗೊಂಡಿದ್ದು, ತಂಡಗಳ ಸಂಖ್ಯೆ 11ಕ್ಕೆ ಹೆಚ್ಚಳವಾಗಿದೆ. ಇದರ ಭಾಗವಾಗಿ ಭಾರತ ತಂಡ ಇಂಗ್ಲೆಂಡ್, ಆಸ್ಟ್ರೇಲಿಯಾ, ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದ್ದು, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್‌ಇಂಡೀಸ್ ಹಾಗೂ ಐರ್ಲೆಂಡ್ ವಿರುದ್ಧ ತವರಿನಲ್ಲೇ ಸರಣಿ ಆಡಲಿದೆ.
2026ರಿಂದ ಜನವರಿಯಲ್ಲಿ ಡಬ್ಲ್ಯುಪಿಎಲ್ ಆಯೋಜನೆ
ಮಹಿಳಾ ಐಪಿಎಲ್ ಖ್ಯಾತಿಯ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್) 2026ರಿಂದ ಜನವರಿಯಲ್ಲಿ ಆಯೋಜನೆಗೊಳ್ಳಲಿದೆ. ಈ ವರೆಗೂ ಫೆಬ್ರವರಿ-ಮಾರ್ಚ್‌ನಲ್ಲಿ ಲೀಗ್ ನಡೆಯುತ್ತಿತ್ತು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಪ್ರಕಟಿಸಿದ 2025-29ರ ಮಹಿಳಾ ಕ್ರಿಕೆಟ್ ಟೂರ್ನಿಗಳ ವೇಳಾಪಟ್ಟಿಯಲ್ಲಿ ಡಬ್ಲ್ಯುಪಿಎಲ್‌ಗೆ ಜನವರಿ ತಿಂಗಳಲ್ಲಿ ಬಿಡುವು ನೀಡಲಾಗಿದೆ. ಡಬ್ಲ್ಯುಪಿಎಲ್ ಜೊತೆಗೆ ದಿ ಹಂಡ್ರೆಡ್ ಹಾಗೂ ಮಹಿಳಾ ಬಿಗ್‌ಬ್ಯಾಶ್ ಲೀಗ್‌ನ ಸಮಯದಲ್ಲೂ ಬದಲಾವಣೆಯಾಗಿದೆ. ಹಂಡ್ರೆಡ್ ಟೂರ್ನಿ ಆಗಸ್ಟ್‌ನಲ್ಲಿ ಹಾಗೂ ಬಿಗ್‌ಬ್ಯಾಶ್ ನವೆಂಬರ್‌ನಲ್ಲಿ ನಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.