ಕಿವೀಸ್‌ ಎದುರು ಭಾರತ ವೈಟ್‌ವಾಶ್‌: ಎದ್ದಿವೆ ಗಂಭೀರ ಪ್ರಶ್ನೆಗಳು!

By Kannadaprabha News  |  First Published Nov 5, 2024, 8:43 AM IST

ತವರಿನಲ್ಲಿ ಕಿವೀಸ್ ಎದುರು ಟೆಸ್ಟ್ ಸರಣಿ ಸೋತ ಬೆನ್ನಲ್ಲೇ ಗಂಭೀರ ಪ್ರಶ್ನೆಗಳು ಟೀಂ ಇಂಡಿಯಾ ಮೇಲೆ ಏಳಲಾರಂಭಿಸಿವೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ನವದೆಹಲಿ: ಕೇವಲ 18 ದಿನ. 3 ಪಂದ್ಯ. 1 ಸರಣಿ. ಈ ಸಣ್ಣ ಅವಧಿ ಭಾರತ ಕ್ರಿಕೆಟ್‌ ತಂಡದ ಅದೆಷ್ಟು ಸಮಸ್ಯೆಗಳನ್ನು ಒಮ್ಮೆಲೇ ಹೊರಹಾಕಿವೆ, ಆಟಗಾರರನ್ನು ಎಷ್ಟರ ಮಟ್ಟಿಗೆ ಕುಗ್ಗಿಸಿದೆ, ಕಾಡುತ್ತಿದೆ, ಭವಿಷ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ ಎಂಬುದನ್ನು ಈಗಾಗಲೇ ನೀವು ಅರ್ಥ ಮಾಡಿಕೊಂಡಿರುತ್ತೀರಿ.

ನ್ಯೂಜಿಲೆಂಡ್‌ ವಿರುದ್ಧ ತವರಿನ 3 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಟೀಂ ಇಂಡಿಯಾ ವೈಟ್‌ವಾಶ್‌ ಮುಖಭಂಗಕ್ಕೆ ಒಳಗಾದ ಬಳಿಕ ಹಲವು ಪ್ರಶ್ನೆಗಳು ಉದ್ಭವಿಸಿವೆ. ತವರಲ್ಲಿ ಬರೋಬ್ಬರಿ 12 ವರ್ಷ ಬಳಿಕ ಸರಣಿ ಸೋತು, 91 ವರ್ಷದಲ್ಲೇ ಮೊದಲ ಬಾರಿ 0-3 ವೈಟ್‌ವಾಶ್‌ ಆಗಿದ್ದು ತಂಡವನ್ನು ಸಂಪೂರ್ಣವಾಗಿ ಕುಗ್ಗಿಸಿದೆ. ಹಿರಿಯ ಹಾಗೂ ಸ್ಟಾರ್‌ ಆಟಗಾರರ ಲಯದ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದ್ದು, ಯುವ ಬ್ಯಾಟರ್‌ಗಳ ಸಾಮರ್ಥ್ಯದ ಬಗ್ಗೆಯೂ ಹಲವು ಮಾಜಿ ಕ್ರಿಕೆಟಿಗರು ಪ್ರಶ್ನೆ ಎತ್ತಿದ್ದಾರೆ.

Tap to resize

Latest Videos

undefined

ಕೊಹ್ಲಿ, ರೋಹಿತ್‌ ಫ್ಲಾಫ್‌ ಶೋ: ಭಾರತದ ಯಾವುದೇ ಪಂದ್ಯವಿದ್ದರೆ ಅಲ್ಲಿ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಹೈಲೈಟ್ಸ್‌. ಆದರೆ ತವರಿನ ಈ ಸರಣಿ ಇಬ್ಬರ ಪಾಲಿಗೂ ದುಸ್ವಪ್ನವಾಗಿ ಪರಿಣಮಿಸಿದೆ. ಕೊಹ್ಲಿ ಸರಣಿಯ 3 ಪಂದ್ಯಗಳ 6 ಇನ್ನಿಂಗ್ಸ್‌ಗಳಲ್ಲಿ 15.50ರ ಸರಾಸರಿಯಲ್ಲಿ ಕಲೆ ಹಾಕಿದ್ದು ಕೇವಲ 93 ರನ್‌. ಇದರಲ್ಲಿ ಬೆಂಗಳೂರಿನಲ್ಲಿ ಸಿಡಿಸಿದ 70 ರನ್‌ ಕೂಡಾ ಸೇರಿದೆ. ಅಂದರೆ ಉಳಿದ 5 ಇನ್ನಿಂಗ್ಸ್‌ನಲ್ಲಿ ಕೇವಲ 23 ರನ್‌. ಅವರು 2024ರಲ್ಲಿ ಆಡಿದ 12 ಟೆಸ್ಟ್‌ ಇನ್ನಿಂಗ್ಸ್‌ಗಳಲ್ಲಿ 22.72ರ ಸರಾಸರಿಯಲ್ಲಿ 250 ರನ್‌ ಗಳಿಸಿದ್ದು, ಒಂದು ಅರ್ಧಶತಕ ಮಾತ್ರ ಬಾರಿಸಿದ್ದಾರೆ.

ಮತ್ತೊಬ್ಬ ಸ್ಟಾರ್ ಆಟಗಾರ ನಿವೃತ್ತಿ: ಬಂಗಾಳ ವಿಕೆಟ್ ಕೀಪಿಂಗ್ ಕೋಚ್ ಆಗುವುದು ಬಹುತೇಕ ಖಚಿತ

ರೋಹಿತ್‌ ಕಿವೀಸ್‌ ವಿರುದ್ಧ 6 ಇನ್ನಿಂಗ್ಸ್‌ನಲ್ಲಿ ಗಳಿಸಿದ ರನ್‌ 91. ಸರಾಸರಿ ಕೇವಲ 15.16. ಒಟ್ಟಾರೆ ರೋಹಿತ್‌ ಈ ವರ್ಷ 11 ಟೆಸ್ಟ್‌ಗಳ 21 ಇನ್ನಿಂಗ್ಸ್‌ಗಳಲ್ಲಿ 29.40ರ ಸರಾಸರಿಯಲ್ಲಿ 588 ರನ್‌ ಬಾರಿಸಿದ್ದಾರೆ.

ಈ ಇಬ್ಬರ ಪ್ರದರ್ಶನವೇ ತಂಡಕ್ಕೆ ಆಧಾರಸ್ತಂಭ ಎನಿಸಿಕೊಂಡಿದ್ದರೂ, ಇಬ್ಬರೂ ವೈಫಲ್ಯ ಅನುಭವಿಸಿದ್ದು ಭಾರತದ ವೈಟ್‌ವಾಶ್‌ಗೆ ಪ್ರಮುಖ ಕಾರಣ ಎಂದೇ ವಿಶ್ಲೇಷಿಸಲಾಗುತ್ತಿದೆ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧ ಮಹತ್ವದ ಸರಣಿಗೂ ಮುನ್ನ ಹಿರಿಯ ಆಟಗಾರರು ತವರಲ್ಲೇ ದಯನೀಯ ವೈಫಲ್ಯ ಅನುಭವಿಸಿದ್ದು, ತಂಡದ ಆತ್ಮವಿಶ್ವಾಸವನ್ನೇ ಕುಗ್ಗಿಸಿದೆ.

ಸ್ಪಿನ್ನರ್‌ಗಳ ವಿರುದ್ಧ ಪರದಾಟ: ಭಾರತ ಒಂದು ಕಾಲದಲ್ಲಿ ಸ್ಪಿನ್ನರ್‌ಗಳನ್ನು ಪ್ರಬಲವಾಗಿ ಎದುರಿಸುತ್ತಿದ್ದ ಹಾಗೂ ಸ್ಪಿನ್ ದಾಳಿ ಮೂಲಕವೇ ಗುರುತಿಸಿಕೊಂಡಿದ್ದ ತಂಡ. ಆದರೆ ಈಗ ಕಾಲ ಬದಲಾಗಿದೆ. ಯಾವುದೇ ತಜ್ಞ ಸ್ಪಿನ್ನರ್‌ಗಳನ್ನು ಎದುರಿಸಲೂ ಭಾರತದ ಹಿರಿಯ ಹಾಗೂ ಯುವ ಬ್ಯಾಟರ್‌ಗಳು ಪರದಾಟ ನಡೆಸುತ್ತಿದ್ದಾರೆ.

ಗೌತಮ್ ಗಂಭೀರ ಟೀಂ ಇಂಡಿಯಾ ಹೆಡ್ ಕೋಚ್ ಅದ ಮೇಲೆ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು!

ಶುಭ್‌ಮನ್‌ ಗಿಲ್‌, ಯಶಸ್ವಿ ಜೈಸ್ವಾಲ್‌, ಸರ್ಫರಾಜ್‌ ಖಾನ್‌, ಕೆ.ಎಲ್‌.ರಾಹುಲ್‌ ಸೇರಿದಂತೆ ಬಹುತೇಕ ಎಲ್ಲಾ ಆಟಗಾರರು ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾಗಿದ್ದಾರೆ. ರಿಷಭ್‌ ಪಂತ್‌ ಹೊರತುಪಡಿಸಿ ಉಳಿದೆಲ್ಲಾ ಆಟಗಾರರು ತವರಿನ ಪಿಚ್‌ನಲ್ಲೇ ಆತ್ಮವಿಶ್ವಾಸ ಕಳೆದುಕೊಂಡಂತೆ ಆಡಿದ್ದು, ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ನ.22ರಿಂದ ಆಸ್ಟ್ರೇಲಿಯಾ ವಿರುದ್ಧ ಸರಣಿ ಆರಂಭಗೊಳ್ಳಲಿದ್ದು, ಕಿವೀಸ್‌ ಸೋಲಿನ ಕಹಿ ನೆನಪು ಮರೆದು ಟೀಂ ಇಂಡಿಯಾ ಯಾವ ರೀತಿ ಸಜ್ಜುಗೊಳ್ಳಲಿದೆ ಎಂಬ ಕುತೂಹಲವಿದೆ.

ದುಲೀಪ್‌ ಟ್ರೋಫಿ ಆಡಿ ಎಂದರೂ ಕಿವಿಗೊಡದ ಹಿರಿಯ ಆಟಗಾರರು?

ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್‌ ವಿರುದ್ಧ ಸರಣಿಗೂ ಮುನ್ನ ದುಲೀಪ್‌ ಟ್ರೋಫಿಯಲ್ಲಿ ಆಡಬೇಕೆಂಬ ಬಿಸಿಸಿಐ ಸೂಚನೆಯನ್ನು ಹಿರಿಯ ಆಟಗಾರರು ತಿರಸ್ಕರಿಸಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸೆ.5ರಿಂದ 22ರ ವರೆಗೆ ಬೆಂಗಳೂರು, ಆಂಧ್ರಪದೇಶದಲ್ಲಿ ದುಲೀಪ್‌ ಟ್ರೋಫಿ ನಡೆದಿತ್ತು. ಈ ಸರಣಿಯಲ್ಲಿ ಆಡಲು ವಿರಾಟ್‌ ಕೊಹ್ಲಿ, ರೋಹಿತ್‌, ಆರ್‌.ಅಶ್ವಿನ್‌, ಜಡೇಜಾಗೆ ಬಿಸಿಸಿಐ ಸೂಚಿಸಿತ್ತು. ಆರಂಭದಲ್ಲಿ ಆಡುವ ಬಗ್ಗೆ ಭರವಸೆ ನೀಡಿದ್ದರೂ, ಬಳಿಕ ಹಿಂದೆ ಸರಿದಿದ್ದಾರೆ ಎಂದು ಗೊತ್ತಾಗಿದೆ. ಇನ್ನು, ಗಿಲ್‌, ಸರ್ಫರಾಜ್‌, ಜೈಸ್ವಾಲ್‌, ರಾಹುಲ್‌, ರಿಷಭ್‌ ಪಂತ್‌, ವಾಷಿಂಗ್ಟನ್‌ ಸುಂದರ್‌ ದುಲೀಪ್‌ ಟ್ರೋಫಿ ಆಡಿದ್ದಾರೆ. ಇವರೆಲ್ಲರೂ ಬಾಂಗ್ಲಾ ಮತ್ತು ಕಿವೀಸ್‌ ಸರಣಿಯಲ್ಲಿ ಕನಿಷ್ಠ ಒಂದಾದರೂ ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕಿದ್ದಾರೆ ಎಂಬುದು ಗಮನಾರ್ಹ.

ಮುಖ್ಯ ಕೋಚ್ ಗೌತಮ್‌ ಗಂಭೀರ್‌ ಮೇಲೆ ಒತ್ತಡ!

ನೂತನ ಕೋಚ್‌ ಗೌತಮ್‌ ಗಂಭೀರ್‌ ಹುದ್ದೆಗೇರಿದ ಕೆಲ ತಿಂಗಳಲ್ಲೇ ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ. ತಮ್ಮ ಆಯ್ಕೆಯ ಸಹಾಯಕ ಸಿಬ್ಬಂದಿ ನೀಡಿದರೂ ಗಂಭೀರ್‌ ಕೋಚಿಂಗ್‌ನಲ್ಲಿ ನಿರೀಕ್ಷಿತ ಸಾಧನೆ ಮಾಡಿಲ್ಲ. ಅವರ ಕೋಚಿಂಗ್‌ ಶೈಲಿಯ ಬಗ್ಗೆಯೂ ಅಪಸ್ವರಗಳು ಎದ್ದಿವೆ. ಇತ್ತೀಚೆಗಷ್ಟೇ ಭಾರತ ತಂಡ ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸೋತಿತ್ತು. ಲಂಕಾ ವಿರುದ್ಧ ಬರೋಬ್ಬರಿ 27 ವರ್ಷಗಳ ಬಳಿಕ ಭಾರತ ಸರಣಿ ಸೋತ ಅಪಖ್ಯಾತಿಗೆ ತುತ್ತಾಗಿತ್ತು. ಮತ್ತೊಂದೆಡೆ ಕಿವೀಸ್‌ ವಿರುದ್ಧ ತವರಲ್ಲೇ ಹೀನಾಯ ಸೋಲು ಗಂಭೀರ್‌ಗೆ ಮತ್ತಷ್ಟು ಹಿನ್ನಡೆ ಉಂಟುಮಾಡಿದೆ. ಅವರ ಕಾರ್ಯಕ್ಷಮತೆ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದ್ದು, ಆಸ್ಟ್ರೇಲಿಯಾ ಸರಣಿಯಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ.
 

click me!