Wimbledon 2023: ವಿಶ್ವ ನಂ.1 ಇಗಾ ಸ್ವಿಯಾಟೆಕ್‌ಗೆ ಸೋಲಿನ ಶಾಕ್‌!

By Kannadaprabha NewsFirst Published Jul 12, 2023, 10:31 AM IST
Highlights

ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿ ಇಗಾ ಸ್ವಿಯಾಟೆಕ್‌ಗೆ ಶಾಕ್
ಚೊಚ್ಚಲ ಬಾರಿಗೆ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ಇಗಾ ಕನಸು ಭಗ್ನ
ವಿಶ್ವ ನಂ.1 ಇಗಾ ಸ್ವಿಯಾಟೆಕ್‌ ಗೆ ಮತ್ತೊಮ್ಮೆ ನಿರಾಸೆ

ಲಂಡನ್‌(ಜು.12): ಚೊಚ್ಚಲ ಬಾರಿ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ವಿಶ್ವ ನಂ.1 ಇಗಾ ಸ್ವಿಯಾಟೆಕ್‌ ಮತ್ತೊಮ್ಮೆ ಎಡವಿದ್ದಾರೆ. ಇತ್ತೀಚೆಗಷ್ಟೇ ಪ್ರೆಂಚ್‌ ಓಪನ್‌ ಸೇರಿದಂತೆ ಈವರೆಗೆ 4 ಬಾರಿ ಗ್ರ್ಯಾನ್‌ಸ್ಲಾಂ ಗೆದ್ದರೂ ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಬರ ಎದುರಿಸುತ್ತಿದ್ದ ಪೋಲೆಂಡ್‌ನ ಇಗಾ ಮಂಗಳವಾರ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಉಕ್ರೇನ್‌ನ ಶ್ರೇಯಾಂಕ ರಹಿತ ಎಲಿನಾ ಸ್ವಿಟೋಲಿನಾ ವಿರುದ್ಧ ಸೋತು ಹೊರಬಿದ್ದರು.

ಟೂರ್ನಿಯಲ್ಲಿ ಈಗಾಗಲೇ ವೀನಸ್‌ ವಿಲಿಯಮ್ಸ್‌, ವಿಕ್ಟೋರಿಯಾ ಅಜರೆಂಕಾಗೆ ಸೋಲುಣಿಸಿದ್ದ ಸ್ಟಿಟೋಲಿನಾ, ಇಗಾ ವಿರುದ್ಧವೂ ಅಚ್ಚರಿಯ ಗೆಲುವು ಸಾಧಿಸಿ 2ನೇ ಬಾರಿ ವಿಂಬಲ್ಡನ್‌ನಲ್ಲಿ ಸೆಮಿಫೈನಲ್‌ಗೇರಿದರು. ಪಂದ್ಯದಲ್ಲಿ ಸ್ವಿಟೋಲಿನಾ 7-5, 6-7(5/7), 6-2 ಅಂತರದಲ್ಲಿ ಗೆಲುವು ಸಾಧಿಸಿದರು. ಮೊದಲ ಸೆಟ್‌ನಲ್ಲಿ ಸ್ವಿಟೋಲಿನಾ ಗೆದ್ದ ಬಳಿಕ 2ನೇ ಸೆಟ್‌ನಲ್ಲಿ ಇಗಾ ತೀವ್ರ ಪೈಪೋಟಿ ನೀಡಿ ಪಂದ್ಯ ತಮ್ಮದಾಗಿಸಿಕೊಂಡರು. ಆದರೆ 3ನೇ ಸೆಟ್‌ನಲ್ಲಿ ಸ್ವಿಟೋಲಿನಾ ಆಟದ ಮುಂದೆ ಇಗಾ ಮಂಡಿಯೂರಿದರು. ಇದರೊಂದಿಗೆ 4ನೇ ಬಾರಿಯೂ ವಿಂಬಲ್ಡನ್‌ನಲ್ಲಿ ಇಗಾ ಸೆಮೀಸ್‌ನಿಂದ ವಂಚಿತರಾದರು.

ಪ್ರಿ ಕ್ವಾರ್ಟರ್‌ಗೇರಿದ ಬೋಪಣ್ಣ: 'ಭಾರತದ ಸೂಪರ್ ಸ್ಟಾರ್' ಎಂದು ಕನ್ನಡದಲ್ಲೇ ಟ್ವೀಟ್ ಮಾಡಿದ ವಿಂಬಲ್ಡನ್‌..!

ಪೆಗುಲಾಗೆ ಮಾರ್ಕೆಟಾ ಆಘಾತ: ಇದೇ ವೇಳೆ ಮಹಿಳಾ ಸಿಂಗಲ್ಸ್‌ನಲ್ಲಿ 4ನೇ ಶ್ರೇಯಾಂಕಿತೆ, ಅಮೆರಿಕದ ಜೆಸ್ಸಿಕಾ ಪೆಗುಲಾ ಕೂಡಾ ಸೋತು ಹೊರಬಿದ್ದರು. ಕ್ವಾರ್ಟರ್‌ನಲ್ಲಿ ಅವರು ಶ್ರೇಯಾಂಕ ರಹಿತ, ಚೆಕ್‌ ಗಣರಾಜ್ಯದ ಮಾರ್ಕೆಟಾ ವೊಂಡ್ರೊಸೋವಾ ವಿರುದ್ಧ 4-6, 6-2, 4-6 ಅಂತರದಲ್ಲಿ ಪರಾಭವಗೊಂಡರು. ಗುರುವಾರ ಸೆಮೀಸ್‌ನಲ್ಲಿ ಮಾರ್ಕೆಟಾಗೆ ಸ್ವಿಟೋಲಿನಾ ಸವಾಲು ಎದುರಾಗಲಿದೆ.

ಕ್ವಾರ್ಟರ್‌ಗೆ ಆಲ್ಕರಜ್‌: ಇದಕ್ಕೂ ಮೊದಲು ಸೋಮವಾರ ರಾತ್ರಿ ವಿಶ್ವ ನಂ.1 ಕಾರ್ಲೊಸ್‌ ಆಲ್ಕರಜ್‌ ಮೊದಲ ಬಾರಿ ವಿಂಬಲ್ಡನ್‌ನಲ್ಲಿ ಕ್ವಾರ್ಟರ್‌ ಫೈನಲ್‌ಗೇರಿದರು. 2022ರ ಯುಎಸ್‌ ಓಪನ್‌ ಚಾಂಪಿಯನ್‌, ಸ್ಪೇನ್‌ನ ಆಲ್ಕರಜ್‌ ಪ್ರಿ ಕ್ವಾರ್ಟರ್‌ನಲ್ಲಿ ಇಟಲಿಯ ಬೆರೆಟ್ಟಿನಿ ವಿರುದ್ಧ 3-6, 6-3, 6-3, 6-3 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಕ್ವಾರ್ಟರ್‌ನಲ್ಲಿ ಆಲ್ಕರಜ್‌ಗೆ ಡೆನ್ಮಾರ್ಕ್‌ನ ಹೋಲ್ಗರ್‌ ರ್‍ಯುನೆ ಸವಾಲು ಎದುರಾಗಲಿದೆ.

ಕ್ವಾರ್ಟರ್‌ಗೆ ಬೋಪಣ್ಣ

ಭಾರತದ ಹಿರಿಯ ಟೆನಿಸಿಗ ರೋಹಣ್‌ ಬೋಪಣ್ಣ-ಆಸ್ಟ್ರೇಲಿಯಾ ಮ್ಯಾಥ್ಯೂ ಎಬ್ಡೆನ್‌ ಜೋಡಿ ಪುರುಷರ ಡಬಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಮಂಗಳವಾರ 2ನೇ ಸುತ್ತಿನ ಪಂದ್ಯದಲ್ಲಿ ಇಂಡೋ-ಆಸೀಸ್‌ ಜೋಡಿ ನೆದರ್‌ಲೆಂಡ್ಸ್‌ನ ಡೇವಿಡ್‌ ಪೆಲ್‌-ಅಮೆರಿಕದ ರೀಸ್‌ ಸ್ಟಾಲ್ಡರ್‌ ವಿರುದ್ಧ 7-5, 4-6, 7-6(10/5) ಅಂತರದಲ್ಲಿ ರೋಚಕ ಜಯಗಳಿಸಿತು. ಕ್ವಾರ್ಟರ್‌ನಲ್ಲಿ ಇವರಿಗೆ ನೆದರ್‌ಲೆಂಡ್ಸ್‌ನ ಗ್ರೀಕ್‌ಸ್ಪೂರ್‌-ಬಾರ್ಟ್‌ ಸ್ಟೀವನ್ಸ್‌ ಸವಾಲು ಎದುರಾಗಲಿದೆ.

click me!