IPL 2024 ಬೆಂಗ್ಳೂರಲ್ಲಿಂದು ಆರ್‌ಸಿಬಿ vs ಚೆನ್ನೈ ಬಹುನಿರೀಕ್ಷಿತ ನಾಕೌಟ್‌ ಕದನ

By Kannadaprabha News  |  First Published May 18, 2024, 9:03 AM IST

ಆರ್‌ಸಿಬಿಯ ಈ ಬಾರಿಯ ಪ್ರದರ್ಶನ ಯಾವ ಥ್ರಿಲ್ಲರ್‌ ಸಿನಿಮಾಕ್ಕೂ ಕಡಿಮೆಯೇನಲ್ಲ. ಮೊದಲಾರ್ಧದಲ್ಲಿ 8 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದು, ಇನ್ನೇನು ಪ್ಲೇ-ಆಫ್‌ ರೇಸ್‌ನಿಂದ ಹೊರಬಿತ್ತು ಅನ್ನುವಷ್ಟರಲ್ಲಿ ಗೇರ್‌ ಬದಲಿಸಿ ಹೈಸ್ಪೀಡ್‌ನಲ್ಲಿ ಓಡಲು ಶುರುವಿಟ್ಟ ತಂಡ ಸದ್ಯ ಸತತ 5, ಒಟ್ಟಾರೆ 6 ಗೆಲುವಿನೊಂದಿಗೆ 12 ಅಂಕ ಸಂಪಾದಿಸಿದೆ.


ಬೆಂಗಳೂರು(ಮೇ.18): 17ನೇ ಆವೃತ್ತಿ ಐಪಿಎಲ್‌ನ ಬಹುನಿರೀಕ್ಷಿತ, ಸಾಂಪ್ರದಾಯಿಕ ಬದ್ಧವೈರಿಗಳಾದ ಆರ್‌ಸಿಬಿ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ನಿರ್ಣಾಯಕ ಹಣಾಹಣಿಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಉಭಯ ತಂಡಗಳಿಗೂ ಈ ಪಂದ್ಯ ಮಾಡು ಇಲ್ಲವೇ ಮಾಡಿ ಎನಿಸಿಕೊಂಡಿದ್ದು, ಮಳೆ ಭೀತಿ ನಡುವೆಯೇ ರಣರೋಚಕ ಪೈಪೋಟಿಗೆ ಸಾಕ್ಷಿಯಾಗಲು ಅಭಿಮಾನಿಗಳೂ ತುದಿಗಾಲಲ್ಲಿ ನಿಂತಿದ್ದಾರೆ.

ಈ ಬಾರಿ 3 ತಂಡಗಳು ಪ್ಲೇ-ಆಫ್‌ಗೇರಿದ್ದು, ಮತ್ತೊಂದು ಸ್ಥಾನಕ್ಕಾಗಿ ಚೆನ್ನೈ-ಆರ್‌ಸಿಬಿ ಸೆಣಸಾಡಲಿವೆ. ಆರ್‌ಸಿಬಿಯ ಈ ಬಾರಿಯ ಪ್ರದರ್ಶನ ಯಾವ ಥ್ರಿಲ್ಲರ್‌ ಸಿನಿಮಾಕ್ಕೂ ಕಡಿಮೆಯೇನಲ್ಲ. ಮೊದಲಾರ್ಧದಲ್ಲಿ 8 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದು, ಇನ್ನೇನು ಪ್ಲೇ-ಆಫ್‌ ರೇಸ್‌ನಿಂದ ಹೊರಬಿತ್ತು ಅನ್ನುವಷ್ಟರಲ್ಲಿ ಗೇರ್‌ ಬದಲಿಸಿ ಹೈಸ್ಪೀಡ್‌ನಲ್ಲಿ ಓಡಲು ಶುರುವಿಟ್ಟ ತಂಡ ಸದ್ಯ ಸತತ 5, ಒಟ್ಟಾರೆ 6 ಗೆಲುವಿನೊಂದಿಗೆ 12 ಅಂಕ ಸಂಪಾದಿಸಿದೆ. ಪ್ಲೇ-ಆಫ್‌ಗೇರಲು ಈ ಪಂದ್ಯದಲ್ಲಿ 18 ರನ್‌ನಿಂದ ಅಥವಾ 11 ಎಸೆತ ಬಾಕಿ ಉಳಿಸಿ ಗೆಲ್ಲಬೇಕಿದ್ದು, ಸೋತರೆ ರೇಸ್‌ನಿಂದ ಹೊರಬೀಳಲಿದೆ.

Latest Videos

undefined

IPL 2024 ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಐಪಿಎಲ್‌ಗೆ ಲಖನೌ ವಿದಾಯ; 5 ಬಾರಿಯ ಚಾಂಪಿಯನ್‌ಗೆ ಕೊನೆ ಸ್ಥಾನ

ಅತ್ತ ಚೆನ್ನೈ 13 ಪಂದ್ಯಗಳಲ್ಲಿ 7ರಲ್ಲಿ ಜಯಭೇರಿ ಬಾರಿಸಿದ್ದು, 14 ಅಂಕಗಳನ್ನು ಹೊಂದಿದೆ. ಆರ್‌ಸಿಬಿ(+0.387)ಗಿಂತ ನೆಟ್‌ ರನ್‌ರೇಟ್‌ನಲ್ಲಿ ಮುಂದಿರುವ ಚೆನ್ನೈ(+0.528) ಈ ಪಂದ್ಯದಲ್ಲಿ ಗೆದ್ದರೆ ಪ್ಲೇ-ಆಫ್‌ಗೇರಲಿದೆ. ಸೋತರೂ ತಂಡದ ನೆಟ್‌ ರನ್‌ರೇಟ್‌ ಆರ್‌ಸಿಬಿಗಿಂತ ಕಡಿಮೆಯಾಗದಿದ್ದರೆ ನಾಕೌಟ್‌ಗೇರುವ ಅವಕಾಶ ಸಿಗಲಿದೆ.

ಗ್ರೇಟ್‌ ಕಮ್‌ಬ್ಯಾಕ್‌: ಆರ್‌ಸಿಬಿ ಪಾಲಿಗೆ ಚೆನ್ನೈ ನುಂಗಲಾರದ ತುತ್ತು. ಚೆನ್ನೈ ವಿರುದ್ಧ ತಂಡದ ಸಾಧನೆಯೇನೂ ಉತ್ತಮವಾಗಿಲ್ಲ. ಆದರೆ ಸತತ ಸೋಲುಗಳ ಬಳಿಕ ಕಮ್‌ಬ್ಯಾಕ್‌ ಮಾಡಿದ ಆರ್‌ಸಿಬಿಯ ಕಳೆದ 5 ಪಂದ್ಯಗಳ ಆಟ ನೋಡಿದರೆ ಈ ಪಂದ್ಯದಲ್ಲೂ ಆರ್‌ಸಿಬಿಯೇ ಗೆಲ್ಲುವ ಫೇವರಿಟ್‌. ಕೊಹ್ಲಿ ಅಭೂತಪೂರ್ವ ಲಯದಲ್ಲಿದ್ದು, ನಿರ್ಣಾಯಕ ಪಂದ್ಯದಲ್ಲೂ ತಂಡದ ಕೈಹಿಡಿಯಬೇಕಿದೆ. ವಿಲ್‌ ಜ್ಯಾಕ್ಸ್ ತವರಿಗೆ ಮರಳಿರುವ ಹಿನ್ನೆಲೆಯಲ್ಲಿ ಸದ್ಯ ಎಲ್ಲರ ಚಿತ್ತ ಗ್ಲೆನ್‌ ಮ್ಯಾಕ್ಸ್‌ವೆಲ್‌ ಮೇಲಿದೆ. ರಜತ್‌ ಪಾಟೀದಾರ್‌ ಕೂಡಾ ಅಬ್ಬರಿಸುತ್ತಿರುವುದು ಆರ್‌ಸಿಬಿಗೆ ಪ್ಲಸ್‌ ಪಾಯಿಂಟ್‌. ಬೌಲಿಂಗ್‌ ವಿಭಾಗವಂತೂ ಎದುರಾಳಿಗಳನ್ನು ಬೆಚ್ಚಿ ಬೀಳಿಸುವಂತಿದ್ದು, ಮಹತ್ವದ ಪಂದ್ಯದಲ್ಲಿ ತಂಡಕ್ಕೆ ನೆರವಾಗಬೇಕಿದೆ.

ಚೆನ್ನೈ ಸೂಪರ್ ಕಿಂಗ್ಸ್ ಎದುರು ಗೆದ್ರು ಆರ್‌ಸಿಬಿ ಪ್ಲೇ ಆಫ್‌ಗೇರೋದು ಡೌಟ್..! ಇಲ್ಲಿದೆ ಹೊಸ ಅಪ್ಡೇಟ್‌

ಬೌಲಿಂಗ್‌ ಚಿಂತೆ: ಚೆನ್ನೈ ಟೂರ್ನಿಯುದ್ದಕ್ಕೂ ವೇಗದ ಬೌಲಿಂಗ್‌ ವಿಭಾಗದಲ್ಲಿ ಸಮಸ್ಯೆ ಎದುರಿಸುತ್ತಿದೆ. ಪ್ರಮುಖರಾದ ಮುಸ್ತಾಫಿಜುರ್‌, ಪತಿರನ, ದೀಪಕ್‌ ಚಹರ್‌ ಗೈರಿನಿಂದ ತಂಡದ ಬೌಲಿಂಗ್‌ ವಿಭಾಗ ಸೊರಗಿದೆ. ಆದರೆ ಸಿಮ್‌ಜೀತ್‌ ಸಿಂಗ್‌, ತುಷಾರ್‌ ದೇಶಪಾಂಡೆ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ನಾಯಕ ಋತುರಾಜ್‌ ಗಾಯಕ್ವಾಡ್‌ ಮಿಂಚುತ್ತಿದ್ದರೂ, ರಚಿನ್ ರವೀಂದ್ರ, ಶಿವಂ ದುಬೆ ಕೂಡಾ ಲಯಕ್ಕೆ ಮರಳಿ ಅಬ್ಬರಿಸಬೇಕಿದೆ.

ಒಟ್ಟು ಮುಖಾಮುಖಿ: 32

ಆರ್‌ಸಿಬಿ: 10

ಚೆನ್ನೈ: 21

ಫಲಿತಾಂಶವಿಲ್ಲ: 01

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಫಾಫ್ ಡು ಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ರಜತ್‌ ಪಾಟೀದಾರ್, ಗ್ಲೆನ್ ಮ್ಯಾಕ್ಸ್‌ವೆಲ್‌, ಕ್ಯಾಮರೋನ್ ಗ್ರೀನ್‌, ಮಹಿಪಾಲ್ ಲೊಮ್ರೊರ್, ದಿನೇಶ್ ಕಾರ್ತಿಕ್‌, ಕರ್ಣ್‌ ಶರ್ಮಾ, ಮೊಹಮ್ಮದ್ ಸಿರಾಜ್‌, ಲಾಕಿ ಫರ್ಗ್ಯೂಸನ್‌, ಯಶ್‌ ದಯಾಲ್‌.

ಚೆನ್ನೈ: ರಚಿನ್‌ ರವೀಂದ್ರ, ಋತುರಾಜ್‌ ಗಾಯಕ್ವಾಡ್(ನಾಯಕ), ಡ್ಯಾರೆಲ್ ಮಿಚೆಲ್‌, ಮಿಚೆಲ್ ಸ್ಯಾಂಟ್ನರ್, ಶಿವಂ ದುಬೆ, ರವೀಂದ್ರ ಜಡೇಜಾ, ಎಂ ಎಸ್ ಧೋನಿ, ಶಾರ್ದೂಲ್‌ ಠಾಕೂರ್, ತುಷಾರ್‌ ದೇಶಪಾಂಡೆ, ಸಿಮರ್‌ಜೀತ್‌ ಸಿಂಗ್, ಮಹೀಶ್ ತೀಕ್ಷಣ.

ಪಂದ್ಯ: ರಾತ್ರಿ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ

ಪಿಚ್ ರಿಪೋರ್ಟ್‌: ಚಿನ್ನಸ್ವಾಮಿ ಕ್ರೀಡಾಂಗಣ ದೊಡ್ಡ ಮೊತ್ತ, ಚೇಸಿಂಗ್‌ಗೆ ಹೆಸರುವಾಸಿ. ಆದರೆ ಈ ಬಾರಿ ಟ್ರೆಂಡ್‌ ಬದಲಾಗಿದೆ. ಇಲ್ಲಿ ಈ ಆವೃತ್ತಿಯ 6 ಪಂದ್ಯಗಳ 12 ಇನ್ನಿಂಗ್ಸ್‌ಗಳಲ್ಲಿ 2 ಬಾರಿ ಮಾತ್ರ 200+ ರನ್‌ ದಾಖಲಾಗಿದೆ. ಅಲ್ಲದೆ ಕಳೆದ 4 ಪಂದ್ಯಗಳ ಪೈಕಿ 3ರಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ ಗೆದ್ದಿವೆ. ಹೀಗಾಗಿ ಟಾಸ್ ಮತ್ತೆ ನಿರ್ಣಾಯಕ ಪಾತ್ರ ವಹಿಸಬಹುದು.

click me!