ಸುಧೀರ್ಮನ್ ಕಪ್ ಬ್ಯಾಡ್ಮಿಂಟನ್ ಟೂರ್ನಿ ಚೀನಾದಲ್ಲಿ ಆರಂಭ
ಚೀನಾದ ಸುಝೋದಲ್ಲಿ ಆರಂಭವಾಗಲಿರುವ ಬ್ಯಾಡ್ಮಿಂಟನ್ ಟೂರ್ನಿ
ಪಿ.ವಿ.ಸಿಂಧು, ಪ್ರಣಯ್, ಶ್ರೀಕಾಂತ್ ಅವರನ್ನೊಳಗೊಂಡ ಭಾರತ ಚೊಚ್ಚಲ ಪದಕ ಗೆಲ್ಲುವ ನಿರೀಕ್ಷೆ
ಸೂಝೊ(ಚೀನಾ): ಪ್ರತಿಷ್ಠಿತ ಸುಧೀರ್ಮನ್ ಕಪ್ ಬ್ಯಾಡ್ಮಿಂಟನ್ ಟೂರ್ನಿ ಶನಿವಾರದಿಂದ ಚೀನಾದ ಸುಝೋದಲ್ಲಿ ಆರಂಭವಾಗಲಿದ್ದು, ಪಿ.ವಿ.ಸಿಂಧು, ಪ್ರಣಯ್, ಶ್ರೀಕಾಂತ್ ಅವರನ್ನೊಳಗೊಂಡ ಭಾರತ ಚೊಚ್ಚಲ ಪದಕ ಗೆಲ್ಲುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದೆ. 2011, 2017ರಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು ಭಾರತದ ಈವರೆಗಿನ ಶ್ರೇಷ್ಠ ಪ್ರದರ್ಶನ.
ಶನಿವಾರ ‘ಸಿ’ ಗುಂಪಿನ ಮೊದಲ ಪಂದ್ಯದಲ್ಲಿ ಬಲಿಷ್ಠ ಚೈನೀಸ್ ತೈಪೆ ವಿರುದ್ಧ ಸೆಣಸಾಡಲಿದೆ. ಬಳಿಕ ಸೋಮವಾರ ಮಲೇಷ್ಯಾ, ಬುಧವಾರ ಆಸ್ಪ್ರೇಲಿಯಾ ವಿರುದ್ಧ ಕಣಕ್ಕಿಳಿಯಲಿದೆ.
ತಾತ್ಕಾಲಿಕ ಸಮಿತಿಗೆ ಕುಸ್ತಿ ಸಂಸ್ಥೆಯ ಪೂರ್ಣ ಅಧಿಕಾರ
ನವದೆಹಲಿ: ಬ್ರಿಜ್ಭೂಷಣ್ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಒಲಿಂಪಿಕ್ಸ್ ಸಮಿತಿ(ಐಒಎ) ನೇಮಿಸಿರುವ ತಾತ್ಕಾಲಿಕ ಸಮಿತಿಗೆ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ)ನ ಸಂಪೂರ್ಣ ಅಧಿಕಾರ ನೀಡಲಾಗಿದೆ.
ಲೆಕ್ಕಪತ್ರ ಸೇರಿ ಎಲ್ಲಾ ದಾಖಲೆಗಳನ್ನು ಸಮಿತಿಗೆ ಹಸ್ತಾಂತರಿಸುವಂತೆ ಡಬ್ಲ್ಯುಎಫ್‌ಐ ಕಾರ‍್ಯದರ್ಶಿಗೆ ಐಒಎ ಸೂಚನೆ ನೀಡಿದ್ದು, ಡಬ್ಲ್ಯುಎಫ್‌ಐನ ಯಾವ ಪದಾಧಿಕಾರಿಗೂ ಸಮಿತಿಯಲ್ಲಿ ಇನ್ನು ಯಾವುದೇ ಅಧಿಕಾರ ಇಲ್ಲ ಎಂದು ತಿಳಿಸಿದೆ.
ಶೂಟಿಂಗ್ ವಿಶ್ವಕಪ್: ಬೆಳ್ಳಿ ಗೆದ್ದ ಭಾರತದ ಹೃದಯ್
ಬಾಕು(ಅಜರ್ಬೈಜಾನ್): ಇಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ನಲ್ಲಿ ಭಾರತ 3ನೇ ಪದಕ ಗೆದ್ದಿದೆ. ಶುಕ್ರವಾರ ಪುರುಷರ ವಿಭಾಗದ 10 ಮೀ. ಏರ್ ರೈಫಲ್ ವಿಭಾಗದಲ್ಲಿ ಹೃದಯ್ ಹಜಾರಿಕಾ ಬೆಳ್ಳಿ ಪದಕ ಗೆದ್ದರು. ಅರ್ಹತಾ ಸುತ್ತಿನಲ್ಲಿ 630.3 ಅಂಕ ಸಂಪಾದಿಸಿದ್ದ ಹೃದಯ್ ಫೈನಲ್ನಲ್ಲಿ 251.9 ಅಂಕಗಳೊಂದಿಗೆ 2ನೇ ಸ್ಥಾನಿಯಾದರು.
ಹಂಗೇರಿಯ ಜಲಾನ್ ಪೆಕ್ಲರ್ ವಿರುದ್ಧ ಹೃದಯ್ ಕೇವಲ 0.5 ಅಂತರದಲ್ಲಿ ಚಿನ್ನ ಪದಕ ವಂಚಿತರಾದರು. ಇದು 21 ವರ್ಷದ ಹಜಾರಿಕಾಗೆ ಹಿರಿಯರ ವಿಭಾಗದಲ್ಲಿ ಚೊಚ್ಚಲ ಪದಕ. ಮೊದಲೆರಡು ದಿನ ಭಾರತ ಕೂಟದಲ್ಲಿ 1 ಚಿನ್ನ, 1 ಕಂಚು ಗೆದ್ದಿತ್ತು.
ಲಿಯೋನೆಲ್ ಮೆಸ್ಸಿ ಸೌದಿ ಕ್ಲಬ್ ಸೇರ್ಪಡೆ?
ಪ್ಯಾರಿಸ್: ಅರ್ಜೆಂಟೀನಾದ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಮುಂದಿನ ಋುತುವಿನಲ್ಲಿ ಸೌದಿ ಅರೇಬಿಯಾದ ಲೀಗ್ನಲ್ಲಿ ಆಡುವುದು ಬಹುತೇಕ ಖಚಿತವಾಗಿದೆ ಎನ್ನಲಾಗಿದ್ದು, ಅಲ್ ಹಿಲಾಲ್ ಕ್ಲಬ್ ಜೊತೆ ಮಾತುಕತೆ ಪೂರ್ಣಗೊಳಿಸಿದ್ದಾರೆ ಎಂದು ಮಾಧ್ಯಗಳಲ್ಲಿ ವರದಿಯಾಗಿದೆ.
ಕ್ಲಬ್ ಮೆಸ್ಸಿಗೆ ವಾರ್ಷಿಕ 400 ಮಿಲಿಯನ್ ಯುರೋ (ಅಂದಾಜು 3611 ಕೋಟಿ ರು.) ಆಫರ್ ನೀಡಿದೆ ಎಂದು ಕಳೆದ ತಿಂಗಳು ವರದಿಯಾಗಿತ್ತು. ಸದ್ಯ ಅವರು ಫ್ರಾನ್ಸ್‌ನ ಫುಟ್ಬಾಲ್ ಕ್ಲಬ್ ಪ್ಯಾರಿಸ್ ಸೇಂಟ್ ಜರ್ಮೈನ್(ಪಿಎಸ್ಜಿ) ಪರ ಆಡುತ್ತಿದ್ದು, ಈ ಋುತುವಿನಲ್ಲಿ ಅವರ ಒಪ್ಪಂದ ಅಂತ್ಯಗೊಳ್ಳಲಿದೆ. ಅವರ ಒಪ್ಪಂದ ನವೀಕರಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.