ಕ್ರೀಡಾ ಸಚಿವಾಲಯ ನೂತನವಾಗಿ ಪ್ರಕಟಿಸಿರುವ ಮಾರ್ಗಸೂಚಿ ಪ್ರಕಾರ, ಕ್ರೀಡಾಂಗಣಗಳ ಒಟ್ಟು ಆಸನ ಸಾಮರ್ಥ್ಯದ ಶೇ.50ರಷ್ಟನ್ನು ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಡಿ.29): ಕೊರೋನಾ ಸೋಂಕಿನ ಭೀತಿಯಿಂದಾಗಿ ಭಾರತದಲ್ಲಿ ಕ್ರೀಡಾಂಗಣಗಳಿಗೆ ಪ್ರೇಕ್ಷಕರ ಪ್ರವೇಶಕ್ಕೆ ಹೇರಿದ್ದ ನಿರ್ಬಂಧವನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದೆ. ಕ್ರೀಡಾ ಸಚಿವಾಲಯ ಪ್ರಕಟಿಸಿರುವ ಮಾರ್ಗಸೂಚಿ ಪ್ರಕಾರ, ಕ್ರೀಡಾಂಗಣಗಳ ಒಟ್ಟು ಆಸನ ಸಾಮರ್ಥ್ಯದ ಶೇ.50ರಷ್ಟನ್ನು ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಮಾರ್ಚ್‌ನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಕಾಣಿಸಿಕೊಂಡ ಕೂಡಲೇ ಕ್ರೀಡಾ ಚಟುವಟಿಕೆಗಳನ್ನು ರದ್ದುಗೊಳಿಸಲಾಗಿತ್ತು. ಐಪಿಎಲ್ ಸೇರಿ ಪ್ರಮುಖ ಟೂರ್ನಿಗಳು ಮುಂದೂಡಿಕೆ, ರದ್ದು ಇಲ್ಲವೇ ಸ್ಥಳಾಂತರಗೊಂಡಿದ್ದವು. ಕೆಲ ತಿಂಗಳುಗಳ ಹಿಂದೆಯೇ ಕ್ರೀಡಾಕೂಟಗಳನ್ನು ಆಯೋಜಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತಾದರೂ, ಪ್ರೇಕ್ಷಕರ ಪ್ರವೇಶಕ್ಕೆ ನಿರ್ಬಂಧ ಮುಂದುವರಿಸಿತ್ತು.
undefined
ಬಾಕ್ಸಿಂಗ್ ಡೇ ಟೆಸ್ಟ್: ಆಸ್ಟ್ರೇಲಿಯಾ ಆಲೌಟ್ @200; ಭಾರತ ಗೆಲ್ಲಲು 70 ರನ್ ಗುರಿ
ಇದೇ ಕಾರಣದಿಂದಾಗಿ, ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್ಬಾಲ್ 7ನೇ ಆವೃತ್ತಿ ಗೋವಾದಲ್ಲಿ ಪ್ರೇಕ್ಷಕರಿಲ್ಲದೆ ಆಯೋಜನೆಗೊಂಡಿದೆ. ಕೇಂದ್ರದ ಮಾರ್ಗಸೂಚಿಯಲ್ಲಿ ಕ್ರೀಡಾಪಟುಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಆಗ್ಗಾಗೆ ಕೈತೊಳೆಯುವುದು, ಸ್ಯಾನಿಟೈಸರ್ ಬಳಕೆ ಮಾಡುವಂತೆ ಸೂಚಿಸಲಾಗಿದೆ. ಜೊತೆಗೆ ಸಾಧ್ಯವಾದ ಕಡೆಗಳಲ್ಲಿ ಮಾಸ್ಕ್ ಧರಿಸಬೇಕು, ಕ್ರೀಡಾಂಗಣ ಸೇರಿ ಎಲ್ಲಿಯೂ ಉಗುಳಬಾರದು ಎಂದು ತಿಳಿಸಲಾಗಿದೆ. ಈಜುಕೊಳ ಬಳಕೆಗೂ ಮಾರ್ಗಸೂಚಿ ಪ್ರಕಟ ಮಾಡಲಾಗಿದೆ.
ಟಿ20ಗೆ ಪ್ರೇಕ್ಷಕರು?:
ಜ.10ರಿಂದ ಆರಂಭಗೊಳ್ಳಲಿರುವ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗೆ ಪ್ರೇಕ್ಷಕರ ಪ್ರವೇಶಕ್ಕೆ ಬಿಸಿಸಿಐ ಅನುಮತಿ ನೀಡುವ ಸಾಧ್ಯತೆ ಇದೆ. ಬೆಂಗಳೂರು ಸೇರಿ 6 ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಇನ್ನು 2021ರಲ್ಲಿ ಭಾರತದಲ್ಲೇ 14ನೇ ಆವೃತ್ತಿಯ ಐಪಿಎಲ್ ನಡೆಸಲು ಬಿಸಿಸಿಐ ಯೋಜನೆ ರೂಪಿಸುತ್ತಿದೆ. ಕ್ರೀಡಾಂಗಣಕ್ಕೆ ಪ್ರವೇಶ ಸಿಗಲಿದೆ ಎನ್ನುವ ವಿಚಾರ ಕ್ರಿಕೆಟ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಲಿದೆ.