ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪರ್ತ್ ಟೆಸ್ಟ್‌ಗೆ ಭಾರತ ತಂಡದ ಆಡುವ ಹನ್ನೊಂದರ ಬಳಗ ಹೇಗಿರಬೇಕು ಎನ್ನುವ ಗೊಂದಲ ಶುರುವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಪರ್ತ್: ಬಹುನಿರೀಕ್ಷಿತ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆರಂಭಕ್ಕೆ ಕೇವಲ 3 ದಿನ ಬಾಕಿ ಇದೆ. ನಾಯಕ ರೋಹಿತ್ ಶರ್ಮಾರ ಅಲಭ್ಯತೆ ಹಾಗೂ ಶುಭ್‌ಮನ್ ಗಿಲ್‌ಗೆ ಗಾಯ, ಮೊದಲ ಟೆಸ್ಟ್‌ಗೂ ಮುನ್ನ ಟೀಂ ಇಂಡಿಯಾವನ್ನು ಆಯ್ಕೆ ಗೊಂದಲಕ್ಕೆ ಸಿಲುಕಿಸಿದೆ. ಹಂಗಾಮಿ ನಾಯಕ ಜಸ್‌ಪ್ರೀತ್ ಬೂಮ್ರಾ ಹಾಗೂ ಪ್ರಧಾನ ಕೋಚ್ ಗೌತಮ್ ಗಂಭೀರ್, ಸುದೀರ್ಘ ಚರ್ಚೆಯಲ್ಲಿ ತೊಡಗಿರುವುದು ಅಭ್ಯಾಸದ ವೇಳೆ ಸ್ಪಷ್ಟವಾಗಿ ಕಾಣುತ್ತಿದ್ದು, ನಾಲ್ಕು ಸ್ಥಾನಗಳಿಗೆ ಸೂಕ್ತ ಆಟಗಾರರನ್ನು ನಿರ್ಧರಿಸಬೇಕಾದ ಒತ್ತಡಕ್ಕೆ ಸಿಲುಕಿರುವಂತೆ ಕಂಡು ಬರುತ್ತಿದೆ.
ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ರವೀಂದ್ರ ಜಡೇಜಾ, ಜಸ್‌ಪ್ರೀತ್ ಬೂಮ್ರಾ, ಮೊಹಮದ್ ಸಿರಾಜ್ ಪರ್ತ್ ಟೆಸ್ಟ್‌ನ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಖಚಿತ. ಹೀಗಾಗಿ, ಇನ್ನುಳಿದ 4 ಸ್ಥಾನಗಳಿಗೆ ಸ್ಪರ್ಧೆ ಏರ್ಪಡಲಿದೆ.
undefined
ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ: ಇಂದು ಭಾರತ vs ಜಪಾನ್ ಸೆಮೀಸ್
‘ಎ’ ಸರಣಿಯಲ್ಲಿ ಮಿಂಚಿದ್ದ ಜುರೆಲ್
ಕೈಬೆರಳು ಮುರಿತದಿಂದಾಗಿ ಗಿಲ್ ಮೊದಲ ಟೆಸ್ಟ್‌ನಿಂದ ಹೊರಬಿದ್ದಿದ್ದು, 3ನೇ ಕ್ರಮಾಂಕದಲ್ಲಿ ಅವರ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲ ಆಟಗಾರ ಯಾರು ಎನ್ನುವ ಪ್ರಶ್ನೆ ಎದ್ದಿದೆ. ಕಳೆದ ವಾರ ಆಸ್ಟ್ರೇಲಿಯಾ ‘ಎ’ ವಿರುದ್ಧ ನಡೆದ 2ನೇ ಅನಧಿಕೃತ ಟೆಸ್ಟ್‌ನಲ್ಲಿ ಭಾರತ ‘ಎ’ ಪರ ಆಡಿದ್ದ ಧೃವ್ ಜುರೆಲ್ ತಮ್ಮ ಆಕರ್ಷಕ ಬ್ಯಾಟಿಂಗ್‌ನಿಂದ ಗಮನ ಸೆಳೆದಿದ್ದರು. ಅವರ ತಾಂತ್ರಿಕ ಕೌಶಲ್ಯಗಳ ಬಗ್ಗೆ ಕ್ರಿಕೆಟ್ ತಜ್ಞರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಹೀಗಾಗಿ, ವಿಕೆಟ್ ಕೀಪರ್ ಆಗಿದ್ದರೂ ಜುರೆಲ್ ತಜ್ಞ ಬ್ಯಾಟರ್ ಆಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ‘ಎ’ ತಂಡದಲ್ಲಿದ್ದ ಕರ್ನಾಟಕದ ದೇವದತ್ ಪಡಿಕ್ಕಲ್‌ರನ್ನು ಆಸ್ಟ್ರೇಲಿಯಾದಲ್ಲೇ ಉಳಿಸಿಕೊಂಡಿರುವ ತಂಡದ ಆಡಳಿತ, 3ನೇ ಕ್ರಮಾಂಕದಲ್ಲಿ ಅವಕಾಶ ನೀಡಿದರೂ ಅಚ್ಚರಿಯಿಲ್ಲ.
ವಾಷಿಂಗ್ಟನ್ ಸುಂದರ್‌ಗೆ ಮಣೆ?
ರೋಹಿತ್ ಇಲ್ಲದ ಕಾರಣ, ರಾಹುಲ್‌ರನ್ನು ಆರಂಭಿಕನನ್ನಾಗಿ ಆಡಿಸುವ ಸಾಧ್ಯತೆ ಹೆಚ್ಚು. ಹೀಗಾದರೆ, 6ನೇ ಕ್ರಮಾಂಕಕ್ಕೆ ಸೂಕ್ತ ಆಟಗಾರ ಬೇಕಾಗಲಿದೆ. ಸರ್ಫರಾಜ್ ಖಾನ್ ಬದಲು ವಾಷಿಂಗ್ಟನ್ ಸುಂದರ್‌ರನ್ನು ಆಡಿಸಿದರೆ, ತಂಡದ ಬೌಲಿಂಗ್ ಬಲವೂ ಹೆಚ್ಚಲಿದೆ. ವಾಷ್ಟಿಂಗ್ಟನ್ ಆಡಿಸಿದರೆ, ಭಾರತಕ್ಕೆ ಮೂವರು ತಜ್ಞ ವೇಗಿಗಳೊಂದಿಗೆ ಕಣಕ್ಕಿಳಿಯುವ ಆಯ್ಕೆಯೂ ಸಿಗಲಿದೆ. ಆಗ ಜಡೇಜಾ ಜೊತೆ ವಾಷಿಂಗ್ಟನ್ ಸ್ಪಿನ್ ಬೌಲಿಂಗ್ ಜವಾಬ್ದಾರಿ ನಿರ್ವಹಿಸಬಹುದು.
ನಿತೀಶ್‌ಗೆ ಆಲ್ರೌಂಡರ್ ಜವಾಬ್ದಾರಿ?
ಹೈದ್ರಾಬಾದ್ನ ಯುವ ಆಲ್ರೌಂಡರ್ ನಿತೀಶ್ ರೆಡ್ಡಿಯನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಪರ್ತ್‌ನಲ್ಲಿ ಅವರು ಪಾದಾರ್ಪಣೆ ಮಾಡುವ ನಿರೀಕ್ಷೆಯೂ ಇದೆ. ಕೇವಲ 23 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದರೂ, ನಿತೀಶ್‌ರ ಕೌಶಲ್ಯಗಳ ಮೇಲೆ ತಂಡದ ಆಡಳಿತ ಹೆಚ್ಚು ಭರವಸೆ ಇಟ್ಟಿದೆ. ನಿತೀಶ್‌ರನ್ನು ಆಡಿಸಿದರೆ ಹೆಚ್ಚುವರಿ ಬ್ಯಾಟಿಂಗ್ ಹಾಗೂ ವೇಗದ ಬೌಲಿಂಗ್ ಆಯ್ಕೆ ಸಿಗಲಿದೆ.
ಪ್ರಸಿದ್ಧ್, ರಾಣಾರನ್ನು ಹಿಂದಿಕ್ಕಲಿರುವ ಆಕಾಶ್?
ಬುಮ್ರಾ, ಸಿರಾಜ್ ಜೊತೆ ವೇಗದ ಬೌಲಿಂಗ್ ಪಡೆಯಲ್ಲಿ ಆಕಾಶ್‌ದೀಪ್‌ಗೆ ಸ್ಥಾನ ಸಿಗಬಹುದು ಎಂದು ಹೇಳಲಾಗುತ್ತಿದೆ. ಪ್ರಸಿದ್ಧ್ ಕೃಷ್ಣ ಹಾಗೂ ಹರ್ಷಿತ್ ರಾಣಾ ಕೂಡ ರೇಸ್‌ನಲ್ಲಿದ್ದರೂ, ಮೊಹಮದ್ ಶಮಿಯ ಬೌಲಿಂಗ್ ಶೈಲಿಯನ್ನು ಹೋಲುವುದರ ಜೊತೆಗೆ ಹಳೆ ಚೆಂಡಿನ ಮೇಲೂ ಹೆಚ್ಚಿನ ನಿಯಂತ್ರಣ ಸಾಧಿಸಿ, ರಿವರ್ಸ್ ಸ್ವಿಂಗ್ ಅಸ್ತ್ರವನ್ನು ಸಮರ್ಪಕವಾಗಿ ಬಳಕೆ ಮಾಡಬಲ್ಲರು ಎನ್ನುವ ಕಾರಣಕ್ಕೆ ಆಕಾಶ್‌ದೀಪ್‌ಗೆ ಅವಕಾಶ ಸಿಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.