Asian Games 2023: ಕೋವಿಡ್‌ ವೇಳೆ ಕೂಲಿ ಕೆಲಸ ಮಾಡುತ್ತಿದ್ದ ರಾಮ್‌ ಬಾಬೂಗೆ ಒಲಿದ ಕಂಚು..!

By Kannadaprabha NewsFirst Published Oct 5, 2023, 10:47 AM IST
Highlights

ಭಾರತಕ್ಕೆ ಮತ್ತೊಂದು ಅಚ್ಚರಿಯ ಪದಕ 35 ಕಿ.ಮೀ. ವೇಗದ ನಡಿಗೆ ಮಿಶ್ರ ತಂಡ ವಿಭಾಗದಲ್ಲಿ ಸಿಕ್ಕಿದೆ. ರಾಮ್‌ ಬಾಬೂ ಹಾಗೂ ಮಂಜು ರಾಣಿ ಅವರ ತಂಡ 5 ಗಂಟೆ 51.14 ನಿಮಿಷಗಳಲ್ಲಿ ಸ್ಪರ್ಧೆ ಪೂರ್ತಿಗೊಳಿಸಿ 3ನೇ ಸ್ಥಾನ ಪಡೆಯಿತು. ಚೀನಾ( 5 ಗಂಟೆ 16.41 ನಿಮಿಷ) ಚಿನ್ನ ಗೆದ್ದರೆ, ಜಪಾನ್‌ (5 ಗಂಟೆ 22.11 ನಿಮಿಷ) 2ನೇ ಸ್ಥಾನಿಯಾಯಿತು.

ಹಾಂಗ್ಝೂ(ಅ.05): 35 ಕಿ.ಮೀ. ವೇಗದ ನಡಿಗೆಯಲ್ಲಿ ಕಂಚು ಗೆದ್ದ ರಾಮ್‌ ಬಾಬೂ, ಕೋವಿಡ್‌ ವೇಳೆ ಜೀವನ ಸಾಗಿಸಲು ತಮ್ಮ ತವರು ಉತ್ತರ ಪ್ರದೇಶದ ಬಹುರಾ ಎಂಬ ಹಳ್ಳಿಯಲ್ಲಿ ಕೇಂದ್ರದ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿದ್ದರು. ಇದಕ್ಕೂ ಮೊದಲು ಅವರು ಹೋಟೆಲ್‌ನಲ್ಲಿ ವೇಟರ್‌ ಆಗಿದ್ದರು. 2022ರಲ್ಲಿ ರಾಷ್ಟ್ರೀಯ ದಾಖಲೆ ಬರೆದ ಬಳಿಕ ಅವರು ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದು, ಇದೀಗ ಏಷ್ಯಾಡ್‌ ಪದಕ ವಿಜೇತರಾಗಿದ್ದಾರೆ.

35 ಕಿ.ಮೀ. ವೇಗದ ನಡಿಗೆ: ರಾಮ್‌-ಮಂಜುಗೆ ಕಂಚು!

ಭಾರತಕ್ಕೆ ಮತ್ತೊಂದು ಅಚ್ಚರಿಯ ಪದಕ 35 ಕಿ.ಮೀ. ವೇಗದ ನಡಿಗೆ ಮಿಶ್ರ ತಂಡ ವಿಭಾಗದಲ್ಲಿ ಸಿಕ್ಕಿದೆ. ರಾಮ್‌ ಬಾಬೂ ಹಾಗೂ ಮಂಜು ರಾಣಿ ಅವರ ತಂಡ 5 ಗಂಟೆ 51.14 ನಿಮಿಷಗಳಲ್ಲಿ ಸ್ಪರ್ಧೆ ಪೂರ್ತಿಗೊಳಿಸಿ 3ನೇ ಸ್ಥಾನ ಪಡೆಯಿತು. ಚೀನಾ( 5 ಗಂಟೆ 16.41 ನಿಮಿಷ) ಚಿನ್ನ ಗೆದ್ದರೆ, ಜಪಾನ್‌ (5 ಗಂಟೆ 22.11 ನಿಮಿಷ) 2ನೇ ಸ್ಥಾನಿಯಾಯಿತು. ಈ ಸ್ಪರ್ಧೆಯಲ್ಲಿ ಪುರುಷ ಹಾಗೂ ಮಹಿಳಾ ಅಥ್ಲೀಟ್‌ಗಳ ವೈಯಕ್ತಿಕ ಸಮಯವನ್ನು ಕೂಡಿಸಿ ಒಟ್ಟಾರೆ ಸಮಯದ ಆಧಾರದ ಮೇಲೆ ಸ್ಥಾನಗಳನ್ನು ನಿರ್ಧರಿಸಲಾಗುತ್ತದೆ. 35 ಕಿ.ಮೀ. ನಡಿಗೆಯನ್ನು ರಾಮ್‌ 2 ಗಂಟೆ 42.11 ನಿಮಿಷಗಳಲ್ಲಿ ಪೂರ್ತಿಗೊಳಿಸಿದರೆ, ಮಂಜು 3 ಗಂಟೆ 9.03 ನಿಮಿಷಗಳನ್ನು ತೆಗೆದುಕೊಂಡರು.

ಲವ್ಲೀನಾಗೆ ರಜತ, ಪರ್ವೀನ್‌ಗೆ ಕಂಚು

ಈ ಬಾರಿ ಏಷ್ಯಾಡ್‌ನಲ್ಲಿ ಭಾರತದ ಬಾಕ್ಸರ್‌ಗಳು 5 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದ್ದಾರೆ. ಭಾರತ 1 ಬೆಳ್ಳಿ, 4 ಕಂಚು ತನ್ನದಾಗಿಸಿಕೊಂಡಿದ್ದು, 2018ರ ಏಷ್ಯಾಡ್‌(2 ಪದಕ)ಗಿಂತ ಶ್ರೇಷ್ಠ ಪ್ರದರ್ಶನ ತೋರಿದೆ. 2010ರಲ್ಲಿ 9, 2014ರಲ್ಲಿ 5 ಪದಕ ಗೆದ್ದಿತ್ತು. ಬುಧವಾರ ಟೋಕಿಯೋ ಒಲಿಂಪಿಕ್‌ ಪದಕ ವಿಜೇತೆ ಲವ್ಲೀನಾ ಬೊರ್ಗೊಹೈನ್‌ ಫೈನಲ್‌ನಲ್ಲಿ ಸೋತು ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. ಅವರಿಗೆ ಮಹಿಳೆಯರ 75 ಕೆ.ಜಿ. ವಿಭಾಗದ ಫೈನಲ್‌ನಲ್ಲಿ 2 ಬಾರಿ ಒಲಿಂಪಿಕ್‌ ಪದಕ ವಿಜೇತೆ, ಚೀನಾದ ಲಿ ಕ್ವಿಯಾನ್‌ ವಿರುದ್ಧ 0-5 ಅಂತರದಲ್ಲಿ ಸೋಲು ಎದುರಾಯಿತು. ಇನ್ನು, 57 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ಪರ್ವೀನ್‌ ಹೂಡಾ ಚೈನೀಸ್‌ ತೈಪೆಯ ಯು ಟಿಂಗ್‌ ವಿರುದ್ಧ ಸೋತು ಕಂಚು ಪಡೆದರು.

ಸ್ಕ್ವ್ಯಾಶ್‌: ಸೌರವ್‌ ಫೈನಲ್‌ಗೆ

ಪುರುಷರ ಸಿಂಗಲ್ಸ್‌ ಸ್ಕ್ವ್ಯಾಶ್‌ನಲ್ಲಿ 4 ಬಾರಿ ಏಷ್ಯಾಡ್‌ ಪದಕ ವಿಜೇತ ಸೌರವ್‌ ಘೋಷಲ್‌ ಫೈನಲ್‌ ಪ್ರವೇಶಿಸಿದರು. ಸೆಮಿಫೈನಲ್‌ನಲ್ಲಿ ಅವರು ಹಾಂಕಾಂಗ್‌ನ ಚಿ ಹಿನ್‌ ಹೆನ್ರಿ ವಿರುದ್ಧ 3-0 ಅಂತರದಲ್ಲಿ ಗೆದ್ದರು. ಮಿಶ್ರ ಡಬಲ್ಸ್‌ನಲ್ಲಿ ದೀಪಿಕಾ ಪಲ್ಲಿಕಲ್‌-ಹರೀಂದರ್‌ ಸಿಂಗ್‌ ಜೋಡಿ ಕೂಡಾ ಫೈನಲ್‌ಗೇರಿತು. ಆದರೆ ಅಭಯ್‌ ಸಿಂಗ್‌-ಅನಾಹತ್‌ ಸಿಂಗ್‌ ಸೆಮೀಸ್‌ನಲ್ಲಿ ಅಭಿಯಾನ ಕೊನೆಗೊಳಿಸಿದರು.

800 ಮೀ.: ತಾಯಿಯ ದಾಖಲೆ ಸರಿಗಟ್ಟಿದ ಹರ್ಮಿಲನ್‌!

2 ದಶಕಗಳ ಹಿಂದೆ ತಮ್ಮ ತಾಯಿ ಗೆದ್ದಿದ್ದ ಅದೇ ಸ್ಪರ್ಧೆಯಲ್ಲಿ ಈ ಬಾರಿ ಮಗಳು ಕೂಡಾ ಪದಕ ಗೆದ್ದು ಗಮನ ಸೆಳೆದಿದ್ದಾರೆ. ಮಹಿಳೆಯರ 800 ಮೀ. ಓಟದಲ್ಲಿ ಹರ್ಮಿಲನ್‌ ಬೇನ್ಸ್‌ಗೆ ಬೆಳ್ಳಿ ಪದಕ ಲಭಿಸಿತು. ಪಂಜಾಬ್‌ನ 25 ವರ್ಷದ ಹರ್ಮಿಲನ್‌ 2 ನಿಮಿಷ 03.75 ಸೆಕೆಂಡ್‌ಗಳಲ್ಲಿ ಕ್ರಮಿಸಿ 2ನೇ ಸ್ಥಾನ ಪಡೆದರು. 2002ರ ಏಷ್ಯಾಡ್‌ನಲ್ಲಿ ಹರ್ಮಿಲನ್‌ರ ತಾಯಿ ಮಾಧುರಿ ಸಕ್ಸೇನಾ 800 ಮೀ. ಓಟದಲ್ಲೇ ಬೆಳ್ಳಿ ಪದಕ ಗೆದ್ದಿದ್ದರು. ಹರ್ಮಿಲನ್‌ 1500 ಮೀ. ಓಟದಲ್ಲೂ ಬೆಳ್ಳಿ ಗೆದ್ದಿದ್ದರು.

ಸಾಬ್ಳೆಗೆ ಬೆಳ್ಳಿ ಸಂಭ್ರಮ

3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಚಿನ್ನ ಗೆದ್ದ ಅವಿನಾಶ್‌ ಸಾಬ್ಳೆ, 5000 ಮೀ. ಓಟದಲ್ಲಿ 13 ನಿಮಿಷ 21.09 ಸೆಕೆಂಡ್‌ಗಳಲ್ಲಿ ಕ್ರಮಿಸಿ ಬೆಳ್ಳಿ ಪದಕ ಗೆದ್ದರು. ಇದು ಈ ಸ್ಪರ್ಧೆಯಲ್ಲಿ 1982ರ ಬಳಿಕ ಭಾರತಕ್ಕೆ ಸಿಕ್ಕ ಮೊದಲ ಪದಕ. ಇನ್ನು, 35 ಕಿ.ಮೀ. ವೇಗ ನಡಿಗೆ ಮಿಶ್ರ ತಂಡ ವಿಭಾಗದಲ್ಲಿ ರಾಮ್‌ ಬಾಬೂ-ಮಂಜು ಜೋಡಿ ಕಂಚಿನ ಪದಕ ಪಡೆಯಿತು.

ಕುಸ್ತಿಯಲ್ಲಿ ಮೊದಲ ಪದಕ

ಭಾರತ ಕುಸ್ತಿಯಲ್ಲಿ ಪದಕ ಖಾತೆ ತೆರೆದಿದೆ. ಪುರುಷರ 87 ಕೆ.ಜಿ. ಗ್ರೀಕೊ ರೋಮನ್‌ ವಿಭಾಗದಲ್ಲಿ ಸುನಿಲ್‌ ಕುಮಾರ್‌ ಕಂಚು ಜಯಿಸಿದರು. ಈ ವಿಭಾಗದಲ್ಲಿ ಭಾರತಕ್ಕೆ 13 ವರ್ಷದಲ್ಲಿ ಸಿಕ್ಕ ಮೊದಲ ಪದಕವಿದು. 2010ರಲ್ಲಿ 2 ಕಂಚಿನ ಪದಕ ಬಂದಿತ್ತು. ಬುಧವಾರ ಕಂಚಿನ ಪದಕ ಪಂದ್ಯದಲ್ಲಿ ಸುನಿಲ್‌, ಕಿರ್ಗಿಸ್ತಾನದ ಅಟಾಬೆಕ್‌ ವಿರುದ್ಧ 2-1ರಿಂದ ಗೆದ್ದರು. ಆದರೆ 77 ಕೆ.ಜಿ. ವಿಭಾಗದಲ್ಲಿ ವಿಕಾಸ್‌, 60 ಕೆ.ಜಿ. ವಿಭಾಗದಲ್ಲಿ ಜ್ಞಾನೇಂದ್ರ, 67 ಕೆ.ಜಿ. ವಿಭಾಗದಲ್ಲಿ ನೀರಜ್‌ ಮೊದಲ ಪಂದ್ಯಗಳಲ್ಲೇ ಸೋತು ಹೊರಬಿದ್ದರು.
 

click me!