ಭಾರತ-ಇಂಗ್ಲೆಂಡ್ ಟೆಸ್ಟ್: ಆಲೌಟ್ ಭೀತಿಯಲ್ಲಿ ಆತಿಥೇಯ ಇಂಗ್ಲೆಂಡ್

By Web DeskFirst Published Aug 19, 2018, 8:24 PM IST
Highlights

ಭಾರತ-ಇಂಗ್ಲೆಂಡ್ ನಡುವಿನ 3ನೇ ಟಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿಗಾಗಿ ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿದೆ. ಕಳೆದೆರಡು ಟೆಸ್ಟ್ ಪಂದ್ಯದಲ್ಲಿ ಅಬ್ಬರಿಸಿದ ಇಂಗ್ಲೆಂಡ್ ಇದೀಗ ಅಲ್ಪ ಮೊತ್ತಕ್ಕೆ ಆಲೌಟ್ ಆಗೋ ಭೀತಿ ಎದುರಿಸುತ್ತಿದೆ.

ನಾಟಿಂಗ್‌ಹ್ಯಾಮ್(ಆ.19): ಟ್ರೆಂಟ್‌ಬ್ರಿಡ್ಜ್ ಟೆಸ್ಟ್ ಪಂದ್ಯದಲ್ಲಿ ಭಾರತವನ್ನ 329ರನ್‌ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್ ಇದೀಗ 9 ವಿಕೆಟ್ ಕಳೆದುಕೊಂಡಿದೆ. ಹಾರ್ದಿಕ್ ಪಾಂಡ್ಯ ದಾಳಿಗೆ ನಲುಗಿದ ಆಂಗ್ಲರು ವಿಕೆಟ್ ಉಳಿಸಿಕೊಳ್ಳಲು ಹೋರಾಟ ಆರಂಭಿಸಿದ್ದಾರೆ.

ಆರಂಭಿಕರಾದ ಕುಕ್ ಹಾಗೂ ಜೆನ್ನಿಂಗ್ಸ್ 54 ರನ್‌ಗಳ ಜೊತೆಯಾಟ ನೀಡೋ ಮೂಲಕ ಭಾರತಕ್ಕೆ ಅಪಾಯದ ಸೂಚನೆ ನೀಡಿದ್ದರು. ಆದರೆ ಇಶಾಂತ್ ಶರ್ಮಾ ಹಾಗೂ ಜಸ್‌ಪ್ರೀತ್ ಬುಮ್ರಾ ದಾಳಿಗೆ ಆರಂಭಿಕರ ವಿಕೆಟ್ ಪತನಗೊಂಡಿತು.

ಒಲ್ಲಿ ಪೋಪ್ ಕೇವಲ 10 ರನ್ ಸಿಡಿಸಿ ಔಟಾದರು.   ನಾಯಕ ಜೋ ರೂಟ್ 16 ರನ್ ಸಿಡಿಸಿ, ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಬೆನ್ ಸ್ಟೋಕ್ಸ್ 10, ಜಾನಿ ಬೈರ್‌ಸ್ಟೋ 15 ರನ್ ಸಿಡಿಸಿ ಔಟಾದರು. ಲಾರ್ಡ್ಸ್ ಪಂದ್ಯದಲ್ಲಿ ಶತಕ ಸಿಡಿಸಿದ ಕ್ರಿಸ್ ವೋಕ್ಸ್ 8 ರನ್ ಸಿಡಿಸಿ ಔಟಾದರು. ಆದಿಲ್ ರಶೀದ್ 5 ಹಾಗೂ ಸ್ಟುವರ್ಟ್ ಬ್ರಾಡ್ ಶೂನ್ಯ ಸುತ್ತಿದರು. ಸದ್ಯ ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿದೆ. ಹಾರ್ದಿಕ್ ಪಾಂಡ್ಯ  5 ವಿಕೆಟ್ ಕಬಳಿಸಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 329 ರನ್‌ಗೆ ಆಲೌಟ್ ಆಯಿತು. ಆರಂಭಿಕರಾದ ಶಿಖರ್ ಧವನ್ ಹಾಗೂ ಕೆಎಲ್ ರಾಹುಲ್ 60 ರನ್‌ಗಳ ಜೊತೆಯಾಟ ನೀಡಿದ್ದರು. ಇನ್ನು ನಾಯಕ ವಿರಾಟ್ ಕೊಹ್ಲಿ 97 ರನ್ ಸಿಡಿಸಿದರೆ,  ಅಜಿಂಕ್ಯ ರಹಾನೆ 81 ರನ್ ಕಾಣಿಕೆ ನೀಡಿದ್ದರು.  

ಮಳೆಯಿಂದಾಗಿ ದ್ವಿತೀಯ ದಿನದಾಟ ಅಲ್ಪ ತಡವಾಗಿ ಆರಂಭಗೊಂಡಿತು. ರಿಷಬ್ ಪಂತ್ 24, ಆರ್ ಅಶ್ವಿನ 14 ರನ್ ಸಿಡಿಸಿ ಔಟಾದರು. ಮೊಹಮ್ಮದ್ ಶಮಿ ಹಾಗೂ ಜಸ್‌ಪ್ರೀತ್ ಬುಮ್ರಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಹೀಗಾಗಿ ಭಾರತ 329 ರನ್‌ಗೆ ಆಲೌಟ್ ಆಯಿತು. ಜೇಮ್ಸ್ ಆಂಡರ್ಸನ್, ಕ್ರಿಸ್ ವೋಕ್ಸ್ ಹಾಗೂ ಸ್ಟುವರ್ಟ್ ಬ್ರಾಡ್ ತಲಾ 3 ವಿಕೆಟ್ ಪಡೆದು ಮಿಂಚಿದರು.

click me!