French Open: 2ನೇ ಸುತ್ತಿಗೆ ಸಬಲೆಂಕಾ, ಸಿಟ್ಸಿಪಾಸ್‌ ಲಗ್ಗೆ

By Naveen Kodase  |  First Published May 29, 2023, 8:54 AM IST

ಫ್ರೆಂಚ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂ ಟೂರ್ನಿಗೆ ಅಧಿಕೃತ ಚಾಲನೆ
ಭಾನುವಾರ ತಾರಾ ಟೆನಿಸ್ ಆಟಗಾರರು ಶುಭಾರಂಭ
ಹಾಲಿ ಆಸ್ಪ್ರೇಲಿಯನ್‌ ಓಪನ್‌ ಚಾಂಪಿಯನ್‌ ಬೆಲಾರುಸ್‌ನ ಅರೈನಾ ಸಬಲೆಂಕಾಗೆ ಸುಲಭ ಜಯ


ಪ್ಯಾರಿಸ್‌(ಮೇ.29): 2023ರ 2ನೇ ಗ್ರ್ಯಾನ್‌ ಸ್ಲಾಂ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಮೊದಲ ದಿನವಾದ ಭಾನುವಾರ ತಾರಾ ಆಟಗಾರರು ಗೆಲುವು ಸಾಧಿಸಿ ಶುಭಾರಂಭ ಮಾಡಿದರು. ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ವಿಶ್ವ ನಂ.2, ಹಾಲಿ ಆಸ್ಪ್ರೇಲಿಯನ್‌ ಓಪನ್‌ ಚಾಂಪಿಯನ್‌ ಬೆಲಾರುಸ್‌ನ ಅರೈನಾ ಸಬಲೆಂಕಾ ಸುಲಭ ಗೆಲುವು ಸಾಧಿಸಿದರು.

ಉಕ್ರೇನ್‌ನ ಮಾರ್ಟಾ ಕೊಸ್ಟುಕ್‌ ವಿರುದ್ಧ 6-3, 6-2 ನೇರ ಸೆಟ್‌ಗಳಲ್ಲಿ ಜಯಿಸಿದ ಸಬಲೆಂಕಾ 2ನೇ ಸುತ್ತಿಗೆ ಪ್ರವೇಶಿಸಿದರು. ಇನ್ನು ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ 5ನೇ ಶ್ರೇಯಾಂಕಿತ, ಗ್ರೀಸ್‌ನ ಸ್ಟೆಫಾನೋಸ್‌ ಸಿಟ್ಸಿಪಾಸ್‌ 7-5, 6-3, 4-6, 7-6(9/7)ರಲ್ಲಿ ಶ್ರೇಯಾಂಕ ರಹಿತ ಚೆಕ್‌ ಗಣರಾಜ್ಯದ ಜಿರಿ ವೆಸ್ಲಿ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದರು. ಆಸ್ಪ್ರೇಲಿಯನ್‌ ಓಪನ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದ ಅಮೆರಿಕದ ಸೆಬಾಸ್ಟಿಯನ್‌ ಕೊರ್ಡಾ ತಮ್ಮ ದೇಶದವರೇ ಆದ ಮೆಕೆನ್ಜಿ ಮೆಕ್‌ಡೊನಾಲ್ಡ್‌ ವಿರುದ್ಧ 6-4, 7-5, 6-4ರಲ್ಲಿ ಗೆದ್ದು 2ನೇ ಸುತ್ತಿಗೇರಿದರು.

Latest Videos

undefined

ಟೆನಿಸ್‌ ಅಂಗಳದಲ್ಲೂ ರಾಜಕೀಯ: ವಿವಾದ!

ಮೊದಲ ಸುತ್ತಿನಲ್ಲಿ ಸೋತ ಬಳಿಕ ಉಕ್ರೇನ್‌ನ ಕೊಸ್ಟುಕ್‌, ಬೆಲಾರುಸ್‌ನ ಸಬಲೆಂಕಾರ ಕೈ ಕುಲುಕದೆ ಅಂಕಣ ತೊರೆಯಲು ಮುಂದಾದರು. ಪ್ರೇಕ್ಷಕರು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದಾಗ ಮೊದಲಿಗೆ ಗೊಂದಲಕ್ಕೊಳಗಾದ ಸಬಲೆಂಕಾ ತಮ್ಮನ್ನೇಕೆ ಗುರಿಯಾಗಿಸುತ್ತಿದ್ದೀರಿ ಎಂದು ಪ್ರೇಕ್ಷಕರನ್ನು ಕೇಳಿದರು. ಪ್ರೇಕ್ಷಕರ ಅಸಮಾಧಾನ ಕೊಸ್ಟುಕ್‌ ಬಗ್ಗೆ ಎಂದು ಸ್ಪಷ್ಟವಾದ ಬಳಿಕ ಸಬಲೆಂಕಾ ನಿರಾಳರಾದರು.

Wrestlers Protest 'ಹಾಡುಹಗಲೇ ಪ್ರಜಾಪ್ರಭುತ್ವದ ಕಗ್ಗೊಲೆ': ಕುಸ್ತಿಪಟುಗಳನ್ನು ಬಂಧಿಸಿದ ಡೆಲ್ಲಿ ಪೊಲೀಸರು..!

ಆ ಬಳಿಕ ಪ್ರತಿಕ್ರಿಯಿಸಿದ ಸಬಲೆಂಕಾ, ಕ್ರೀಡೆಯಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ ಎಂದರು. ಕೊಸ್ಟುಕ್‌ ಮಾತನಾಡಿ ‘ರಷ್ಯಾ ನಮ್ಮ ಮೇಲೆ ಯದ್ಧ ನಡೆಸುತ್ತಿರುವಾಗ ಆ ದೇಶಕ್ಕೆ ಬೆಂಬಲಿಸುತ್ತಿರುವ ಬೆಲಾರುಸ್‌ನ ಆಟಗಾರ್ತಿಯೊಂದಿಗೆ ಸ್ನೇಹದಿಂದ ನಡೆದುಕೊಳ್ಳಲು ಮನಸು ಒಪ್ಪುವುದಿಲ್ಲ’ ಎಂದರು.

ಇಂದು ಜೋಕೋ, ಆಲ್ಕರಜ್‌ ಕಣಕ್ಕೆ

ಪುರುಷರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರೆನಿಸಿರುವ ನೋವಾಕ್‌ ಜೋಕೋವಿಚ್‌, ಹಾಲಿ ವಿಶ್ವ ನಂ.1 ಕಾರ್ಲೊಸ್‌ ಆಲ್ಕರಜ್‌ ಸೋಮವಾರ ತಮ್ಮ ಅಭಿಯಾನ ಆರಂಭಿಸಲಿದ್ದಾರೆ. ಜೋಕೋವಿಚ್‌ಗೆ ಮೊದಲ ಸುತ್ತಿನಲ್ಲಿ ಅಮೆರಿಕದ ಅಲೆಕ್ಸಾಂಡರ್‌ ಕೊವಾಸೆವಿಚ್‌ ಎದುರಾಗಲಿದ್ದು, ಇಟಲಿಯ ಫ್ಲಾವಿಯೊ ಕೊಬೊಲ್ಲಿ ವಿರುದ್ಧ ಆಲ್ಕರಜ್‌ ಆಡಲಿದ್ದಾರೆ.

ಡಬಲ್ಸ್‌: ಭಾರತದ ಮೂವರ ಸ್ಪರ್ಧೆ

ಪುರುಷರ ಡಬಲ್ಸ್‌ನಲ್ಲಿ ಭಾರತದ ಸಾಕೇತ್‌ ಮೈನೇನಿ ಹಾಗೂ ಯೂಕಿ ಭಾಂಬ್ರಿ ಒಟ್ಟಿಗೆ ಆಡಲಿದ್ದಾರೆ. ಇನ್ನು ರೋಹನ್‌ ಬೋಪಣ್ಣ ಆಸ್ಪ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆ ಕಣಕ್ಕಿಳಿಯಲಿದ್ದಾರೆ. ಸಾಕೇತ್‌-ಯೂಕಿ ಜೋಡಿಗೆ ಮೊದಲ ಮಂಗಳವಾರ ಮೊದಲ ಸುತ್ತಿನಲ್ಲಿ ಫ್ರಾನ್ಸ್‌ನ ಆರ್ಥರ್‌ ರಿಂಡಕ್ರ್ನೆಚ್‌-ಎನ್ಜೋ ಕೊಕಾಡ್‌ ಎದುರಾಗಲಿದ್ದಾರೆ. ಬೋಪಣ್ಣ-ಎಬ್ಡೆನ್‌ಗೆ ಫ್ರಾನ್ಸ್‌ನ ದೌಂಬಿಯಾ-ರಿಬೌಲ್‌ ಜೋಡಿ ಎದುರಾಗಲಿದೆ.

click me!